7

‘ಅಧಿಕಾರಿಗಳೆದುರು ಮಾತನಾಡುವ ಧೈರ್ಯವಿಲ್ಲ.!’

Published:
Updated:
‘ಅಧಿಕಾರಿಗಳೆದುರು ಮಾತನಾಡುವ ಧೈರ್ಯವಿಲ್ಲ.!’

1. ನಾನು ಖಾಸಗಿ ಕಂಪನಿಯೊಂದರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಉನ್ನತ ಅಧಿಕಾರಿಗಳ ಎದುರು ನಿಂತು ಮಾತನಾಡಲು ಆಗುವುದಿಲ್ಲ. ಅಲ್ಲದೇ ಅವರ ಎದುರು ಕುಳಿತು ಏನಾದರೂ ಬರೆಯಲು ಹೋದರೆ ನನಗೆ ಕೈ ನಡುಗುತ್ತದೆ. ಇದರಿಂದ ಹೊರ ಬರಬೇಕಾದರೆ ಏನು ಮಾಡಬೇಕು ತಿಳಿಸಿ.

ಹೆಸರು, ಊರು ಬೇಡ

ಆತ್ಮವಿಶ್ವಾಸದ ಕೊರತೆಯೇ ಸಾಮಾನ್ಯವಾಗಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಾನು ಕಚೇರಿಗೆ ಹೊಸಬ, ನನಗೆ ಕೆಲಸದ ಅನುಭವವಿಲ್ಲ ಅಥವಾ ಯಶಸ್ಸು ಸಾಧಿಸುವ ಸಾಮರ್ಥ್ಯ ನನಗಿಲ್ಲ ಎಂಬ ಅನುಮಾನಗಳಿದ್ದರೆ ಈ ರೀತಿಯಾಗುತ್ತದೆ. ನೀವು ನಿಮಗಿರುವ ಭಯದಿಂದ ಹೊರಬಂದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡರೆ ನಿಮ್ಮ ಕೆಲಸದಲ್ಲಿ ಅಭಿವೃದ್ಧಿ ಹೊಂದಬಹುದು. ನಿಮ್ಮ ಸಹದ್ಯೋಗಿಗಳ ಜೊತೆ ಮಾತನಾಡಿ, ನಿಮ್ಮ ಸಮಸ್ಯೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಅವರು ನಿಮಗೆ ಅನೇಕ ಹಾದಿಯಲ್ಲಿ ಸಹಾಯ ಮಾಡಬಹುದು. ನಿಮ್ಮ ಮುಖದ ಮೇಲೆ ಯಾವಾಗಲೂ ನಗು ಇರಲಿ. ಅದನ್ನು ನೋಡಿ ನಿಮ್ಮ ಎದುರಿನ ವ್ಯಕ್ತಿಗೂ ನಿಮ್ಮ ಮೇಲೆ ಆಹ್ಲಾದಕರ ಭಾವನೆ ಹುಟ್ಟಿಕೊಳ್ಳಬಹುದು. ಅದರಿಂದ ನೀವು ಎದುರಿನವರ ಜೊತೆ ಆರಾಮವಾಗಿ ಇರಬಹುದು. ನಿಮ್ಮ ಕೌಶಲವನ್ನು ವೃದ್ಧಿಗೊಳಿಸಿಕೊಳ್ಳಿ, ಆಗ ನೀವು ಮಾತನಾಡದಿದ್ದರೂ ನಿಮ್ಮ ಕೆಲಸವೇ ಫಲಿತಾಂಶವನ್ನು ತೋರಿಸುತ್ತದೆ. ಆಗ ನಿಧಾನವಾಗಿ ನಿಮ್ಮಲ್ಲಿ ಎಲ್ಲರನ್ನೂ ಎದುರಿಸುವ ಆತ್ಮವಿಶ್ವಾಸ ಎದ್ದುಕಾಣುತ್ತದೆ. ಅನುಮಾನಗಳು ನಿಮ್ಮೊಳಗೆ ಯದ್ಧ ಮಾಡಬಹುದು. ಧನಾತ್ಮಕ ವ್ಯಕ್ತಿತ್ವ ಬೆಳೆಸಿಕೊಳ್ಳಿ. ಹೆಚ್ಚು ಹೆಚ್ಚು ಕೌಶಲ ಹಾಗೂ ನಿಮ್ಮ ಕ್ಷೇತ್ರದಲ್ಲಿಯ ಜ್ಞಾನವನ್ನು ವೃದ್ಧಿಗೊಳಿಸಿಕೊಳ್ಳುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ವ್ಯಕ್ತಿತ್ವ ವಿಕಸನ ಕೋರ್ಸ್‌ಗಳಿಗೆ ಸೇರಿದರೆ ಅದು ನಿಮಗೆ ದೀರ್ಘಾವಧಿವರೆಗೆ ಸಹಾಯವಾಗಬಹುದು.

2. ನನಗೆ ಮದುವೆ ಆಗಿ 7 ವರ್ಷ ಆಗಿದೆ. ಇಬ್ಬರು ಮಕ್ಕಳಿದ್ದಾರೆ. ನಾನು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೇನೆ. ನನ್ನ ಗಂಡ ಕೂಡ ಟೀಚರ್. ಅವರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಆದರೆ ಕೆಲವೊಮ್ಮೆ ಕೋಪ ಮಾಡಿಕೊಳ್ಳುತ್ತಾರೆ. ಅವರು ಈಗ ಬೇರೆ ಕಡೆ ಇದ್ದಾರೆ. ಆದರೆ ಈಗ ನನ್ನ ಮನಸ್ಸು ಸ್ತಿಮಿತದಲ್ಲಿ ಇಲ್ಲ. ನನಗೆ ಒಬ್ಬ ಸರ್ ಪರಿಚಯ ಆಗಿದ್ದಾರೆ. ಅವರ ಜೊತೆ ಮಾತನಾಡಬೇಕು, ಅವರು ನನ್ನ ಜೊತೆ ಮಾತನಾಡಬೇಕು, ನನ್ನನ್ನು ಕೇರ್ ಮಾಡಬೇಕು – ಎಂದು ಅನ್ನಿಸುತ್ತದೆ. ಅವರು ವಾಟ್ಸ್‌ಆ್ಯಪ್‌ನಲ್ಲಿ ಒಂದು ದಿನ ಮೆಸೇಜ್ ಮಾಡಿಲ್ಲ ಅಂದರೆ ಬೇಜಾರಾಗುತ್ತದೆ. ಯಾವಾಗಲೂ ಅವರ ಬಗ್ಗೆ ಯೋಚನೆ ಮಾಡುತ್ತಲೆ ಇರುವೆ. ಅದು ತಪ್ಪು ಅನ್ನಿಸುತ್ತದೆ. ಆದರೂ ಮನಸ್ಸು ಕೇಳೊಲ್ಲ. ಆ ಸರ್‌ಗೂ ಮದುವೆ ಆಗಿದೆ. ಆದರೆ ನನಗೆ ಇದರಿಂದ ಹೊರಗಡೆ ಬರುವುದಕ್ಕೆ ಆಗುತ್ತಿಲ್ಲ.

ತುಳಸಿ, ಊರು ಬೇಡ

ಕೆಲವೊಮ್ಮೆ ಗಂಡ–ಹೆಂಡತಿಯ ನಡುವೆ ಸಮಯ ಹಾಗೂ ಸಂವಹನದ ಕೊರತೆ ಕಾಣಿಸಿದಾಗ ಅವರ ನಡುವೆ ಭಾವನಾತ್ಮಕ ಸಂಪರ್ಕ ಕಡಿತಗೊಳ್ಳುತ್ತದೆ. ಭಾವನೆಗಳು ಬೆಸೆದುಕೊಳ್ಳಲು ನೀವು ಭಾವನೆಗಳನ್ನು ಹಂಚಿಕೊಳ್ಳಬೇಕು, ಮಾತನಾಡಬೇಕು, ಭಾವನೆಗಳನ್ನು ವ್ಯಕ್ತಪಡಿಸಬೇಕು, ಪರಸ್ಪರ ಕೇಳಿಸಿಕೊಳ್ಳಬೇಕು, ನಗಬೇಕು, ಅವರನ್ನು ಕೇರ್ ಮಾಡಬೇಕು ಮತ್ತು ಕೇರ್ ಮಾಡುತ್ತಿರುವುದು ಅವರ ಅನುಭವಕ್ಕೆ ಬರಬೇಕು.

ಆಯಾ ಸಮಯಕ್ಕೆ ನೀವಿದನ್ನು ಮಾಡದೇ ಇದ್ದರೆ ನಿಮ್ಮಿಬ್ಬರ ನಡುವಿನ ಸಂಬಂಧ ಹಳಸಿ ಬೇರೆಯವರ ಜೊತೆ ಭಾವನಾತ್ಮಕ ಸಂಬಂಧ ಬೆಳೆಯಲು ಕಾರಣವಾಗಬಹುದು. ಹೊರಗಿವನರ ಜೊತೆಗಿನ ಭಾವಾನಾತ್ಮಕ ಬಂಧವು ಕೆಲವೊಮ್ಮೆ ಅನೈತಿಕ ಸಂಬಂಧಗಳಿಗೂ ಕಾರಣವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀವು ಇದನ್ನು ನಿಮ್ಮ ಕಡೆಯಿಂದ ತಪ್ಪಿಸಲು ಸಹೋದ್ಯೋಗಿ ಜೊತೆ ಇರಿಸಿಕೊಂಡ ಚಿಕ್ಕ ಬಂಧನದಿಂದ ಬಿಡಿಸಿಕೊಳ್ಳಿ. ಪರಿಸ್ಥಿತಿ ನಿಮ್ಮ ಕೈಮೀರುವ ಮೊದಲೇ ಅವರಿಗೆ ಒಳ್ಳೆಯ ರೀತಿಯಿಂದಲೇ ಗುಡ್‌ಬಾಯ್ ಹೇಳಿ. ನೀವು ಅವರೊಂದಿಗೆ ಸಂಪೂರ್ಣವಾಗಿ ಸಂಬಂಧ ಕಳೆದುಕೊಂಡಾಗಲಷ್ಟೇ ಇದರಿಂದ ಹೊರಬರಲು ಸಾಧ್ಯ. ಇದಕ್ಕೆ ಸ್ವಲ್ಪ ಪ್ರಯತ್ನ ಬೇಕು. ಆದರೆ ನಿಮಗೆ ನೀವು ಸತ್ಯವಂತವಾಗಿರಬೇಕು. ಅವರೊಂದಿಗೆ ಸಂಪರ್ಕ ಹಾಗೂ ಸಂಬಂಧವನ್ನು ಮಾಡಬೇಡಿ. ನಿಮ್ಮ ಒಳಿತಿಗಾಗಿ ಅವರನ್ನು ಬಿಟ್ಟುಬಿಡಿ.

3. ನಾನು ಬಿ.ಎ. ಓದಿದ್ದೇನೆ. ಈಗ ಒಂದು ಚಿಕ್ಕ ಕೆಲಸಕ್ಕೆ ಸೇರಿದ್ದೇನೆ. ನಮ್ಮ ಮನೆಯಲ್ಲಿ ತುಂಬಾ ಸಮಸ್ಯೆ ಇದೆ. ಸುಮಾರು ಸಾಲ ಇದೆ. ಅಕ್ಕನ ಮದುವೆ ಮಾಡಬೇಕು. ಮತ್ತೆ ಸಾಲ ಆಗುತ್ತದೆ. ಅದನ್ನು ತೀರಿಸುವುದರೊಳಗೆ ನನ್ನ ಆಯುಷ್ಯವೇ ಮುಗಿದಿರುತ್ತದೆ. ನನ್ನ ಜೀವನವನ್ನು ನಾನು ಹೇಗೆ ಸೆಟಲ್ ಮಾಡಿಕೊಳ್ಳಲಿ. ಹಾಗಾಗಿ ಮನಸ್ಸಿಗೆ ತುಂಬಾ ನೋವಾಗುತ್ತದೆ. ಆದರೆ ಮನೆಯ ಜವಾಬ್ದಾರಿ ಮರೆಯಲು ಆಗುತ್ತಿಲ್ಲ. ತುಂಬಾ ಗೊಂದಲದಲ್ಲಿದ್ದೇನೆ. ನನಗೆ ಪರಿಹಾರ ತಿಳಿಸಿ.

ಅರುಣ್, ಶಿವಮೊಗ್ಗ

ನೀವು ಜವಾಬ್ದಾರಿ ತೆಗೆದುಕೊಳ್ಳಲು ರೆಡಿ ಇರುವುದನ್ನು ಕೇಳಿ ಖುಷಿಯಾಗುತ್ತಿದೆ. ಇದು ಪ್ರಶಂಸಾರ್ಹ. ನನಗೆ ಗೊತ್ತಿದೆ ಇದು ಸುಲಭವಲ್ಲ. ಆದರೆ ಸತ್ಯವನ್ನು ಒಪ್ಪಿಕೊಂಡರೆ ನೀವು ಇದೇ ಕೆಲಸದಲ್ಲಿ ಇನ್ನಷ್ಟು ಮುಂದುವರೆಯಲು ಸಹಾಯವಾಗುತ್ತದೆ. ನೋಡಿ, ಕೆಲಸದ ಜೊತೆಗೆ ಓದನ್ನು ಮುಂದುವರೆಸಬಹುದು ಮತ್ತು ದೂರಶಿಕ್ಷಣದ ಮೂಲಕ ನಿಮ್ಮ ಸ್ನಾತಕೋತ್ತರ ಪದವಿಯನ್ನು ಮಾಡಿಕೊಳ್ಳಬಹುದು. ಆಗ ನಿಮಗೆ ಇನ್ನೂ ಒಳ್ಳೆಯ ಉದ್ಯೋಗ ದೊರಕುತ್ತದೆ, ಜೊತೆಗೆ ಆರ್ಥಿಕವಾಗಿಯೂ ಸಬಲರಾಗಬಹುದು. ಎಲ್ಲ ಸಮಸ್ಯೆಗಳನ್ನು ಒಟ್ಟಿಗೆಯಲ್ಲಿ ತಲೆಯಲ್ಲಿ ತುಂಬಿಕೊಳ್ಳಬೇಡಿ. ಬಂದಿದ್ದನ್ನು ಬಂದಂತೆ ಸ್ವೀಕರಿಸಿ. ಕೊನೆಯದಾಗಿ ನಿಮ್ಮ ಗುರಿಯ ಮೇಲೆ ನಿಮ್ಮ ಗಮನವಿರಲಿ.

4. ನನ್ನ ಸೋದರ ಸೊಸೆಗೆ 27 ವರ್ಷ. ಸುಮಾರು ಐದು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದಾಳೆ. ಮನೋವೈದ್ಯರಿಗೆ ತೋರಿಸಿದೆವು. ಆಸ್ಪತ್ರೆಯಲ್ಲಿ ನಾಲ್ಕು ದಿನ ಇರಿಸಿಕೊಂಡು ಚಿಕಿತ್ಸೆ ನೀಡಿದರು, ಅದು ಫಲಕಾರಿಯಾಗಲಿಲ್ಲ. ಅವಳ ತಂದೆ ನಿಧನರಾಗಿ ಮೂರು ವರ್ಷಗಳಾಯಿತು. ಬಿ.ಎ. ಓದಿದ್ದಾಳೆ. ತುಂಬಾ ಬುದ್ಧಿವಂತೆ. ಆದರೆ ಇದೊಂದು ಕಾರಣದಿಂದ ಸಾಮಾನ್ಯ ಜೀವನ ನಡೆಸಲಾರದೆ ಒದ್ದಾಡುತ್ತಿದ್ದಾಳೆ. ಮನೆಯವರೆಲ್ಲ ಏನೇ ಪ್ರಯತ್ನ ಮಾಡಿದರೂ ಅವಳು ಸ್ವಂದಿಸುತ್ತಿಲ್ಲ. ದಯಮಾಡಿ  ಸಹಾನುಭೂತಿ ಮತ್ತು ಸಹನೆಯಿಂದ ಅವಳಿಗೆ ಚಿಕಿತ್ಸೆ ನೀಡುವ ವೈದ್ಯರನ್ನು ಸಂಪರ್ಕಿಸಲು ನನಗೆ ಸಹಾಯ ಮಾಡಿ.

ಹೆಸರು, ಊರು ಬೇಡ

ನನಗೆ ಅರ್ಥವಾಗುತ್ತಿದೆ. ಎಲ್ಲವನ್ನು ಇಲ್ಲಿ ವಿವರಿಸಿ ಬರೆಯಲು ಸಾಧ್ಯವಿಲ್ಲವೆಂದು, ಮತ್ತು ನೀವು ಈಗಾಗಲೇ ಮನೋವೈದ್ಯರ ಬಳಿ ಹೋಗಿದ್ದೀರಿ ಹಾಗೂ ಔಷಧಗಳನ್ನು ನೀಡುತ್ತಿದ್ದೀರಿ. ನಾನು ಹೇಳುವುದೇನೆಂದರೆ ಚಿಕಿತ್ಸೆಯನ್ನು ಮುಂದುವರೆಸಿ. ಇದು ದೀರ್ಘಕಾಲದ ಚಿಕಿತ್ಸೆ. ತಾಳ್ಮೆಯಿರಲಿ, ಔಷಧಗಳ ಜೊತೆ ಮನೋಶಾಸ್ತ್ರಜ್ಞರು ಹಾಗೂ ಆಪ್ತಸಮಾಲೋಚಕರ ಬಳಿಗೂ ಅವರನ್ನು ಕರೆದುಕೊಂಡು ಹೋಗಿ. ಇದರಿಂದ ಅವರು ಇನ್ನೂ ಬೇಗ ಗುಣಮುಖರಾಗಬಹುದು. ಬೆಂಗಳೂರಿನಂತಹ ನಗರಗಳಲ್ಲಿ ಈ ಮೂರು ವೈದ್ಯರು ಒಂದೇ ಆಸ್ಪತ್ರೆಯಲ್ಲಿ ನಿಮಗೆ ಕಾಣಸಿಗುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry