ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ದಿನ ಪೂರೈಸಿದ ಧರಣಿ

Last Updated 24 ನವೆಂಬರ್ 2017, 5:35 IST
ಅಕ್ಷರ ಗಾತ್ರ

ಹುಣಸೂರು: ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ಹಾಗೂ ಅರಣ್ಯದಲ್ಲಿ ನೆಲೆಸಲು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಆದಿವಾಸಿಗಳು ನಡೆಸುತ್ತಿರುವ ಅಹೋ ರಾತ್ರಿ ಧರಣಿ ನಾಲ್ಕು ದಿನ ಪೂರೈಸಿದೆ.

ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಧರಣಿಗೆ ಬೆಂಬಲ ನೀಡಿ ಮಾತನಾಡಿದ ಲ್ಯಾಂಪ್‌ ಮಹಾಮಂಡಳಿ ಅಧ್ಯಕ್ಷ ಕೃಷ್ಣಯ್ಯ, ಆದಿವಾಸಿಗಳಿಗೆ ರಾಷ್ಟ್ರೀಯ ಉದ್ಯಾನದಲ್ಲಿ ಸಾಮೂಹಿಕ ಅರಣ್ಯ ಹಕ್ಕು ನೀಡುವಂತೆ ಸರ್ಕಾ ರದ ಆದೇಶವಿದ್ದರೂ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಯ್ದೆ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಹುಣಸೂರು ಉಪವಿಭಾಗದಲ್ಲಿ ಎಚ್‌.ಡಿ.ಕೋಟೆ ತಾಲ್ಲೂಕಿನ 14 ಹಾಡಿಗಳಲ್ಲಿ ಆದಿವಾಸಿಗಳು ಉಳುಮೆ ಮಾಡುತ್ತಿದ್ದರೂ ಭೂಮಿಯ ಹಕ್ಕು ನೀಡಿಲ್ಲ. ಕೆಲವು ಆದಿವಾಸಿಗಳು ಹಾಡಿಯಲ್ಲಿ ನಿರ್ಮಿಸಿಕೊಂಡಿರುವ ಮನೆ ನಿವೇಶನಕ್ಕೆ ಗುಂಟೆ ಲೆಕ್ಕದಲ್ಲಿ ಮಾತ್ರ ಹಕ್ಕು ನೀಡಿದೆ ಎಂದರು.

ಹುಣಸೂರು ತಾಲ್ಲೂಕಿನ ಬೀರತಮ್ಮನಹಳ್ಳಿ ಹಾಡಿ ಸುತ್ತಲು ಅರಣ್ಯ ಇಲಾಖೆ ಆನೆ ಕಂದಕ ತೋಡಿದ್ದು, ಅಲ್ಲಿ ಹಾಡಿಯೇ ಇರಲಿಲ್ಲ, ಆದಿವಾಸಿಗಳು ಕೃಷಿ ಚಟುವಟಿಕೆ ನಡೆಸಿಲ್ಲ ಎನ್ನುವ ಮೂಲಕ ಅವರನ್ನು ಕಾಡಿನಿಂದ ಹೊರ ಹಾಕುವ ತಂತ್ರಗಾರಿಕೆಯನ್ನು ಅರಣ್ಯ ಇಲಾಖೆ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಅಲ್ಲಿ ಹಾಡಿ ಇತ್ತು ಎನ್ನುವುದಕ್ಕೆ ಅಲ್ಲಿರುವ ಕೊಳವೆ ಬಾವಿ ಸಾಕ್ಷಿ ಎಂದರು.

ಅಬ್ಬಳತೆಹಾಡಿ ನಿವಾಸಿ ಜಾನಕಮ್ಮ, ಆಲದಕಟ್ಟೆ ಹಾಡಿ ಅಕ್ಕಮ್ಮ ಮತ್ತು ಬೋರಕಟ್ಟೆ ಹಾಡಿ ಜಯಮ್ಮ ಮಾತನಾಡಿ, ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಭೂಮಿ ನೀಡುವುದಾಗಿ ಅಧಿಕಾರಿಗಳು ಕಳೆದ ಎರಡು ವರ್ಷದಿಂದ ಹೇಳುತ್ತಾ ಬಂದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದಾಗಿ ನಾವು ಬೀದಿಗೆ ಬಿದ್ದಿದ್ದೇವೆ ಎಂದು ಅಳಲು ತೋಡಿಕೊಂಡರು.

ಹುಣಸೂರು ಉಪವಿಭಾಗಾಧಿಕಾರಿ ಕೆ. ನಿತಿಶ್‌ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಲು ಗ್ರಾಮ ಅರಣ್ಯ ಸಮಿತಿ ರಚಿಸಿ ಆ ಸಮಿತಿಯಲ್ಲಿ ಹಾಡಿಯ ಜನರು ನೀಡುವ ಅರ್ಜಿಯನ್ನು ಪರಿಶೀಲಿಸಿ ನಂತರ ಗ್ರಾಮಸಭೆಯಲ್ಲಿ ಠರಾವು ಹೊರಡಿಸಬೇಕು. ಈ ಕೆಲಸವನ್ನು ಯಾವುದೇ ಅರಣ್ಯ ಸಮಿತಿಗಳು ಮಾಡು ತ್ತಿಲ್ಲ. ಕೇವಲ ವಿವಿಧ ಸಂಘಟನೆಗಳು ವೈಯಕ್ತಿಕ ಠರಾವು ಅನುಮೋದನೆ ಪಡೆದು ಕಂದಾಯ ಇಲಾಖೆಗೆ ಸಲ್ಲಿಸು ತ್ತಿರುವುದರಿಂದ ಕಾನೂನು ಕ್ರಮ ತೆಗೆದುಕೊಳ್ಳಲು ಅಸಾಧ್ಯವಾಗಿದೆ ಎಂದರು.

ಪಿರಿಯಾಪಟ್ಟಣ ತಾಲ್ಲೂಕಿನ ಹಾಡಿಗಳಲ್ಲಿ ಅರಣ್ಯ ಹಕ್ಕು ಸಮಿತಿ ಕಾರ್ಯನಿರ್ವಹಿಸದೆ ಇರುವುದರಿಂದ ಆ ಭಾಗದ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆ ಲಾಭ ಸಿಗುತ್ತಿಲ್ಲ. ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅರಣ್ಯ ಹಕ್ಕು ಸಮಿತಿಗೆ ಸಂಚಲನ ಮೂಡಿಸಿ ಕ್ರಮ ತೆಗೆದು ಕೊಳ್ಳಲು ಸೂಚಿಸಿದ್ದೇನೆ ಎಂದರು.

* * 

ಅರಣ್ಯದೊಳಗಿನ ಹಾಡಿ ಹಾಗೂ ಕೃಷಿ ಭೂಮಿ ಸಮೀಕ್ಷೆ ನಡೆಸುವ ಅರಣ್ಯ ಹಕ್ಕು ಸಮಿತಿ ಸದಸ್ಯರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸಬೇಕು ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನ ದ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ
ಕೆ.ನಿತೀಶ್‌ , ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT