ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗುಲ್ಲಾ: ಸಿಹಿ, ಕಹಿ

Last Updated 24 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಜನಪ್ರಿಯ ಸಿಹಿತಿನಿಸು ರಸಗುಲ್ಲಾ ‘ಭೌಗೋಳಿಕ ಮಾನ್ಯತೆ’ಯ ಕಾರಣಕ್ಕಾಗಿ ಈಗ ಸುದ್ದಿಯಲ್ಲಿದೆ. ಕೇವಲ ಬಂಗಾಳೀಯರ ನೆಚ್ಚಿನ ತಿನಿಸಾಗಷ್ಟೇ ಉಳಿಯದೆ, ದೇಶ ವಿದೇಶಗಳಲ್ಲೂ ಸಿಹಿತಿಂಡಿ ಪ್ರಿಯರ ಜಿಹ್ವಾ ಚಾಪಲ್ಯ ತಣಿಸುತ್ತಿರುವ ಈ ಚೀಸ್ ಆಧಾರಿತ ಹಾಲಿನ ಉತ್ಪನ್ನ ಈಗ ಬೃಹತ್ ಉದ್ಯಮವಾಗಿ ಬೆಳೆದುನಿಂತಿದೆ. ಹೀಗಾಗಿಯೇ, ರಸಗುಲ್ಲಾದ ಭೌಗೋಳಿಕ ಒಡೆತನಕ್ಕಾಗಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ನಡುವಿನ ತಿಕ್ಕಾಟ ಪ್ರತಿಷ್ಠೆಯ ಪ್ರಶ್ನೆಯಾಗಷ್ಟೇ ಉಳಿದಿಲ್ಲ.

ಇದು ಉಭಯ ರಾಜ್ಯಗಳ ಜನರ ನಡುವಿನ ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಸಂಘರ್ಷದಂತೆ ಮೇಲ್ನೋಟಕ್ಕೆ ಕಂಡುಬಂದರೂ, ಇಂತಹದ್ದೊಂದು ಮಾನ್ಯತೆಯನ್ನು ಆರ್ಥಿಕ ಲಾಭವಾಗಿ ಪರಿವರ್ತಿಸಿಕೊಳ್ಳುವ ಹವಣಿಕೆಯೂ ಇದರ ಹಿಂದಿದೆ.

ಈ ಸಂಘರ್ಷದಲ್ಲಿ ಒಡಿಶಾಕ್ಕೆ ಸೋಲುಂಟಾಗಿದೆಯೇ?
ಇಲ್ಲಿ ಸೋಲು ಗೆಲುವಿನ ಪ್ರಶ್ನೆಯೇ ಬಾರದು. ಏಕೆಂದರೆ ಈಗ ನಿರ್ಧಾರವಾಗಿರುವುದು ರಸಗುಲ್ಲಾದ ಜನ್ಮಸ್ಥಳ ಯಾವುದು ಎಂಬುದಲ್ಲ. ಈ ಸಿಹಿ ತಿನಿಸಿನ ಮಾದರಿಗಳಲ್ಲಿ ಒಂದಾದ ‘ಬಾಂಗ್ಲಾರ್ ರಸಗುಲ್ಲಾ’ದ ಭೌಗೋಳಿಕ ಒಡೆತನ ಪಶ್ಚಿಮ ಬಂಗಾಳಕ್ಕೆ ಸೇರಿದ್ದು ಎಂಬುದಷ್ಟೇ. ಆದರೂ ರಸಗುಲ್ಲಾದ ಮೂಲನೆಲೆ ತನ್ನದೇ ಎಂದು ಸಾಬೀತುಪಡಿಸಲು ಎರಡೂ ರಾಜ್ಯಗಳು ಸತತ ಪ್ರಯತ್ನ ಮಾಡುತ್ತಲೇ ಬಂದಿವೆ. ಇದಕ್ಕಾಗಿ ಅವು ತಮ್ಮದೇ ವಾದ ಸರಣಿಗಳನ್ನು ಮುಂದಿಡುತ್ತವೆ.

ಈ ಸಂಘರ್ಷದ ಮೂಲ ಯಾವುದು?
ರಸಗುಲ್ಲಾದ ಹುಟ್ಟು ಎಲ್ಲಿಯೇ ಆಗಿದ್ದರೂ ಅದೀಗ ‘ಬಂಗಾಳಿ ಸಿಹಿ’ ಎಂದೇ ಜಗಜ್ಜನಿತ. ಇದರ ಇನ್ನಷ್ಟು ಲಾಭ ಪಡೆಯಲು ಮುಂದಾದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ, ಜಾಗತಿಕ ಆಹಾರ ವೇದಿಕೆಯಲ್ಲಿ ರಸಗುಲ್ಲಾಕ್ಕೆ ಪ್ರಮುಖ ಸ್ಥಾನ ಕಲ್ಪಿಸುವ ಸಲುವಾಗಿ ಭೌಗೋಳಿಕ ಮಾನ್ಯತೆ ಕೋರಿ 2015ರಲ್ಲಿ ಅರ್ಜಿ ಸಲ್ಲಿಸಿತು. ಆಯಾ ರಾಜ್ಯದೊಟ್ಟಿಗೆ ತಳಕು ಹಾಕಿಕೊಂಡ ಜನಪ್ರಿಯತೆಯೊಂದೇ ಆ ಉತ್ಪನ್ನದ ಒಡೆತನದ ಹಕ್ಕು ಪಡೆಯಲು ಮಾನದಂಡವಾಗದು ಎಂದು ಒಡಿಶಾ ಪ್ರತಿಪಾದಿಸಿತು.

ತನ್ನ ನೆಲದಲ್ಲಿ ರಸಗುಲ್ಲಾದ ಇತಿಹಾಸ ಕೆದಕಲು ಸರಣಿ ಸಮಿತಿಗಳನ್ನೇ ಅದು ರಚಿಸಿತು. ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ವಿದ್ವಾಂಸ, ಸಂಶೋಧಕ ಅಸಿತ್ ಮೊಹಂತಿ ನೇತೃತ್ವದ ಸಮಿತಿ, ಒಡಿಯಾ ಭಾಷೆಯಲ್ಲಿರುವ 16ನೇ ಶತಮಾನದ ದಂಡಿ ರಾಮಾಯಣದಲ್ಲಿ ‘ಖೀರ್ ಮೋಹನ’ದ (ನಂತರದ ದಿನಗಳಲ್ಲಿ ‘ಪಹಲಾ ರಸಗುಲ್ಲಾ’ ಎಂದು ಹೆಸರಾದ) ಉಲ್ಲೇಖವಿರುವುದನ್ನು,

1924ರಲ್ಲಿ ಕಲ್ಕಟಾ ವಿಶ್ವವಿದ್ಯಾಲಯ ಪ್ರಕಟಿಸಿರುವ ಒಡಿಯಾ ಸಾಹಿತ್ಯದಲ್ಲಿ ಈ ಸಿಹಿಯ ಮೂಲ ಒಡಿಶಾ ಎಂಬ ದಾಖಲೆಗಳಿರುವುದನ್ನು ಎತ್ತಿ ಹಿಡಿದಿದೆ. ರಾಜ್ಯದ ಹಲವು ದೇವಾಲಯಗಳು ಮತ್ತು ಮಠಗಳಲ್ಲಿ ನೈವೇದ್ಯಕ್ಕೆ ರಸಗುಲ್ಲಾವನ್ನು ಇಡುವ 600 ವರ್ಷಗಳ ಸಂಪ್ರದಾಯ
ವನ್ನು, ಭುವನೇಶ್ವರ- ಕಟಕ್ ಹೆದ್ದಾರಿಯಲ್ಲಿ ಸಿಗುವ ‘ರಸಗುಲ್ಲಾ ಗ್ರಾಮ’ ಪಹಲಾದ ರಸ್ತೆಗುಂಟ ತಲೆಮಾರುಗಳಿಂದ ನಡೆಯುತ್ತಿರುವ ನೂರಾರು ರಸಗುಲ್ಲಾ ಅಂಗಡಿಗಳನ್ನು ತನ್ನ ವರದಿಯಲ್ಲಿ ಉದಾಹರಿಸಿದೆ.

ಇದಕ್ಕೆ ಪ್ರತಿಯಾಗಿ ಪಶ್ಚಿಮ ಬಂಗಾಳವು, ದೇಶ ವಿದೇಶಗಳಲ್ಲಿ ತನ್ನ ಘಟಕಗಳನ್ನು ಹೊಂದಿರುವ ಕೆ.ಸಿ.ದಾಸ್ ಸಿಹಿ ತಿನಿಸು ಮಳಿಗೆಯ ಸಂಸ್ಥಾಪಕ ನಬಿನ್ ಚಂದ್ರ ದಾಸ್ ಅವರು ಪೋರ್ಚುಗೀಸರಿಂದ ಕಲಿತ ಚೀಸ್ ಬಳಸಿ 1868ರಲ್ಲಿ ರಸಗುಲ್ಲಾ ಕಂಡುಹಿಡಿದಿದ್ದಕ್ಕೆ ಸಂಶೋಧಕರ ದೃಢೀಕರಣಗಳನ್ನು ಮುಂದಿಡುತ್ತದೆ. 18ನೇ ಶತಮಾನಕ್ಕೂ ಮುನ್ನ, ರಸಗುಲ್ಲಾಕ್ಕೆ ಅತ್ಯಗತ್ಯವಾದ ಚೀಸ್ ಬಳಕೆಯೇ ಭಾರತದಲ್ಲಿ ಇರಲಿಲ್ಲ ಎಂಬ ಆಹಾರ ಇತಿಹಾಸಕಾರರ ಅಧ್ಯಯನ ವರದಿಗಳನ್ನು ಉದಾಹರಿಸುತ್ತದೆ.

ಏನಿದು ಭೌಗೋಳಿಕ ಮಾನ್ಯತೆ?
ವಿಶ್ವ ವಾಣಿಜ್ಯ ಸಂಘಟನೆಯ (ಡಬ್ಲ್ಯುಟಿಒ) ಸದಸ್ಯ ರಾಷ್ಟ್ರವಾಗಿರುವ ಭಾರತ 2003ನೇ ಸೆಪ್ಟೆಂಬರ್ 15ರಿಂದ ಅನ್ವಯವಾಗುವಂತೆ ಜಿಯೊಗ್ರಾಫಿಕಲ್ ಇಂಡಿಕೇಷನ್ಸ್ ಆಫ್ ಗೂಡ್ಸ್ (ರೆಜಿಸ್ಟ್ರೇಷನ್ ಅಂಡ್ ಪ್ರೊಟೆಕ್ಷನ್) ಕಾಯ್ದೆ 1999ನ್ನು ಜಾರಿಗೆ ತಂದಿದೆ. ನಿರ್ದಿಷ್ಟ ಪ್ರದೇಶದಲ್ಲಿ ಪಾರಂಪರಿಕ ವಿಧಾನದಲ್ಲಿ ತಯಾರಾಗುವ, ತನ್ನದೇ ವಿಶಿಷ್ಟ ಗುಣಗಳನ್ನುಳ್ಳ ಉತ್ಪನ್ನಗಳಿಗೆ ಕೇಂದ್ರದ ಐಪಿಆರ್ ಪ್ರೊಮೋಷನ್ ಆಂಡ್ ಮ್ಯಾನೇಜ್‍ಮೆಂಟ್ ಘಟಕದಿಂದ (ಸಿಐಪಿಎಎಂ) ಇಂತಹ ಮಾನ್ಯತೆ ಲಭಿಸುತ್ತದೆ.

ಇದು ಒಂದು ರೀತಿ, ಬೌದ್ಧಿಕ ಹಕ್ಕುಸ್ವಾಮ್ಯದಡಿ ಬರುವ ಪೇಟೆಂಟ್, ಕಾಪಿರೈಟ್, ಟ್ರೇಡ್‍ಮಾರ್ಕ್‍ಗಳನ್ನೇ ಹೋಲುವ ಹಕ್ಕುಗಳನ್ನು ಹೊಂದಿದೆ. ಮೂಲ ಉತ್ಪನ್ನಗಳ ಹೆಸರನ್ನು ಅದೇ ಮಾದರಿಯ ಇತರ ಉತ್ಪನ್ನಗಳಿಗೆ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶ ಇದರ ಹಿಂದಿದೆ.

ಒಡಿಶಾ ಮುಂದೇನು ಮಾಡಬಹುದು?
ತನ್ನ ಖ್ಯಾತ ‘ಪಹಲಾ ರಸಗುಲ್ಲಾ’ಕ್ಕೆ ‘ಜಗನ್ನಾಥ ರಸಗುಲ್ಲಾ’ ಎಂಬ ಹೊಸ ಹೆಸರಿನಲ್ಲಿ ಭೌಗೋಳಿಕ ಮಾನ್ಯತೆ ಪಡೆಯಲು ಪ್ರಯತ್ನಿಸುವುದಾಗಿ ಒಡಿಶಾ ಸರ್ಕಾರ ಘೋಷಿಸಿದೆ. ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಅದಕ್ಕೆ ಅಂತಹ ಮಾನ್ಯತೆ ದೊರೆಯುವ ಸಾಧ್ಯತೆ ಇದ್ದೇ ಇದೆ.

‘ಮೈಸೂರ್ ಪಾಕ್’ ನ ಭೌಗೋಳಿಕ ಒಡೆತನಕ್ಕೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಜಟಾಪಟಿ ಆರಂಭವಾಗಿದೆಯೇ?
ಇಲ್ಲ, ಇದು ಸಾಮಾಜಿಕ ಮಾಧ್ಯಮಗಳ ಸೃಷ್ಟಿಯಷ್ಟೇ.

ಭೌಗೋಳಿಕ ಮಾನ್ಯತೆ ಪಡೆದಿರುವ ಇತರ ಉತ್ಪನ್ನಗಳಾವುವು?
ದೇಶದಲ್ಲಿ ಮೊದಲು ಇಂತಹ ಮಾನ್ಯತೆಗೆ ಪಾತ್ರವಾದದ್ದು ಡಾರ್ಜಿಲಿಂಗ್ ಟೀ. ಅಲ್ಲಿಂದೀಚೆಗೆ ತಿರುಪತಿ ಲಡ್ಡು, ಮಹಾಬಲೇಶ್ವರದ ಸ್ಟ್ರಾಬೆರ್‍ರಿ, ಬನಾರಸ್ ಸೀರೆ ಸೇರಿದಂತೆ ಸುಮಾರು 300 ಉತ್ಪನ್ನಗಳಿಗೆ ಇಂತಹ ಮಾನ್ಯತೆ ದಕ್ಕಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಅಂತಹವುಗಳಲ್ಲಿ ಪ್ರಮುಖವಾದವು: ಮೈಸೂರು ಸಿಲ್ಕ್, ಮೈಸೂರು ಅಗರಬತ್ತಿ, ನಂಜನಗೂಡಿನ ಬಾಳೆ, ಚನ್ನಪಟ್ಟಣದ ಗೊಂಬೆ, ಕೊಡಗಿನ ಕಿತ್ತಳೆ, ಮೈಸೂರು ವೀಳ್ಯದೆಲೆ, ಇಳಕಲ್ ಸೀರೆ, ಧಾರವಾಡ ಪೇಡ, ಮಲಬಾರ್ ಅರೇಬಿಕಾ ಮತ್ತು ರೊಬಸ್ಟಾ ಕಾಫಿ, ಉಡುಪಿ ಮಟ್ಟು ಗುಳ್ಳ ಬದನೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT