ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್ ಧರಿಸಿದವರಿಗೆ ಹೂ; ಇಲ್ಲದಿದ್ದರೆ ದಂಡ

Last Updated 25 ನವೆಂಬರ್ 2017, 8:39 IST
ಅಕ್ಷರ ಗಾತ್ರ

ಕಲಬುರ್ಗಿ: ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಬೈಕ್, ಆಟೊ ಮತ್ತು ನಾಲ್ಕು ಚಕ್ರ ವಾಹನ ಸವಾರರಿಗೆ ಅಚ್ಚರಿ ಕಾದಿತ್ತು. ಪೊಲೀಸರು ಕೈಯಲ್ಲಿ ಗುಲಾಬಿ ಹೂ ಮತ್ತು ದಂಡ ವಿಧಿಸುವ ರಶೀದಿ ಪುಸ್ತಕವನ್ನು ಹಿಡಿದುಕೊಂಡು ನಿಂತಿದ್ದರು. ಸಂಚಾರ ನಿಯಮ ಪಾಲಿಸಿದವರಿಗೆ ಹೂ ಕೊಟ್ಟರೆ ಅಭಿನಂದಿಸಿದರು, ಉಲ್ಲಂಘಿಸಿದವರಿಗೆ ದಂಡ ವಿಧಿಸಿದರು.

ಪೊಲೀಸ್ ಇಲಾಖೆ ಮೊದಲೇ ತಿಳಿಸಿದಂತೆ ನ. 24ರಿಂದ ‘ಹೆಲ್ಮೆಟ್ ಕಡ್ಡಾಯ’ ನಿಯಮವನ್ನು ಜಾರಿಗೊಳಿಸಿದೆ. ಈಶಾನ್ಯ ವಲಯ ಐಜಿಪಿ ಅಲೋಕಕುಮಾರ್ ಅವರೇ ಕಾರ್ಯಾಚಾರಣೆಯಲ್ಲಿ ಪಾಲ್ಗೊಂಡಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಸೂಪರ್ ಮಾರ್ಕೆಟ್ ಮತ್ತು ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಬಂಕ್ ವೃತ್ತದಲ್ಲಿ ಎರಡು ಗಂಟೆಗೂ ಅಧಿಕ ಕಾಲ ಸಂಚಾರ ಸುರಕ್ಷತೆ ಬಗ್ಗೆ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಸಂಚಾರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಅಹ್ಮದ್ ಪಟೇಲ್ ಅವರು ಕಾನ್‌ಸ್ಟೆಬಲ್‌ಗಳಿಗೆ ಮಾರ್ಗದರ್ಶನ ಮಾಡಿದರು. ಹೆಲ್ಮೆಟ್, ಸೀಟ್ ಬೆಲ್ಟ್ ಮತ್ತು ಸಮವಸ್ತ್ರ ಧರಿಸುವಂತೆ ತಿಳಿಹೇಳಿದರು.

‘ಹೆಲ್ಮೆಟ್ ಧರಿಸದೇ ಪ್ರಯಾಣಿಸುತ್ತಿದ್ದ ಸವಾರರಿಗೆ ₹100 ದಂಡ ವಿಧಿಸಲಾಗಿದೆ. ಸಮವಸ್ತ್ರ ಧರಿಸದ ಆಟೊ ಚಾಲಕರು ಮತ್ತು ಸೀಟ್ ಬೆಲ್ಟ್ ಧರಿಸದ ನಾಲ್ಕು ಚಕ್ರ ವಾಹನ ಚಾಲಕರಿಗೆ ಕಡ್ಡಾಯವಾಗಿ ಧರಿಸುವಂತೆ ತಿಳಿವಳಿಕೆ ನೀಡಲಾಗಿದ್ದು, ಯಾವುದೇ ದಂಡ ವಿಧಿಸಿಲ್ಲ. ಸಂಚಾರ ನಿಯಮ ಉಲ್ಲಂಘನೆ ಮುಂದುವರಿಸಿದರೆ ದಂಡ ವಿಧಿಸಲಾಗುವುದು’ ಎಂದು ಸಂಚಾರ ಪೊಲೀಸ್ ಠಾಣೆ ಮೂಲಗಳು ತಿಳಿಸಿವೆ.

* * 

399 ಪ್ರಕರಣ ದಾಖಲು
ನಗರದಲ್ಲಿ ಶುಕ್ರವಾರ ಹೆಲ್ಮೆಟ್ ಧರಿಸದೆ ಸಂಚರಿಸಿದ 399 ಪ್ರಕರಣಗಳು ದಾಖಲಾಗಿವೆ. ಸಂಚಾರ ಪೊಲೀಸ್ ಠಾಣೆಯಲ್ಲಿ 226 ಪ್ರಕರಣ ದಾಖಲಾಗಿದ್ದು, ₹22,600 ದಂಡ ವಿಧಿಸಲಾಗಿದೆ. ಅದೇ ರೀತಿ ಹೆಚ್ಚುವರಿ ಸಂಚಾರ ಪೊಲೀಸ್ ಠಾಣೆಯಲ್ಲಿ 173 ಪ್ರಕರಣ ದಾಖಲಾಗಿದ್ದು, ₹17,300 ದಂಡ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT