6

ಮೀಸಲು ವಿರೋಧಿಸುವುದು ಸಮಾನತೆ ವಿರೋಧಿಸಿದಂತೆ: ಲೇಖಕಿ ಡಾ. ಧರಣಿದೇವಿ ಮಾಲಗತ್ತಿ ಅಭಿಮತ

Published:
Updated:
ಮೀಸಲು ವಿರೋಧಿಸುವುದು ಸಮಾನತೆ ವಿರೋಧಿಸಿದಂತೆ: ಲೇಖಕಿ ಡಾ. ಧರಣಿದೇವಿ ಮಾಲಗತ್ತಿ ಅಭಿಮತ

ಮೈಸೂರು: ‘ದಲಿತರಿಗೆ ಸಿಗಬೇಕಾದ ಮೀಸಲಾತಿಯನ್ನು ವಿರೋಧಿಸುವುದು ಸಮಾನತೆಯನ್ನೂ ವಿರೋಧಿಸಿದಂತೆ’ ಎಂದು ಲೇಖಕಿ ಡಾ. ಧರಣಿದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು.

‘ದಲಿತ ಲೋಕ ದೃಷ್ಟಿ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಮಾಧ್ಯಮಗಳಲ್ಲಿ ಮೀಸಲಾತಿ ವಿರುದ್ಧ ಜನಾಭಿಪ್ರಾಯ ರೂಪಿಸುವ ಕೆಲಸ ನಡೆಯುತ್ತಿದೆ. ದಲಿತರಿಗೆ ಸಿಗಬೇಕಾದ ಆಡಳಿತಾತ್ಮಕ ಪ್ರಾತಿನಿಧ್ಯ ಇನ್ನೂ ಸಿಕ್ಕಿಲ್ಲ. ಸಮಾನತೆ ಇನ್ನೂ ಸಾಕಾರವಾಗದ ಸಂದರ್ಭದಲ್ಲಿ ಮೀಸಲಾತಿ ವಿರೋಧಿಸುವುದು ಸರಿಯಲ್ಲ’ ಎಂದರು.

‘ದಲಿತರ ಸಮಸ್ಯೆಗಳ ಬಗ್ಗೆ ಮಾತನಾಡುವಾಗ ವ್ಯವಸ್ಥೆಯ ಬೇರಿನಲ್ಲಿರುವ ಲೋಪಗಳನ್ನು ಗಮನಿಸಬೇಕು. ಮೀಸಲಾತಿ ಬಗ್ಗೆ ಮಾತನಾಡುವಾ

ಗೆಲ್ಲಾ ಸಾಮಾಜಿಕ ಸಮಾನತೆಯ ಕಡೆಗೆ ಗಮನ ಇರಬೇಕೇ ಹೊರತು ಆರ್ಥಿಕ ಸಮಾನತೆಯ ಬಗ್ಗೆ ಅಲ್ಲ’ ಎಂದು ನುಡಿದರು.

‘ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವುದು ಉದ್ಯಮಗಳ ಸಾಮಾಜಿಕ ಜವಾಬ್ದಾರಿ. ಖಾಸಗಿ ವಲಯದಲ್ಲಿ ಮೀಸಲಾತಿ ನೀಡಿದರೆ ಬಂಡವಾಳ ಹಿಂಜರಿತ ಉಂಟಾಗುತ್ತದೆ ಎಂದು ‘ಅಸೋಚಾಂ’ ಹೇಳಿದೆ. ಇದು ಆರೋಗ್ಯಕರವಾದ ವಿಶ್ಲೇಷಣೆ ಅಲ್ಲ. ಬಂಡವಾಳ ಹಿಂಜರಿತಕ್ಕೆ ಮೀಸಲಾತಿ ಸೂಕ್ತ ಕಾರಣ ಅಲ್ಲ’ ಎಂದರು.

‘ಸಮಾನತೆ ಬರಬೇಕಾದರೆ ಮೊದಲು ಅಸಮಾನತೆ ಹೋಗಬೇಕು. ತಳ ಸಮುದಾಯಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಬೇಕು. ಈ ಬಗ್ಗೆ ಪೂರ್ವಗ್ರಹ ಬಿಟ್ಟು ಯೋಚಿಸಬೇಕು. ದಲಿತರು ಬಯಸುವುದು ತೀವ್ರತರವಾದ ಬದಲಾವಣೆಯನ್ನು. ಮೀಸಲಾತಿ ವಿರುದ್ಧದ ಅಸಮಾಧಾನವು ದ್ವೇಷ, ಹಿಂಸೆಗೆ ಕಾರಣವಾಗುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.

ವಿಮರ್ಶಕ ಡಾ. ಎಚ್. ದಂಡಪ್ಪ ಮಾತನಾಡಿ, ‘ದಲಿತ ಚಳವಳಿಯ ಮುಂದುವರಿದ ಭಾಗವಾಗಿ ದಲಿತ ಸಾಹಿತ್ಯ ಬೆಳೆಯಿತು. ದಲಿತ ಚಳವಳಿಯಲ್ಲಿ ದಲಿತ ಸಂಘರ್ಷ ಸಮಿತಿ ಬಹು ಮುಖ್ಯವಾದ ಪಾತ್ರ ವಹಿಸಿತ್ತು. ಆದರೆ, ಈಗ ದಲಿತ ಸಂಘಟನೆಗಳು ನಾಯಿಕೊಡೆಗಳಂತೆ ಹೆಚ್ಚಾಗಿವೆ. ದಲಿತರ ಮೇಲೆ ಹಿಂದುತ್ವದ ನಿರಂತರ ದಾಳಿ ನಡೆಯುತ್ತಿದೆ. ದಲಿತ ಹೋರಾಟದ ಸ್ವರೂಪ ಈಗ ಬದಲಾಗಬೇಕು. ಈ ಬಗ್ಗೆ ಪುನರ್ ಅವಲೋಕನ ಅಗತ್ಯ’ ಎಂದರು.

‘ದಲಿತ ಚಳವಳಿಗೆ ಈಗ ಸಮರ್ಥವಾದ ನಾಯಕತ್ವಬೇಕು. ಅಂಬೇಡ್ಕರ್ ಸಿದ್ಧಾಂತವನ್ನು ಸಂಪೂರ್ಣವಾಗಿ ಅಳವಡಿಸಿಕೊಂಡು ದಲಿತ ಚಳವಳಿ ಮುಂದುವರಿಯಬೇಕು. ದಲಿತರು ಇಂದು ಅಧಿಕಾರದ ವಿವಿಧ ಹಂತಗಳಲ್ಲಿ ಇದ್ದಾರೆ. ಆದರೆ, ಇನ್ನೂ ಸಮಾನತೆ ಸಾಧ್ಯವಾಗಿಲ್ಲ’ ಎಂದು ಹೇಳಿದರು.

ನಿವೃತ್ತ ಐಎಎಸ್‌ ಅಧಿಕಾರಿ ಆರ್.ಬಿ. ಅಗವಾನೆ ಮಾತನಾಡಿ, ‘ಬಂಡಾಯದ ಶಕ್ತಿ ಮತ್ತು ಯುಕ್ತಿ ಹಿಂದಿನ ತಳ ಸಮುದಾಯದವರಿಗೆ ಇರಲಿಲ್ಲ. ಹಿಂದೆ ರಾಜ್ಯಗಳ ಒಕ್ಕೂಟದ ರಾಷ್ಟ್ರ ಇರಲಿಲ್ಲ. ಜಾತಿಗಳ ಸಮೂಹದ ದೇಶ ಇತ್ತು. ದೇಶದ ಎಲ್ಲಾ ಕಡೆಯೂ ಜಾತಿ ಸಂಘರ್ಷವು ಬೂದಿ ಮುಚ್ಚಿದ ಕೆಂಡದಂತಿದೆ. ಶಿಕ್ಷಣದಿಂದ ದಲಿತರು ಸಾಮಾಜಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಆದರೆ, ಜಾತಿ ಮೀರಲು ಸಾಧ್ಯವಾಗುವುದಿಲ್ಲ’ ಎಂದರು.

‘ಕೆಲವು ದಲಿತರು ತಾವು ದಲಿತರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ, ಮೇಲ್ಜಾತಿಯವರನ್ನು ಮದುವೆಯಾಗಿರುತ್ತಾರೆ. ದಲಿತರಲ್ಲಿರುವ ಅನೇಕ ಜಾತಿಗಳಲ್ಲೇ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು. ಜಾತಿಯ ಕಾರಣಕ್ಕಾಗಿ ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ದಲಿತರ ಕೊಲೆಗಳು ಹೆಚ್ಚಾಗುತ್ತಿವೆ’ ಎಂದು ಹೇಳಿದರು.

ಲೇಖಕ ಡಾ. ಶಿವರುದ್ರ ಕಲ್ಲೋಳಿಕರ ಮಾತನಾಡಿ, ‘ಅಂಬೇಡ್ಕರ್ ಅವರು ಕಾಂಗ್ರೆಸ್ ಸೇರಲಿಲ್ಲ ಎಂಬ ಕಾರಣಕ್ಕೆ ಅವರನ್ನು ಬ್ರಿಟಿಷರ ಚೇಲಾ, ದೇಶ

ದ್ರೋಹಿ ಎಂದು ಅಪಪ್ರಚಾರ ಮಾಡಲಾಯಿತು. ಆರ್ಥಿಕತೆಯ ಆಧಾರದ ಮೇಲೆ ಮೀಸಲಾತಿ ಜಾರಿಗೆ ಬರಬೇಕು ಎಂಬ ಒತ್ತಡ ಈಗ ಹೆಚ್ಚಾಗಿದೆ. ರಾಜಕೀಯ ಪಕ್ಷಗಳಲ್ಲೂ ಅಸ್ಪೃಶ್ಯತೆ ಇದೆ. ಮಾಧ್ಯಮ ಹಾಗೂ ದಲಿತರ ನಡುವೆ ದೊಡ್ಡ ಅಂತರ ಇದೆ’ ಎಂದರು.

* ಊರಿನಲ್ಲಿ ಕೇರಿಗಳು ಇರುವವರೆಗೂ ಸಮಾನತೆ ಸಾಧ್ಯವಿಲ್ಲ.

–ಆರ್.ಬಿ. ಅಗವಾನೆ, ನಿವೃತ್ತ ಐಎಎಸ್‌ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry