7

ಹಿಂಗಾರಿ ಬಿತ್ತನೆ; ಬೇಸಿಗೆ ಬೆಳೆಗೆ ಸಿದ್ಧತೆ

Published:
Updated:
ಹಿಂಗಾರಿ ಬಿತ್ತನೆ; ಬೇಸಿಗೆ ಬೆಳೆಗೆ ಸಿದ್ಧತೆ

ವಿಜಯಪುರ: ಬೆಲೆ ಕುಸಿತ, ಬೆಳೆ ವೈಫಲ್ಯದಿಂದ ಸತತ ನಷ್ಟಕ್ಕೀಡಾಗಿದ್ದ ಜಿಲ್ಲೆಯ ಉಳ್ಳಾಗಡ್ಡಿ ಬೆಳೆಗಾರರಲ್ಲಿ ಪ್ರಸ್ತುತ ಹಿಂಗಾರು ಹಂಗಾಮು, ಬೇಸಿಗೆಯ ಬೆಳೆ ಹೊಸ ಭರವಸೆ ಮೂಡಿಸಿದೆ.

ಬಸವನಬಾಗೇವಾಡಿ ತಾಲ್ಲೂಕಿನ ವ್ಯಾಪ್ತಿಯ ನಿಡಗುಂದಿ, ಕೊಲ್ಹಾರ ಭಾಗದಲ್ಲಿ ಸ್ಥಳೀಯ ತೆಲಗಿ ತಳಿಯ ಉಳ್ಳಾಗಡ್ಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಿದ್ದು, ಹಿಂಗಾರಿ ಹಂಗಾಮಿನ ನಾಟಿ, ಬಿತ್ತನೆ ಬಿರುಸಿನಿಂದ ನಡೆದಿದ್ದರೆ, ಬೇಸಿಗೆ ಬೆಳೆಯ ಸಿದ್ಧತೆ ಈಗಾಗಲೇ ಆರಂಭಗೊಂಡಿದೆ.

ಬೇಸಿಗೆ ಹಂಗಾಮಿಗೆ ನಾಟಿ ಮಾಡುವ ಬೆಳೆಗಾರರು ಈಗಾಗಲೇ ತಮ್ಮ ಜಮೀನುಗಳಲ್ಲಿ ಮಡಿ ಮಾಡಿ, ಅಗಿ ಒಗೆದಿದ್ದಾರೆ. ಚೋಟುದ್ದ ಸಸಿಗಳು ಬೆಳೆದಿದ್ದು, ಡಿ. 15ರ ಬಳಿಕ ನಾಟಿ ಚುರುಕುಗೊಳ್ಳಲಿದೆ ಎಂದು ವಿಜಯಪುರ ತಾಲ್ಲೂಕು ಉಪ್ಪಲದಿನ್ನಿಯ ರೈತ ಸೋಮನಾಥ ಶಿವನಗೌಡ ಬಿರಾದಾರ ತಿಳಿಸಿದರು.

ಹಿಂಗಾರು ಹಂಗಾಮಿನ ಉಳ್ಳಾಗಡ್ಡಿ ಬಿತ್ತನೆ, ನಾಟಿ ಬಿರುಸಿನಿಂದ ನಡೆದಿದೆ. 3,398 ಹೆಕ್ಟೇರ್‌ ಗುರಿಗೆ ಈಗಾಗಲೇ 2,651 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಡಿಸೆಂಬರ್ ಅಂತ್ಯದೊಳಗೆ ನಿರ್ದಿಷ್ಟ ಗುರಿ ತಲುಪುವ ನಿರೀಕ್ಷೆ ಹೆಚ್ಚಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್‌.ಆರ್‌.ಕುಮಾರಸ್ವಾಮಿ ತಿಳಿಸಿದರು.

ಧಾರಣೆ ಆಶಾದಾಯಕ: ‘ಹಿಂದಿನ ವರ್ಷ ಬೇಸಿಗೆ, ಹಿಂಗಾರು ಉತ್ಪನ್ನಕ್ಕೆ ಕ್ವಿಂಟಲ್‌ಗೆ ₹ 600 ಸಿಕ್ಕಿದ್ದೇ ಪುಣ್ಯ. ಪ್ರಸ್ತುತ ಎಲ್ಲೆಡೆ ಉತ್ಪನ್ನ ಕೊರತೆ ಕಾಡುತ್ತಿದೆ. ಬೆಲೆಯೂ ₹ 3,000 ಆಸುಪಾಸಿದೆ. ಇದು ಬೆಳೆಗಾರರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ’ ಎಂದು ಸೋಮನಾಥ ತಿಳಿಸಿದರು.

‘ನೀರಾವರಿ ಆಸರೆಯಲ್ಲಿ ಇಪ್ಪತ್ತು ಎಕರೆ ಭೂಮಿಯಲ್ಲಿ ಉಳ್ಳಾಗಡ್ಡಿ ಬೆಳೆಯಬೇಕು ಎಂದು ಅಗಿ ಬೆಳೆಸುತ್ತಿರುವೆ. ಎಕರೆಗೆ ₹ 30,000 ಖರ್ಚು ತಗುಲಲಿದೆ. ಒಂದು ಎಕರೆ ಭೂಮಿಯಲ್ಲಿ ಕನಿಷ್ಠ 10ರಿಂದ 14 ಟನ್‌ ಇಳುವರಿ ಪಡೆಯುವ ನಿರೀಕ್ಷೆಯಿದೆ. ಉತ್ಪನ್ನ ಕೈಗೆ ಬಂದ ಸಂದರ್ಭ ಕ್ವಿಂಟಲ್‌ಗೆ ₹ 1,500–2,000 ಸಿಕ್ಕರೆ ಸಾಕು. ಹಿಂದಿನ ನಷ್ಟವನ್ನೆಲ್ಲಾ ಭರ್ತಿ ಮಾಡಿಕೊಳ್ಳಬಹುದು’ ಎಂಬ ಆಶಾವಾದವನ್ನು ‘ಪ್ರಜಾವಾಣಿ’ ಬಳಿ ಹಂಚಿಕೊಂಡರು.

‘ಎಲ್ಲೆಡೆ ಉತ್ಪನ್ನವೂ ಕಡಿಮೆಯಿದೆ. ಹಿಂಗಾರು ಹಂಗಾಮಿನ ನಾಟಿಗಾಗಿ ಬೆಳೆದಿದ್ದ ಅಗಿಯೂ ಮಡಿಗಳಲ್ಲೇ ವಿಫಲಗೊಂಡಿದೆ. ಬೆಲೆ ಸ್ಥಿರತೆಯಾಗಿದ್ದು, ಅನುಕೂಲವಾಗಬಹುದು ಎಂಬ ಭರವಸೆಯಿಂದ ಪೂನಾ ರೆಡ್‌ (ಪಸಂಗಿ) ತಳಿಯ ಉಳ್ಳಾಗಡ್ಡಿಯ ಸಸಿ ಬೆಳೆಸುತ್ತಿರುವೆ. ಹಿಂದಿನ ವರ್ಷಗಳಲ್ಲಿದ್ದ ನಿರುತ್ಸಾಹ ಈ ಬಾರಿಯಿಲ್ಲ’ ಎಂದು ಹೇಳಿದರು.

‘ಇದೀಗ ಅಗಿ ಹಚ್ಚಿದರೆ ಛಲೋ ಧಾರಣೆ ಸಿಗುತ್ತದೆ ಎಂಬ ನಿರೀಕ್ಷೆ ನಮ್ಮದು. ನಮ್ಮ ಅಗಿ ನಾಟಿಗೆ ಬರಲು ತಡವಾಗುತ್ತದೆ. ಬೇರೆಡೆ ರೈತರ ಬಳಿ ಅಗಿ ಸಿಕ್ಕರೆ ಕೊಂಡು ಹೊಲದಲ್ಲಿ ಹಚ್ಚಲು ಎಲ್ಲೆಡೆ ಸಸಿ ಹುಡುಕಾಟ ನಡೆಸಿರುವೆ. ಸಿಕ್ಕರೆ ಚಲೋ. ಅವನ್ನು ಬಳಸುವೆ. ನಮ್ಮ ಅಗಿಗಳು ನಾಟಿಗೆ ಬಂದ ಸಂದರ್ಭ, ಅವನ್ನು ಹಚ್ಚುವೆ’ ಎಂದು ಬಸವನಬಾಗೇವಾಡಿ ತಾಲ್ಲೂಕು ಬೂದಿಹಾಳದ ಶ್ರೀಶೈಲ ಸೋಮನಾಳ ತಿಳಿಸಿದರು.

* * 

ಸತತ ಮೂರು ಬೇಸಿಗೆಯ ಬೆಳೆ ವೈಫಲ್ಯಗೊಂಡಿವೆ. ನಾಲ್ಕನೇ ಬೆಳೆ ಕೈ ಹಿಡಿಯಲಿದೆ ಎಂಬ ನಂಬಿಕೆ ಬೆಳೆಗಾರರದ್ದು. ಪ್ರಸ್ತುತ ಧಾರಣೆಯೂ ಚಲೋ ಇದೆ

ಸೋಮನಾಥ ಬಿರಾದಾರ

ಬೆಳೆಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry