7

ನವಿಲು-ಕೋಗಿಲೆಯ ಅಪೂರ್ವ ಸಂಗಮ

Published:
Updated:
ನವಿಲು-ಕೋಗಿಲೆಯ ಅಪೂರ್ವ ಸಂಗಮ

ನಾಳೆ ಬೆಳಗ್ಗೆ ಕ್ರಾಂತಿಯಾಗಲಿದೆ...

ವೇದಿಕೆಯ ಮೇಲೆ ಚಂದದ ತರುಣಿಯೊಬ್ಬಳ ಕ್ರಾಂತಿಯ ಬಗ್ಗೆ ಕನವರಿಸುತ್ತಿದ್ದರೆ, ಬೆಳಗ್ಗೆಯ ಬದಲು ಈಗಲೇ ಕ್ರಾಂತಿ ಆಗಲಿದೆ ಅಥವಾ ಆಗಬೇಕು ಎಂದು ಯಾರಿಗಾದರೂ ಅನ್ನಿಸಬೇಕು.

ಅದು ಕಾವ್ಯದ ಕನವರಿಕೆ. ಕ್ರಾಂತಿಯ ವಿವಿಧ ಸಾಧ್ಯತೆಗಳನ್ನು ಕಾಣಿಸುತ್ತ, ನೋಡುಗರ-ಕೇಳುಗರ ಕಣ್ಮನಗಳಲ್ಲಿ ಮಿಂಚಿನ ಸಂಚಾರಕ್ಕೆ ಕಾರಣರಾಗುವ ಯುವತಿ ಜೆಸ್ಸಿ ಜೇಮ್ಸ್‍. ಕಾವ್ಯ ಮತ್ತು ಕವಯಿತ್ರಿಯ ನಡುವೆ ಸ್ಪರ್ಧೆ ಏರ್ಪಟ್ಟರೆ ಸೊಬಗಿನ ಆಯ್ಕೆ ಸುಲಭಕ್ಕೆ ಬಗೆಹರಿಯುವಂತಹದ್ದಲ್ಲ!

ಜೆಸ್ಸಿ ಕವಿತೆಯನ್ನು ಓದುವುದಿಲ್ಲ, ಅಭಿನಯಿಸುತ್ತಾರೆ. ಬೇಂದ್ರೆಯವರನ್ನು ನಾವು ಗಾರುಡಿಗ ಎನ್ನುತ್ತೇವಲ್ಲ; ಆ ಕಾವ್ಯಗಾರುಡಿಯ ಪಂಕ್ತಿಗೆ ಸೇರಿದವರು ಜೆಸ್ಸಿ. 1929ರ ಬೆಳಗಾವಿಯ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರು 'ಹಕ್ಕಿ ಹಾರುತಿದೆ ನೋಡಿದಿರಾ' ಕವನವನ್ನು ಓದಿದ್ದನ್ನು ಕೇಳಿದ ಮಾಸ್ತಿಯವರು - "ಅದನ್ನು ಕೇಳಿದ ಜನ ಎಂಥ ಆನಂದವನ್ನು ಅನುಭವಿಸಿದರೆಂದು ಈಗ ಹೇಳುವುದು ಸಾಧ್ಯವಿಲ್ಲ. ಆ ಕವಿತೆಯ ಎಲ್ಲ ಅರ್ಥವನ್ನೂ ಅರಿಯುವುದಕ್ಕೆ ಆ ಒಂದು ಓದು ಸಾಕಲ್ಲವೇ ಅಲ್ಲ; ಆದರೆ ಆ ಒಂದು ಓದಿನಿಂದ ಕಂಡಷ್ಟು ಕಾವ್ಯಗುಣದಿಂದಲೇ ಸಾವಿರ ಜನರ ಸಭೆ ಚಕಿತವಾಯಿತು" ಎಂದರಲ್ಲ - ಜೆಸ್ಸಿಯ ಕವಿತೆ ನೀಡುವುದು ಕೂಡ ಅದೇ ಅನುಭವವನ್ನು.

ಜೆಸ್ಸಿ ತಮ್ಮ ಕವಿತೆಗಳನ್ನು ಇತ್ತೀಚೆಗೆ ನಡೆದ 'ಬೆಂಗಳೂರು ಸಾಹಿತ್ಯ ಉತ್ಸವ'ದಲ್ಲಿ ಅನಾವರಣಗೊಳಿಸಿದಾಗ ಅಲ್ಲಿ ನೆರೆದ ಕೆಲವರಾದರೂ ಚಕಿತರೂ ರೋಮಾಂಚಿತರೂ ಆಗಿರಬೇಕು. ಒಂದುಗೋಷ್ಠಿ ಅವರ ಕಾವ್ಯಕ್ಕೆ ಸೀಮಿತವಾದರೆ, ಮತ್ತೊಂದು ಮಾತುಕತೆ ಪ್ರವಾಸದ ಕಥನಗಳಿಗೆ ಮೀಸಲಾಗಿತ್ತು. ಪದ್ಯ-ಗದ್ಯ ಯುಗಳದಲ್ಲಿ ಜೆಸ್ಸಿ ಚಾಂಪಿಯನ್.

ಜರ್ಮನಿ ಮೂಲದ ಈ ತರುಣಿಯನ್ನು ಅಲೆಮಾರಿ ಕವಯಿತ್ರಿ ಎಂದು ಕರೆಯಬಹುದು. ಕಳೆದ ಹದಿನಾಲ್ಕು ವರ್ಷಗಳಲ್ಲಿ ಸುಮಾರು ಐವತ್ತು ದೇಶಗಳನ್ನು ಸುತ್ತಿರುವ ಅಗ್ಗಳಿಕೆ ಆಕೆಯದು. ಹೋದಲ್ಲೆಲ್ಲ ತಮ್ಮ ಕಾವ್ಯಸುಧೆಯನ್ನು ಪರಿಚಯಿಸಿರುವ ಜೆಸ್ಸಿ - ಜರ್ಮನ್‍, ಫ್ರೆಂಚ್‍ ಹಾಗೂ ಇಂಗ್ಲಿಷ್‍ನಲ್ಲಿ ಪ್ರದರ್ಶನ ನೀಡಬಲ್ಲ ಛಾತಿ ಹೊಂದಿದ್ದಾರೆ.

'ಸ್ಟ್ರೀಟ್ ಪೊಯೆಟ್‍' ಎಂದು ತನ್ನನ್ನು ತಾನು ಕರೆದುಕೊಳ್ಳುವ ಆಕೆಗೆ, ಮೌಕಿಕ ಜಗತ್ತಿನೊಂದಿಗೆ ವ್ಯವಹರಿಸುವುದು ತುಂಬಾ ಖುಷಿ ನೀಡುವ ಸಂಗತಿ. ಮೌಖಿಕ ಕಾವ್ಯದ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್‍ನಲ್ಲಿ 'Poetry Slam' ಎನ್ನುವ ಪ್ರಕಾರವೊಂದಿದೆ. ಈ ಪರಂಪರೆಯ ವಕ್ತಾರಳಂತೆ, ಹಿಪ್ ಹಾಪ್‍ ಸಂಸ್ಕೃತಿಯನ್ನು ರಾಯಭಾರಿಯಂತೆ ಕಾಣಿಸುವ ಜೆಸ್ಸಿ ತನ್ನದೇ ಆದ ಮ್ಯೂಸಿಕ್‍ ಬ್ಯಾಂಡೊಂದನ್ನು ಕಟ್ಟಿಕೊಂಡು ಜಗತ್ತು ಸುತ್ತುತ್ತಿದ್ದಾಳೆ. ಆಕೆಗೆ ಶಬ್ದಗಳ ಮಾಂತ್ರಿಕ ಜಗತ್ತಿನ ಬಗ್ಗೆ ಅಪಾರ ನಂಬಿಕೆ. ಸಂಗೀತ ಮತ್ತು ಸಾಹಿತ್ಯದ ಮೂಲಕ ಜನರನ್ನು ಸಶಕ್ತಗೊಳಿಸಬಹುದು ಎನ್ನುವ ವಿಶ್ವಾಸ. ಶಬ್ದಗಳಿಗೆ ಜಗತ್ತನ್ನು ಬದಲಿಸುವ ಶಕ್ತಿಯಿದೆ ಎನ್ನುವ ನಂಬಿಕೆಯಿಂದಲೇ ಕ್ರಾಂತಿಯ ಕನಸನ್ನು ಕಾಣುವ ಹುರುಪು ಉಳಿಸಿಕೊಳ್ಳುವುದು ಜೆಸ್ಸಿಗೆ ಸಾಧ್ಯವಾಗಿದೆ. ಜೆಸ್ಸಿಯ ಕವಿತೆಯ ಜೊತೆಗೆ ಬ್ಯಾಂಡ್‍ನ ಸಂಗೀತವೂ ಸೇರಿ ರೂಪುಗೊಳ್ಳುವ ನಾದಲೀಲೆಯನ್ನು ಅನುಭವಿಸಿಯೇ ಸವಿಯಬೇಕು.

ಕಾವ್ಯಕ್ಕೆ ಸಂಬಂಧಿಸಿದಂತೆ ಜೆಸ್ಸಿ ಜರ್ಮನಿಯಲ್ಲಿ ಸಾಕಷ್ಟು ಚಟುವಟಿಕೆ ನಡೆಸಿದ್ದಾರೆ. ಕಾವ್ಯ ಕಮ್ಮಟಗಳನ್ನು ರೂಪಿಸಿದ್ದಾರೆ. ಜರ್ಮನಿಯ ಕಾರಾಗೃಹಗಳು, ಶಾಲೆಗಳು ಹಾಗೂ ಯುವಕಕೇಂದ್ರಗಳಲ್ಲಿ ಕಾವ್ಯದ ಚಟುವಟಿಕೆಗಳನ್ನು ನಡೆಸಿದ್ದಾರೆ. ಜೆಸ್ಸಿಯ ಕವಿತೆ-ಕಥೆಗಳು ವಿಶ್ವದ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ವಿಶ್ವದ ಅನೇಕ ಸಾಹಿತ್ಯ ಉತ್ಸವಗಳಲ್ಲಿ ಭಾಗವಹಿಸಿರುವ ಆಕೆ, ಸಾಹಿತ್ಯವನ್ನೇ - ವಿಶೇಷವಾಗಿ ಕಾವ್ಯವನ್ನೇ - ಜೀವಿಸುತ್ತಿರುವಂತೆ ಕಾಣಿಸುತ್ತದೆ.

ಅಲೆಮಾರಿತನ ಕೂಡ ಜೆಸ್ಸಿಗೆ ಕಾವ್ಯದಷ್ಟೇ ಮೆಚ್ಚು. ಹದಿನಾರನೇ ವಯಸ್ಸಿನಲ್ಲಿ ಅಲೆಯುವ ಹುಚ್ಚು ಜೊತೆಯಾಯಿತು. ಸಾಂಪ್ರದಾಯಿಕ ಕಲಿಕೆ ಬೇಸರವಾಗಿ ದೇಶ-ಕೋಶ ಸುತ್ತುವ ಮೂಲಕ ಬದುಕನ್ನು ಕಂಡುಕೊಳ್ಳಲು ನಿರ್ಧರಿಸಿದರು. ಮಗಳ ನಿರ್ಧಾರಕ್ಕೆ ಪೋಷಕರು ಬೆಚ್ಚಿಬಿದ್ದರು. ಮಕ್ಕಳನ್ನು, ಅದರಲ್ಲೂ ಹೆಣ್ಣುಮಕ್ಕಳನ್ನು ಒಂಟಿಯಾಗಿ ಕಳಿಸಲಿಕ್ಕೆ ಯಾವ ಪೋಷಕರಾದರೂ ಸಂತೋಷದಿಂದ ಒಪ್ಪಿಯಾರು. ಆದರೆ, ಜೆಸ್ಸಿಯ ನಿಲುವು ಸ್ಪಷ್ಟವಾಗಿತ್ತು. ಮಗಳ ಹಟಕ್ಕೆ ಪೋಷಕರು ಮಣಿದರು.

ಜೆಸ್ಸಿ ಭಾರತಕ್ಕೆ ಹೊರಟಾಗ, ಪೋಷಕರು ಹಾಗೂ ಪರಿಚಯದವರಿಂದ ನಕಾರಾತ್ಮಕ ಮಾತುಗಳೇ ಹೆಚ್ಚು ಎದುರಾಗಿದ್ದವು. ಅತ್ಯಾಚಾರಕ್ಕೊಳಗಾಗಬಹುದು ಎಂದು ಪೋಷಕರೇ ಆತಂಕ ವ್ಯಕ್ತಪಡಿಸಿದ್ದರಂತೆ. ಆದರೆ ಜೆಸ್ಸಿಗೆ ಭಾರತದ ಸೆಳೆತ ಮೀರಲಾಗಲಿಲ್ಲ. ಇಲ್ಲಿಗೆ ಬಂದಮೇಲೆ ಅವರಿಗೆ ಎದುರಾದುದು ಬೇರೆಯದೇ ಆದ ಭಾರತ ದರ್ಶನ!

ಜೆಸ್ಸಿ ಭಾರತದಲ್ಲಿ ಹೆಚ್ಚು ಕಾಲ ಕಳೆದಿರುವುದು ತಮಿಳುನಾಡಿನ ಕೊಯಮತ್ತೂರಿನಲ್ಲಿ. ಅಲ್ಲಿನ ಕಾಲೇಜಿನಲ್ಲಿ ಓದಿದ್ದಾರೆ. ಕತ್ತಲಾದ ನಂತರ ಒಂಟಿಯಾಗಿ ಓಡಾಡುವಾಗ ತಮ್ಮ ಕುರಿತು ಕಾಳಜಿ ವ್ಯಕ್ತಪಡಿಸಿದವರನ್ನು, ಮನೆಗೆ ಮುಟ್ಟಿಸಲು ಮುಂದಾದವರನ್ನು ಜೆಸ್ಸಿ ನೆನಪಿಸಿಕೊಳ್ಳುತ್ತಾರೆ. ಸೀರೆ ಉಟ್ಟಾಗ ತನ್ನನ್ನು ಅರಳುಕಂಗಳೊಂದಿಗೆ ನೋಡುವ ಹಾಗೂ ಸೆಲ್ಫಿ ತೆಗೆಸಿಕೊಳ್ಳುವ ಭಾರತೀಯ ಹೆಣ್ಣುಮಕ್ಕಳು ಅವರ ಮಾತುಗಳಲ್ಲಿ ಸುಳಿದುಹೋಗುತ್ತಾರೆ.

ಹೆಣ‍್ಣುಮಕ್ಕಳ ಪಾಲಿಗೆ ಭಾರತ ಸುರಕ್ಷಿತವಾಗಿಲ್ಲ ಎನ್ನುವುದನ್ನು ಜೆಸ್ಸಿ ಒಪ್ಪುವುದಿಲ್ಲ. ಇದೆಲ್ಲವೂ ಮಾಧ್ಯಮಗಳ ಸೃಷ್ಟಿ. ಪರಿಸ್ಥಿತಿ ತೀರಾ ಭೀಕರವಾಗಿಲ್ಲ ಎನ್ನುತ್ತಾರೆ. ಒಂದುವೇಳೆ, ಜರ್ಮನಿಯ ಪತ್ರಿಕೆಗಳನ್ನು ನೀವು ಓದಿದರೆ ಅಲ್ಲಿಗೆ ತಮ್ಮ ಹೆಣ್ಣುಮಕ್ಕಳನ್ನು ಎಂದಿಗೂ ಕಳುಹಿಸಲಾರಿರಿ ಎನ್ನುವ ಜೆಸ್ಸಿ, 'ಭಾರತ ಅಸುರಕ್ಷಿತ' ಎಂದು ತಾವೆಂದಿಗೂ ಹೇಳುವುದಿಲ್ಲ ಎನ್ನುತ್ತಾರೆ.

ಓಡಾಟದ ಸಮಯದಲ್ಲಿ ಜೆಸ್ಸಿ ಉದ್ಯಾನದ ಬೆಂಚುಗಳಲ್ಲಿ ಮಲಗಿದ್ದಾರೆ. ತಮ್ಮನ್ನು ಸಂಪರ್ಕಿಸಿದ ಡ್ರಗ್ಸ್‍ ಡೀಲರ್‍ ಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಇದೆಲ್ಲವೂ ಅವರಿಗೆ ಕಲಿಕೆಯ ಭಾಗವಾಗಿಯೇ ಕಂಡಿದೆ. ಹೆಣ್ಣುಮಕ್ಕಳು ಒಂಟಿಯಾಗಿ ಪ್ರವಾಸ ಕೈಗೊಳ್ಳುವುದಕ್ಕೆ ಜೆಸ್ಸಿ ಸ್ಫೂರ್ತಿಯಂತಿದ್ದಾರೆ.

ಕನ್ನಡದಲ್ಲಿ ಕಾವ್ಯಗೋಷ್ಠಿಗಳು ಜಡ್ಡುಗಟ್ಟಿರುವ ಸಂದರ್ಭದಲ್ಲಿ ಜೆಸ್ಸಿಯಂಥ ಜಾದೂಗಾರರು ಕನ್ನಡಕ್ಕೂ ಬೇಕೆನ್ನಿಸುತ್ತಾರೆ. ಇಂದಿನ ಬಹುತೇಕ ಗೋಷ್ಠಿಗಳಲ್ಲಿನ ಕಾವ್ಯ ಜಡರೂಪಿಯಾದುದು. ಆ ಕಾರಣದಿಂದಲೇ ಅದು ಸಹೃದಯರಿಂದ ದೂರ ಉಳಿದಿದೆ. ರಸಿಕರು ಬಯಸುವುದು ಚಲನಶೀಲವಾದ, ಜೀವಪರವಾದ ಜೀವಂತ ಕಾವ್ಯವನ್ನು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry