ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಠಾಣೆಯಲ್ಲೇ ವಾಹನ ಚಾಲನ ಪರವಾನಗಿ

Last Updated 24 ನವೆಂಬರ್ 2017, 6:31 IST
ಅಕ್ಷರ ಗಾತ್ರ

ಬಳ್ಳಾರಿ: ‘ಚಾಲನಾ ಪರವಾನಗಿ ಇಲ್ಲದೆ ಹಳ್ಳಿಗಳಲ್ಲಿ ಬೈಕ್‌, ಕಾರು ಮತ್ತು ಟ್ರ್ಯಾಕ್ಟರ್‌ ಚಾಲನೆ ಮಾಡುವವರಿಗೆ ಚಾಲನಾ ಪರವಾನಗಿ ವಿತರಿಸುವ ಅಭಿಯಾನವನ್ನು ಜಿಲ್ಲಾ ಪೊಲೀಸ್‌ ಮತ್ತು ಸಾರಿಗೆ ಇಲಾಖೆಯು ಜಂಟಿಯಾಗಿ ಹಮ್ಮಿಕೊಂಡಿದ್ದು, ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿಗಳಲ್ಲಿ ಕಲಿಕಾ ಚಾಲನಾ ಪರವಾನಗಿ ಅರ್ಜಿಗಳನ್ನು ವಿತರಿಸಲಾಗುವುದು’ ಎಂದು ಎಸ್ಪಿ ಆರ್‌.ಚೇತನ್‌ ತಿಳಿಸಿದರು.

‘ಅರ್ಜಿಗಳ ಪರಿಶೀಲನೆ ಬಳಿಕ ಪೊಲೀಸ್‌ ಠಾಣೆಗಳಲ್ಲೇ ಸಾರಿಗೆ ಇಲಾಖೆ ಅಧಿಕಾರಿಗಳು ಪರೀಕ್ಷೆ ನಡೆಸಿ ಪರವಾನಗಿ ನೀಡುತ್ತಾರೆ. ಅದನ್ನು ಪಡೆದು ಒಂದು ತಿಂಗಳ ಬಳಿಕ ಪರೀಕ್ಷೆ ಎದುರಿಸಿ ಚಾಲನಾ ಪರವಾನಗಿಯನ್ನೂ ಠಾಣೆಗಳಲ್ಲೇ ಪಡೆಯಬಹುದು’ ಎಂದು ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಲ್ಲಾಳಿಗಳಿಗೆ ಅವಕಾಶವಿಲ್ಲ: ‘ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿಗಳಲ್ಲೇ ಅರ್ಜಿ ಸಲ್ಲಿಕೆ ಮತ್ತು ಪರೀಕ್ಷೆ ನಡೆಯುವುದರಿಂದ ದಲ್ಲಾಳಿಗಳ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ. ಕಲಿಕಾ ಪರವಾನಗಿ ಅರ್ಜಿಯೊಂದಿಗೆ ₨ 150 ಹಾಗೂ ಚಾಲನಾ ಪರವಾನಗಿಗಾಗಿ ₨ 750 ಶುಲ್ಕ ಪಾವತಿಸಬೇಕು’ ಎಂದು ಸ್ಪಷ್ಟಪಡಿಸಿದರು.

‘ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಲಿಖಿತ ಪರೀಕ್ಷೆ, ಅವಿದ್ಯಾವಂತರಿಗೆ ಮೌಖಿಕ ಪರೀಕ್ಷೆ ನಡೆಸಿ ಪರವಾನಗಿ ನೀಡಲಾಗುವುದು. 18 ವಯಸ್ಸು ಮೇಲ್ಪಟ್ಟ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. 40 ವಯಸ್ಸು ದಾಟಿದವರು ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ’ ಎಂದರು.

ನಂಬರ್‌ಪ್ಲೇಟ್‌ ಅಭಿಯಾನ: ‘ಕಾರುಗಳ ಮೇಲೆ ನಂಬರ್‌ ಪ್ಲೇಟ್‌ ಕಾಣದ ರೀತಿಯಲ್ಲಿ ಸಂಘಟನೆಗಳ ಹೆಸರು ಪ್ರದರ್ಶಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅಭಿಯಾನ ನಡೆಸಲಾಗುವುದು’ ಎಂದು ಹೇಳಿದರು. ಹೆಚ್ಚುವರಿ ಎಸ್ಪಿ ಎಸ್‌.ಎಲ್‌.ಜಂಡೇಕರ್‌, ಗ್ರಾಮೀಣ ಉಪವಿಭಾಗದ ಡಿವೈಎಸ್ಪಿ ಟಿ.ವಿ.ಸುರೇಶ್‌ ಇದ್ದರು.

ಡಿ.13ರಿಂದ ಪರೀಕ್ಷೆ
’ಡಿ.13ರಂದು ಕಂಪ್ಲಿ, ಸಿರುಗುಪ್ಪ ಮತ್ತು ಹಚ್ಚೊಳ್ಳಿ, 14ರಂದು ಸಂಡೂರು, ಕುರುಗೋಡು ಮತ್ತು ತೆಕ್ಕಲಕೋಟೆ, 15ರಂದು ಕೂಡ್ಲಿಗಿ, ಕುಡಿತಿನಿ ಮತ್ತು ಮೋಕಾ, 16ರಂದು ಕೊಟ್ಟೂರು, 18ರಂದು ಹಡಗಲಿ ಮತ್ತು 10ರಂದು ಹಗರಿಬೊಮ್ಮನಹಳ್ಳಿಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿಯಲ್ಲಿ ಅರ್ಜಿದಾರರಿಗೆ ಪರೀಕ್ಷೆ ನಡೆಸಿ ಕಲಿಕಾ ಪರವಾನಗಿ ನೀಡಲಾಗುವುದು’ ಎಂದು ಬಳ್ಳಾರಿಯ ಪ್ರಭಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೃಷ್ಣಮೂರ್ತಿ ಮತ್ತು ಹೊಸಪೇಟೆಯ ಸಹಾಯಕ ಸಾರಿಗೆ ಅಧಿಕಾರಿ ಶೇಖರ್‌ ತಿಳಿಸಿದರು.

* * 

ಡಿಜಿ–ಐಜಿ ಆದೇಶ ನೀಡಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಚಾಲನಾ ಪರವಾನಗಿ ವಿತರಣೆ ಅಭಿಯಾನವನ್ನು ಮೊದಲ ಬಾರಿಗೆ ಹಮ್ಮಿಕೊಳ್ಳಲಾಗುತ್ತಿದೆ
ಆರ್‌.ಚೇತನ್‌
ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT