6

ದಾನ: ನಂದನ್‌ ದಂಪತಿಯ ಸ್ಫೂರ್ತಿದಾಯಕ ಆದರ್ಶ

Published:
Updated:
ದಾನ: ನಂದನ್‌ ದಂಪತಿಯ ಸ್ಫೂರ್ತಿದಾಯಕ ಆದರ್ಶ

ತಮ್ಮ ಸಂಪತ್ತಿನ ಅರ್ಧದಷ್ಟು ಭಾಗವನ್ನು ದಾನ–ಧರ್ಮ ಉದ್ದೇಶಕ್ಕೆ ನೀಡಲು ಬದ್ಧತೆ ತೋರುವ ವಿಶ್ವದ ಅಪರೂಪದ ಸಿರಿವಂತರ ಸಾಲಿಗೆ ಈಗ ನಂದನ್‌ ನಿಲೇಕಣಿ ದಂಪತಿ ಸೇರ್ಪಡೆಯಾಗಿದ್ದಾರೆ. ಇವರಿಬ್ಬರ ದಾನದ ಬದ್ಧತೆ ಮತ್ತು ನಿಷ್ಠೆ ಅಭಿನಂದನಾರ್ಹ. ಸಮಾಜಮುಖಿ ನಿರ್ಧಾರ ಇದು. ಫೋಬ್ಸ್‌ ನಿಯತಕಾಲಿಕೆಯ ವರದಿ ಪ್ರಕಾರ, ನಂದನ್‌ ದಂಪತಿಯ ಒಟ್ಟಾರೆ ಸಂಪತ್ತು ₹ 11,700 ಕೋಟಿ ಇದೆ.

ಇದರಲ್ಲಿನ ಅರ್ಧ ಪಾಲು ಎಂದರೆ ₹ 5,850 ಕೋಟಿಯನ್ನು ಸಮಾಜದ ಒಳಿತಿಗೆ ಸದ್ಬಳಕೆ ಮಾಡಲು ಮೀಸಲು ಇಡಲು ಮುಂದಾಗಿರುವುದು ಸಣ್ಣ ಸಂಗತಿ ಏನಲ್ಲ. ಕನ್ನಡಿಗರ ಪಾಲಿಗೆ ಇದೊಂದು ಅಭಿಮಾನದ ಸಂಗತಿಯೂ ಹೌದು. ಗಳಿಸಿದ ಸಂಪತ್ತನ್ನು ಸಮಾಜಕ್ಕೆ ವಾಪಸ್ ಕೊಡಲು ಮುಂದಾಗುವುದು ಶ್ರೇಷ್ಠ ಕಾರ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇನ್ಫೊಸಿಸ್ ಸಹ ಸ್ಥಾಪಕರೂ ಆಗಿರುವ ಸಂಸ್ಥೆಯ ಹಾಲಿ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ಮತ್ತು ಅವರ ಪತ್ನಿ ರೋಹಿಣಿ ಅವರು ಸಂಪತ್ತಿನ ದಾನಕ್ಕೆ ಪ್ರತಿಜ್ಞಾ ಬದ್ಧರಾಗಿರುವುದು ಆಗರ್ಭ ಶ್ರೀಮಂತರ ಪಾಲಿಗೆ ಬಹುದೊಡ್ಡ ಆದರ್ಶವಾಗಿದೆ. ಐ.ಟಿ ದೈತ್ಯ ಸಂಸ್ಥೆ ಇನ್ಫೊಸಿಸ್‌ ಕಟ್ಟಿ ಬೆಳೆಸಿ ಸಂಪತ್ತು ಸೃಷ್ಟಿಸಲು ತೋರಿದ ಉದ್ಯಮಶೀಲತಾ ಬದ್ಧತೆಯನ್ನು ನಂದನ್‌ ಅವರು ತಮ್ಮ ಸಂಪತ್ತನ್ನು ಸಮಾಜದ ಒಳಿತಿಗೆ ವೆಚ್ಚ ಮಾಡಲೂ ತೋರಿಸಿರುವುದನ್ನು ಮುಕ್ತಕಂಠದಿಂದ ಶ್ಲಾಘಿಸಬಹುದಾಗಿದೆ.

ಗಳಿಸಿದ ಸಂಪತ್ತನ್ನು ದಾನ ಮಾಡುವ ಪ್ರವೃತ್ತಿ ಅಮೆರಿಕದ ಸಿರಿವಂತರಲ್ಲಿ ಹೆಚ್ಚಿದೆ. ಇಂತಹ ಪ್ರವೃತ್ತಿ ಎಲ್ಲೆಡೆ ಪಸರಿಸುವಂತಾಗಬೇಕು. ಅಮೆರಿಕದಲ್ಲಿ ವಿಶ್ವದ ಪ್ರಮುಖ ದಾನಿಗಳು ಸೇರಿಕೊಂಡು ಸ್ಥಾಪಿಸಿರುವ ಜಾಗತಿಕ ಮಟ್ಟದ ಜಂಟಿ ದತ್ತಿ ಸಂಸ್ಥೆ ‘ಕೋ–ಇಂಪ್ಯಾಕ್ಟ್‌’ ಜತೆಗೂ ನಂದನ್‌ ದಂಪತಿ ಕೈಜೋಡಿಸಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಅವಕಾಶ ವಂಚಿತರ ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಉನ್ನತಿಗಾಗಿ ಈ ಸಂಸ್ಥೆ ಶ್ರಮಿಸಲಿದೆ.

ಮೈಕ್ರೊಸಾಫ್ಟ್‌ನ ಸ್ಥಾಪಕ ಬಿಲ್‌ ಗೇಟ್ಸ್‌, ಪತ್ನಿ ಮಿಲಿಂಡಾ ಮತ್ತು ವಾರೆನ್‌ ಬಫೆಟ್‌ ಅವರು 2010ರಲ್ಲಿಯೇ ಸಿರಿವಂತರ ‘ದಾನ ವಾಗ್ದಾನ’ದ ಜಾಗತಿಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದುವರೆಗೆ 21 ದೇಶಗಳಲ್ಲಿನ 171 ಶ್ರೀಮಂತರು ತಮ್ಮ ಅರ್ಧದಷ್ಟು ಸಂಪತ್ತು ನೀಡುವ ಬದ್ಧತೆ ತೋರಿದ್ದಾರೆ. ಇಂತಹ ಉದಾರ ಮನಸ್ಸಿನ ಸಿರಿವಂತರ ಸಂಖ್ಯೆ ಹೆಚ್ಚಾಗಲಿ.

ಈ ಆದರ್ಶಪ್ರಾಯ ಸಿರಿವಂತರ ಪಟ್ಟಿಯಲ್ಲಿ ನಿಲೇಕಣಿ ದಂಪತಿ ಒಳಗೊಂಡಂತೆ ಭಾರತದ ನಾಲ್ವರು ಇದ್ದಾರೆ. ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜೀ, ಬಯೊಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್ ಷಾ ಮತ್ತು ಶೋಭಾ ಡೆವಲಪರ್ಸ್‌ನ ವಿಶ್ರಾಂತ ಅಧ್ಯಕ್ಷ ಪಿ. ಎನ್‌.ಸಿ. ಮೆನನ್‌ ಅವರು ಈಗಾಗಲೇ ಈ ವಾಗ್ದಾನಕ್ಕೆ ಸಹಿ ಹಾಕಿದ್ದಾರೆ. ಇವರೆಲ್ಲ ಉದ್ಯಾನ ನಗರಿ ಖ್ಯಾತಿಯ ಬೆಂಗಳೂರಿನವರೇ ಆಗಿರುವುದು ನಗರಕ್ಕೆ ಇನ್ನೊಂದು ಹೆಮ್ಮೆಯ ಗರಿ ಮೂಡಿಸಿದೆ.

ಸಾಫ್ಟ್‌ವೇರ್‌, ಸ್ಟಾರ್ಟ್‌ಅಪ್‌ಗಳ ರಾಜಧಾನಿ ಖ್ಯಾತಿಯ ಬೆಂಗಳೂರು ದಾನಿಗಳ ರಾಜಧಾನಿಯಾಗಿಯೂ ವಿಶ್ವದ ಗಮನ ಸೆಳೆಯಲು ನಂದನ್‌ ದಂಪತಿಯ ನಿರ್ಧಾರ ಪ್ರೇರಣೆ ನೀಡಲಿ.

ಸಿರಿವಂತರಲ್ಲಿ ದಾನಶೀಲತೆ ಪ್ರವೃತ್ತಿಗೆ ಕೊರತೆ ಏನೂ ಇಲ್ಲ. ದಾನ ಮಾಡಿದ ಸಂಪತ್ತಿನ ಸದ್ಬಳಕೆ ಬಗ್ಗೆ ಅವರಲ್ಲಿ ಅಳುಕು ಇರುವಂತಿದೆ. ಹೀಗಾಗಿ ಇಂತಹ ದಾನದ ಹಣವನ್ನು ದಕ್ಷವಾಗಿ ನಿರ್ವಹಿಸಲು ಮೂಲ ಸೌಕರ್ಯಗಳು ಸೃಷ್ಟಿಯಾಗಬೇಕು. ಇದರ ಬೆನ್ನೆಲುಬಾಗಿ ಸರ್ಕಾರ ಇರಬೇಕು. ಕಾರ್ಪೊರೆಟ್ ಸಾಮಾಜಿಕ ಹೊಣೆಗಾರಿಕೆ ಅಡಿ ಅನೇಕ ಸಮಾಜಮುಖಿ ಕೆಲಸಗಳಿಗೆ ಹಣಕಾಸಿನ ನೆರವು ದೊರೆಯುತ್ತಿದೆ. ಹಾಗೆಯೇ ಸಾಮಾಜಿಕ ಕಾಳಜಿಯ ಅನೇಕ ಕೆಲಸಗಳಿಗೆ ವಿದೇಶಿ ಹಣಕಾಸು ನೆರವು ಸ್ವಯಂಸೇವಾ ಸಂಸ್ಥೆಗಳಿಗೆ ಸಿಗುತ್ತಿವೆ.

ವ್ಯಕ್ತಿಗತ ನೆಲೆಯಲ್ಲಿ ದಾನದ ಉದ್ದೇಶಕ್ಕೆ ನೀಡುವ ಈ ಹಣವನ್ನೂ ಶಿಕ್ಷಣ, ಆರೋಗ್ಯ, ಲಿಂಗತ್ವ ಸಮಾನತೆ ಇತ್ಯಾದಿ ಅನೇಕ ಕ್ಷೇತ್ರಗಳಲ್ಲಿ ವಿನಿಯೋಗಿಸಲು ಅವಕಾಶ ಇದೆ. ಆದರೆ ದಾನದ ದೊಡ್ಡ ಮೊತ್ತವನ್ನು ತುಂಬ ನಾಜೂಕಾಗಿ ನಿಭಾಯಿಸಲು ಸರ್ಕಾರ ಹೊಣೆಗಾರಿಕೆ ಹೊರಬೇಕು. ಇಲ್ಲದಿದ್ದರೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುವುದು. ದಾನಧರ್ಮಕ್ಕೆ ಮಾಡುವ ಅಪಾರ ವೆಚ್ಚಗಳಿಂದ ನಿರೀಕ್ಷಿತ ಪರಿಣಾಮ ಕಂಡುಬರುವಂತೆ ದಕ್ಷರೀತಿಯಲ್ಲಿ ನಿಗಾ ವಹಿಸಬೇಕು.

ಅಪಾತ್ರರಿಗೆ ದಾನ ಮಾಡಬಾರದು ಎನ್ನುವ ಮಾತಿದೆ. ಅದೇ ರೀತಿ ಇಂತಹ ದಾನ –ಧರ್ಮಗಳು ದುರ್ಬಳಕೆ ಮಾಡಿಕೊಳ್ಳದಂತೆ, ಅರ್ಹರಿಗೆ ಮಾತ್ರ ತಲುಪುವಂತೆ ಕ್ರಮಗಳನ್ನು ಕೈಗೊಳ್ಳಬೇಕು. ಭಗವದ್ಗೀತೆಯಿಂದ ಸ್ಫೂರ್ತಿ ಪಡೆದು ಪ್ರತಿಫಲಾಪೇಕ್ಷೆ ಇಲ್ಲದೇ ದಾನ ಮಾಡುತ್ತಿರುವ ಇಂತಹ ಸಿರಿವಂತರ ಆಶಯ ಸಾಕಾರಗೊಳಿಸಲು ಇತರರೂ ಅಷ್ಟೇ ಬದ್ಧತೆಯಿಂದ ಕಾರ್ಯಪ್ರವೃತ್ತರಾಗಬೇಕು. ಆಗ ಈ ಬಗೆಯ ಸತ್ಕಾರ್ಯಗಳ ಉದ್ದೇಶ ಸಫಲಗೊಂಡೀತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry