ಇಂದಿರಾ ಕ್ಯಾಂಟಿನ್‌ಗೆ ಭರದ ಸಿದ್ಧತೆ

6

ಇಂದಿರಾ ಕ್ಯಾಂಟಿನ್‌ಗೆ ಭರದ ಸಿದ್ಧತೆ

Published:
Updated:
ಇಂದಿರಾ ಕ್ಯಾಂಟಿನ್‌ಗೆ ಭರದ ಸಿದ್ಧತೆ

ಬೀದರ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ‘ಇಂದಿರಾ ಕ್ಯಾಂಟಿನ್’ ಆರಂಭಿಸಲು ಜಿಲ್ಲೆಯಲ್ಲಿ ಭರದ ಸಿದ್ಧತೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಕ್ಯಾಂಟಿನ್‌ಗೆ ಜಾಗ ಗುರುತಿಸಿ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದ್ದು, ಅಧಿಕಾರಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಜನನಿಬಿಡ ಪ್ರದೇಶದಲ್ಲಿ ಕ್ಯಾಂಟಿನ್ ಆರಂಭಿಸಲು ಸೂಚನೆ ನೀಡಿರುವುದರಿಂದ ಅಧಿಕಾರಿಗಳು ಬೀದರ್‌ನಲ್ಲಿ ನಗರಸಭೆಯ ಆವರಣದಲ್ಲೇ ಜಾಗ ಗುರುತಿಸಿದ್ದಾರೆ. ನಗರಸಭೆಯ ಆವರಣದಲ್ಲಿ ಲಾರಿ, ಕ್ಯಾಂಟರ್‌ಗಳು ನಿಲುಗಡೆಯಾಗುವ ಸ್ಥಳದಲ್ಲಿ ಚಿಕ್ಕದಾದ ಕಟ್ಟಡ ನಿರ್ಮಿಸಿ ಕ್ಯಾಂಟಿನ್ ಆರಂಭಿಸಲು ನಿರ್ಧರಿಸಿದ್ದಾರೆ. ಡಿಡಿಪಿಐ ಕಚೇರಿ ಮುಂಭಾಗದ ರಸ್ತೆಗೆ ಹೊಂದಿಕೊಂಡಿರುವ ಆವರಣ ಗೋಡೆಯನ್ನು ಒಡೆದು ಪ್ರವೇಶ ದ್ವಾರ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ.

‘ಜಿಲ್ಲಾಧಿಕಾರಿ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ, ಕೃಷಿ ಇಲಾಖೆ ಕಚೇರಿ, ಪ್ರಧಾನ ಅಂಚೆ ಕಚೇರಿ, ಸೈನಿಕ ಪುನರ್ವಸತಿ ಕಲ್ಯಾಣ ಇಲಾಖೆ ಕಚೇರಿ, ವಾರ್ತಾ ಇಲಾಖೆ ಕಚೇರಿ, ರೈಲು ನಿಲ್ದಾಣ ಹಾಗೂ ಹಳೆಯ ಬಸ್‌ ನಿಲ್ದಾಣದ ಸಮೀಪ ಇರುವ ಕಾರಣ ನಗರಸಭೆ ಕಚೇರಿ ಆವರಣದಲ್ಲಿ ಜಾಗ ಗೊತ್ತುಪಡಿಸಲಾಗಿದೆ. ಜಿಲ್ಲಾ ಆಡಳಿತ ಇದಕ್ಕೆ ಒಪ್ಪಿಗೆಯನ್ನೂ ಸೂಚಿಸಿದೆ’ ಎನ್ನುತ್ತಾರೆ ನಗರಸಭೆ ಎಇಇ ಮೊಯಿಸ್ ಹುಸೇನ್‌. 

‘ಕೇಂದ್ರ ಬಸ್‌ ನಿಲ್ದಾಣ ಪ್ರವೇಶ ದ್ವಾರದ ಎಡಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಜಾಗದಲ್ಲಿ ಹಾಗೂ ಬಸವೇಶ್ವರ ವೃತ್ತದ ಬಳಿ ವಾಹನ ನಿಲುಗಡೆಯಾಗುವ ಸ್ಥಳದಲ್ಲೂ ಕ್ಯಾಂಟಿನ್ ಶುರು ಮಾಡಲಾಗುವುದು. ಹೊಸ ವರ್ಷದ ಮೊದಲ ದಿನ ಬೀದರ್‌ ನಗರದಲ್ಲಿ ಮೂರು ಕ್ಯಾಂಟಿನ್ಗಳು ಆರಂಭವಾಗಲಿವೆ. ನಗರಸಭೆಯ ಆವರಣದಲ್ಲಿ ಅಡುಗೆ ಕೋಣೆ ನಿರ್ಮಿಸಿ ಅಲ್ಲಿಯೇ ಊಟ, ಉಪಾಹಾರ ಸಿದ್ಧಪಡಿಸಲಾಗುವುದು. ಇಲ್ಲಿಂದಲೇ ಕ್ಯಾಂಟಿನ್‌ಗಳಿಗೆ ತಲುಪಿಸಲಾಗುವುದು’ ಎಂದು ಹೇಳುತ್ತಾರೆ ಬೀದರ್‌ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ.

ಭಾಲ್ಕಿಯ ಕೃಷಿ ಭವನದ ಆವರಣ, ಔರಾದ್‌ನ ಸಣ್ಣ ನೀರಾವರಿ ಇಲಾಖೆಯ ಜಾಗ, ಹುಮನಾಬಾದ್‌ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣ ಹಾಗೂ ಬಸವಕಲ್ಯಾಣದ ನಾರಾಯಣಪುರ ಕ್ರಾಸ್‌ನಲ್ಲಿರುವ ನಗರಸಭೆಯ ಜಾಗದಲ್ಲಿ ಕ್ಯಾಂಟಿನ್ ಆರಂಭಿಸಲು ನಿರ್ಧರಿಸಲಾಗಿದೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ಯೋಜನೆ ಅನುಷ್ಠಾನದ ಹೊಣೆ ವಹಿಸಲಾಗಿದೆ. ಬೆಂಗಳೂರಿನ ಏಜೆನ್ಸಿ ಜಿಲ್ಲೆಯಲ್ಲಿ ಒಂದೇ ಮಾದರಿಯಲ್ಲಿ ಕ್ಯಾಂಟಿನ್‌ಗಳನ್ನು ನಿರ್ಮಿಸಲಿದೆ.

ನಂದಿನಿ ಮಿಲ್ಕ್ ಪಾರ್ಲರ್‌ ಮಾದರಿಯಲ್ಲಿ ಕ್ಯಾಂಟಿನ್ ನಿರ್ಮಿಸಿದರೆ ಸಾರ್ವಜನಿಕರು ಸುಲಭವಾಗಿ ಅವುಗಳನ್ನು ಗುರುತಿಸಲು ಸಾಧ್ಯವಾಗಲಿದೆ. ಹೆಚ್ಚು ಜನರಿಗೆ ಅನುಕೂಲವಾಗಲಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಕ್ಯಾಂಟಿನ್ ರೆಡಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

* * 

ಇಂದಿರಾ ಕ್ಯಾಂಟಿನ್‌ನಲ್ಲಿ ಬೆಳಗಿನ ಉಪಾಹಾರ ₹ 5ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟ ₹ 10ಗೆ ದೊರೆಯಲಿದೆ.

ಬಲಭೀಮ ಕಾಂಬಳೆ

ಡಿಯುಡಿಸಿ ಯೋಜನಾ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry