7

ಬಿಜೆಪಿ ಗೆದ್ದರೆ ಗೃಹಸಚಿವ ಸ್ಥಾನ!

Published:
Updated:
ಬಿಜೆಪಿ ಗೆದ್ದರೆ ಗೃಹಸಚಿವ ಸ್ಥಾನ!

ಮಂಡ್ಯ: ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಅರಳುವಂತೆ ಮಾಡಿದರೆ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಅವರಿಗೆ ಮುಂದೆ ಬಿಜೆಪಿ ಸರ್ಕಾರ ರಚಿಸಿದರೆ ಗೃಹಸಚಿವ ಸ್ಥಾನ ಸಿಗಲಿದೆಯೇ? ರಾಜ್ಯ ಬಿಜೆಪಿ ಮುಖಂಡರು ಯೋಗೇಶ್ವರ್‌ಗೆ ಹೀಗೊಂದು ಭರವಸೆ ಕೊಟ್ಟಿದ್ದಾರೆ ಎಂಬ ಮಾತು ಜಿಲ್ಲೆಯಾದ್ಯಂತ ಚರ್ಚೆಯಾಗುತ್ತಿದೆ.

ವಿಧಾನಸಭೆ ಚುನಾವಣೆಗೆ ಐದು ತಿಂಗಳಿದೆ. ಲೆಕ್ಕಾಚಾರ, ಮುಂದಾ ಲೋಚನೆ, ಮಹತ್ವಾಕಾಂಕ್ಷೆ ಮಾತ್ರ ಎಲ್ಲಾ ದಿಕ್ಕುಗಳಿಗೂ ಚಾಚಿ ಕೊಂಡಿವೆ. ಬಿಜೆಪಿ ಅಂಗಳಕ್ಕೆ ಬಂದಿರುವ ಯೋಗೇಶ್ವರ್‌ ಈಗ ಜಿಲ್ಲೆಯಾದ್ಯಂತ ಓಡಾಡುತ್ತಿದ್ದು ಪಕ್ಷದ ಅಭ್ಯರ್ಥಿ ಗೆಲುವಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿಯ ಒಂದು ಕ್ಷೇತ್ರದಲ್ಲೂ ಪಕ್ಷ ಗೆಲ್ಲಲು ಸಾಧ್ಯವಾಗಿಲ್ಲ. ಪಕ್ಷದ ಅಭ್ಯರ್ಥಿಯನ್ನು ಗೆಲುವಿನ ದಡ ಮುಟ್ಟಿ ಸು ವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್‌.ಅಶೋಕ್‌ ಜಿಲ್ಲೆಯಲ್ಲಿ ಪಕ್ಷಕ್ಕೆ ಒಂದಷ್ಟು ಬಲ ತುಂಬುವ ಪ್ರಯತ್ನ ನಡೆಸಿದ್ದರು. ಈಗ ಬಿಜೆಪಿ ಮುಖಂಡರು ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿಯನ್ನು ಯೋಗೇಶ್ವರ್‌ ಹೆಗಲ ಮೇಲೆ ಹೊರಿಸಿದ್ದಾರೆ.

‘ಕಳೆದ 20 ವರ್ಷಗಳಿಂದ ಜಿಲ್ಲೆಯಿಂದ ಆಯ್ಕೆಯಾದ ಯಾವ ಶಾಸಕರೂ ರಾಜ್ಯ ಸರ್ಕಾರಗಳಲ್ಲಿ ಪ್ರಭಾವಿ ಸಚಿವರಾಗಿ ಕೆಲಸ ಮಾಡಿಲ್ಲ. ಈ ಬಾರಿ ಜಿಲ್ಲೆಯಿಂದ ಮೂವರು ಬಿಜೆಪಿ ಶಾಸಕರು ಆಯ್ಕೆಯಾದರೆ ಹೆಚ್ಚು ಅನುದಾನ ತರಲು ಸಾಧ್ಯವಾಗುತ್ತದೆ’ ಎಂದು ಯೋಗೇಶ್ವರ್‌ ಹೇಳುತ್ತಿದ್ದಾರೆ. ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಕಾರ್ಯತಂತ್ರ ಆರಂಭಿಸಿದ್ದಾರೆ.

ಮದ್ದೂರಿನಿಂದ ಸ್ಪರ್ಧೆ?: ಯೋಗೇಶ್ವರ್‌ ಬಿಜೆಪಿಗೆ ಸೇರ್ಪಡೆಯಾಗುತ್ತಲೇ ಅವರು ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವ ಲೆಕ್ಕಾಚಾರಕ್ಕೆ ಇನ್ನಷ್ಟು ಮಹತ್ವ ಬಂದಿದೆ. ಈ ಬೆಳವಣಿಗೆ ಮದ್ದೂರು ಕ್ಷೇತ್ರಾದ್ಯಂತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದ ಉದ್ಯಮಿ ಲಕ್ಷ್ಮಣ್‌ಕುಮಾರ್‌ ಅವರ ಆಸೆಗೆ ತಣ್ಣೀರು ಸುರಿದಂತಾಗಿದೆ.

ಮದ್ದೂರು, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ತವರು. ಈಗ ಕೃಷ್ಣ ಬಿಜೆಪಿಯಲ್ಲೇ ಇದ್ದಾರೆ. ಸಹಜವಾಗಿ ಜಿದ್ದಾಜಿದ್ದಿಯ ಸ್ಪರ್ಧೆ ನಿರೀಕ್ಷಿಸಬಹುದು. ಈ ಎಲ್ಲ ಬೆಳವಣಿಗೆಗಳಿಂದ ಚುನಾವಣೆ ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಕಷ್ಟವಾಗಲಿದೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿ ಇದೆ.

ಮಳವಳ್ಳಿಯ ಅಳಿಯ ಕೆ.ಶಿವರಾಂ: ಮೀಸಲು ವಿಧಾನಸಭಾ ಕ್ಷೇತ್ರ ಮಳವಳ್ಳಿ ಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಂ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಇದ್ದು,ಇವರು ಯೋಗೇಶ್ವರ್‌ ಆಯ್ಕೆ ಎನ್ನಲಾಗಿದೆ. ಶಿವರಾಂ ತಾಲ್ಲೂಕಿನ (ಹೊಸಳ್ಳಿ) ಅಳಿಯನೂ ಆಗಿದ್ದು, ಒಮ್ಮೆ ಈಗಾಗಲೇ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ಬೆಳವಣಿಗೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಸೋಮಶೇಖರ್‌ ಅವರ ನಿದ್ದೆಗೆಡಿಸಿದೆ. ತಾಲ್ಲೂಕಿನಲ್ಲಿ ಶಿವರಾಂ ಅವರನ್ನು ಬೆಂಬಲಿಸುವ ಯುವಪಡೆಯೇ ಇದೆ.

ಹೋರಾಟಗಾರನಿಗೆ ದಾಳ: ಶ್ರೀರಂಗ ಪಟ್ಟಣ ಕ್ಷೇತ್ರದಲ್ಲಿ ರೈತಸಂಘದ ಮುಖಂಡ ಕೆ.ಎಸ್‌.ನಂಜುಂಡೇಗೌಡ ಅವರಿಗೆ ಯೋಗೇಶ್ವರ್‌ ಆಹ್ವಾನ ಕೊಟ್ಟಿದ್ದಾರೆ. ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ಕಾಂಗ್ರೆಸ್‌ ಟಿಕೆಟ್‌ಗೆ ಹತ್ತಿರವಾಗಿದ್ದಾರೆ.

* * 

ತೇಜಸ್ವಿನಿ ರಮೇಶ್‌ ಬದಲಾವಣೆ?

ಬಿಜೆಪಿ ಜಿಲ್ಲಾ ಉಸ್ತುವಾರಿಯಾಗಿದ್ದ ತೇಜಸ್ವಿನಿ ರಮೇಶ್‌ ಅವರನ್ನು ಮೂಲೆಗುಂಪು ಮಾಡಿ ಜವಾಬ್ದಾರಿಯನ್ನು ಯೋಗೇಶ್ವರ್‌ಗೆ ವಹಿಸಲಾಗಿದೆ ಎಂಬ ಸುದ್ದಿ ಬಿಜೆಪಿ ವಲಯದಲ್ಲಿ ಇದೆ.

ಚುನಾವಣೆಗೆ ಸಂಬಂಧ ಪಕ್ಷದ ತೀರ್ಮಾನಗಳನ್ನು ಯೋಗೇಶ್ವರ್‌ ಕೈಗೊಳ್ಳಲಿದ್ದಾರೆ. ತೇಜಸ್ವಿನಿ ಕೇವಲ ಸಹಾಯಕರಾಗಿ ಕೆಲಸ ಮಾಡುತ್ತಾರೆ ಎಂಬುದು ಬಿಜೆಪಿ ಮುಖಂಡರ ಹೇಳಿಕೆ.

‘ಪಕ್ಷದ ವರಿಷ್ಠರು ನನ್ನನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಿಸಿದ್ದಾರೆ. ಯೋಗೇಶ್ವರ್‌ ನನಗೆ ಸಹಾಯ ಮಾಡುತ್ತಾರೆ. ಏಕಾಏಕಿ ಕ್ಷೇತ್ರದಲ್ಲಿ ಓಡಾಡಿ ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಪಕ್ಷದ ಮುಖಂಡರು ಸಹಿಸುವುದಿಲ್ಲ’ ಎಂದು ತೇಜಶ್ವಿನಿ ರಮೇಶ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry