3

ಕಟ್ಟೆ ಸಿದ್ಧವಾದರೂ ಹರಾಜು ಇಲ್ಲ

Published:
Updated:

ಲಕ್ಷ್ಮೇಶ್ವರ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ರೈತರು ಬೆಳೆದ ಎಲ್ಲ ಬಗೆಯ ತರಕಾರಿಗಳನ್ನು ಹರಾಜು ಮಾಡುವ ಉದ್ದೇಶದಿಂದ ಹರಾಜು ಕಟ್ಟೆ ನಿರ್ಮಿಸಲಾಗಿದೆ. ಆದರೆ, ಹರಾಜು ಪ್ರಕ್ರಿಯೆ ಮಾತ್ರ ಇನ್ನೂ ಆರಂಭವಾಗಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿಸಿ ಕಟ್ಟಿರುವ ಹರಾಜು ಕಟ್ಟೆಗಳು ಉಪಯೋಗಕ್ಕೆ ಬಾರದಂತಾಗಿವೆ.

ಭಾನು ಮಾರ್ಕೆಟ್‌ ಹಿಂಭಾಗ ಹಾಗೂ ಅಕ್ಕಪಕ್ಕದಲ್ಲಿ ನಿತ್ಯ ತರಕಾರಿ ಹರಾಜು ನಡೆಯುತ್ತದೆ. ಆದರೆ ಸಂತೆಯ ದಿನ ಶುಕ್ರವಾರ ತರಕಾರಿ ತುಂಬಿದ ಟಂಟಂ, ದೂಡುವ ಗಾಡಿಗಳು, ಟ್ರ್ಯಾಕ್ಟರ್‌, ದ್ವಿಚಕ್ರ ವಾಹನಗಳು ಮಾರುಕಟ್ಟೆಯಲ್ಲಿ ಸಂಚರಿಸುವುದರಿಂದ ದಟ್ಟಣೆ ಹೆಚ್ಚಿ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ.

ಸಂತೆಗೆ ಬರುವ ಜನರ ಅನುಕೂಲಕ್ಕಾಗಿ ತರಕಾರಿ ಹರಾಜನ್ನು ಎ.ಪಿ.ಎಂ.ಸಿ.ಗೆ ವರ್ಗಾಯಿಸಬೇಕು ಎಂದು ಸಾರ್ವಜನಿಕರು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎ.ಪಿ.ಎಂ.ಸಿ.ಯಲ್ಲಿ ಹರಾಜು ಕಟ್ಟೆ ನಿರ್ಮಾಣವಾಗಿತ್ತು. ಆದರೆ, ಅಲ್ಲಿ ಹರಾಜು ಮಾತ್ರ ಇನ್ನೂ ಆರಂಭವಾಗಿಲ್ಲ, ಜನರ ಸಮಸ್ಯೆಯೂ ಪರಿಹಾರವಾಗಿಲ್ಲ.

ನೀರಾವರಿ ಸೌಲಭ್ಯ ಇರುವ ಶಿಗ್ಲಿ, ದೊಡ್ಡೂರು, ಬಾಲೆಹೊಸೂರು, ಸೂರಣಗಿ, ಗೋವನಾಳ, ಹುಲ್ಲೂರು, ಅಡರಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹತ್ತಾರು ಹಳ್ಳಿಗಳಲ್ಲಿ ನೂರಾರು ರೈತರು ತರಕಾರಿ ಬೆಳೆಯುತ್ತಿದ್ದು ಅವರೆಲ್ಲ ಲಕ್ಷ್ಮೇಶ್ವರದ ಮಾರುಕಟ್ಟೆಗೆ ತರಕಾರಿ ಮಾರಾಟಕ್ಕೆ ತರುತ್ತಾರೆ. ಹೀಗಾಗಿ, ನಿತ್ಯ ಮಾರುಕಟ್ಟೆಯಲ್ಲಿ ತರಕಾರಿ ತುಂಬಿದ ವಾಹನಗಳು ಓಡಾಡುತ್ತಲೇ ಇರುತ್ತವೆ. ಇದರಿಂದಪೇಟೆಗೆ ಬರುವ ಜನರಿಗೆ ತೊಂದರೆ ಉಂಟಾಗಿದೆ.

‘ತರಕಾರಿ ಹರಾಜನ್ನು ಆದಷ್ಟು ಬೇಗ ಎ.ಪಿ.ಎಂ.ಸಿ ಪ್ರಾಂಗಣಕ್ಕೆ ವರ್ಗಾಯಿಸಿ,  ಜನರು ಅನುಭವಿಸುತ್ತಿರುವ ಸಮಸ್ಯೆಗೆ ಮುಕ್ತಿ ಹಾಡಬೇಕು’ ಎಂದು ಜೆಡಿಎಸ್‌ನ ಪದ್ಮರಾಜ ಪಾಟೀಲ ಒತ್ತಾಯಿಸಿದರು.

‘ತರಕಾರಿ ಹರಾಜನ್ನು ಎ.ಪಿ.ಎಂ.ಸಿ ಪ್ರಾಂಗಣದಲ್ಲಿನ ಹರಾಜು ಕಟ್ಟೆಯಲ್ಲಿ ಮಾಡುವಂತೆ ತರಕಾರಿ ದಲ್ಲಾಳಿಗಳಿಗೆ ತಿಳಿಸಲಾಗಿದೆ. ಅಲ್ಲದೆ, ಈಚೆಗೆ ವ್ಯಾಪಾರಸ್ಥರ ಸಭೆ ಕೂಡ ನಡೆಸಲಾಗಿದೆ. ಇನ್ನು ಕೆಲ ದಿನಗಳಲ್ಲೇ ಹರಾಜು ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಎ.ಪಿ.ಎಂ.ಸಿಕಾರ್ಯದರ್ಶಿ ಎನ್‌.ಎ. ಲಕ್ಕುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry