7

ಕಾಫಿ ಕಣಿವೆಯಲ್ಲಿ ಕಾರುಗಳ ವಯ್ಯಾರ

Published:
Updated:
ಕಾಫಿ ಕಣಿವೆಯಲ್ಲಿ ಕಾರುಗಳ ವಯ್ಯಾರ

ಚಿಕ್ಕಮಗಳೂರು:  ನಗರದ ಹೊರ ವಲಯದ ಅಂಬರ್‌ವ್ಯಾಲಿ ವಸತಿ ಶಾಲೆಯ ಆವರಣದಲ್ಲಿ ಶುಕ್ರವಾರ ನಡೆದ ಏಷ್ಯಾ ಪೆಸಿಫಿಕ್‌ ರ‍್ಯಾಲಿಯಲ್ಲಿ ಕಾರುಗಳ ವಯ್ಯಾರ ರ‍್ಯಾಲಿ ಪ್ರಿಯರು, ಅಭಿಮಾನಿಗಳಲ್ಲಿ ಮಿಂಚಿನ ಸಂಚಲನ ಉಂಟುಮಾಡಿತು.

ದಿ ಮೋಟಾರ್ಸ್‌ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಚಿಕ್ಕಮಗಳೂರು ಮತ್ತು ಕಾಫಿ ಡೇ ಗ್ಲೊಬಲ್‌ ವತಿಯಿಂದ ಕಾಫಿ ಡೇ ಗ್ಲೋಬಲ್‌ ಪ್ರಾಯೋಜಕತ್ವದಲ್ಲಿ ಕಾಫಿನಾಡಿನಲ್ಲಿ ನಡೆಯುತ್ತಿರುವ ಏಷ್ಯಾ ಪೆಸಿಫಿಕ್‌ ರ‍್ಯಾಲಿ (ಎಪಿಆರ್‌ಸಿ) ಮತ್ತು ಇಂಡಿಯನ್‌ ನ್ಯಾಷನಲ್‌ ರ‍್ಯಾಲಿಯ (ಐಎನ್‌ಆರ್‌ಸಿ) ಪ್ರೇಕ್ಷಕ ಕೇಂದ್ರಿತ ಸೂಪರ್ ಸ್ಪೆಷಲ್‌ ಹಂತದಲ್ಲಿ ದೇಶವಿದೇಶಗಳ ಚಾಲಕರು ಮಿಂಚಿನ ವೇಗದಲ್ಲಿ ಕಾರುಗಳನ್ನು ಚಲಾಯಿಸಿ ಪ್ರೇಕ್ಷಕರ ಮೈನವಿರೇಳಿಸಿದರು. 2.12 ಕಿಲೋ ಮೀಟರ್‌ ಓರೆಕೊರೆಯ ಮಾರ್ಗವನ್ನು ವೇಗವಾಗಿ ತಲುಪುತ್ತಿದ್ದ ಪರಿ ಮೋಡಿ ಮಾಡಿತು. ಸಹಸ್ರಾರು ಮಂದಿ ರ‍್ಯಾಲಿಯನ್ನು ಕಣ್ತುಂಬಿಕೊಂಡರು.

ಮೊದಲಿಗೆ ಮಾರುತಿ ಜಿಪ್ಸಿ ಕಾರುಗಳು ಮಾರ್ಗದಲ್ಲಿ ದೂಳೆಬ್ಬಸಿ ಪ್ರೇಕ್ಷಕರಿಗೆ ಕಚಗುಳಿ ಇಟ್ಟವು. ಒಟ್ಟು ನಾಲ್ಕು ಜಿಪ್ಸಿ ಕಾರುಗಳು ಭಾಗವಹಿಸಿದ್ದವು. ಕಾರುಗಳ ಶಬ್ಧ, ವೇಗ, ಎಬ್ಬಿಸುತ್ತಿದ್ದ ದೂಳು ಪ್ರೇಕ್ಷಕರ ಕುತೂಹಲವನ್ನು ಇಮ್ಮಡಿಗೊಳಿಸಿತ್ತು.

ಐಎನ್‌ಆರ್‌ಸಿ ವಿಭಾಗದಲ್ಲಿ 39 ಕಾರುಗಳು ಭಾಗವಹಿಸಿದ್ದವು. ದೇಶದ ವಿವಿಧೆಡಗಳಿಂದ ಬಂದಿದ್ದ ಚಾಲಕರು ಚಮತ್ಕಾರ ಪ್ರದರ್ಶಿಸಿ ಪ್ರೇಕ್ಷಕರಿಗೆ ಖುಷಿ ನೀಡಿದರು. ಹರ್ಷಿತಾ ಗೌಡ, ಬಿಂದುಪ್ರಕಾಶ್‌ ಮಹಿಳಾ ಜೋಡಿ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಚಾಲಕರು ತಿರುವುಗಳಲ್ಲಿ ಕಾರು ನಿಯಂತ್ರಿಸುತ್ತಿದ್ದ ಪರಿಗೆ ಪ್ರೇಕ್ಷಕರು ತಲೆದೂಗಿದರು.

ನೇರ ಹಾದಿಯಲ್ಲಿ ಕಾರು ಗರಿಷ್ಠ ವೇಗ ತಲುಪಿದಾಗ ಅಕ್ಷರಶಃ ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಗುತ್ತಿತ್ತು. ಎರಡರಿಂದ ಮೂರು ನಿಮಿಷಗಳಲ್ಲಿ ಮಾರ್ಗ ಕ್ರಮಿಸಿದ ಪರಿ ಪ್ರೇಕ್ಷಕರನ್ನು ಅಚ್ಚರಿಯ ಕಡಲಿನಲ್ಲಿ ತೇಲಿಸಿತು. ಮೊಬೈಲ್‌ ಕ್ಯಾಮೆರಾಗಳಲ್ಲಿ ಅಪೂರ್ವ ಕ್ಷಣಗಳನ್ನು ಸೆರೆ ಹಿಡಿದರು.

ಎಪಿಆರ್‌ಸಿ ವಿಭಾಗದಲ್ಲಿ ಆರು ಕಾರುಗಳು ಸಂಚಲನ ಮೂಡಿಸಿದವು. ಕಾರುಗಳ ಓಟ ಪ್ರೇಕ್ಷಕರ ಹೃನ್ಮನ ತಣಿಸಿ ಕಣ್ಣಗಳಿಗೆ ಮುದ ನೀಡಿತು. ಗುರಿ ತಲುಪುವ ವೇಗ ಕಾರಿನಿಂದ ಕಾರಿಗೆ ಕಡಿಮೆಯಾಗುತ್ತಲೇ ಇತ್ತು. ಅಗ್ರ ಶ್ರೇಯಾಂಕದ ಚಾಲಕ ಗೌರವ ಗಿಲ್‌ ಅವರು ಎದೆ ಜಲ್‌ ಎನ್ನುವ ವೇಗದಲ್ಲಿ ಕಾರು ಚಲಾಯಿಸಿ ಪ್ರೇಕ್ಷಕರನ್ನು ಖುಷಿಯ ಕಡಲಿನಲ್ಲಿ ತೇಲಿಸಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ರ‍್ಯಾಲಿ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರು ಕದಲದಂತೆ ಕುತೂಹಲದಿಂದ ವೀಕ್ಷಿಸಿದರು. ಐಜಿಪಿ ಹೇಮಂತ್‌ ನಿಂಬಾಳ್ಕರ್‌, ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾ ಮಲೈ ರ‍್ಯಾಲಿಯನ್ನು ವೀಕ್ಷಿಸಿದರು.

ಇಂದು, ನಾಳೆ ಪ್ರಮುಖ ಘಟ್ಟ

25 ಮತ್ತು 26ರಂದು ರ‍್ಯಾಲಿಯ ಪ್ರಮುಖ ಘಟ್ಟಗಳು ನಡೆಯಲಿವೆ. ಮೂಡಿಗೆರೆ ತಾಲ್ಲೂಕಿನ ಚಟ್ನಹಳ್ಳಿ, ಕಮ್ಮರಗೋಡು, ಚಂದ್ರಾಪುರ ಹಾಗೂ ಜಾಗೀರಮನೆ ಕಾಫಿ ಎಸ್ಟೇಟ್‌ಗಳಲ್ಲಿ ಈ ಸ್ಪರ್ಧೆಗಳು ಜರುಗಲಿವೆ. ಏಷ್ಯಾ ಪೆಸಿಫಿಕ್‌ ರ್‍ಯಾಲಿಗೆ 502 ಕಿಲೋ ಮೀಟರ್‌ ಮತ್ತು ಐಎನ್‌ಆರ್‌ಸಿ ರ್‍ಯಾಲಿಗೆ 224.72 ಕಿ.ಮೀ ದೂರ ನಿಗದಿಪಡಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry