6

ಸಮಷ್ಟಿ ಬದುಕಿಗೆ ಸ್ಪಂದಿಸುವ ಸಮಗ್ರ ಆಂದೋಲನವಾಗಲಿ

Published:
Updated:
ಸಮಷ್ಟಿ ಬದುಕಿಗೆ ಸ್ಪಂದಿಸುವ ಸಮಗ್ರ ಆಂದೋಲನವಾಗಲಿ

ಆದಿ ಕವಿ ಪಂಪನ ಕಾಲದಿಂದಲೂ ಕನ್ನಡ ಪ್ರಜ್ಞೆ ಅಪ್ಪಟ ಜಾತ್ಯತೀತವಾದುದು. ಕನ್ನಡ ಸಾಹಿತ್ಯ ಎಂದಿನಂತೆ ‘ನಿಚ್ಚಂ ಪೊಸತು’ ಆಗಿಯೇ ಇದೆ ಎಂಬಂತಹ ಭರವಸೆಯ ನುಡಿಗಳನ್ನಾಡುತ್ತಲೇ ಕನ್ನಡ ಭಾಷೆ ಹಾಗೂ ಕನ್ನಡ ನಾಡು ಎದುರಿಸಬೇಕಾಗಿರುವ ವರ್ತಮಾನದ ಸವಾಲುಗಳನ್ನು 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಚಂದ್ರಶೇಖರ ಪಾಟೀಲರು (ಚಂಪಾ)ತೆರೆದಿಟ್ಟಿದ್ದಾರೆ. ‘ನಾನು’ ಎಂಬುದು ‘ನಾವು’ ಎಂಬುದರ ಸಂಕ್ಷಿಪ್ತ ರೂಪ ಹಾಗೂ ‘ನಾವು ’ ಎಂಬುದು ‘ನಾನು’ ಎಂಬುದರ ವಿಕಸಿತ ವಿನ್ಯಾಸ ಎನ್ನುತ್ತಾ ತಮ್ಮ 60 ವರ್ಷಗಳ ಸಾಹಿತ್ಯಕ ಸಾಮಾಜಿಕ ಬದುಕಿನ ಮಗ್ಗುಲುಗಳನ್ನು ವ್ಯಕ್ತಿ ಹಾಗೂ ಸಮಷ್ಟಿ ನೆಲೆಯಲ್ಲಿ ಈ ಭಾಷಣದಲ್ಲಿ ಅವರು ನಿರೂಪಿಸಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ 5ನೇ ಸಾಹಿತ್ಯ ಸಮ್ಮೇಳನ ಇದು. ‘ಪ್ರಜಾಪ್ರಭುತ್ವವನ್ನು ಯಶಸ್ವಿಯಾಗಿಸುವ ಭಾಷೆ ಕನ್ನಡ ಜನರಿಗೆ ಕನ್ನಡ ಮಾತ್ರ. ವಿಶ್ವಸಂಸ್ಕೃತಿಯನ್ನೊಳಗೊಂಡ ರಾಷ್ಟ್ರೀಯತ್ವವನ್ನೂ ಕರ್ನಾಟಕತ್ವವನ್ನೂ ಯಾವಾಗಲೂ ಅನುಸಂಧಾನ ಮಾಡಿಕೊಂಡೇ ವಾಙ್ಮಯ ಹುಟ್ಟಿಸುವುದಕ್ಕೆಪ್ರವೃತ್ತರಾಗಬೇಕು’ ಎಂಬಂತಹ ಹಿಂದಿನ ಸಮ್ಮೇಳನಾಧ್ಯಕ್ಷರ ಮಾತುಗಳ ಮೆಲುಕು ಹಾಕುತ್ತಾ ‘ಕನ್ನಡ ಬರಹಗಾರರ ತುಡಿತ ಮಿಡಿತ ಸದಾ ಒಂದೇ. ಅದು ಕನ್ನಡ, ಕನ್ನಡಿಗ, ಕರ್ನಾಟಕ, ಕನ್ನಡತ್ವ, ಸಾಹಿತಿಗಳ ಸಾಮಾಜಿಕ ಹೊಣೆಗಾರಿಕೆ, ಪ್ರಾದೇಶಿಕತೆ, ರಾಷ್ಟ್ರೀಯತೆ’ ಎಂದು ಚಂಪಾ ಪ್ರತಿಪಾದಿಸುತ್ತಾರೆ. ‘ಭೂಮಿಗೆ ಮಳೆಯ ಹಾಗೆ ಬದುಕಿಗೆ ಚಳವಳಿ ಬೇಕು’ ಎಂಬಂಥ ಹಿರಿಯರೊಬ್ಬರ ಮಾತನ್ನು ಉಲ್ಲೇಖಿಸಿ ನಾಡಿನ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಬದುಕಿನಲ್ಲಿ ಆಗಿಹೋದ ಅನೇಕ ಚಳವಳಿಗಳನ್ನು ನೆನಪಿಸಿಕೊಳ್ಳುತ್ತಲೇ ಚಳವಳಿಗಳ ಮಹತ್ವವನ್ನು ಸುದೀರ್ಘವಾಗಿ ಪ್ರಸ್ತಾಪಿಸಿದ್ದಾರೆ. ‘ಗೋಕಾಕ ಚಳವಳಿ ಎಷ್ಟರ ಮಟ್ಟಿಗೆ ಯಶಸ್ವಿಯಾಯಿತು ಎಂಬ ಪ್ರಶ್ನೆಗೆ ಸರಳ ಉತ್ತರವಿಲ್ಲ. ಆದರೆ ಕನ್ನಡಿಗರಲ್ಲಿ ಒಂದು ಒಳ ಎಚ್ಚರ ಮೂಡಿಸಿತು’ ಎಂಬಂಥ ಡಾ ಚಿದಾನಂದಮೂರ್ತಿಯವರ ಮಾತನ್ನು ಉಲ್ಲೇಖಿಸುತ್ತಾರೆ.

ಏಕೀಕರಣದ ನಂತರದ 61ನೇ ವರ್ಷದಲ್ಲಿ ನಮ್ಮ ಚೆಲುವ ಕನ್ನಡ ನಾಡಿನಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸದ್ಯದ ವರ್ತಮಾನದಲ್ಲಿ ನಮ್ಮ ನುಡಿಯ ಸ್ಥಾನ ಯಾವುದು ಎಂದು ಕೇಳಿಕೊಳ್ಳಬೇಕಾಗಿದೆ. ಕನ್ನಡ ಭಾಷೆಗೆ, ಬದುಕಿಗೆ, ಸಂಸ್ಕೃತಿಗೆ ಪೂರಕ ಶಕ್ತಿಗಳಾಗಬಲ್ಲ ಸಂಸ್ಕೃತ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳು ಇಂದು ಕನ್ನಡದ ‘ಕಡುವೈರಿ’ ಗಳಾಗುವಂತಹ ವಿಪರ್ಯಾಸಕ್ಕೆ ನಮ್ಮ ಇಂದಿನ ಕೇಂದ್ರೀಕೃತ ವ್ಯವಸ್ಥೆಯೇ ಕಾರಣ ಎಂದು ಚಂಪಾ ವಿಶ್ಲೇಷಿಸುತ್ತಾರೆ. ನಮ್ಮ ಶಿಕ್ಷಣ ಕ್ರಮದಲ್ಲಿ ಯಾವ ಭಾಷೆಯ ಸ್ಥಾನ ಯಾವುದು ಎಂಬ ವಿಷಯ ಕುರಿತಂತೆ ಹಳೆಯ ಗೊಂದಲಗಳಿಗೆ ಹೊಸ ಗೊಂದಲಗಳು ಸೇರಿಕೊಳ್ಳುತ್ತ ಅಯೋಮಯ ವಾತಾವರಣ ಇಂದು ನಿರ್ಮಾಣವಾಗಿದೆ. ಆದರೆ ಕನ್ನಡ ಮಾತ್ರವಲ್ಲ ದೇಶದ ಎಲ್ಲಾ ಭಾಷೆಗಳಿಗೂ ಬಂದಿರುವ ಸಂಕಟ ಇದು. ಸಂವಿಧಾನ ತಿದ್ದುಪಡಿ ಮಾತ್ರ ಈ ಸ್ಥಿತಿ ಬದಲಿಸಬಲ್ಲುದು. ಹೀಗಾಗಿ, ಹೋರಾಟವೇ ಒಂದು ಪರಂಪರೆಯಾಗಿರುವ ಕರ್ನಾಟಕ ಈ ನಿಟ್ಟಿನಲ್ಲಿ ಇಡೀ ದೇಶಕ್ಕೆ ದಾರಿ

ಯನ್ನು ತೋರಿಸಬೇಕು ಎಂಬ ಆಶಯವನ್ನು ಚಂಪಾ ವ್ಯಕ್ತಪಡಿಸಿದ್ದಾರೆ. ಬಂಡಾಯ ಸಾಹಿತ್ಯ ಚಳವಳಿಯಲ್ಲಿದ್ದ ಆಶಯಗಳು ಹೊಸ ಪೀಳಿಗೆಯ ಸಂವೇದನೆಗಳಲ್ಲೂ ಪ್ರವಹಿಸುತ್ತಿದ್ದು ಇದಕ್ಕೆ ನಿರ್ದಿಷ್ಟ ದಿಕ್ಕು ದೆಸೆ ನೀಡಲು ಮತ್ತೆ ಬಂಡಾಯ ಸಂಘಟನೆ ಮರು ಹುಟ್ಟು ಪಡೆಯಬೇಕಾಗಿದೆ ಎಂಬಂಥ ಮಾತುಗಳು ಚಿಂತನಾರ್ಹ.

ನಾವೀಗ ಆತಂಕದಿಂದ ಬಳಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ, ವೈಚಾರಿಕತೆಯ ಕೊಲೆ ಇತ್ಯಾದಿ ಪದಪುಂಜಗಳು ಸ್ವಾತಂತ್ರ್ಯೋತ್ತರ ಅವಧಿಯ ಪ್ರಭುತ್ವಗಳ ನಿಘಂಟಿನಲ್ಲಿ ಮೊದಲಿನಿಂದಲೂ ಇವೆ. 1970ರ ದಶಕದ ತುರ್ತು ಪರಿಸ್ಥಿತಿ ಇದೆಲ್ಲದರ ಒಂದು ಸ್ಥೂಲ ಬಿಂದು. ಇದೆಲ್ಲವನ್ನು ಎದುರಿಸುವ ಧೈರ್ಯ –ಸ್ಥೈರ್ಯ ಕೂಡ ನಮ್ಮ ಸಾಹಿತ್ಯ ಪರಂಪರೆಯ ಅಂತಃಶಕ್ತಿಯೇ ಎಂದು ಪ್ರತಿಪಾದಿಸುತ್ತಾ ‘ನಮ್ಮ ದೇಶಕ್ಕೆ ಪ್ರಜಾಪ್ರಭುತ್ವ ಬರುವ ಮುಂಚೆಯೂ ನಾವು ಬರೆಯುತ್ತಿದ್ದೆವು. ಇಂದೂ ಬರೆಯುತ್ತಿದ್ದೇವೆ. ನಾಳೆಯೂ ಬರೆಯುವವರೇ. ಯಾರಿಗೆ ಯಾರೂ ಬರೆಯಬೇಡಿ ಎನ್ನುವ ಅಧಿಕಾರವೂ ಇಲ್ಲ: ಬರೆಯುವುದು ನಮ್ಮ ಸ್ವಾತಂತ್ರ್ಯ: ನಮ್ಮ ಜನ್ಮಸಿದ್ಧ ಹಕ್ಕು . ನಿಜ, ನಾವು ನಿರಂಕುಶರು. ನಿರಂಕುಶಮತಿಗಳು; ನಿರಂಕುಶವಾದಿಗಳು’ ಎಂದು ಶಿವರಾಮ ಕಾರಂತರು 1955ರಲ್ಲಿ ಮೈಸೂರು ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ ಹೇಳಿದ ಮಾತುಗಳನ್ನು ಉಲ್ಲೇಖಿಸಿರುವುದು ಮನನೀಯ. ಕನ್ನಡ ಬದುಕಿನ ಅನೇಕ ವಲಯಗಳ ತಜ್ಞರ ಮೂಲಕ ವಿಷಯ ಮಂಡನೆ ಮತ್ತು ಮುಕ್ತ ಚರ್ಚೆ – ಏಕೀಕರಣೋತ್ತರ ಸಮ್ಮೇಳನಗಳ ಮತ್ತೊಂದು ವೈಶಿಷ್ಟ್ಯ ಎಂದು ವಿಚಾರಗೋಷ್ಠಿಗಳ ವಿಷಯ ವ್ಯಾಪ್ತಿಯನ್ನು ಚಂಪಾ ಎತ್ತಿ ಹಿಡಿದಿದ್ದಾರೆ.

ಕನ್ನಡ ಚಳವಳಿ ನಿರಂತರವಾಗಿ ನಡೆಯುತ್ತಲೇ ಇರಬೇಕು. ಅದು ಪಡೆಯಬೇಕಾದ ಆಯಾಮಗಳೆಂದರೆ: ‘ಭಾಷಾ’ ಕೇಂದ್ರಿತವಾಗದೆ ನಾಡಿನ ಸಮಸ್ತ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಾಡಿನ ಸಮಷ್ಟಿ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ವಿದ್ಯಮಾನವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಸಮಸ್ಯೆಗಳ ಸೂಕ್ತ ಪರಿಹಾರಕ್ಕಾಗಿ ಸುಸಂಘಟಿತ ಪ್ರಯತ್ನವಾಗಿ ಎಲ್ಲ ಸಮುದಾಯಗಳ ಪಾಲುದಾರಿಕೆಯನ್ನು ಪಡೆದುಕೊಳ್ಳುವ ಸಮಗ್ರ ಆಂದೋಲನವಾಗಬೇಕು ಎಂಬಂಥ ಆಶಯ ಸರಿ. ಆದರೆ ರಾಜ್ಯದಲ್ಲಿ ಆಳುತ್ತಿರುವ ಪಕ್ಷದ ಪರವಾಗಿ ಸೂಚ್ಯವಾಗಿ ರಾಜಕೀಯ ನಿಲುವುಗಳನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಢಾಳಾಗಿ ಪ್ರದರ್ಶಿಸುವುದು ಅಗತ್ಯವಿತ್ತೇ ಎಂಬುದು ಪ್ರಶ್ನೆ. ರಾಜ್ಯಕ್ಕೆ ‘ಪ್ರಾದೇಶಿಕ ಪಕ್ಷ ಬೇಕೇ’ ಎಂಬ ಚಿಂತನೆಗೂ ದಶಕಗಳ ಇತಿಹಾಸವಿದೆ ಎಂಬುದನ್ನು ಪ್ರಸ್ತಾಪಿಸುತ್ತಾ ಸದ್ಯಕ್ಕೆ ‘ಹೊಸ ಪಕ್ಷದ ಸಾಧ್ಯತೆ ಕಾಣುತ್ತಿಲ್ಲ’ ಎನ್ನುತ್ತಾ ಬರಲಿರುವ ಚುನಾವಣೆಯಲ್ಲಿ ಆಯ್ಕೆ ಮಾಡಿಕೊಳ್ಳಬೇಕಾದ ರಾಷ್ಟ್ರೀಯ ಪಕ್ಷವನ್ನು ಹೇಗೆ ಒರೆಗಲ್ಲಿಗೆ ಹಚ್ಚಬೇಕು ಎಂದು ಕರೆ ನೀಡುತ್ತಾ ‘ವೈಯಕ್ತಿಕ ನೆಲೆಯ ವಿಚಾರ ಲಹರಿ ಇದು’ ಎಂದು ಸಮ್ಮೇಳನಾಧ್ಯಕ್ಷರು ಅಧ್ಯಕ್ಷ ಭಾಷಣದಲ್ಲಿ ಹೇಳಿರುವುದು ಅಪ್ರಸ್ತುತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry