ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಾವೂರು- ಲಿಂಗಾಪುರ ಸಂಪರ್ಕ ರಸ್ತೆ

Last Updated 24 ನವೆಂಬರ್ 2017, 6:48 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ರಾವೂರು, ಲಿಂಗಾಪುರ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಶಿಥಿಲಗೊಂಡಿದ್ದು ಓಡಾಡುವುದೇ ದುಸ್ತರವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಲ್ಲೂಕು ಕೇಂದ್ರದಿಂದ ಅಣತಿ ದೂರದಲ್ಲಿರುವ ರಾವೂರು, ಲಿಂಗಾಪುರ ಗ್ರಾಮದಿಂದ ಪ್ರತಿನಿತ್ಯ ಶಾಲಾ, ಕಾಲೇಜಿಗೆ ನೂರಾರು ವಿದ್ಯಾರ್ಥಿಗಳು, ಸಾವಿರಾರು ವಾಹನಗಳು ಓಡಾಡುವ ಪ್ರಮುಖ ರಸ್ತೆಯಾಗಿದೆ. ಈ ರಸ್ತೆ ಹಾದು ಹೋಗುವ ಸ್ಥಳದಲ್ಲಿಯೇ ದೂರವಾಣಿ ವಿನಿಮಯ ಕೇಂದ್ರ, ಉಪಕಾರಾಗೃಹ, ಸಾವಿರಾರು ಮನೆಗಳಿಗಳಿರುವ ಆಶ್ರಯ ಸಮುಚ್ಛಯ, ಅಂಗನವಾಡಿ ಕೇಂದ್ರ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಸವಿಲೇವಾರಿ ಕೇಂದ್ರವು ಸಹ ಇದೆ. ಇಂತಹ ಪ್ರಮುಖ ಸ್ಥಳಗಳು ಹಾಗೂ ಜನರು ವಾಸಿಸುವ ಪ್ರದೇಶವಾಗಿದ್ದರೂ ಸಹ ರಸ್ತೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯವಹಿಸಲಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

10 ವರ್ಷಗಳ ಹಿಂದೆ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದು ಬಿಟ್ಟರೆ, ಇದುವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಗಮನಹರಿಸಿಲ್ಲ ಎಂದು ಗ್ರಾಮಸ್ಥರು ತಿಳಿಸುತ್ತಾರೆ. ರಸ್ತೆ ಸಂಪೂರ್ಣ ಶಿಥಿಲಗೊಂಡು ಚಲ್ಲಿ ಎಲ್ಲವೂ ಮೇಲೆದ್ದಿರುವುದರಿಂದ ಕೆಲವು ಕಡೆ ಭಾರಿ ಗಾತ್ರದ ಗುಂಡಿ ಬಿದ್ದಿದೆ. ನಡೆದುಕೊಂಡು ಹೋಗುವುದು ಸಮಸ್ಯೆಯಾಗಿದೆ. ದ್ವಿಚಕ್ರವಾಹನದವರ ಸ್ಥಿತಿಯಂತೂ ದೇವರಿಗೆ ಪ್ರಿಯ ಎನ್ನು ತ್ತಾರೆ ಗ್ರಾಮಸ್ಥರು.

15 ವರ್ಷಗಳಿಂದಲೂ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ರಸ್ತೆ ಅಭಿವೃದ್ಧಿಪಡಿಸಲು ನಿರ್ಲಕ್ಷ್ಯ ನೀತಿ ಅನುಸರಿಸಿದ್ದಾರೆ. ಕಳೆದ ಬಾರಿ ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದಾಗ ರಾವೂರು, ಲಿಂಗಾಪುರ ಗ್ರಾಮದ ವ್ಯಾಪ್ತಿಯ 4.50 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆದರೂ ಸಹ ಯಾವುದೇ ಪ್ರಯೋಜ ನವಾಗಿಲ್ಲ. ಮಲೆನಾಡಿನ ಭಾಗದ ಬೇರೆ ಬೇರೆ ಭಾಗದಲ್ಲಿ ರಸ್ತೆಗಳು ಅಭಿವೃದ್ಧಿಯಾದರೂ ಇಲ್ಲಿನ ರಸ್ತೆ ಅಭಿವೃದ್ಧಿಯಾಗದಿರುವುದು ವಿಷಾದದ ಸಂಗತಿಯಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ರಘುಶೆಟ್ಟಿ.

ಸರ್ಕಾರ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ರೂಪಿಸಿದರೂ ಈ ಗ್ರಾಮಕ್ಕೆ ಮಾತ್ರ ಈ ಯೋಜನೆ ಅನ್ವಯವಾಗದಿರುವುದು ಗ್ರಾಮಸ್ಥರ ದುರಂತವಾಗಿದೆ ಎಂದು ದೂರುತ್ತಾರೆ.

* * 

ಜಿಲ್ಲಾ ಪಂಚಾಯಿತಿಗೆ ರಸ್ತೆ ಅಭಿವೃದ್ಧಿಗೆ ಕಡಿಮೆ ಅನುದಾನ ಬಂದಿದ್ದು ರಾವೂರು, ಲಿಂಗಾಪುರ ರಸ್ತೆಯಲ್ಲಿ ಶಿಥಿಲಗೊಂಡಿರುವ ಭಾಗವನ್ನು ದುರಸ್ತಿ ಪಡಿಸಲಾಗುವುದು.
ಪಿ.ಆರ್.ಸದಾಶಿವ
ಜಿಲ್ಲಾ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT