3

ಏರಿದ ಈರುಳ್ಳಿ ದರ: ರೈತರು,ಮಧ್ಯವರ್ತಿಗಳಿಗೆ ವರ

Published:
Updated:
ಏರಿದ ಈರುಳ್ಳಿ ದರ: ರೈತರು,ಮಧ್ಯವರ್ತಿಗಳಿಗೆ ವರ

ರಾಯಚೂರು: ನಗರದ ಮಾರುಕಟ್ಟೆ ಯಲ್ಲಿ ಈರುಳ್ಳಿ ಹಾಗೂ ಟೊಮೆಟೊ ದರಗಳು ದಿನದಿಂದ ದಿನಕ್ಕೆ ಗಗನಮುಖಿಯಾಗಿ ಏರುತ್ತಿರುವುದು ಜನರನ್ನು ಚಿಂತೆಗೀಡು ಮಾಡಿದೆ. ದರ ಹೆಚ್ಚಳದಿಂದ ರೈತರು ಹಾಗೂ ಮಧ್ಯವರ್ತಿಗಳಿಗೆ ಲಾಭವಾಗುತ್ತಿದೆ. ಆದರೆ ಈರುಳ್ಳಿ ಹಾಗೂ ಟೊಮೆಟೊ ಖರೀದಿ ಜನರಿಗೆ ದುಬಾರಿ ಆಗಿದೆ. ರೈತರು ಈರುಳ್ಳಿ ತೆಗೆದುಕೊಂಡು ಎಪಿಎಂಸಿ ಮಾರುಕಟ್ಟೆಗೆ ಬರುತ್ತಿದ್ದಂತೆ ಮಾರಾಟವಾಗುತ್ತಿದ್ದು, ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹4,330 ಹಣ ಕಮಿಷನ್‌ ಏಜೆಂಟರಿಂದ ಸಿಗುತ್ತಿದೆ. ಸಣ್ಣ ಗಾತ್ರದ ಈರುಳ್ಳಿಯನ್ನು ಕೂಡಾ ಪ್ರತಿ ಕ್ವಿಂಟಲ್‌ಗೆ ₹3 ಸಾವಿರ ಕೊಟ್ಟು ಏಜೆಂಟ್‌ರು ಖರೀದಿಸಿದ್ದಾರೆ.

ರೈತರು–ಕಮಿಷನ್‌ ಏಜೆಂಟರ್‌ ಮಧ್ಯೆ ಎಪಿಎಂಸಿ ಆವರಣದಲ್ಲಿ ಖರೀದಿ ವ್ಯವಹಾರ ಮುಗಿದ ತತಕ್ಷಣವೆ, ಏಜೆಂಟರು ಸಗಟು ವ್ಯಾಪಾರಿಗಳಿಗೆ ಪ್ರತಿ ಕ್ವಿಂಟಲ್‌ಗೆ ₹4,500 ದರದಲ್ಲಿ ನೇರವಾಗಿ ರವಾನಿಸುತ್ತಿದ್ದಾರೆ. ಸಗಟು ವ್ಯಾಪಾರಿಗಳು ಚಿಲ್ಲರೆ ವಹಿವಾಟು ಮಾಡುವವರಿಗೆ ಪ್ರತಿ ಕ್ವಿಂಟಲ್‌ ಈರುಳ್ಳಿಯನ್ನು ಗರಿಷ್ಠ ₹5 ಸಾವಿರಕ್ಕೆ ಮಾರಾಟ ಮಾಡುತ್ತಿದ್ದು, ಗ್ರಾಹಕರು ಒಂದು ಕೆಜಿ ಈರುಳ್ಳಿಯನ್ನು ₹60 ಕೊಟ್ಟು ಖರೀದಿಸಬೇಕಾಗಿದೆ.

ರೈತರು, ಏಜೆಂಟರು ಹಾಗೂ ಸಗಟು ವ್ಯಾಪಾರಿಗಳು ಕೆಜಿ ಲೆಕ್ಕದಲ್ಲಿ ಈರುಳ್ಳಿ ಮಾರಾಟ ಮಾಡುವುದಿಲ್ಲ. ಆದರೆ, ಜನರು ಕೆಜಿ ಲೆಕ್ಕಕ್ಕಿಂತ ಹೆಚ್ಚಿಗೆ ಈರುಳ್ಳಿ ಖರೀದಿಸುವುದಿಲ್ಲ. ಹೀಗಾಗಿ ಕೆಜಿಗೆ ₹43 ಕ್ಕೆ ರೈತರಿಂದ ಮಾರಾಟವಾದ ಈರುಳ್ಳಿ ಗ್ರಾಹಕರ ಕೈಗೆ ತಲುಪುವಾಗ ₹60 ಕ್ಕೆ ಏರಿಕೆ ಆಗುತ್ತಿದೆ. ಬೇಡಿಕೆ ಇದ್ದಷ್ಟು ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ. ಬಹುತೇಕ ಕಡೆ ಮಳೆಯಿಂದ ಈರುಳ್ಳಿ ಬೆಳೆ ಹಾಳಾಗಿದ್ದು, ಪ್ರಮುಖ ವಾಗಿ ದೇವದುರ್ಗ, ಯಾದಗಿರಿ ತಾಲ್ಲೂಕುಗಳಿಂದ ಹಾಗೂ ನೆರೆಯ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಗಳಿಂದ ಕೆಲವು ರೈತರು ಮಾತ್ರ ಈರುಳ್ಳಿ ತೆಗೆದುಕೊಂಡು ಬರುತ್ತಿದ್ದಾರೆ. ರೈತರೊಂದಿಗೆ ಕಮಿಷನ್‌ ಏಜೆಂಟರುಗಳ ಮಧ್ಯ ಮೊದಲೆ ಒಡನಾಟ ಇರುತ್ತದೆ. ಹೀಗಾಗಿ ಎಪಿಎಂಸಿ ಆವರಣದಲ್ಲಿ ಹರಾಜಿನಲ್ಲಿ ಅಂತಿಮವಾಗುವ ದರವನ್ನು ರೈತರಿಗೆ ಏಜೆಂಟರು ಕೊಡುತ್ತಾರೆ.

‘ಈರುಳ್ಳಿಗೆ ಸದ್ಯ ಬೇಡಿಕೆ ಬಹಳ ಇದೆ. ಆದರೆ ಬರುತ್ತಿರುವ ಈರುಳ್ಳಿ ಸಾಕಾಗುತ್ತಿಲ್ಲ. ಇದರಿಂದ ದರ ಹೆಚ್ಚಾಗುತ್ತಿದೆ. ನಿನ್ನೆ ಕೊಯ್ದು ತೆಗೆದಿರುವ ಈರುಳ್ಳಿ ಇಂದು ಮಾರಾಟವಾಗುತ್ತಿದೆ. ಈರುಳ್ಳಿ, ಟೊಮೆಟೊವನ್ನು ಬಹಳ ದಿನ ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ಇಂದಿನ ದರ ನಾಳೆ ಇರುವುದಿಲ್ಲ. ನಮಗೆ ಸಗಟು ವ್ಯಾಪಾರಿಗಳೊಂದಿಗೆ ಸಂಪರ್ಕವಿದ್ದು, ರೈತರಿಂದ ಖರೀದಿಸಿದ ಸರಕನ್ನು ಅವರಿಗೆ ಕಳುಹಿಸುತ್ತೇವೆ. ಹೀಗೆ ಬಂದಿದ್ದು ತಡವಿಲ್ಲದೆ ಮಾರಾಟವಾದರೆ ರೈತರಿಗೂ ಲಾಭ, ನಮಗೂ ಲಾಭ’ ಎನ್ನುತ್ತಾರೆ ರಾಯಚೂರು ಎಪಿಎಂಸಿ ಏಜೆಂಟ್‌ (ದಲ್ಲಾಳಿ) ಐ.ಕುಮಾರನಾಯಕ.

ಸೆಪ್ಟೆಂಬರ್‌ ಕೊನೆಯಲ್ಲಿ ಪ್ರತಿ ಕೆಜಿ ಈರುಳ್ಳಿ ಹಾಗೂ ಟೊಮೆಟೊ ಗರಿಷ್ಠ ದರ ₹30 ರಷ್ಟಿತ್ತು. ಅಕ್ಟೋಬರ್‌ನಲ್ಲಿ ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿದಿದ್ದರಿಂದ ಎಲ್ಲ ತರಕಾರಿ ದರಗಳು ದುಬಾರಿಯಾಗಿದ್ದವು. ಈರುಳ್ಳಿ, ಟೊಮೆಟೊ ಹೊರತಾಗಿ ತರಕಾರಿ ದರಗಳು ಕ್ರಮೇಣ ಕಡಿಮೆ ಆಗಿವೆ. ಟೊಮೆಟೊ ದರವು ಪ್ರತಿ ವಾರ ಏರಿಳಿತವಾಗುತ್ತಾ ನಡೆಯುತ್ತಿದೆ. ಒಂದು ಕೆಜಿ ಟೊಮೆಟೊ ಕನಿಷ್ಠ ₹15 ರ ತನಕವೂ ಮಾರಾಟವಾಗಿತ್ತು. ಸದ್ಯ ಪ್ರತಿ ಕೆಜಿ ಟೊಮೆಟೊ ₹40 ಕ್ಕೆ ಹೆಚ್ಚಳವಾಗಿದೆ. ಆದರೆ ಈರುಳ್ಳಿ ದರ ಮಾತ್ರ ಎರಡು ತಿಂಗಳಿಂದ ಏರುಗತಿಯಲ್ಲೆ ಸಾಗುತ್ತಿದೆ.

ಮದುವೆ ಕಾರಣ!

ಮಾರುಕಟ್ಟೆಗೆ ಬರುವ ಈರುಳ್ಳಿ ಮತ್ತು ಟೊಮೆಟೊಗಳನ್ನು ಸಗಟು ರೂಪದಲ್ಲಿ ಖರೀದಿಸಿ ಮದುವೆ, ಸಭೆ ಹಾಗೂ ಸಮಾರಂಭಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಏಜೆಂಟರು ಪೂರೈಸುತ್ತಿದ್ದಾರೆ. ಈ ತಿಂಗಳುಗಳಲ್ಲಿ ಕೌಟುಂಬಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತವೆ. ಇದರಿಂದ ಚಿಲ್ಲರೆ ವ್ಯಾಪಾರಕ್ಕೆ ಈರುಳ್ಳಿ ಮತ್ತು ಟೊಮೆಟೊ ಲಭ್ಯತೆ ಕಡಿಮೆ ಆಗಿರುವುದು ದರ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ರಾಯಚೂರು ಉಸ್ಮಾನಿಯಾ ತರಕಾರಿ ಮಾರುಕಟ್ಟೆಯ ವ್ಯಾಪಾರಿ ಮಹಾವೀರ ಜೈನ್‌ ಅವರು.

ಮಹಾರಾಷ್ಟ್ರದ ಈರುಳ್ಳಿ

ರಾಯಚೂರಿನ ಕೆಲವು ಸಗಟು ತರಕಾರಿ ವ್ಯಾಪಾರಿಗಳು ಮಹಾರಾಷ್ಟ್ರದಿಂದ ಈರುಳ್ಳಿ ತಂದುಕೊಂಡು ಮಾರಾಟ ಮಾಡುತ್ತಿದ್ದಾರೆ. ತುಂಬಾ ದಪ್ಪ ಹಾಗೂ ಕನಿಷ್ಠ ಆರು ತಿಂಗಳು ಇಟ್ಟರೂ ಈರುಳ್ಳಿ ಹಾಳಾಗುವುದಿಲ್ಲ. ಸಗಟು ವ್ಯಾಪಾರಿಗಳು ಪ್ರತಿ ಕಿಲೋ ಈರುಳ್ಳಿಯನ್ನು ₹55 ಮಾರಾಟ ಮಾಡುತ್ತಿದ್ದಾರೆ. ಕಿರಾಣಿ ಅಂಗಡಿಯವರು ಹಾಗೂ ಇತರೆ ಚಿಲ್ಲರೆ ವಹಿವಾಟು ನಡೆಸುವವರು, ಇದೇ ಈರುಳ್ಳಿಯನ್ನು ₹65 ಕ್ಕೆ ಮಾರಾಟ ಮಾಡುತ್ತಿದ್ದಾರೆ.

ಮಳೆಗೆ ನಾಶವಾದ ಈರುಳ್ಳಿ

ಕಳೆದ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಈರುಳ್ಳಿ ಬೆಳೆಯು ನಾಶವಾಯಿತು. ಎತ್ತರದ ಪ್ರದೇಶ ಹಾಗೂ ಎರೆಮಣ್ಣು ಇರುವ ದೇವದುರ್ಗ, ಯಾದಗಿರಿ ತಾಲ್ಲೂಕುಗಳು ಹಾಗೂ ನೆರೆಯ ತೆಲಂಗಾಣದ ಕರ್ನೂಲ್‌ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯು ಸಂಪೂರ್ಣ ನಾಶ ಆಗಿರಲಿಲ್ಲ. ಸತತ ಮಳೆಯಿಂದ ಈರುಳ್ಳಿ ಗಾತ್ರ ಹೆಚ್ಚಳವಾಗಲಿಲ್ಲ ಎನ್ನುವುದಷ್ಟೆ ರೈತರು ಚಿಂತೆಯಾಗಿತ್ತು. ಆದರೆ, ಮಾರುಕಟ್ಟೆಯಲ್ಲಿ ಸದ್ಯ ನಿರೀಕ್ಷೆ ಮೀರಿ ಈರುಳ್ಳಿ ಮಾರಾಟ ಆಗುತ್ತಿದೆ.

ನಾಲ್ಕು ವರ್ಷದ ಬಳಿಕ ಲಾಭ

‘ನಾನು ಪ್ರತಿವರ್ಷ ಒಂದು ಎಕರೆ ಈರುಳ್ಳಿ ಬೆಳೆಯುತ್ತೇನೆ. ನಾಲ್ಕು ವರ್ಷಗಳ ಬಳಿಕ ಇಷ್ಟು ದೊಡ್ಡ ಪ್ರಮಾಣದ ದರ ಸಿಕ್ಕಿದೆ. ಈ ವರ್ಷ ಸತತ ಮಳೆಯಿಂದಾಗಿ ಈರುಳ್ಳಿ ಗಾತ್ರವು ದೊಡ್ಡದಾಗಿಲ್ಲ. 200 ಚೀಲವಾಗುತ್ತಿದ್ದ (ಪ್ರತಿ ಚೀಲದಲ್ಲಿ 50 ಕಿಲೋ) ಈರುಳ್ಳಿ ಈ ವರ್ಷ 120 ಚೀಲವಾಗಿದೆ. ಈ ಸಲ ₹2 ಲಕ್ಷ ಲಾಭ ಬಂದಿರುವುದು ಖುಷಿಯ ವಿಚಾರ. ಜಮೀನಿನಿಂದ ತಂದಿದ್ದ ಒಂದು ಈರುಳ್ಳಿ ಗಡ್ಡೆ ಬಿಡದಂತೆ ಮಾರಾಟ ಆಗಿದೆ’ ಎಂದು ಯಾದಗಿರಿ ತಾಲ್ಲೂಕಿನ ಕಣೇಕಲ್‌ನಿಂದ ಬಂದಿದ್ದ ರೈತ ಶರಣಪ್ಪ ಅವರು ಖುಷಿಯಿಂದ ಹೇಳಿಕೊಂಡರು.

* * 

ಈ ವರ್ಷ ಈರುಳ್ಳಿ ದರ ತುಂಬಾ ಚೆನ್ನಾಗಿದೆ. ಎರಡು ಎಕರೆ ಈರುಳ್ಳಿ ಬೆಳೆದಿದ್ದು, ನಿರೀಕ್ಷಿಸಿದಷ್ಟು ಬೆಲೆ ಸಿಗುತ್ತಿದೆ.

ಭೀಮಣ್ಣ

ದೇವದುರ್ಗ ತಾಲ್ಲೂಕು ಸಾಸಿವೆಗೇರಾದ ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry