7

ಬಿಜೆಪಿ, ಮಾಧ್ಯಮಗಳ ವಿರುದ್ಧ ಆಕ್ರೋಶ

Published:
Updated:

ಧಾರವಾಡ: ‘ಚುನಾವಣೆ ಸಮೀಪಿಸುತ್ತಿದ್ದಂತೆ ಯಾವುದೇ ವಿಷಯ ಸಿಗದೆ ಹತಾಶರಾಗಿರುವ ಬಿಜೆಪಿಯವರು ಕಾಂಗ್ರೆಸ್ ನಾಯಕರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಅದೊಂದು ಸುಳ್ಳುಗಾರರ ಪಕ್ಷವಾಗಿದೆ’ ಎಂದು ಅರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ‘ದಿನದಿಂದ ದಿನಕ್ಕೆ ಕಾಂಗ್ರೆಸ್‌ ವರ್ಚಸ್ಸು ಹೆಚ್ಚುತ್ತಿದೆ. ಜನರ ಭಾವನೆ ಮತ್ತು ಸಮಸ್ಯೆಗಳಿಗೆ ಪಕ್ಷದ ನೇತೃತ್ವದ ರಾಜ್ಯ ಸರ್ಕಾರ ಸ್ಪಂದಿಸುತ್ತಾ ಸಾಗುತ್ತಿದೆ. ಇದನ್ನು ಸಹಿಸದ ಬಿಜೆಪಿ ನಾಯಕರು ಒಂದಲ್ಲಾ ಒಂದು ರೀತಿಯಲ್ಲಿ ಸುಳ್ಳು ಆರೋಪ ಮಾಡುತ್ತಲೇ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪ ಮಾಡಿದರು.

‘ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಿನಯ ಕುಲಕರ್ಣಿ ಅವರ ಏಳಿಗೆಯನ್ನು ಸಹಿಸದೆ ಯೋಗೀಶಗೌಡ ಗೌಡರ ಹತ್ಯೆಗೂ ಮತ್ತು ಸಚಿವರಿಗೂ ತಳಕು ಹಾಕುವ ಕುತಂತ್ರ ನಡೆಸಿದ್ದಾರೆ. ವಿನಯ ಕುಲಕರ್ಣಿ ಅವರು ಸಚಿವರಾದ ನಂತರ ಬಿಜೆಪಿ ಮುಖಂಡರ ನಿಜವಾದ ಬಣ್ಣ ಬಯಲಾಗುತ್ತಿದ್ದು, ಇದರಿಂದ ಹೆದರಿದ ಅವರು ಈ ರೀತಿಯ ಸುಳ್ಳು ಆರೋಪ ಮಾಡುತ್ತಲೇ ಇದ್ದಾರೆ. ಇದಕ್ಕೆ ರಾಜ್ಯದ ಜನತೆ ಕಿವಿಗೊಡಬಾರದು’ ಎಂದು ಆರೋಪಿಸಿದರು.

ಕಲಾಭವನದಿಂದ ಹೊರಟ ರ‍್ಯಾಲಿ ಸಂದರ್ಭದಲ್ಲಿ ಆಲೂರು ವೆಂಕಟರಾವ್ ವೃತ್ತದ ಬಳಿ ಕಾರ್ಯಕರ್ತರು ಟೈರ್‌ಗಳನ್ನು ಸುಟ್ಟರು. ಬಿಜೆಪಿ ಹಾಗೂ ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಟೈರ್‌ ಹಾಗೂ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ದೀಪಕ ಚಿಂಚೋರೆ, ಸುಭಾಸ ಶಿಂಧೆ, ಯಾಸೀನ ಹಾವೇರಿಪೇಟೆ, ಇಸ್ಮಾಯಿಲ್ ತಮಟಗಾರ, ರಾಬರ್ಟ್ ದದ್ದಾಪುರಿ, ಪ್ರಶಾಂತ ಕೇಕರೆ, ಆನಂದ ಸಿಂಗನಾಥ, ಹೇಮಂತ ಗುರ್ಲಹೊಸೂರ, ಶಾಂತಮ್ಮ ಗುಜ್ಜಳ, ಗೌರಿ ನಾಡಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry