7

ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

Published:
Updated:
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

ರೈಲು ಮತ್ತಷ್ಟು ವೇಗವನ್ನು ಹೆಚ್ಚಿಸಿಕೊಂಡಿತು. ನಮ್ಮ ಅನೌಪಚಾರಿಕ ಚರ್ಚೆಯ ಕಾವೂ ಹೆಚ್ಚಾಯಿತು.

‘ಏನೇ ಹೇಳ್ರಿ, ಹೈದರಾಬಾದ್‌ ಕರ್ನಾಟಕದವರದು ವಿಚಿತ್ರ ಭಾಷೆ’ ಎಂದು ಒಬ್ಬರು ಗೇಲಿ ಮಾಡುವ ಧಾಟಿಯಲ್ಲಿ ಹೇಳಿದರು.

‘ಅದು ಹೇಗೆ’ ಎಂದು ಆಕ್ಷೇಪದ ಧ್ವನಿಯಲ್ಲಿ ಕೇಳಿದೆ.

‘ಆ ಜನ ಮಾತನಾಡುವಾಗ ಎಷ್ಟೋ ಪದಗಳು ಅರ್ಥವಾಗುವುದೇ ಇಲ್ಲ. ಯಾವ, ಯಾವುದೋ ಭಾಷೆಗಳ ಪದಗಳನ್ನು ಬೆರಸುತ್ತಾರೆ’ ಎಂದು ಲಘುವಾಗಿ ಹೇಳಿದರು.

ನನಗೆ ಅವರ ಮಾತು ಸರಿ ಕಾಣಲಿಲ್ಲ. ಏಕೆಂದರೆ, ಇದು ಬಹುಸಂಸ್ಕೃತಿ, ಬಹುಭಾಷೆಗಳನ್ನು ಉಸಿರಾಡುವ, ಅದರೊಟ್ಟಿಗೆ ಶತ ಶತಮಾನಗಳಿಂದ ವಿಕಸನಗೊಂಡಿರುವ ಪ್ರದೇಶ. ಅವರಿಗೆ ಬಹುಸಂಸ್ಕೃತಿ, ಬಹುಭಾಷೆಗಳೊಂದಿಗೆ ಬದುಕಿಯೇ ಗೊತ್ತಿರಲಿಲ್ಲ. ಅವುಗಳ ಸೌಂದರ್ಯ, ಸುಖದ ಅನುಭವವೂ ಇರಲಿಲ್ಲ.

‘ಆಗಸ್ಟ್ ಪಂದ್ರಕ್ಕಾ ಜಂಡಾ ಹಾರಿಸಲಿಕ್ಕಾ ಹೋಗಬೇಕ್ರಿ’. ‘ಕಾಕಾ ಅವ್ರು ಸಬ್ಜಿ ತರಲಿಕ್ಕಾ ಬಜಾರ್‌ಗೆ ಹೋಗ್ಯಾರ್ರಿ’. ‘ನಮ್ ಪೋರಿ ದಸ್‌ ತಾರೀಖಿನಂದು ಕೂಸು ಹಡೆದ್ಯಾಳ’. ಆದ ಕೆ.ಜಿ.ಆಲೂ, ದೀಡ್ ಕೆ.ಜಿ. ಗಜರಿ, ಪಾಂಚ್‌ ರೂಪಾಯ್‌ ಕಾ ಮೆಂಥಿ ಪಲ್ಯೆ ಕೊಡ್ರಿ’. ‘ಬಸ್‌ಸ್ಟ್ಯಾಂಡ್‌ಲು ಬಸ್ ಅದಾವಾ’.

ಇಲ್ಲಿ ಕನ್ನಡ ಭಾಷೆ ಜೊತೆಯಲ್ಲಿ ಉರ್ದು, ಮರಾಠಿ, ತೆಲುಗು ಭಾಷೆಗಳ ಪದಗಳು ಸಹಜ ಎನ್ನುವಂತೆ ಸೇರಿಕೊಂಡಿವೆ. ಇಂಥ ಸಂಭಾಷೆಗಳು ಹೊರಗಿನವರಿಗೆ ವಿಚಿತ್ರ ಭಾಷೆಯಂತೆ ಭಾಸವಾಗುತ್ತದೆ. ಯಾರಿಗೆ ಇತಿಹಾಸ, ಅದರ ಬೇರುಗಳ ಕುರಿತು ಅಜ್ಞಾನ, ತಿಳಿವಿನ ಕೊರತೆ ಇರುತ್ತದೆಯೋ ಅಂಥವರು ಮಾತ್ರ ಜರಿಯುತ್ತಾರೆ. ಆದರೆ, ಇತಿಹಾಸಕಾರರು, ಭಾಷಾಶಾಸ್ತ್ರಜ್ಞರು, ಸಂಶೋಧಕರು ಚಕಿತಗೊಳ್ಳುತ್ತಾರೆ.

ಬಹಮನಿ, ಆದಿಲ್‌ಶಾಹಿ, ಮೊಘಲ್‌, ಪೇಶ್ವೆ ಮತ್ತು ನಿಜಾಮರ ಆಳ್ವಿಕೆಯವರೆಗೆ ಸುಮಾರು 600 ವರ್ಷಗಳ ಉದ್ದಕ್ಕೂ ಈ ಪ್ರಾಂತ್ಯದ ಜನ ಸಮುದಾಯಗಳು ತಮ್ಮ ಕನ್ನಡ, ತೆಲುಗು ಭಾಷೆಗಳ ಜೊತೆಗೆ ಮರಾಠಿ, ಫಾರಸಿ, ಉರ್ದು ಭಾಷೆಗಳ ಒಡನಾಟದಲ್ಲಿ ಬದುಕುತ್ತಾ ಬಂದಿವೆ.

ಹಲವು ಸಂಸ್ಕೃತಿಗಳು ಸೇರಿ ಭಿನ್ನ ಸಂಸ್ಕೃತಿಯನ್ನು ನಿರ್ಮಾಣ ಮಾಡುತ್ತವೆ. ಹಾಗೆಯೇ ಹಲವು ಭಾಷೆಗಳ ಪದಗಳು ಸೇರಿ ವಿಶಿಷ್ಟ ಭಾಷೆಯನ್ನು ಕಟ್ಟುತ್ತವೆ. ಅದಕ್ಕೆ ಹೈದರಾಬಾದ್ ಕರ್ನಾಟಕ ಉತ್ತಮ ಉದಾಹರಣೆ. ಇಂಥ ಸೊಗಸು ರಾಜ್ಯದ ಬೇರೆ ಯಾವ ಪ್ರದೇಶದಲ್ಲೂ ಕಾಣಲು ಸಿಗುವುದಿಲ್ಲ.

ಏಕೆಂದರೆ ರಾಜ್ಯದ ಇತರ ಭಾಗಗಳಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಕನ್ನಡ, ತಮಿಳು, ತೆಲುಗು, ಮಲಯಾಳ ಭಾಷೆಗಳು ಅಲ್ಲಿವೆ. ಇಲ್ಲಿ ಉರ್ದು, ಫಾರಸಿ, ಮರಾಠಿ ಬೇರೆ, ಬೇರೆ ಕುಟುಂಬಕ್ಕೆ ಸೇರಿವೆ. ಒಂದೇ ಕುಟುಂಬದ ಭಾಷೆಗಳು ಪರಸ್ಪರ ಪ್ರಭಾವಿಸುವುದು ಸಾಮಾನ್ಯ. ಆದರೆ, ಹೈದರಾಬಾದ್‌ ಕರ್ನಾಟಕದಲ್ಲಿ ಮಾತ್ರ ಬೇರೆ, ಬೇರೆ ಕುಟುಂಬಕ್ಕೆ ಸೇರಿದ ಭಾಷೆಗಳು ಪ್ರಭಾವಿಸಿಕೊಂಡಿವೆ.

‘ಉರ್ದುವಿಗೆ ಇಷ್ಟು ಮಹತ್ವ ಕೊಟ್ಟರೆ ಕನ್ನಡ ಉಳಿಯುತ್ತದೆಯೇ’ ಎಂದು ರೈಲಿನಲ್ಲಿ ವಾದಕ್ಕೆ ಇಳಿದಿದ್ದವರಲ್ಲಿ ಒಬ್ಬರು ಗೊಣಗಿದ್ದರು. ಅವರು ಉರ್ದುವನ್ನು ಕನ್ನಡದ ಶತ್ರು ಭಾಷೆ ರೀತಿ ನೋಡುತ್ತಿದ್ದರು. ಇಲ್ಲಿ ಕನ್ನಡ ಮತ್ತು ಉರ್ದು ಸಂಬಂಧ ಹೇಗಿದೆ ಎನ್ನುವುದು ಅವರಿಗೆ ಗೊತ್ತೇ ಇರಲಿಲ್ಲ. ಯಾರಿಗಾದರೂ ಉರ್ದು ಪದಗಳನ್ನು ಬಳಸದೆ ಮಾತನಾಡಿ ಎಂದರೆ ‘ಪರೇಶಾನ್ ಆಗುತ್ತೆ ’ ಎಂದು ಉರ್ದು ಮಿಶ್ರಿತ ಕನ್ನಡದಲ್ಲೇ ಹೇಳುತ್ತಾರೆ!

ಭಾಷೆಗಳ ನಡುವೆ ಏಕಮುಖ ಸಂಬಂಧ ಸಾಧ್ಯವಿಲ್ಲ. ಭಾಷೆ ಒಂದನ್ನು ಕೊಟ್ಟು ಇನ್ನೊಂದನ್ನು ಪಡೆದುಕೊಳ್ಳುತ್ತದೆ. ಇಂಗ್ಲಿಷ್ ಭಾಷೆಯು ಲ್ಯಾಟಿನ್, ಗ್ರೀಕ್, ಫ್ರೆಂಚ್, ಡಚ್‌, ಇತ್ಯಾದಿ ಭಾಷೆಗಳಿಂದ ಪದಗಳನ್ನು ಪಡೆದು ಸಮೃದ್ಧವಾಗಿದೆ. ಇಲ್ಲದೇ ಹೋಗಿದ್ದರೆ ಸಂಸ್ಕೃತದಂತೆ ಜನರಿಂದ ದೂರವಾಗುತ್ತಿತ್ತು.

ಭಾಷೆಯ ಬೇರುಗಳ ನಿರ್ಮಾಣದ ಪ್ರಭಾವ ಹಲವು ಶತಮಾನಗಳು ಕಳೆದರೂ ಕಂಡು ಬರುತ್ತದೆ. ಇಲ್ಲಿ ‘ಭಾಷೆಗಳ ಸಂಕರ’ ಸ್ಥಿತಿಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಚರಿತ್ರೆ ಮತ್ತು ಬೇರು. ಬೇರಿನಿಂದ ಸತ್ವ ಹೀರಿಕೊಂಡಿದ್ದು ಯಾವಾಗಲೂ ಉಳಿಯುತ್ತದೆ. ಶಿಕ್ಷಣ ಮಾಧ್ಯಮದಿಂದ ಪಡೆದದ್ದು ಆಳಕ್ಕೆ ಇಳಿಯುವುದಿಲ್ಲ. ಇಳಿದರೂ ಪ್ರಭಾವ ತೀವ್ರವಾಗಿರುವುದಿಲ್ಲ.

ಧರ್ಮ, ಜಾತಿ,ಭಾಷೆಗಳ ನಡುವೆ ಭಿನ್ನತೆ ಇರುತ್ತದೆ. ಆ ಭಿನ್ನತೆಯನ್ನು ಬಹುಸಂಸ್ಕೃತಿ, ಬಹುಭಾಷೆಗಳ ಸಂಕರ ಸ್ಥಿತಿ ಪರೋಕ್ಷವಾಗಿ ಪ್ರಶ್ನಿಸುತ್ತದೆ.

ಕರ್ನಾಟಕದ ಕಲ್ಪನೆಗೆ ಅರವತ್ತು ವರ್ಷಗಳು ಕಳೆದು ಹೋಗಿವೆ. ಆದರೂ ನಾವು ಯಾವುದನ್ನು ಕನ್ನಡ, ಕರ್ನಾಟಕ ಎಂದು ಮಾತನಾಡುತ್ತೇವೆಯೋ ಅದು ಸೀಮಿತವಾಗಿದೆ. ಸಮಗ್ರ ಕರ್ನಾಟಕದ ಬಹುತೇಕ ಪ್ರದೇಶಗಳ ಲೋಕಜ್ಞಾನ, ಜನಪದ, ಸಂಸ್ಕೃತಿ, ಸಾಹಿತ್ಯ ಇನ್ನೂ ತಿಳಿದಿಲ್ಲ.

ಹೈದರಾಬಾದ್‌ ಕರ್ನಾಟಕದ ಬಹುಭಾಷೆಗಳ ಪರಿಕಲ್ಪನೆ, ಎಲ್ಲ ಭಾಷೆಗಳು, ಜನ ಒಟ್ಟಿಗೆ ಬದುಕಿದ, ಪರಸ್ಪರ ಪಡೆದುಕೊಂಡ ರೀತಿ ಮತ್ತು ಸೃಜನಶೀಲತೆಯನ್ನು ಒಂದಕ್ಕೊಂದು ಪ್ರೇರೇಪಿಸಿಕೊಂಡ ಬಗ್ಗೆ ನಮಗೆ ಎಷ್ಟು ಗೊತ್ತಿದೆ?

ಈ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಗಿಂತ ದಖನಿ ಸಾಹಿತ್ಯ ಚರಿತ್ರೆಯನ್ನು ಬರೆಯಬೇಕಾಗುತ್ತದೆ. ಏಕೆಂದರೆ, ಉರ್ದು, ಫಾರಸಿ, ಕನ್ನಡ, ಮರಾಠಿ, ತೆಲುಗು ಸಾಹಿತ್ಯ ಜೊತೆ ಜೊತೆಯಾಗಿ ಬರುತ್ತವೆ. ಅಂಥ ಗುಣ ಈ ಭಾಗದ ಭಾಷೆಗಳಿಗಿದೆ. ಅವು ಪರಸ್ಪರ ಶತ್ರು ಎಂದು ಭಾವಿಸಿಕೊಂಡೇ ಇಲ್ಲ.

ಕರ್ನಾಟಕದಲ್ಲಿ ಐದಾರು ಭಾಷೆಗಳು ಒಟ್ಟಿಗೆ ಇದ್ದು, ಪರಸ್ಪರ ಶಕ್ತಿಯನ್ನು ಪಡೆದುಕೊಂಡು, ಸೃಜನಶೀಲವಾಗಿ ಬೆಳೆದಂತಹ ಅಪರೂಪದ ಉದಾಹರಣೆ ಇಲ್ಲಿದೆ. ಆದರೆ, ಬೆಳಗಾವಿಯಲ್ಲಿ ಎರಡು ಭಾಷೆಗಳು ಒಟ್ಟಿಗೆ ಇರಲು ಸಾಧ್ಯವಾಗುತ್ತಿಲ್ಲ!.

‘ನಮ್ಮಲ್ಲಿ ವಿವಿಧ ಸಂಸ್ಕೃತಿ ಮತ್ತು ಭಾಷೆಗಳ ಮಿಶ್ರಣದಿಂದ ಪರಸ್ಪರದಲ್ಲಿ ಅನ್ಯೋನ್ಯತೆಯ ಬದುಕು ಸಾಧ್ಯವಾಗಿದೆ. ಆದರೆ, ನಮ್ಮದೇ ರಾಜ್ಯದ ಮಂಗಳೂರಿನಲ್ಲಿ ಏನಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ’ ಎಂದು ಕಲಬುರ್ಗಿಯ ಅನುವಾದಕ ರಿಯಾಜ್‌ ಅಹ್ಮದ್‌ ಬೋಡೆ ಹೇಳುತ್ತಾರೆ.

ಇದು ಕನ್ನಡ ಮತ್ತು ಕರ್ನಾಟಕದ ಕಲ್ಪನೆಯನ್ನು ವಿಸ್ತರಿಸಿದ ಪ್ರದೇಶ. ಈ ಕಲ್ಪನೆಯಲ್ಲಿ ಹೈದರಾಬಾದ್‌ ಕರ್ನಾಟಕವನ್ನು ಬಿಟ್ಟು ನೋಡಿದರೆ ಒಂದು ಅರ್ಥವನ್ನೂ, ಸೇರಿಸಿ ನೋಡಿದರೆ ಇನ್ನೊಂದು ಅರ್ಥವನ್ನು ಕೊಡುತ್ತದೆ.

ಆದ್ದರಿಂದ ಚರಿತ್ರೆಯಲ್ಲಿ ಕಾಣಿಸುವ ಸತ್ಯಗಳಿಗೆ ಬೆನ್ನು ತೋರಿಸಬಾರದು. ಅವುಗಳಿಗೆ ‘ಮುಖಾಮುಖಿ’ ಆಗಬೇಕು. ಆಗ ಸತ್ಯವನ್ನು ಅರಿಯಲು, ಮರು ಶೋಧಿಸಲು ಸಾಧ್ಯವಾಗುತ್ತದೆ. ಅದು ಕೆಟ್ಟ ಮಾದರಿಯಾದರೆ ನಿರಾಕರಿಸಬಹುದು. ಒಳ್ಳೆಯ ಮಾದರಿಯಾದರೆ ಅದನ್ನು ನಮ್ಮ ಕಾಲಕ್ಕೂ ಸ್ವೀಕರಿಸಬಹುದು.

‘ಧರ್ಮಕಾರಣ’ ಮತ್ತು ‘ರಾಜಕಾರಣ’ಗಳ ಸಂಕುಚಿತ ಭಾವನೆ ಹಾಗೂ ಮಡಿವಂತಿಕೆ ತೋರಿಸುತ್ತಾ ಬೇರೆ ಭಾಷೆಗಳೊಂದಿಗೆ ಬೆರೆಯದೇ ಹೋದರೆ ನಷ್ಟ ಆ ಭಾಷೆಗೇ ಆಗುತ್ತದೆ. ಅಂಥ ಭಾಷೆ ಬೆಳೆಯುವುದಿಲ್ಲ. ಹೆಚ್ಚು ಕಾಲ ಬಾಳುವುದಿಲ್ಲ.

ಹೈದರಾಬಾದ್‌ ಕರ್ನಾಟಕದಲ್ಲಿ ಬಹುಭಾಷೆಗಳ ಸಂಕರ ಸ್ಥಿತಿಯಿಂದಾಗಿ ಕನ್ನಡ, ಉರ್ದು, ಮರಾಠಿ, ತೆಲುಗು ಭಾಷಿಕರು ಸೆಟೆದುಕೊಂಡಿಲ್ಲ; ಬದಲಾಗಿ ಬೆಸೆದುಕೊಂಡಿದ್ದಾರೆ. ಆದ್ದರಿಂದ ಇಲ್ಲಿ ಭಾಷಾ ಮತ್ತು ಕೋಮು ಗಲಭೆಗಳು ನಡೆದ ಕಹಿ ನೆನಪುಗಳು ಇಲ್ಲ.

ಮಾತು ಸಂವಹನಕ್ಕೆ ಅಷ್ಟೇ ಇದ್ದರೆ ಅದು ಸೋಲುತ್ತದೆ. ಭಾಷೆ ಇದನ್ನು ಮೀರಿದ ಶಕ್ತಿಯನ್ನು ಹೊಂದಿದೆ ಎಂದು ನನಗೆ ಅನಿಸುತ್ತದೆ. ಭಾಷೆ ನಮಗೆ ಸಂಬಂಧ, ಸಹಬಾಳ್ವೆ, ಸೌಹಾರ್ದದ ಪಾಠವನ್ನು ಹೇಳಿಕೊಡುತ್ತದೆ.

ಏಕಭಾಷೆ ಅಥವಾ ಒಂದೇ ಕುಟುಂಬದ ಭಾಷೆಗಳೊಂದಿಗೆ ಬೆಳೆದವರಿಗೆ ಇದು ಅರ್ಥವಾಗುವುದು ಕಷ್ಟ. ಆದರೆ, ಹೈದರಾಬಾದ್‌ ಕರ್ನಾಟಕ ಇಡೀ ರಾಜ್ಯಕ್ಕೆ ‘ಕೂಡಿ ಬಾಳುವ’ ಅದ್ಭುತ ಮಾದರಿಯನ್ನು ಕೊಟ್ಟಿದೆ.

ಇದು ನನ್ನ ಅನುಭವಕ್ಕೂ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry