ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಹೈಕೋರ್ಟ್‌ ಅಂಗಳಕ್ಕೆ ಬಂದ ‘ವಿವಾದ’

Last Updated 25 ನವೆಂಬರ್ 2017, 6:51 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಕೋರಿ 22ನೇ ವಾರ್ಡ್‌ನ ಸದಸ್ಯೆ ಶ್ವೇತಾ ಮಂಜುನಾಥ್‌ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ಇತ್ತೀಚೆಗೆ ತಿರಸ್ಕರಿಸಿದೆ.

ಇದೇ ವೇಳೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಜನವರಿ 15ರ ಒಳಗೆ ಈ ಪ್ರಕರಣ ಇತ್ಯರ್ಥಗೊಳಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ.

ಸುಪ್ರಿಂ ಕೋರ್ಟ್‌ನಲ್ಲಿ ಇತ್ತೀಚೆಗೆ ನಡೆದ ಪ್ರಕರಣದ ವಿಚಾರಣೆಗೆ 7ನೇ ವಾರ್ಡ್ ಸದಸ್ಯ ಎಂ.ಮುನಿಕೃಷ್ಣಪ್ಪ ಅವರ ಪರವಾಗಿ ವಕೀಲ ಸಂಜಯ್ ನೂಲಿ ಅವರೊಂದಿಗೆ ಹಿರಿಯ ವಕೀಲ ಮನೋಜ್ ಪ್ರಸಾದ್ ಹಾಜರಾಗಿದ್ದರು. ಶ್ವೇತಾ ಮಂಜುನಾಥ್ ಪರವಾಗಿ ವಕೀಲ ಎಚ್‌.ಚಂದ್ರಶೇಖರ್‌ ಅವರೊಂದಿಗೆ ಹಿರಿಯ ವಕೀಲ ಸುಶೀಲ್‌ ಕುಮಾರ್ ಜೈನ್‌ ಹಾಜರಾಗಿದ್ದರು.

ಈ ವೇಳೆ ಪೀಠವು ‘ನಾವು ಚುನಾವಣೆಗೆ ತಡೆಯಾಜ್ಞೆ ನೀಡುವುದಿಲ್ಲ. ಆದರೆ ಹೈಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಚುನಾವಣೆಗೆ ತಡೆಯಾಜ್ಞೆ ಇರಲಿದೆ’ ಎಂದು ಹೇಳಿದೆ. ಹೀಗಾಗಿ ಸದ್ಯ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆ ಪ್ರಶ್ನಿಸಿ ನಡೆಸಿದ ಹೋರಾಟದ ಚೆಂಡು ಪುನಃ ಹೈಕೋರ್ಟ್ ಅಂಗಳಕ್ಕೆ ಬಂದಂತಾಗಿದೆ.

ಏನಿದು ಪ್ರಕರಣ?: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಎರಡನೆಯ ಅವಧಿಯ ಚುನಾವಣೆಗಾಗಿ 2016ರ ಫೆಬ್ರುವರಿ 24 ರಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎಂಬಿ ಮಹಿಳೆಗೆ ಮೀಸಲಾಗಿತ್ತು. ಇದರಿಂದಾಗಿ ನಗರಸಭೆಯ 31 ಸದಸ್ಯರ ಪೈಕಿ ಏಕೈಕ ಪರಿಶಿಷ್ಟ ಮಹಿಳೆಯಾಗಿರುವ ಶ್ವೇತಾ ಮಂಜುನಾಥ್‌ ಅವರಿಗೆ ಯಾವುದೇ ಸ್ಪರ್ಧೆ ಇಲ್ಲದೇ ಅಧ್ಯಕ್ಷ ಹುದ್ದೆ ಒಲಿಯಲಿದೆ ಎನ್ನುವ ಸಂತಸದಲ್ಲಿ ಜೆಡಿಎಸ್ ಸದಸ್ಯರಿದ್ದರು.

ಆದರೆ ಸರ್ಕಾರ ಮಾರ್ಚ್‌ 4 ರಂದು ಎರಡನೇ ಬಾರಿಗೆ ಹೊರಡಿಸಿದ ಅಧಿಸೂಚನೆಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಸಾಮಾನ್ಯ ಎಂದು ಬದಲಾಯಿಸಿದ್ದು, ಜೆಡಿಎಸ್‌ ಸದಸ್ಯರನ್ನು ಕೆರಳಿಸಿತ್ತು. ತಮ್ಮ ಕನಸು ಭಗ್ನಗೊಳ್ಳುತ್ತಿದ್ದಂತೆ ಕಾನೂನು ಹೋರಾಟಕ್ಕೆ ಮುಂದಾದ ಜೆಡಿಎಸ್‌ ಸದಸ್ಯರು 2016ರ ಆಗಸ್ಟ್‌ 8ರಂದು ಮೀಸಲಾತಿ ಬದಲಾವಣೆ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ಹಿಂದೆ ನಿಗದಿ ಪಡಿಸಿದ ಮೀಸಲಾತಿ ಬದಲಾವಣೆಯಿಂದ ನಮಗೆ ಅನ್ಯಾಯವಾಗಲಿದೆ. 2011ರ ಜನಗಣತಿ ಮತ್ತು 2016ನೇ ಸಾಲಿನ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ನಿಗದಿಪಡಿಸಿದ ಮಾರ್ಗಸೂಚಿ ಪ್ರಕಾರ ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾಗಿಡಬೇಕಾಗುತ್ತದೆ ಎಂದು ಕೋರ್ಟ್‌ನಲ್ಲಿ ವಾದಿಸಿದ ಜೆಡಿಎಸ್‌ ಸದಸ್ಯರು, ಆಗಸ್ಟ್‌ 24 ರಂದು ಚುನಾವಣೆ ವೇಳಾಪಟ್ಟಿಗೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಜೂನ್‌ 21 ರಂದು ಹೈಕೋರ್ಟ್‌ ಶ್ವೇತಾ ಮಂಜುನಾಥ್‌ ಅವರ ಅರ್ಜಿ ವಜಾಗೊಳಿಸಿ, ಎರಡನೇ ಬಾರಿಗೆ ಸರ್ಕಾರ ಮೀಸಲಾತಿ ಬದಲಾಯಿಸಿ ಹೊರಡಿಸಿದ ಅಧಿಸೂಚನೆಯನ್ನು ಎತ್ತಿಹಿಡಿದಿತ್ತು. ಇದರಿಂದಾಗಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದ ಶ್ವೇತಾ ಅವರು ಸುಪ್ರಿಂ ಕೋರ್ಟ್‌ಗೆ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಮೇಲ್ಮನವಿ ಸಲ್ಲಿಸಿದ್ದರು.

ನಗರಸಭೆಯಲ್ಲಿದ್ದ ಒಂಬತ್ತು ಜೆಡಿಎಸ್‌ ಸದಸ್ಯರ ಪೈಕಿ, ಈ ಕಾನೂನು ಸಮರ ಸಾರಿದ್ದ 22ನೇ ವಾರ್ಡ್‌ ಸದಸ್ಯೆ ಶ್ವೇತಾ ಮಂಜುನಾಥ್ ಅವರು ಸೇರಿದಂತೆ ಆರು ಸದಸ್ಯರು ದಿಢೀರ್‌ ಬೆಳವಣಿಗೆಯಲ್ಲಿ ಕಾಂಗ್ರೆಸ್ ‘ಕೈ’ ಹಿಡಿದಾಗ ಈ ಪ್ರಕರಣ ಶೀಘ್ರದಲ್ಲಿಯೇ ಅಂತ್ಯಗೊಳ್ಳಲಿದೆ ಎನ್ನುವ ಮಾತುಗಳು ನಗರಸಭೆಯ ಆವರಣದಲ್ಲಿ ಹರಿದಾಡಿದವು. ಇನ್ನೇನು ಆಡಳಿತಾಧಿಕಾರಿಯ ಅಧಿಕಾರ ಕೊನೆಗೊಂಡು, ಹೊಸ ಅಧ್ಯಕ್ಷರು ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ನಿರೀಕ್ಷೆ ಗರಿಗೆದರಿತ್ತು.

ಜೆಡಿಎಸ್‌ ತೊರೆದು ‘ಕೈ’ ಹಿಡಿದುಕೊಂಡರೂ ಶ್ವೇತಾ ಮಂಜುನಾಥ್‌ ಅವರು ಮಾತ್ರ ತಮ್ಮ ಕಾನೂನು ಸಮರ ಮಾತ್ರ ಕೈಬಿಟ್ಟಿಲ್ಲ. ನಾವು ಅಭಿವೃದ್ಧಿ ವಿಚಾರವಾಗಿ ಪಕ್ಷ ಬದಲಿಸಿದ್ದೇವೆ ವಿನಾ ಪಕ್ಷಾಂತರದ ಚರ್ಚೆ ವೇಳೆ ಅಧ್ಯಕ್ಷರ ಹುದ್ದೆಯ ವಿವಾದದ ವಿಚಾರ ಪ್ರಸ್ತಾಪವೇ ಆಗಿಲ್ಲ. ಅದೇ ಬೇರೆ, ಇದೇ ಬೇರೆ ಎನ್ನುತ್ತಿದ್ದಂತೆ ಅನೇಕರ ರಾಜಕೀಯ ‘ಲೆಕ್ಕಾಚಾರ’ ತಲೆಕೆಳಗಾಗಿದೆ.

ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಒಂದು ‘ಒಪ್ಪಂದ’ಕ್ಕೆ ಇಬ್ಬರನ್ನು ಒಪ್ಪಿಸಲು ಸುಧಾಕರ್ ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ, ಮುನಿಕೃಷ್ಣಪ್ಪ ಮತ್ತು ಶ್ವೇತಾ ಈ ಇಬ್ಬರ ಪೈಕಿ ಶೀಘ್ರದಲ್ಲಿಯೇ ಯಾರು ಅಧ್ಯಕ್ಷರ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ ಎನ್ನುವುದು ಸದ್ಯದ ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT