7

ಬಾಯಿ ಚಪ್ಪರಿಸುವಂಥ ಖಾದ್ಯಗಳು...

Published:
Updated:
ಬಾಯಿ ಚಪ್ಪರಿಸುವಂಥ ಖಾದ್ಯಗಳು...

ಮೈಸೂರು: ಕೆಲಸಗಾರರು ಒಂದೆಡೆ ಬೃಹತ್‌ ಗಾತ್ರದ ಪಾತ್ರೆಗಳನ್ನು ತೊಳೆದು ಜೋಡಿಸಿಡುತ್ತಿದ್ದರೆ, ಮತ್ತೊಂದೆಡೆ ಒಲೆಗಳನ್ನು ಸಿದ್ಧಪಡಿಸಿಡುವ ಕೆಲಸದಲ್ಲಿ ನಿರತರಾಗಿದ್ದರು. ಈರುಳ್ಳಿ, ಟೊಮೆಟೊ, ಬೀನ್ಸ್, ಮೆಣಸಿನಕಾಯಿ, ಕರಿಬೇವಿನ ರಾಶಿಯ ಪಕ್ಕ ಕುಳಿತಿದ್ದವರು ತರಕಾರಿ ಸ್ವಚ್ಛಗೊಳಿಸುವ, ಕತ್ತರಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಸಾಹಿತ್ಯ ಸಮ್ಮೇಳನದ ಮೂರು ‘ಅಡುಗೆ ಕೋಣೆ’ಗಳಲ್ಲಿ ಗುರುವಾರ ರಾತ್ರಿ ಸಂಚರಿಸಿದಾಗ ಕಂಡು ಬಂದ ದೃಶ್ಯಗಳಿವು.

ಮುಖ್ಯ ವೇದಿಕೆಯ ಪಕ್ಕದಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯ ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ಗಣ್ಯರಿಗೆ ಮತ್ತು ಮಾಧ್ಯಮದವರಿಗೆ ಹಾಗೂ ಅದರ ಪಕ್ಕದಲ್ಲಿ ಪ್ರತಿನಿಧಿಗಳಿಗೆ ಊಟ–ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಕೌಟ್ಸ್‌ ಮತ್ತು ಗೈಡ್ ಮೈದಾನದಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಇರಲಿದೆ.

ಗಣ್ಯರಿಗೆ ಮತ್ತು ಮಾಧ್ಯಮದವರಿಗೆ ಊಟದ ವ್ಯವಸ್ಥೆಯ ಗುತ್ತಿಗೆಯನ್ನು ಬೆಂಗಳೂರಿನ ಜಯನಗರದ ಉದಯ್‌ ಕೆಟರರ್ಸ್‌ ಮತ್ತು ಎಸ್‌ಬಿ ಎಂಟರ್‌ಪ್ರೈಸಸ್‌ನವರಿಗೆ ನೀಡಲಾಗಿದೆ. ಬೆಳಿಗ್ಗೆ 5 ಸಾವಿರ, ಮಧ್ಯಾಹ್ನ 8 ಸಾವಿರ ಮತ್ತು ರಾತ್ರಿ 4 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡುವಂತೆ ಆಯೋಜಕರು ತಿಳಿಸಿದ್ದಾರೆ ಎಂದು ಉದಯ್‌ ಕೆಟರರ್ಸ್‌ನ ವ್ಯವಸ್ಥಾಪಕರು ಹೇಳಿದರು.

ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಪ್ರತಿನಿಧಿಗಳಿಗೆ ಊಟದ ವ್ಯವಸ್ಥೆ ಮಾಡುವ ಗುತ್ತಿಗೆಯನ್ನು ಮೈಸೂರಿನ ಎಂಎನ್‌ಆರ್‌ ಕೆಟರರ್ಸ್‌ನವರು ವಹಿಸಿಕೊಂಡಿದ್ದಾರೆ. ‘ನಿತ್ಯ ಮೂರು ಹೊತ್ತು 13 ಸಾವಿರದಿಂದ 15 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲು ನಮಗೆ ಸೂಚಿಸಿದ್ದಾರೆ. 200 ಮಂದಿ ಕೆಲಸಗಾರರು ಆಹಾರ ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ವ್ಯವಸ್ಥಾಪಕ ರಾಜು ತಿಳಿಸಿದರು. ಗುರುವಾರ ರಾತ್ರಿಯವರೆಗೆ 13,500 ಪ್ರತಿನಿಧಿಗಳು ಸಮ್ಮೇಳನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು.

ಸಾರ್ವಜನಿಕರಿಗೆ ಊಟದ ವ್ಯವಸ್ಥೆಯ ಗುತ್ತಿಗೆಯನ್ನು ಮೈಸೂರಿನ ನವನೀತ್‌ ಕೆಟರರ್ಸ್‌ನವರು ವಹಿಸಿಕೊಂಡಿದ್ದಾರೆ. ‘ಶುಕ್ರವಾರ ಬೆಳಿಗ್ಗೆ 15 ಸಾವಿರ ಮಂದಿಗೆ ಉಪಹಾರ, ಮಧ್ಯಾಹ್ನ 45 ಸಾವಿರ ಮತ್ತು ರಾತ್ರಿ 15 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಈ ಸಂಖ್ಯೆಯಲ್ಲಿ 4–5 ಸಾವಿರ ಹೆಚ್ಚಳವೂ ಆಗಬಹುದು ಎಂದು ಆಯೋಜಕರು ತಿಳಿಸಿದ್ದಾರೆ. 600 ಮಂದಿಯ ತಂಡ ಇಲ್ಲಿ ಆಹಾರ ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂದು ನವನೀತ್‌ ಕೆಟರರ್ಸ್‌ನ ಶಿಲ್ಪಾ ಹೇಳಿದರು.

ಊಟ–ಉಪಾಹಾರದ ವಿವರ 

ನವೆಂಬರ್‌ 24

ಉಪಾಹಾರ: ಸಿಹಿ, ಖಾರಾ ಪೊಂಗಲ್, ಕಾಫಿ/ಚಹಾ.

ಮಧ್ಯಾಹ್ನ ಊಟ: ಪೂರಿ ಸಾಗು, ಕಜ್ಜಾಯ, ಮೆಂತ್ಯ ಸೊಪ್ಪಿನ ಬಾತ್, ಅನ್ನ–ಸಾಂಬಾರು, ಮೊಸರನ್ನ, ಹಪ್ಪಳ, ಉಪ್ಪಿನಕಾಯಿ.

ರಾತ್ರಿ ಊಟ: ತರಕಾರಿ ಬಿರಿಯಾನಿ, ಅಕ್ಕಿಪಾಯಸ, ಅನ್ನ, ತಿಳಿಸಾರು, ಮೊಸರನ್ನ, ಹಪ್ಪಳ, ಉಪ್ಪಿನಕಾಯಿ.

ನವೆಂಬರ್‌ 25

ಉಪಾಹಾರ: ಉಪ್ಪಿಟ್ಟು, ಕೇಸರಿಬಾತ್, ಮಸಾಲವಡೆ, ಕಾಫಿ/ಚಹಾ.

ಮಧ್ಯಾಹ್ನ ಊಟ: ಅಕ್ಕಿ ರೊಟ್ಟಿ, ಕಳ್ಳೆಹುಳಿ, ಹೋಳಿಗೆ ತುಪ್ಪ, ಮೇಲುಕೋಟೆ ಪುಳಿಯೊಗರೆ, ಅನ್ನ ಸಾಂಬಾರು, ಮೊಸರನ್ನ, ಹಪ್ಪಳ, ಉಪ್ಪಿನಕಾಯಿ.

ರಾತ್ರಿ ಊಟ: ಬಾದುಶಾ, ತರಕಾರಿ ಪಲಾವ್, ಅನ್ನ, ತಿಳಿಸಾರು, ಮೊಸರನ್ನ, ಹಪ್ಪಳ, ಉಪ್ಪಿನಕಾಯಿ.

ನವೆಂಬರ್‌ 26

ಉಪಾಹಾರ: ಶಾವಿಗೆಬಾತ್ ಮತ್ತು ಹಲ್ವಾ, ಕಾಫಿ/ಚಹಾ.

ಮಧ್ಯಾಹ್ನ ಊಟ: ಜೋಳದ ರೊಟ್ಟಿ, ಎಣಗಾಯಿ ಪಲ್ಯ, ಮೈಸೂರು ಪಾಕ್, ಹುಚ್ಚೆಳ್ಳುಚಟ್ನಿ, ಬಿಸಿಬೇಳೆ ಬಾತ್, ಅನ್ನ ಸಾಂಬಾರು, ಮೊಸರನ್ನ, ಹಪ್ಪಳ, ಉಪ್ಪಿನಕಾಯಿ.

ರಾತ್ರಿ ಊಟ: ವಾಂಗಿಬಾತ್, ರೈತಾ, ಲಾಡು, ಅನ್ನ, ತಿಳಿಸಾರು, ಮೊಸರನ್ನ ಹಪ್ಪಳ, ಉಪ್ಪಿನ ಕಾಯಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry