ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 25–11–1967

Last Updated 24 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕಾಂಗ್ರೇಸ್ಸೇತರ ಸರ್ಕಾರಗಳ ಪತನಕ್ಕೆ ಕಾರಣ ಒಳ ಘರ್ಷಣೆ: ಇಂದಿರಾ ಸ್ಪಷ್ಟನೆ

(ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ನ. 24– ಪಶ್ಚಿಮ ಬಂಗಾಳದಲ್ಲಿ ಸಂಯುಕ್ತರಂಗ ಸರ್ಕಾರವು ವಜಾ ಆಗಿದ್ದು ನನಗೆ ಸಂತೋಷವಲ್ಲ. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ರಾಜ್ಯಪಾಲರಿಗೆ ಬೇರೆ ಮಾರ್ಗವೇ ಇರಲಿಲ್ಲ ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.

ಆಂತರಿಕ ತಿಕ್ಕಾಟ ಮತ್ತು ಒತ್ತಡಗಳ ಕಾರಣ ಸಂಯುಕ್ತರಂಗ ಸರ್ಕಾರಗಳು ಎಲ್ಲೆಡೆ ಕುಸಿಯುತ್ತಿದೆಯೆಂದೂ ಅವರು ವಿರೋಧ ಪಕ್ಷಗಳು ತಮ್ಮ ಸಂಪುಟದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಚರ್ಚೆಗೆ ಉತ್ತರ ಕೊಡುತ್ತಾ ಹೇಳಿದರು.

ತರ್ಪಣ– ಅರ್ಪಣ

ಬೆಂಗಳೂರು, ನ. 24– ಆಗಲಿದ ಮಗನ ಬಗ್ಗೆ ತಾಯಿಯ ನೆನಕೆ, ಬೆಳಿಗ್ಗೆ ನಡೆದ ವೆಂಟಕಪ್ಪ ಕಲಾಮಂಟಪದ ಶಂಕುಸ್ಥಾಪನೆ ಮಿಶ್ರಭಾವನೆಗಳನ್ನು ಕೆರಳಿಸಿದ ಸಮಾರಂಭ. ಎರಡನೇ ಉಪ್ಪರಿಗೆಯ ಮಂಟಪಕ್ಕಾಗಿ ದಿವಂತಗ ಪುತ್ರ ಮೇಜರ್ ರಾಜಾರಾಮ್ ಅವರ ಮರದ ಕಲಾಕೃತಿಗಳನ್ನು ಒಪ್ಪಿಸಿದ ತಂದೆ ಬ್ರಿಗೇಡಿಯರ್ ಪೊನ್ನಪ್ಪ ಮತ್ತು ಶ್ರೀಮತಿ ಪೊನ್ನಪ್ಪ ಅವರು ಅಗ್ರಪಂಕ್ತಿಯಲ್ಲಿ ಕುಳಿತಿದ್ದರು.

‘ಪುತ್ರ ಶೋಕ ನಿರಂತರ, ತಡೆಯಲಾಗದುದನ್ನು ಸಹಿಸಲೇಬೇಕು’ ಅಧ್ಯಕ್ಷ ಶ್ರೀ ಬಿ.ವಿ. ಬಾಳಿಗಾ ಅವರು ರಾಜಾರಾಮ್ ಅವರ ಪ್ರಸ್ತಾಪವೆತ್ತಿದಾಗ ತಾಯಿಯ ಕಣ್ಣು ಹನಿಗೂಡಿತು. ಕೈಲಿದ್ದ ಕರವಸ್ತ್ರ ಕಣ್ಣಿಗೇರಿತು. ತಂದೆ ಪೊನ್ನಪ್ಪನವರ ತುಟಿ ಬಿಗಿಯಿತು.

ಸ್ಮರಣೆಗೆ ಆಶ್ರುತರ್ಪಣ, ಸಾಧನೆಗೆ ಮಂಟಪ ಅರ್ಪಣ.

ಚಿಕ್ಕನಾಯಕನಹಳ್ಳಿ ಖನಿಜ ನಿಕ್ಷೇಪದ ಬಗ್ಗೆ ಸಮೀಕ್ಷೆ: ಚನ್ನಾರೆಡ್ಡಿ

ನವದೆಹಲಿ, ನ. 24– ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ದೊರಕುವ ಅದಿರು ಮತ್ತು ಖನಿಜ ನಿಕ್ಷೇಪ ಪ್ರಮಾಣದ ಬಗ್ಗೆ ಸಮೀಕ್ಷೆ ನಡೆಸಲಾಗಿದೆಯೆಂದೂ ಜಪಾನಿನ ಸಹಕಾರದಿಂದ ಬೀಡು ಕಬ್ಬಿಣ ಕಾರ್ಖಾನೆಯನ್ನು ಸ್ಥಾಪಿಸುವ ಉದ್ದೇಶವಿಲ್ಲವೆಂದೂ ಕೇಂದ್ರ ಉಕ್ಕು ಮತ್ತು ಗಣಿ ಖಾತೆ ಸಚಿವ ಶ್ರೀ ಚನ್ನಾರೆಡ್ಡಿ ಅವರು ಇಂದು ಲೋಕಸಭೆಯಲ್ಲಿ ಶ್ರೀ. ಕೆ. ಲಕ್ಕಪ್ಪ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು.

ಲೋಕಸಭೆಯಲ್ಲಿ ಮಸೂದೆ ಪಕ್ಷಾಂತರಕ್ಕೆ ತಡೆ ಅಗತ್ಯ ಎಂದು ಎಲ್ಲ ಪಕ್ಷಗಳ ಒಮ್ಮತ

ನವದೆಹಲಿ, ನ. 24– ನೀತಿ, ನಿಯಮವಿಲ್ಲದೆ ಪಕ್ಷಾಂತರ ಮಾಡಿಕೊಳ್ಳುವ ಪ್ರವೃತ್ತಿ ಶಾಸಕರಲ್ಲಿ ಹೆಚ್ಚುತ್ತಿರುವ ಬಗ್ಗೆ ಲೋಕಸಭೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರೆಲ್ಲರೂ ತೀವ್ರ ಶಂಕೆ ವ್ಯಕ್ತಪಡಿಸಿ, ಇನ್ನು ಹೆಚ್ಚು ಕಾಲಹರಣ ಮಾಡದೆ, ಅದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಪಡಿಸಿದರು.

ಪಕ್ಷವನ್ನು ತ್ಯಜಿಸಿ ಹೋಗುವುದನ್ನು ತಪ್ಪಿಸುವುದಕ್ಕಾಗಿ ಶಾಸನವೊಂದನ್ನು ತರಬೇಕೆಂಬ ಖಾಸಗಿ ಮಸೂದೆಯೊಂದನ್ನು ಸದಸ್ಯರು ಚರ್ಚಿಸುತ್ತಿದ್ದರು.

‘ದೇಶದ್ರೋಹಿ’ ಎಡ ಕಮ್ಯುನಿಸ್ಟ್ ಪಕ್ಷದ ವಿರುದ್ಧ ಉಗ್ರ ಕ್ರಮಕ್ಕೆ ಒತ್ತಾಯ

ನವದೆಹಲಿ, ನ. 24– ಎಡ ಕಮ್ಯುನಿಸ್ಟ್ ಪಕ್ಷವು ಹಿಂಸಾಕೃತ್ಯ, ರಾಷ್ಟ್ರವಿರೋಧಿ ಹಾಗೂ ಚೀನದ ಪರ ಚಟುವಟಿಕೆಗಳಲ್ಲಿ ತೊಡಗಿದೆಯೆಂದು ಇಂದು ಲೋಕಸಭೆಯಲ್ಲಿ ಆಪಾದಿಸಿದ ಕೋಪೋದ್ರಿಕ್ತ, ಜನಸಂಘ ಮತ್ತು ಪಿ.ಎಸ್.ಪಿ. ಸದಸ್ಯರು, ಆ ಪಕ್ಷದ ವಿರುದ್ಧ ಏಕೆ ಸರ್ಕಾರ ಕ್ರಮ ಕೈಗೊಂಡಿಲ್ಲವೆಂದು ಪ್ರಶ್ನಿಸಿದರು.

ಎಡ ಕಮ್ಯುನಿಸ್ಟ್ ಪಕ್ಷವನ್ನು ಬಹಿಷ್ಕರಿಸುವ ವಿಚಾರವನ್ನು ಸರ್ಕಾರ ಪರಿಶೀಲಿಸುತ್ತಿದೆಯೆ ಎಂದು ಜನಸಂಘದ ಅನ್ವರ್‌ಲಾಲ್ ಗುಪ್ತ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT