6

ಉಡುಪಿಯಲ್ಲಿ 2ನೇ ಬಾರಿಗೆ ಆಯೋಜನೆ

Published:
Updated:

ಉಡುಪಿ: ಧಾರ್ಮಿಕ– ಸಾಮಾಜಿಕ ಕೈಂಕರ್ಯಗಳಲ್ಲಿ ತೊಡಗಿರುವ ವಿಶ್ವ ಹಿಂದೂ ಪರಿಷತ್ ಸಂತರ ಮಾರ್ಗದರ್ಶನದ ಮೂಲಕ ಭವಿಷ್ಯದ ಕಾರ್ಯಸೂಚಿಯನ್ನು ನಿರ್ಧರಿಸುತ್ತದೆ, ಅದಕ್ಕೆ ವೇದಿಕೆ ಕಲ್ಪಿಸಿಕೊಡುವುದೇ ಧರ್ಮ ಸಂಸತ್‌. ಸಂಸತ್ ಹೇಗೆ ಇಡೀ ದೇಶಕ್ಕೆ ಅನ್ವಯಿಸುವಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆಯೋ ಹಾಗೆಯೇ ಧರ್ಮ ಸಂಸತ್ ಧಾರ್ಮಿಕ ವಿಷಯದಲ್ಲಿ ಪ್ರಮುಖ ತೀರ್ಮಾನಗಳನ್ನು ಮಾಡುತ್ತದೆ. ಧರ್ಮದಲ್ಲಿರುವ ಕೆಲವು ಕೆಟ್ಟ ಪದ್ಧತಿ ನಿವಾರಣೆ ಮಾಡಿ ಹಿಂದೂಗಳೆಲ್ಲ ಒಂದೇ ಎಂಬ ಭಾವನೆ ಮೂಡಿಸುವುದು, ಧರ್ಮದ ಬೆಳವಣಿಗೆಗೆ ಯೋಜನೆ ಸಿದ್ಧವಾಗುವುದು ಸಹ ಇಲ್ಲಿಯೇ.

ಈಗ ಉಡುಪಿಯಲ್ಲಿ ನಡೆಯುತ್ತಿರುವುದು ಎರಡನೇ ಧರ್ಮ ಸಂಸತ್‌. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಮೂರನೇ ಪರ್ಯಾಯದ ಅವಧಿಯಲ್ಲಿ (1985) ಸಹ ಧರ್ಮ ಸಂಸತ್ ನಡೆದಿತ್ತು. ಆ ಧರ್ಮ ಸಂಸತ್‌ನಲ್ಲಿ ತೆಗೆದುಕೊಂಡ ನಿರ್ಣಯ ಹಾಗೂ ಆ ನಂತರ ಆದ ಬದಲಾವಣೆಗಳೇ ಮತ್ತೆ ಉಡುಪಿಯಲ್ಲಿ ನಡೆಯುತ್ತಿರುವ 2ನೇ ಧರ್ಮ ಸಂಸತ್‌ ಬಗ್ಗೆ ಜನರು ದೃಷ್ಟಿ ನೆಡಲು ಕಾರಣ.

ರಾಮ ಮಂದಿರ ವಿವಾದದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆಗುತ್ತಿದ್ದ ಸಂದರ್ಭದಲ್ಲಿ ಮಂದಿರದ ಬೀಗವನ್ನು ತೆಗೆಯಬೇಕು ಎಂಬ ನಿರ್ಣಯವನ್ನು ಮಾಡಲಾಗಿತ್ತು. ಅದಕ್ಕೆ ಗಡುವು ಸಹ ನೀಡಲಾಗಿತ್ತು. ಗಡುವಿಗಿಂತ ಮೊದಲೇ ಸರ್ಕಾರ ಮಂದಿರದ ಬೀಗ ತೆಗೆದು ದೇವರ  ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತ್ತು.

ಈ ಬಾರಿಯೂ ರಾಮ ಮಂದಿರದಕ್ಕೆ ಸಂಬಂಧಿಸಿದ ನಿರ್ಣಯ ಮಾಡುವ ನಿರೀಕ್ಷೆ ಇದೆ. ಮಂದಿರ ನಿರ್ಮಾಣದ ನಿರ್ಣಯ ಮಾತ್ರವಲ್ಲದೆ, ಅದಕ್ಕೆ ಗಡುವು ಸಹ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಅಲ್ಲದೆ ಅಸ್ಪೃಶ್ಯತೆ ನಿವಾರಣೆ, ಗೋ ಸಂರಕ್ಷಣೆ ಹಾಗೂ ಜಾತಿಯತೆ ಬಗ್ಗೆಯೂ ವಿಸ್ತೃತ ಚರ್ಚೆ ನಡೆದು ಅದಕ್ಕೆ ಸಂಬಂಧಿಸಿದಂತೆಯೂ ಕೆಲವು ನಿರ್ಣಯಗಳು ಹೊರ ಬೀಳಲಿವೆ ಎಂದು ತಿಳಿದು ಬಂದಿದೆ.

‘ಸ್ವಾಮೀಜಿಗಳು, ಮಠಾಧೀಶರು, ಧರ್ಮಾಚಾರ್ಯರ ವಿಎಚ್‌ಪಿ ಹಿಂದೆ ನಿಂತಿದ್ದಾರೆ. ಧರ್ಮ ಭಾರತದ ಆತ್ಮ. ಆದ್ದರಿಂದ ಧರ್ಮಾಚಾರ್ಯರ ಬಗ್ಗೆ ಶ್ರದ್ಧೆ ಇದೆ. ಸ್ವಾಮೀಜಿಗಳ ಸಭೆ ಇರಬೇಕು ಎಂದು ಸಂಸ್ಥೆಯ ಮಾರ್ಗದರ್ಶಕ ಮಂಡಳಿ ಧರ್ಮ ಸಂಸತ್‌ ನಡೆಸುವ ಬಗ್ಗೆ ನಿರ್ಧಾರ ಮಾಡಿತ್ತು’ ಎಂದು ವಿಎಚ್‌ಪಿ ಕ್ಷೇತ್ರೀಯ ಕಾರ್ಯದರ್ಶಿ ಗೋಪಾಲ್ ಹೇಳುತ್ತಾರೆ.

‘ಅಸ್ಪೃಶ್ಯತೆ ನಿವಾರಣೆ, ಮತಾಂತರ ತಡೆ, ಗೋ ರಕ್ಷಣೆ ಹಾಗೂ ರಾಮ ಮಂದಿರ ಹೋರಾಟಕ್ಕೆ ಸಂತರು ಚಾಲನೆ ನೀಡಿದ್ದಾರೆ. ಒಮ್ಮೆ 4 ಸಾವಿರ ಸ್ವಾಮೀಜಿ ಸೇರಿದ ಉದಾಹರಣೆಯೂ ಇದೆ. ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಮಾನ ಬರಬಹುದು’ ಎನ್ನುತ್ತಾರೆ ಅವರು. ‘ಪೇಜಾವರ ಸ್ವಾಮೀಜಿ ಅವರ ಆಶಯದಂತೆ 12ನೇ ಸಭೆ ಉಡುಪಿಯಲ್ಲಿ ನಡೆಯುತ್ತಿದೆ. ಮುಂದಿನ ಹೆಜ್ಜೆ ಬಗ್ಗೆ ದೊಡ್ಡ ಚರ್ಚೆ ನಡೆಯಬಹುದು. ಗೋ ರಕ್ಷಣೆ, ಗೋ ಹತ್ಯೆ ನಿಷೇಧದ ಬಗ್ಗೆ ತೀರ್ಮಾನವಾಗಿ ಹಿಂದೂ ಧರ್ಮಕ್ಕೆ ಶಕ್ತಿ ಸಿಗಲಿದೆ. ಎಲ್ಲ ಪಂಥಗಳನ್ನು ಪ್ರತಿನಿಧಿಸುವ ಸ್ವಾಮೀಜಿ ಬರುತ್ತಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry