ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಸರ್ವಾಧಿಕಾರದ ಹುಟ್ಟು

Last Updated 24 ನವೆಂಬರ್ 2017, 8:42 IST
ಅಕ್ಷರ ಗಾತ್ರ

ತುಮಕೂರು: 'ದೇಶದ ರಾಜಕೀಯದಲ್ಲಿ ಸರ್ವವ್ಯಾಪಿತನವು ಹುಟ್ಟಿಕೊಳ್ಳುತ್ತಿದ್ದು, ಇದು ಹುಟ್ಟಿದಾಗಲೇ ಸರ್ವಾಧಿಕಾರ ಕೂಡ ಹುಟ್ಟಿಕೊಳ್ಳುತ್ತದೆ’ ಎಂದು ಹೆಗ್ಗೋಡು ನೀನಾಸಂ ರಂಗ ನಿರ್ದೇಶಕ ಕೆ.ವಿ.ಅಕ್ಷರ ಹೇಳಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ ಆಯೋಜಿಸಿದ್ದ ‘ಹತ್ತೂ ಸಮಸ್ತರ ಕರ್ನಾಟಕ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಪುರಾಣದ ಪ್ರಭುಗಳಿಗೆ ಮತ್ತು ಇತಿಹಾಸದ ದೊರೆಗಳಿಗೆ ತಮ್ಮ ರಾಜ್ಯದಲ್ಲಿ ಆಳ್ವಿಕೆ ನಡೆಸಲು ಮತ್ತು ನಿಯಮ ರೂಪಿಸಲು ಅವಕಾಶವಿತ್ತು. ಆದರೆ ಅಲ್ಲಿನ ಪ್ರಜೆಗಳನ್ನೂ ಎಲ್ಲಾ ರೀತಿಯಿಂದ ನಿಯಂತ್ರಣಕ್ಕೆ ತರಲು ಸಾಧ್ಯವಿರುತ್ತಿರಲಿಲ್ಲ. ಆದರೆ ಈಗ ತಂತ್ರಜ್ಞಾನ ಬೆಳೆದಿದ್ದು, ಸರ್ಕಾರ ತನ್ನ ಪ್ರಜೆಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ಸರ್ವಾಧಿಕಾರಿ ಆಡಳಿತ ನಡೆಸಲು ಸಹಕಾರಿಯಾಗಿದೆ’ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ರಾಜಾರಾಮ್‌ ತೋಳ್ಪಾಡಿ ಮಾತನಾಡಿ, ‘ಮೇಲ್ನೋಟಕ್ಕೆ ರಾಜಕೀಯ ಎಂದ ತಕ್ಷಣ ಪಕ್ಷ ರಾಜಕಾರಣ, ಸಾಂಸ್ಥಿಕ ರಾಜಕಾರಣಗಳು ಕಣ್ಣ ಮುಂದೆ ಬರುತ್ತವೆ. ಆದರೆ ಕಾರಂತರು ಈ ರೀತಿಯ ರಾಜಕೀಯದ ಜತೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಪಟ್ಟ ರಾಜಕೀಯದಲ್ಲಿಯೂ ತೊಡಗಿಸಿಕೊಂಡಿದ್ದರು.  ಪ್ರಜಾತಂತ್ರಕ್ಕೆ ಸಂಬಂಧಿಸಿದ ಧೋರಣೆಗಳನ್ನು ಅವರ ಬರವಣಿಗೆಯಲ್ಲಿಯೂ ಕಾಣಬಹುದು’ ಎಂದರು.

ರಂಗನಿರ್ದೇಶಕ ರಘುನಂದನ್‌ ಮಾತನಾಡಿ, ‘ಕುವೆಂಪು ಅವರನ್ನು ಮತ್ತು ಅವರ ಬರವಣಿಗೆಗಳನ್ನು ಸಿದ್ಧಾಂತದ ಮಟ್ಟಕ್ಕೆ ನಿಲ್ಲಿಸಿ ನೋಡುವುದು ಸರಿಯಲ್ಲ. ಅವರು ಸಿದ್ಧಾಂತವನ್ನು ಮೀರಿದ ವ್ಯಕ್ತಿತ್ವವನ್ನು ಉಳ್ಳವರಾಗಿದ್ದಾರೆ’ ಎಂದು ಹೇಳಿದರು.

ಬೊಕ್ಕಪಟ್ನ ಸರ್ಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲ ವಾಸುದೇವ್‌ ಬೆಳ್ಳಿ ಮಾತನಾಡಿ, ‘ಕರ್ನಾಟಕದ ಬಹುತೇಕ ದಲಿತ ಸಾಹಿತ್ಯಗಳು ಅಂಬೇಡ್ಕರ್‌ ಅವರ ಪ್ರಭಾವದಿಂದ ಬಂದ ಸಾಹಿತ್ಯಗಳಾಗಿವೆ. ಕೆಲವು ದಲಿತೇತರ ಸಾಹಿತಿಗಳು ಕೂಡ ದಲಿತರ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಆದರೆ ದಲಿತೇತರರು ದಲಿತರ ಬಗ್ಗೆ ಬರೆಯುವುದಕ್ಕೂ ಮತ್ತು ದಲಿತ ಸಾಹಿತಿಗಳೇ ಬರೆಯುವುದಕ್ಕೂ ವ್ಯತ್ಯಾಸವಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತತೆಯ ಹಿಂದೆ ಉಪಯುಕ್ತತೆಯ ಧೋರಣೆ
‘ನಾವೀಗ ಉಪಯುಕ್ತತೆಯ ಕಾಲದಲ್ಲಿದ್ದೇವೆ. ಪ್ರಸ್ತುತತೆಯ ಹಿಂದೆ ಉಪಯುಕ್ತತೆಯ ಧೋರಣೆ ಇದೆ. ಪ್ರತಿಯೊಂದರಲ್ಲಿಯೂ ಉಪಯೋಗವನ್ನು ಹುಡುಕುತ್ತಿರುವ ನಾವು ಗಾಂಧಿ ಮತ್ತು ಅಂಬೇಡ್ಕರ್‌ ಅವರ ಚಿಂತನೆಗಳಿಂದಲೂ ಕೂಡ ನಮಗೇನು ಲಾಭ? ಎನ್ನುವ ಬಗ್ಗೆ ಮೊದಲು ಯೋಚಿಸುತ್ತಿದ್ದೇವೆ. ಮತ್ತು ಇದೇ ಕಾರಣದಿಂದಲೇ ವಯಸ್ಸಾದ ತಂದೆ ತಾಯಿಯನ್ನು ಕೂಡ ಉಪಯೋಗಕ್ಕೆ ಬಾರದ ಸಂಗತಿ ಎಂದು ಭಾವಿಸಿ ವೃದ್ಧಾಶ್ರಮಕ್ಕೆ ಅಟ್ಟುತ್ತಿರುವುದು ವಿಷಾದನೀಯ’ ಎಂದು ಪ್ರೊ.ರಾಜಾರಾಮ್‌ ತೋಳ್ಪಾಡಿ ಅಭಿಪ್ರಾಯಪಟ್ಟರು.

‘ರಾಜಕಾರಣ’ ಎನ್ನುವ ಪದದ ಅರ್ಥವನ್ನೇ ಜನರು ನಕಾರಾತ್ಮಕವಾಗಿ ಅರ್ಥೈಸಿಕೊಳ್ಳುವಷ್ಟು ಹೀನಾಯ ಸ್ಥಿತಿಗೆ ಇದು ಬಂದು ತಲುಪಿದೆ. ರಾಜಕಾರಣ ಎಂದರೆ ಸಂಚು, ಒಳಸಂಚು ಅಥವಾ ಮಸಲತ್ತು ಎನ್ನುವ ಪದದ ಪರ್ಯಾಯ ಪದವೇನೋ ಎನ್ನುವ ಭಾವನೆ ಜನರಲ್ಲಿ ಬೆಳೆಯುತ್ತಿದೆ. ಇದರ ಬಗ್ಗೆ ಸಕ್ರಿಯ ರಾಜಕೀಯದಲ್ಲಿ ತೊಡಗಿಕೊಂಡಿರುವವರು ಪರಾಮರ್ಶೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಎರಡೂ ಪಕ್ಷಗಳದೂ ಒಂದೇ ಕಾಳಜಿ
‘ಭಾರತದಲ್ಲಿ ಎರಡು ಮುಖ್ಯ ರಾಜಕೀಯ ಪಕ್ಷಗಳಿವೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇವೆರಡೂ ಪಕ್ಷಗಳ ಸಿದ್ಧಾಂತ ಮಾತ್ರ ಬೇರೆ ಬೇರೆ ಆಗಿದ್ದು, ಯಾವತ್ತೂ ಒಂದಕ್ಕೊಂದು ಸೇರುವಂತದ್ದೇ ಅಲ್ಲ. ಆದರೆ ಎರಡು ಪಕ್ಷಗಳ ಅಧಿಕಾರವಿದ್ದಾಗಲೂ ‘ಆಧಾರ್‌’ ಯೋಜನೆಯ ವಿಷಯದಲ್ಲಿ ಸಮಾನ ಕಾಳಜಿ ವಹಿಸಿದ್ದು, ಇವು ಯಾವ ರೀತಿಯಾಗಿ ಸರ್ವವ್ಯಾಪಿತನಕ್ಕೆ ಒಗ್ಗಿಕೊಳ್ಳುತ್ತಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ’ ಎಂದು ಕೆ.ವಿ. ಅಕ್ಷರ ಹೇಳಿದರು.

‘ಯಾಕೆಂದರೆ ಈ ಆಧಾರ್‌ ವ್ಯವಸ್ಥೆಯಿಂದಾಗಿ ಪ್ರತಿಯೊಬ್ಬರ ವೈಯಕ್ತಿಕ ಮಾಹಿತಿಯ ಮೇಲೆ ನಿಗಾವಹಿಸುವ ಉದ್ದೇಶವನ್ನು ಸರ್ಕಾರಗಳು ಹೊಂದಿವೆ. ಇದರಿಂದ ದೇಶದ ಎಲ್ಲಾ ಪ್ರಜೆಗಳ ಮೇಲೆ ನಿಯಂತ್ರಣ ಸಾಧಿಸಬೇಕು ಎನ್ನುವುದು ಎಲ್ಲಾ ಸರ್ಕಾರಗಳ ಆದ್ಯತೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

’ಪದ್ಮಾವತಿ’ಗೆ ರಾಜಕೀಯವೇ ಕಾರಣ
‘ಸಿನಿಮಾಗಳನ್ನು ಕಲಾತ್ಮಕ ದೃಷ್ಟಿಯಿಂದ ನೋಡುವುದನ್ನು ಬಿಟ್ಟು ರಾಜಕೀಯವಾಗಿ ನೋಡುತ್ತಿರುವುದೇ ‘ಪದ್ಮಾವತಿ’ಯಂಥ ಚಿತ್ರಗಳ ಬಗ್ಗೆ ವಿವಾದಗಳು ಎದ್ದಿರುವುದೇ ಸಾಕ್ಷಿ’ ಎಂದು ರಘುನಂದನ್‌ ಹೇಳಿದರು.

ಸಂವಾದದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಇಂದಿನ ಸಾಮಾಜಿಕ ವ್ಯವಸ್ಥೆ ಹದಗೆಟ್ಟುಹೋಗಿದೆ. ಮುಕ್ತವಾಗಿ ಬದುಕುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತಿದೆ’ ಎಂದರು. ತುರ್ತು ಪರಿಸ್ಥಿತಿಯಲ್ಲಿ ಇದ್ದ ದೃಶ್ಯಕ್ಕಿಂತ ಈಗಿನ ಸಾಮಾಜಿಕ ದೃಶ್ಯಗಳು ಭಯಾನಕ ಎನ್ನುವಂತೆ ಕಂಡಬರುತ್ತಿವೆ ಎಂದು ಹೇಳಿದರು.

ಸಿನಿಮಾ ಎಂದರೆ ಅದೊಂದು ಕಲೆ. ಅದನ್ನು ರಾಜಕೀಯ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ಬಳಸಿಕೊಳ್ಳುವುದನ್ನು ಬಿಡಬೇಕು. ನಟ, ನಿರ್ದೇಶಕರನ್ನು ಅಪರಾಧಿಗಳಂತೆ ನೋಡುವುದನ್ನು ಬಿಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

’ಯಾವುದೇ ಒಬ್ಬ ನಿರ್ದೇಶಕನಿಗೆ ಒಳ್ಳೆಯ ಹಾಗೂ ಕೆಟ್ಟ ಸಿನಿಮಾ ಎರಡನ್ನೂ ಮಾಡುವ ಹಕ್ಕಿದೆ. ಒಬ್ಬ ನಟಿಗೂ ಕೂಡ ಅವರ ಆಯ್ಕೆಯಂತೆ ಯಾವುದೇ ಸಿನಿಮಾದಲ್ಲಿ ಪಾತ್ರ ಮಾಡಬಹುದಾದ ಹಕ್ಕಿದೆ ಎಂದರು.

* * 

ಪ್ರತಿಯೊಬ್ಬರೂ ಬಹುತ್ವ ಸ್ವೀಕರಿಸಲು ಸಿದ್ಧರಿದ್ದಾರೆ. ಈ ಬಹುತ್ವದ ಮೂಲದಲ್ಲಿಯೇ ಜಾತಿ ವ್ಯವಸ್ಥೆ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು</p>
ಚಂದನ್‌ ಗೌಡ
ಪ್ರಾಧ್ಯಾಪಕ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಬೆಂಗಳೂರು<

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT