6

ಮನವೊಲಿಕೆಗೆ ಶ್ರೀನಿವಾಸಗೌಡ ಸಲಹೆ

Published:
Updated:

ಕೋಲಾರ: ತ್ಯಾಜ್ಯ ಸಂಸ್ಕರಣಾ ಘಟಕದ ವೈಜ್ಞಾನಿಕ ನಿರ್ವಹಣೆಯಿಂದ ಪರಿಸರಕ್ಕೆ ಹಾನಿಯಿಲ್ಲ ಎಂಬ ಸಂಗತಿಯನ್ನು ಅರಾಭಿಕೊತ್ತನೂರು ಸುತ್ತಮುತ್ತಲ ಗ್ರಾಮಗಳ ಜನರಿಗೆ ಮನವರಿಕೆ ಮಾಡಿಕೊಟ್ಟ ನಂತರ ಘಟಕ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮುಖಂಡ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ಜಿಲ್ಲಾಡಳಿತವು ಅರಾಭಿಕೊತ್ತನೂರು ಸಮೀಪದ ಗುಡ್ಡಣ್ಣಪುರ ರಸ್ತೆಯ ಬಳಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಉದ್ದೇಶಿಸಿದ್ದು, ಆ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು.

ಕೋಲಾರ ನಗರದಲ್ಲಿ ಕಸ ವಿಲೇವಾರಿಗೆ ಜಾಗವಿಲ್ಲ. ಇದರಿಂದ ಕಸದ ಸಮಸ್ಯೆ ಗಂಭೀರವಾಗಿದೆ. ಈ ಸಮಸ್ಯೆ ಪರಿಹರಿಸಲು ಮುಂದಾಗಿರುವ ಜಿಲ್ಲಾಡಳಿತವು ಗುಡ್ಡಣ್ಣಪುರ ರಸ್ತೆ ಬಳಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಮುಂದಾಗಿದೆ. ಇದರಿಂದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತದೆ. ಕೆರೆಗಳು ಮಲೀನವಾಗುತ್ತವೆ ಮತ್ತು ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತದೆ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ ಎಂದರು.

ಜಿಲ್ಲಾಡಳಿತವು ಸ್ಥಳೀಯರ ಆತಂಕ ದೂರ ಮಾಡಿ ಘಟಕ ಸ್ಥಾಪನೆ ಮಾಡಲಿ. ಘಟಕದಿಂದ ಯಾವುದೇ ಸಮಸ್ಯೆಯಾಗದಂತೆ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಜತೆಗೆ ಸ್ಥಳೀಯರ ಜತೆ ಮಾತುಕತೆ ನಡೆಸಿ ಘಟಕ ಸ್ಥಾಪನೆಗೆ ಸಮ್ಮತಿ ಪಡೆಯಬೇಕು ಎಂದು ಸಲಹೆ ನೀಡಿದರು.

ಹಾನಿ ಆಗುವುದಿಲ್ಲ: ವೈಜ್ಞಾನಿಕ ವಿಧಾನ ಅನುಸರಿಸಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತಿದೆ. ಘಟಕದಿಂದ ಸುತ್ತಮುತ್ತಲ ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಹೀಗಾಗಿ ಸ್ಥಳೀಯರು ಆತಂಕಪಡುವ ಅಗತ್ಯವಿಲ್ಲ ಎಂದು ತಹಶೀಲ್ದಾರ್‌ ವಿಜಯಣ್ಣ ಸ್ಪಷ್ಟಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸಗೌಡ, ಇಲ್ಲಿನ ಜನರ ಭಾವನೆಗೆ ಗೌರವ ನೀಡಿ. ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆ ಸಾಕ್ಷ್ಯಚಿತ್ರ ಸಿದ್ಧಪಡಿಸಿ ಸ್ಥಳೀಯರಿಗೆ ತೋರಿಸಿ. ಈ ಭಾಗದ ನರಸಾಪುರ, ಕೆಂದಟ್ಟಿ ಮತ್ತು ಮಡೇರಹಳ್ಳಿ ಕೆರೆಯಿಂದ ಅಮ್ಮೇರಹಳ್ಳಿ ಕೆರೆಗೆ ನೀರು ಹರಿಯುತ್ತದೆ. ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸದಿದ್ದರೆ ಕೆರೆ ನೀರು ಮಲೀನವಾಗುತ್ತದೆ. ಇದರಿಂದ ಜನ ಮತ್ತು -ಜಾನುವಾರುಗಳಿಗೆ ತೊಂದರೆ ಆಗುತ್ತದೆ ಎಂದು ತಿಳಿಸಿದರು.

ಅಧಿಕಾರಿಗಳು ಜನರ ಭಾವನೆ ದಿಕ್ಕರಿಸಿ ದೌರ್ಜನ್ಯದಿಂದ ನಡೆದುಕೊಂಡರೆ ಸಹಿಸುವುದಿಲ್ಲ. ಸ್ಥಳೀಯರ ಜತೆ ತಾನು ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದು ಎಚ್ಚರಿಕೆ ನೀಡಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲ್, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಅನ್ವರ್ ಪಾಷಾ, ಅರಾಭಿಕೊತ್ತನೂರು ಗ್ರಾಮಸ್ಥ ನಂಜುಂಡಗೌಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry