7

ಸರಿಯಾಗದ ಸಿ.ಟಿ.ಸ್ಕ್ಯಾನ್ , ಚಿಕಿತ್ಸೆಯಾಯ್ತು ‘ದುಬಾರಿ’!

Published:
Updated:
ಸರಿಯಾಗದ ಸಿ.ಟಿ.ಸ್ಕ್ಯಾನ್ , ಚಿಕಿತ್ಸೆಯಾಯ್ತು ‘ದುಬಾರಿ’!

ಚಿಕ್ಕಬಳ್ಳಾಪುರ: ಜಿಲ್ಲಾ ಆಸ್ಪತ್ರೆಯ ಸಿ.ಟಿ.ಸ್ಕ್ಯಾನ್ ಯಂತ್ರ ರಿಪೇರಿಗೆ ಬಂದ ಪರಿಣಾಮ ಕಳೆದ ಒಂದು ತಿಂಗಳಿಂದ ಸ್ಕ್ಯಾನಿಂಗ್‌ ಕೇಂದ್ರಕ್ಕೆ ಬೀಗ ಹಾಕಲಾಗಿದೆ. ಇದರಿಂದಾಗಿ ಆಸ್ಪತ್ರೆಗೆ ಬರುವ ಬಡ ಜನರು ದುಬಾರಿ ಶುಲ್ಕ ತೆತ್ತು ಖಾಸಗಿ ಕೇಂದ್ರಗಳಲ್ಲಿ ಸ್ಕ್ಯಾನಿಂಗ್‌ ಮಾಡಿಸಿಕೊಳ್ಳಬೇಕಾದ, ಬೆಂಗಳೂರಿಗೆ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸ್ಕ್ಯಾನಿಂಗ್‌ ಯಂತ್ರದ ಯುಪಿಎಸ್‌ ಹಾಳಾಗಿರುವ ಕಾರಣಕ್ಕೆ ಜಿಲ್ಲಾ ಆಸ್ಪತ್ರೆಯ ಹಳೆ ಕಟ್ಟಡದ ಆವರಣದಲ್ಲಿರುವ ಸ್ಕ್ಯಾನಿಂಗ್‌ ಕೇಂದ್ರದ ಬಾಗಿಲು ಮುಚ್ಚಿ, ಭಿತ್ತಿಪತ್ರವೊಂದನ್ನು ಅಂಟಿಸಲಾಗಿದೆ. ಇದರಿಂದಾಗಿ ಒಂದು ತಿಂಗಳಿಂದ ಆಸ್ಪತ್ರೆಗೆ ಈ ಸೌಲಭ್ಯಕ್ಕಾಗಿ ಬರುವವರೆಲ್ಲ ಖಾಸಗಿ ಸ್ಕ್ಯಾನಿಂಗ್ ಕೇಂದ್ರ ಹುಡುಕಿಕೊಂಡು ಹೋಗುವ ತಾಪತ್ರಯ ತಲೆದೋರಿದೆ.

ಸ್ಕ್ಯಾನಿಂಗ್‌ ಯಂತ್ರ ರಿಪೇರಿಯಲ್ಲಿರುವ ಕಾರಣಕ್ಕೆ ಸದ್ಯ ಜಿಲ್ಲಾ ಆಸ್ಪತ್ರೆ ವೈದ್ಯರು ರೋಗಿಗಳಿಗೆ ಕೋಲಾರ ಜಿಲ್ಲಾ ಆಸ್ಪತ್ರೆ ಮತ್ತು ಬೆಂಗಳೂರಿನ ವಿಕ್ಟೋರಿಯಾ, ನಿಮ್ಹಾನ್ಸ್‌ ಆಸ್ಪತ್ರೆಗಳಿಗೆ ಸ್ಕ್ಯಾನಿಂಗ್‌ ಮಾಡಿಸಿಕೊಂಡು ಬರುವಂತೆ ಸೂಚಿಸುತ್ತಿದ್ದಾರೆ. //ಇದರಿಂದಾಗಿ ‘ದುಬಾರಿ’ ಶುಲ್ಕ ಭರಿಸುವ ಶಕ್ತಿ ಇಲ್ಲದ ಬಡವರು ಅನಿವಾರ್ಯವಾಗಿ// ಕೋಲಾರ, ಬೆಂಗಳೂರಿಗೆ ತೆರಳುತ್ತಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಿರುವವರು ಮತ್ತು ಆರ್ಥಿಕವಾಗಿ ಚೆನ್ನಾಗಿರುವ ಜನರು ನಗರದಲ್ಲಿರುವ ಖಾಸಗಿ ಸ್ಕ್ಯಾನಿಂಗ್‌ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ. ‘ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಸಾರ್ವಜನಿಕರ ಸಮಯ ಮತ್ತು ಹಣ ಎರಡು ವ್ಯರ್ಥವಾಗುತ್ತಿವೆ. ಒಂದು ತಿಂಗಳು ಕಳೆದರೂ ಯಂತ್ರವೊಂದನ್ನು ದುರಸ್ತಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಸಾರ್ವಜನಿಕ ಆರೋಗ್ಯ ಸೇವೆ ಎನ್ನುವುದರಲ್ಲಿ ಏನಿದೆ ಅರ್ಥ’ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಸಿ.ಟಿ.ಸ್ಕ್ಯಾನ್‌ಗೆ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಪಡಿತರ ಚೀಟಿ ಹೊಂದಿರುವವರಿಗೆ ₹ 500 ಮತ್ತು ಬಡತನ ರೇಖೆಗಿಂತ ಮೇಲೆ (ಎಪಿಎಲ್) ಇರುವವರಿಂದ ₹ 1,200ಕ್ಕೆ ಶುಲ್ಕ ಪಡೆಯಲಾಗುತ್ತದೆ. ಇದೇ ಸ್ಕ್ಯಾನಿಂಗ್‌ ಖಾಸಗಿ ಕೇಂದ್ರಗಳಲ್ಲಿ ಮಾಡಬೇಕಾದರೆ ವಿವಿಧ ಸಮಸ್ಯೆ ಆಧರಿಸಿ ಗರಿಷ್ಠ ₹ 8,000 ವರೆಗೆ ಶುಲ್ಕ ತೆಗೆದುಕೊಳ್ಳುತ್ತಾರೆ.

‘ಸಣ್ಣಪುಟ್ಟ ಸಮಸ್ಯೆಗಳು ಇರುವವರು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಸ್ಕ್ಯಾನಿಂಗ್‌ ಮಾಡಿಸಿಕೊಂಡು ಬರುತ್ತಾರೆ. ಆದರೆ ಅಪಘಾತ ಪ್ರಕರಣ, ತುರ್ತು ಚಿಕಿತ್ಸಾ ಸಂದರ್ಭದಲ್ಲಿ ಜನರು ಪ್ರಾಣ ಭಯದಿಂದ ಆದಷ್ಟು ಬೇಗ ಚಿಕಿತ್ಸೆ ದೊರೆಯಲಿ ಎನ್ನುವ ಉದ್ದೇಶಕ್ಕೆ ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿರುವ ಸ್ಕ್ಯಾನಿಂಗ್‌ ಕೇಂದ್ರಕ್ಕೆ ಹೋಗುತ್ತಿದ್ದಾರೆ. ಸದ್ಯ ರೋಗಿಗಳಿಗೆ ಸಮಸ್ಯೆಯಾಗುತ್ತಿರುವುದಂತೂ ನಿಜ’ ಎಂದು ಹೆಸರು ಹೇಳಲು ಇಚ್ಛಿಸದ ಜಿಲ್ಲಾ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದರು.

‘ನಮ್ಮ ಯಜಮಾನರು ಇತ್ತೀಚೆಗೆ ಬೈಕ್ ಸ್ಕಿಡ್‌ ಆಗಿ ಬಿದ್ದು ಗಾಯಗೊಂಡರು. ಜಿಲ್ಲಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ವ್ಯವಸ್ಥೆ ಸ್ಥಗಿತಗೊಂಡ ಕಾರಣ ನಗರದ ಖಾಸಗಿ ಸ್ಕ್ಯಾನಿಂಗ್‌ ಕೇಂದ್ರದಲ್ಲಿ ₹ 5,000 ಕೊಟ್ಟು ಸ್ಕ್ಯಾನ್‌ ಮಾಡಿಸಿದೆವು. ನಾವೇನು ಅಷ್ಟು ಸ್ಥಿತಿವಂತರಲ್ಲ. ಆದರೂ ನಮಗದು ತುಂಬಾ ದೊಡ್ಡ ಮೊತ್ತವಾಗಿತ್ತು. ಇನ್ನು ಕೂಲಿನಾಲಿ ಮಾಡುವ ಬಡವರಿಗೆ ಈ ಗತಿಯಾದರೆ ಏನು ಮಾಡಬೇಕು’ ಎಂದು ಕೆಳಗಿನತೋಟದ ನಿವಾಸಿ ಅನಿತಾ ಪ್ರಶ್ನಿಸಿದರು.

‘ಆರೋಗ್ಯ ಇಲಾಖೆ ನಿರ್ದೇಶನಾಲಯದಿಂದ ಸಿ.ಟಿ.ಸ್ಕ್ಯಾನ್ ಯಂತ್ರದ ಯುಪಿಎಸ್ ಬದಲಾಯಿಸಲು ಬೇಕಾದ ₹ 7 ಲಕ್ಷ ಅನುದಾನ ಮಂಜೂರು ಮಾಡಿಸಿಕೊಂಡಿದ್ದೇವೆ. ಶೀಘ್ರದಲ್ಲಿಯೇ ಯುಪಿಎಸ್ ಪೂರೈಸುವ ಕಂಪೆನಿಗೆ ಬೇಡಿಕೆ ಸಲ್ಲಿಸುತ್ತೇವೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್‌ ತಿಳಿಸಿದರು.

ದುರಾಸೆಗೆ ಹಾಳಾದ ಯಂತ್ರ?

‘ಜಿಲ್ಲಾ ಆಸ್ಪತ್ರೆ ಸಿ.ಟಿ.ಸ್ಕ್ಯಾನ್ ಸಿಬ್ಬಂದಿ ‘ಕಮಿಷನ್‌’ ಆಸೆಗೆ ಖಾಸಗಿ ಆಸ್ಪತ್ರೆಯ ರೋಗಿಗಳಿಗೆ ಕೂಡ ಸ್ಕ್ಯಾನಿಂಗ್‌ ಮಾಡಿ ಕಳುಹಿಸಿ, ಸದ್ದಿಲ್ಲದೆ ದುಡ್ಡು ಮಾಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಅತಿಯಾದ ಬಳಕೆಯಿಂದಾಗಿ ಸಿ.ಟಿ.ಸ್ಕ್ಯಾನ್‌ ಯಂತ್ರ ಹಾಳಾಗಿದೆ’ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ಆವತಿಯ ನನ್ನ ಗೆಳೆಯನೊಬ್ಬ ಹೊಟ್ಟೆ ನೋವಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ. ಆದರೆ ಆ ಆಸ್ಪತ್ರೆಯ ವೈದ್ಯರು ಜಿಲ್ಲಾ ಆಸ್ಪತ್ರೆಯ ಸ್ಕ್ಯಾನಿಂಗ್‌ ಕೇಂದ್ರಕ್ಕೆ ಸ್ಕ್ಯಾನ್‌ ಮಾಡಿಸಲು ಬರೆದುಕೊಟ್ಟರು. ಆ ಕೇಂದ್ರದ ಸಿಬ್ಬಂದಿ ₹ 3,000 ಪಡೆದು ಸ್ಕ್ಯಾನ್‌ ಮಾಡಿ ಕಳುಹಿಸಿದರು. ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನು ವೈದ್ಯರು ಹಣದ ಆಸೆಗಾಗಿ ಖಾಸಗಿಯವರಿಗೆ ಅಡ ಇಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಬಿ.ಬಿ.ರಸ್ತೆ ನಿವಾಸಿ ಮಂಜುನಾಥ್ ಆರೋಪಿಸಿದರು. ಆರೋಪವನ್ನು ಜಿಲ್ಲಾ ಶಸ್ತ್ರಚಿಕಿತ್ಸಕರು ಅಲ್ಲಗಳೆದರು.

* * 

ಜಿಲ್ಲಾ ಆಸ್ಪತ್ರೆ ಸಿ.ಟಿ.ಸ್ಕ್ಯಾನ್ ಯಂತ್ರವನ್ನು ವಾರದೊಳಗೆ ರಿಪೇರಿ ಮಾಡಿಸಿ //ಪುನಃ// ಕಾರ್ಯಾರಂಭ ಮಾಡುತ್ತೇವೆ. ಅಲ್ಲಿಯವರೆಗೆ ಸಾರ್ವಜನಿಕರು ಸಹಕರಿಸಬೇಕು.

ಡಾ.ವಿಜಯಕುಮಾರ್‌, ಜಿಲ್ಲಾ ಶಸ್ತ್ರಚಿಕಿತ್ಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry