ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಶೇ 10ರಷ್ಟು ಮಳೆ ಕೊರತೆ

Last Updated 25 ನವೆಂಬರ್ 2017, 6:57 IST
ಅಕ್ಷರ ಗಾತ್ರ

ಕಡೂರು: ದೇವನೂರಿನಲ್ಲಿ ಬಿಸಿಎಂ ಹಾಸ್ಟೆಲ್ ಆರಂಭಕ್ಕೆ ₹ 3 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ, ಅಲ್ಲಿ ಹಾಸ್ಟೆಲ್ ಅಗತ್ಯ ಇಲ್ಲದಿರುವುದರಿಂದ ಬೇರೆ ಸ್ಥಳದಲ್ಲಿ ಹಾಸ್ಟೆಲ್ ಆರಂಭಕ್ಕೆ ಈ ಅನುದಾನವನ್ನು ಉಪಯೋಗಿಸಿಕೊಳ್ಳಬೇಕು ಎಂಬ ನಿರ್ಣಯ ಮಾಡುತ್ತೇವೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಉಮೇಶ್ ತಿಳಿಸಿದರು. ಕಡೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇವನೂರಿನಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ಮಕ್ಕಳ ಸಂಖ್ಯೆ 25ಕ್ಕೂ ಕಡಿಮೆಯಿದೆ. ಇಲ್ಲಿ ಇಲಾಖೆಯ ಸ್ವಂತ ಜಾಗವಿದ್ದರೂ ಆ ಜಾಗದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಿಸಿದರೂ ಹೆಚ್ಚಿನ ಪ್ರಯೋಜನವಿಲ್ಲ. ಹಾಗಾಗಿ, ಅಲ್ಲಿ ಹೊಸ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಮುಂದಾಗುವುದು ಸರಿಯಲ್ಲ. ತಾಲ್ಲೂಕಿನ ಕೆಲವೆಡೆ ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್‌ಗಳು ನಡೆಯುತ್ತಿವೆ. ಅಂತಹ ಅಗತ್ಯವಿರುವ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಈ ಹಣವನ್ನು ಉಪಯೋಗಿಸಬೇಕು ಎಂಬ ನಿರ್ಣಯವನ್ನು ಈ ಸಭೆಯಲ್ಲಿ ಕೈಗೊಳ್ಳುತ್ತೇವೆ ಎಂದು ಪ್ರಕಟಿಸಿದಾಗ ಎಲ್ಲ ಸದಸ್ಯರು ಅನುಮೋದಿಸಿದರು.

ಕಡೂರಿನಿಂದ ಚಿಕ್ಕಮಗಳೂರಿಗೆ ಹೋಗುವ ಸರ್ಕಾರಿ ಬಸ್‌ಗಳಲ್ಲಿ ‘ಪಾಸ್ ಇರುವ ವಿದ್ಯಾರ್ಥಿಗಳನ್ನು ಹತ್ತಬೇಡಿ’ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಕೆಲ ಸದಸ್ಯರು ಹೇಳಿದಾಗ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಪ್ರಸನ್ನ, ಈ ಕುರಿತು ಸಾರಿಗೆ ಇಲಾಖೆಯ ಅಧಿಕಾರಿಗಳೊಡನೆ ಚರ್ಚಿಸುವುದಾಗಿ ತಿಳಿಸಿದರು.

ಕೆಲವು ಇಲಾಖೆಗಳ ಅಧಿಕಾರಿಗಳನ್ನು ಬಿಟ್ಟರೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ, ಸಾರಿಗೆ ಇಲಾಖೆ ಮುಂತಾದ ಪ್ರಮುಖ ಇಲಾಖೆಗಳ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದನ್ನು ಸದಸ್ಯರು ತೀವ್ರವಾಗಿ ವಿರೋಧಿಸಿದರು. ಮುಂದಿನ ಸಭೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಸಂಬಂಧಿಸಿದ ವಾರ್ಷಿಕ ಕೈಪಿಡಿಯೊಡನೆ ಹಾಜರಾಗಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ್‌ ನಾಯ್ಕ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಆನಂದ ನಾಯ್ಕ, ದೇವರಾಜ ನಾಯ್ಕ, ದಾಸಯ್ಯನಗುತ್ತಿ ಚಂದ್ರಪ್ಪ, ಬೋಗಪ್ಪ, ಮಂಜುಳಾ ಮೋಹನ್, ಶ್ವೇತಾ ಆನಂದ್, ಅಕ್ಷಯ್‌ ಕುಮಾರ್ ಇದ್ದರು.

ಬೆಳೆವಿಮೆ: ಪ್ರೀಮಿಯಂ ಪಾವತಿಸಿ
ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್ ಮಾತನಾಡಿ, ‘ತಾಲ್ಲೂಕಿನ ವಾಡಿಕೆ ಮಳೆ 619 ಮಿ.ಮೀ ಆಗಿದ್ದು, ಇದೇ 22ರ ತನಕ 574 ಮಿ.ಮೀ ಮಳೆಯಾಗಿದೆ. ಶೇ 10 ರಷ್ಟು ಕೊರತೆಯಾಗಿದೆ. ಮುಂಗಾರು ವಿಫಲವಾಗಿ ಬಿತ್ತನೆ ಕಡಿಮೆಯಾದ ಕಾರಣದಿಂದ ಹಿಂಗಾರಿನಲ್ಲಿ 15,975 ಹೆಕ್ಟೇರ್ ಬಿತ್ತನೆ ಗುರಿಗಿಂತ ಎರಡು ಸಾವಿರ ಹೆಕ್ಟೇರ್ ಹೆಚ್ಚು ಪ್ರದೇಶದಲ್ಲಿ ಹಿಂಗಾರಿ ಜೋಳ ಹುರುಳಿ, ಕಡಲೆ ಬಿತ್ತನೆಯಾಗಿದೆ. ಈ ಬಾರಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹುರುಳಿ ಮತ್ತು ಕಡಲೆ, ಹೋಬಳಿ ಮಟ್ಟದಲ್ಲಿ ಹಿಂಗಾರಿ ಜೋಳಕ್ಕೆ ಬೆಳೆವಿಮೆ ಅಧಿಸೂಚನೆ ಹೊರಡಿಸಲಾಗಿದೆ. ಹುರುಳಿಗೆ ₹ 17 ಸಾವಿರ, ಕಡಲೆಗೆ ₹ 31 ಸಾವಿರ ಮತ್ತು ಹಿಂಗಾರಿ ಜೋಳಕ್ಕೆ ₹ 33 ಸಾವಿರ ವಿಮಾ ಮೊತ್ತ ನಿಗದಿಯಾಗಿದ್ದು, ರೈತರು ವಿಮಾ ಮೊತ್ತದ ಶೇ 1.50 ಹಣವನ್ನು ಪ್ರೀಮಿಯಂ ಆಗಿ ಪಾವತಿಸಬೇಕಿದ್ದು, ಇದೇ 30 ಕಡೆಯ ದಿನವಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT