7

‘ವರ್ತಕರ ಲಾಬಿಗೆ ಮಣಿದ ಕಾಂಗ್ರೆಸ್‌’

Published:
Updated:

ಮಡಿಕೇರಿ: ‘ಹಾಪ್‌ಕಾಮ್ಸ್‌ ಮಳಿಗೆ ನಿರ್ಮಾಣಕ್ಕೆ ನೀಡಿದ್ದ ಜಾಗವನ್ನು ಇಂದಿರಾ ಕ್ಯಾಂಟೀನ್‌ಗೆ ನೀಡಿದರೆ ಅದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಾಗುವುದು’ ಎಂದು ಜಿಲ್ಲಾ ಹಾಪ್‌ಕಾಮ್ಸ್‌ ಅಧ್ಯಕ್ಷ ಬಿದ್ದಾಟಂಡ ರಮೇಶ್‌ ಚಂಗಪ್ಪ ಎಚ್ಚರಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್‌ ಮುಖಂಡರು ಹಾಪ್‌ಕಾಮ್ಸ್‌ ಜಾಗವೇ ಸೂಕ್ತವೆಂದು ಹೇಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಯಾರದ್ದೋ ಮನೆಯ ಅಂಗಳ ಸೂಕ್ತವಾಗಿದ್ದರೆ ಅಲ್ಲಿ ಹೋಗಿ ಇಂದಿರಾ ಕ್ಯಾಂಟೀನ್‌ ಕಟ್ಟಲು ಸಾಧ್ಯವೇ? ಅತ್ಯಂತ ಜವಾಬ್ದಾರಿಯಿಂದ ಜಾಗ ಪರಿಶೀಲಿಸಿ ರೈತರಿಗೆ ಅನುಕೂಲವಾಗಲೆಂದು ಮಳಿಗೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಜಾಗ ಸಮತಟ್ಟು ಮಾಡುವ ಕಾರ್ಯವೂ ನಡೆಯುತ್ತಿದೆ’ ಎಂದು ರಮೇಶ್‌ ಹೇಳಿದರು.

‘ಆ ಪ್ರದೇಶವನ್ನು ಇಂದಿರಾ ಕ್ಯಾಂಟೀನ್‌ಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. 36 ಸೆಂಟ್‌ ಜಾಗವಿದ್ದು, ಬೇಕಿದ್ದರೆ ಹಿಂದಿರುವ ಗುಂಡಿಯಂತಹ ಸ್ಥಳದಲ್ಲಿ ನಿರ್ಮಿಸಿಕೊಳ್ಳಲಿ’ ಎಂದು ಹೇಳಿದರು.

‘ಜಿಲ್ಲೆಯ ಕೃಷಿಕರು ಬೆಳೆಯುವ ಹಣ್ಣು, ತರಕಾರಿ, ಸಂಬಾರು ಪದಾರ್ಥಗಳನ್ನು ನೇರವಾಗಿ ರೈತರಿಂದ ಖರೀದಿಸಿ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಜೈಲ್‌ ವಾರ್ಡ್‌ನ ಅವರ ವಸತಿಗೃಹದ ನಿವೇಶನವನ್ನು ಪಡೆಯಲಾಗಿತ್ತು. ಸ್ಪೀಕರ್‌ ಆಗಿದ್ದ ಕೆ.ಜಿ.ಬೋಪಯ್ಯ ಅವರು ಸಾಕಷ್ಟು ಶ್ರಮವಹಿಸಿ ಈ ಜಾಗವನ್ನು ಕೊಡಿಸಿದ್ದರು. 2010ರಲ್ಲಿ ಹಾಪ್‌ಕಾಮ್ಸ್‌ ಹೆಸರಿಗೆ ಜಾಗ ಮಂಜೂರಾಗಿದ್ದು ದಾಖಲೆಗಳು ಹಸ್ತಾಂತರಗೊಂಡಿವೆ. ನಗರಸಭೆಗೆ ತೆರಿಗೆಗಳನ್ನು ಪಾವತಿ ಮಾಡಲಾಗಿದೆ. ಇದನ್ನು ಜಿಲ್ಲಾಡಳಿತಕ್ಕೂ ಮನವರಿಕೆ ಮಾಡಿಕೊಡಲಾಗಿದೆ’ ಎಂದರು.

ಜಿಲ್ಲೆಯ ಹಾಪ್‌ಕಾಮ್ಸ್‌ ಬಲವರ್ಧನೆಗೆ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಕ್ಕೆ (ಕೆಎಚ್‌ಎಫ್‌) ₹ 6.27 ಕೋಟಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಕೊನೆಗೆ ₹ 2.10 ಕೋಟಿಗೆ ಪ್ರಸ್ತಾವ ಸಲ್ಲಿಸಿ ಒಪ್ಪಿಗೆ ಪಡೆದುಕೊಳ್ಳಲಾಗಿತ್ತು. ₹ 1.45 ಕೋಟಿ ಅನುದಾನವನ್ನು ಕೆಎಚ್‌ಎಫ್‌ ಬಿಡುಗಡೆ ಮಾಡಿತ್ತು. ಉಳಿದ ಹಣವನ್ನು ಸಂಘವೇ ಭರಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಅದರಂತೆ ನಾವು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಜಾಗದ ನೆಲಸಮ ಕಾಮಗಾರಿಗೆ ₹ 2.50 ಲಕ್ಷ, ಜಾಗದ ಅಂದಾಜು ಪಟ್ಟಿ, ಮಣ್ಣು ಪರೀಕ್ಷೆ, ಸರ್ವೆ, ನಕಾಶೆ, ಬ್ಲೂಪ್ರಿಂಟ್‌ಗೆ ₹ 2 ಲಕ್ಷ ಖರ್ಚು ಮಾಡಲಾಗಿದೆ. ಕಾಂಗ್ರೆಸ್‌ನ ರೈತ ವಿರೋಧಿ ನೀತಿಯನ್ನು ಸರ್ವ ಸದಸ್ಯರು ಖಂಡಿಸಿದ್ದಾರೆ. ಕೆಲವು ವರ್ತಕ ಲಾಬಿಗೆ ಮಣಿದು ಈ ಜಾಗದ ಮೇಲೆ ಕಣ್ಣು ಹಾಕಲಾಗಿದೆ’ ಎಂದು ಆರೋಪಿಸಿದರು.

‘ದೊಡ್ಡ ಪ್ರಮಾಣದ ತರಕಾರಿ ಸಂಗ್ರಹಣಾ ಕೇಂದ್ರ (ಹಣ್ಣು, ತರಕಾರಿಗಳನ್ನು ರೈತರಿಂದ ಖರೀದಿಸಿ ಸಂಗ್ರಹಿಸಲು) ಹಾಗೂ ಹಣ್ಣು ತರಕಾರಿ ಸಂಸ್ಕರಣಾ ಘಟಕ, ನೆಲಮಾಳಿಗೆಯಲ್ಲಿ ವಿವಿಧ ಹಣ್ಣು, ತರಕಾರಿ, ಸಂಬಾರು ಬೆಳೆಗಳ ಆಧುನಿಕ ಮಾರಾಟ ಮಳಿಗೆಯನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಅಲ್ಲದೇ, ಕೊಡಗು ಜಿಲ್ಲೆಯಾದ್ಯಂತ ಮಾರಾಟ ಮಳಿಗೆ ತೆರೆದು ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ’ ಎಂದರು. ಪಿ.ಎಸ್. ಸತೀಶ್‌, ನಂಜಪ್ಪ, ಪೊನ್ನಪ್ಪ, ಮಹೇಶ್‌, ಕಾರ್ಯದರ್ಶಿ ರೇಷ್ಮಾ ಹಾಜರಿದ್ದರು.

* * 

ಇಂದಿರಾ ಕ್ಯಾಂಟೀನ್‌ಗೆ ನಗರಸಭೆ ಸ್ಥಳ ಗುರುತಿಸಿದ್ದರೂ ಹಾಪ್‌ಕಾಮ್ಸ್‌ ಜಾಗದ ಮೇಲೆ ಕಣ್ಣು ಬಿದ್ದಿರುವುದನ್ನು ಗಮನಿಸಿದರೆ ವರ್ತಕರ ಲಾಬಿಗೆ ಕಾಂಗ್ರೆಸ್ ಮುಖಂಡರು ಮಣಿದಿರುವುದು ಕಂಡುಬರುತ್ತಿದೆ

ರಮೇಶ್‌ ಚಂಗಪ್ಪ, ಅಧ್ಯಕ್ಷ, ಜಿಲ್ಲಾ ಹಾಪ್‌ಕಾಮ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry