ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಶೌಚಾಲಯದ ಚಾವಣಿ ಸರಿಯಿಲ್ಲವೇಕೆ?

Last Updated 25 ನವೆಂಬರ್ 2017, 7:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಎಷ್ಟೇ ಜಾಗೃತಿ ಮೂಡಿಸಿದರೂ ಗ್ರಾಮಾಂತರ ಪ್ರದೇಶಗಳ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ಚಾವಣಿಗಳು (ಶೀಟ್) ಹಾಳಾಗಿವೆ. ಆದರೂ ಈ ಕುರಿತು ಮುಖ್ಯ ಶಿಕ್ಷಕರು ಗಮನವೇ ಹರಿಸುತ್ತಿಲ್ಲ ಏಕೆ...?

ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಶುಕ್ರವಾರ ನಡೆದ ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿ ಸಭೆಯಲ್ಲಿ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀಪತಿ ಅವರು ಬಿಇಒ ನಾಗಭೂಷಣ್ ಅವರನ್ನು ಪ್ರಶ್ನಿಸಿದರು.

‘ಮುಖ್ಯ ಶಿಕ್ಷಕರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದಾಗ ನಾಗಭೂಷಣ್ ಪ್ರತಿಕ್ರಿಯಿಸಿ, ‘ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಇಲಾಖೆಯಿಂದ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಸರ್ವ ಶಿಕ್ಷಣ ಅಭಿಯಾನದಡಿ ಅನುದಾನ ನೀಡುವುದು ಸದ್ಯಕ್ಕೆ ನಿಂತಿದೆ. ಆದ್ದರಿಂದ ಕೆಲವೆಡೆ ತೊಂದರೆಯಾಗಿದೆ. ತಾಲ್ಲೂಕಿನ 304 ಸರ್ಕಾರಿ ಶಾಲೆಗಳ ಪೈಕಿ 297 ಶಾಲೆಗಳಲ್ಲಿ ಕೊಠಡಿಗಳು ಮತ್ತು ಕಟ್ಟಡ ಶಿಥಿಲಾವಸ್ಥೆಯಲ್ಲಿವೆ. ಶೌಚಾಲಯಗಳ ಸಮಸ್ಯೆಯೂ ಇದೆ ಎಂದು ಸಭೆಗೆ ವಿವರಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗುವ 50 ಮಹಿಳೆಯರ ಪೈಕಿ 48 ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಸಾಮಾನ್ಯ ಹೆರಿಗೆ ಯಾವ ಕಾರಣಕ್ಕಾಗಿ ಆಗುತ್ತಿಲ್ಲ ಎಂದು ಕೆಲವು ಸದಸ್ಯರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಫಾಲಾಕ್ಷಪ್ಪ, ‘ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ಹೆರಿಗೆ ಆಗದಿದ್ದಾಗ ಅನಿವಾರ್ಯವಾಗಿ ಜಿಲ್ಲಾ ಆಸ್ಪತ್ರೆಗೆ ಬರುತ್ತಾರೆ. ಅಂತಹ ಸಂದರ್ಭಗಳಲ್ಲಿ ಗರ್ಭಿಣಿ ಮತ್ತು ಮಗುವಿನ ಪರಿಸ್ಥಿತಿ ನೋಡಿ ವೈದ್ಯರು ತೀರ್ಮಾನ ಕೈಗೊಳ್ಳುತ್ತಾರೆ. ನಾವು ಪ್ರಸೂತಿ ವೈದ್ಯರಿಗೆ ಇದು ಹೀಗೆಯೇ ಆಗಬೇಕು ಎಂದು ಸೂಚನೆ ನೀಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ದೇಶದಲ್ಲಿ ಕ್ಷಯ (ಟಿ.ಬಿ.) ರೋಗಕ್ಕೆ ಪ್ರತಿ ಒಂದೂವರೆ ನಿಮಿಷಗಳಿಗೆ ಒಬ್ಬರಂತೆ ರೋಗಿಗಳು ಸಾಯುತ್ತಿದ್ದಾರೆ. ಇದು ಸಂಪೂರ್ಣ ಗುಣಮುಖವಾಗುವ ಕಾಯಿಲೆಯಾಗಿದೆ. ಇದಕ್ಕೆ ಪ್ರಾಥಮಿಕ ಹಂತದಿಂದಲೇ ಚಿಕಿತ್ಸೆ ಅಗತ್ಯ. ಆದ್ದರಿಂದ ಕೊಳೆಗೇರಿ ಪ್ರದೇಶಗಳಲ್ಲಿ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಕೂಡ ಇದೇ ಸಂದರ್ಭದಲ್ಲಿ ನಾಗರಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

2017 – 18ರ ಹಿಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಚಿತ್ರದುರ್ಗ ತಾಲ್ಲೂಕಿನಿಂದ ಗ್ರಾಮ ಪಂಚಾಯ್ತಿ ಮಟ್ಟದ 28 ಗ್ರಾಮಗಳು ಕಡಲೆ ಬೆಳೆಗೆ ಆಯ್ಕೆಯಾಗಿವೆ. ಸಂಬಂಧಪಟ್ಟ ರೈತರು ಪ್ರೀಮಿಯಂ ಮೊತ್ತ ಪಾವತಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್‌ ಸಭೆಗೆ ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಆರ್.ಎನ್.ವೇಣುಗೋಪಾಲ್, ಉಪಾಧ್ಯಕ್ಷೆ ಶೋಭಾ, ಸ್ಥಾಯಿ ಸಮಿತಿ ಅಧ್ಯಕ್ಷ ಬೋರಯ್ಯ ಇದ್ದರು.

ಕಡಲೆ ಬೆಳೆಗೆ ಬಹುಮಾನ
ಕಡಲೆ ಹೆಚ್ಚಾಗಿ ಬೆಳೆದ ರೈತರಿಗೆ ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿ ನೀಡಲಾಗುವುದು. ಅತ್ಯುತ್ತಮ ಬೆಳೆಗೆ ಪ್ರಥಮ ಬಹುಮಾನವಾಗಿ ₹ 15 ಸಾವಿರ, ನಂತರದ ಬೆಳೆಗೆ ದ್ವಿತೀಯ ₹ 10 ಸಾವಿರ, ತೃತೀಯ ₹ 5 ಸಾವಿರ ನೀಡಲಾಗುವುದು. ಅಲ್ಲದೆ, ಅತಿ ಹೆಚ್ಚು ಬೆಳೆದಿದ್ದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲೂ ಪ್ರಶಸ್ತಿ ಸಿಗಲಿದೆ. ಅರ್ಜಿ ಸಲ್ಲಿಸಲು ನ. 30 ಕೊನೆ ದಿನವಾಗಿದ್ದು, ಸಾಮಾನ್ಯ ವರ್ಗಕ್ಕೆ ₹ 100, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ₹ 25 ಹಣ ನೀಡಿ ಅರ್ಜಿ ಪಡೆದು ಸಲ್ಲಿಸಬಹುದು ಎಂದು ವೆಂಕಟೇಶ್‌ ಸಭೆಗೆ ಮಾಹಿತಿ ನೀಡಿದರು.

*  *

ಆಯ್ದ ಗ್ರಾಮಗಳ ಅರ್ಹ ರೈತರಿಗೆ ಟಿಎಸ್‌ಪಿಯಲ್ಲಿ 83 ಮಂದಿಗೆ, ಎಸ್‌ಸಿಪಿಯಲ್ಲಿ 94 ಮಂದಿಗೆ ತಾಡಪಾಲು ನೀಡಲಾಗುವುದು.
ವೆಂಕಟೇಶ್
ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT