7

ಕೇಂದ್ರದ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

Published:
Updated:

ಶಿಕಾರಿಪುರ: ರೈತರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಕೇಂದ್ರ ಸರ್ಕಾರ ನೀಡಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎ.ಪರಮೇಶ್ವರಪ್ಪ ಹೇಳಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಜಿಲ್ಲಾ ಪಂಚಾಯ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತಾಲ್ಲೂಕು ಪಂಚಾಯ್ತಿ, ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕೃಷಿ ಮತ್ತು ಕೃಷಿಕರ ಕಲ್ಯಾಣ ಯೋಜನೆ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ದೇಶದ ರೈತರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳ ಲಾಭವನ್ನು ರೈತರು ಪಡೆಯಬೇಕು. ದೇಶದಲ್ಲಿ ಕಪ್ಪು ಹಣ ನಿಯಂತ್ರಿಸುವ ನಿಟ್ಟಿನಲ್ಲಿ ನೋಟು ಅಮಾನ್ಯಿಕರಣ ಮಾಡಿದ್ದಾರೆ. ತೆರಿಗೆ

ವಂಚನೆ ತಪ್ಪಿಸಲು ಜಿಎಸ್‌ಟಿ ತೆರಿಗೆ ಪದ್ಧತಿ ಜಾರಿಗೆ ತಂದಿದ್ದಾರೆ’ ಎಂದು ಶ್ಲಾಘಿಸಿದರು.

ಜಿಲ್ಲಾ ಮಾರ್ಗದರ್ಶಿ ವಿಭಾಗೀಯ ಪ್ರಬಂಧಕ ಸಾಲೋಮನ್‌ ಮೆನೆಜಸ್ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ರೈತರಿಗಾಗಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ನೀಡಿದ್ದು, ಈ ಮೂಲಕ ಸಾಲ ಸೌಲಭ್ಯ ಪಡೆಯಬಹುದು. ಮುದ್ರಾ ಯೋಜನೆಯಲ್ಲಿ ಸಣ್ಣ ಕೈಗಾರಿಕೆ, ಗುಡಿಕೈಗಾರಿಕೆಗಳನ್ನು ಆರಂಭಿಸಲು ಸಹಾಯಧನ ಸಹಿತ ಸಾಲ ನೀಡುತ್ತಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಜನರು ಅವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕ್ಷೇತ್ರ ಪ್ರಚಾರ ಅಧಿಕಾರಿ ಜಿ.ತುಕಾರಾಮಗೌಡ ಮಾತನಾಡಿ, ‘ಕೇಂದ್ರ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಭಾಗಗಳಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಯೋಜನೆಗಳನ್ನು ಜನರು ಬಳಸಿಕೊಳ್ಳುವಂತೆ ಜಾಗೃತಿಗೊಳಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಮತಾ ಸಾಲಿ, ಅರುಂಧತಿ ರಾಜೇಶ್, ಜಾಗೃತಿ ಸಮಿತಿ ಸದಸ್ಯ ಕೆ.ಎಸ್‌.ಗುರುಮೂರ್ತಿ, ಎಪಿಎಂಸಿ ಅಧ್ಯಕ್ಷ ಸತೀಶ್‌, ತಹಶೀಲ್ದಾರ್‌ ಬಿ.ಶಿವಕುಮಾರ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ರೂಪಾ ದಯಾನಂದ್‌, ಇಒ ಆನಂದ ಕುಮಾರ್‌, ಸದಸ್ಯರಾದ ಈಸೂರು ಜಯಣ್ಣ, ಕವಲಿ ಸುಬ್ರಮಣ್ಯ, ಆರ್‌.ಕೆ.ಶಂಭು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎನ್‌.ಪ್ರಭಾಕರ್, ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ ಚಿಂದಾನಂದ್, ರೈತ ಮುಖಂಡ ಮಾರವಳ್ಳಿ ಚಂದ್ರೇಗೌಡ್ರು, ಕೃಷಿ ಸಮಾಜದ ಉಪಾಧ್ಯಕ್ಷೆ ಪುಷ್ಪಾ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry