ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೈ ಫ್ರೂಟ್ಸ್‌ನಲ್ಲಿ ಹುಳ ಹುಪ್ಪಡಿ 

Last Updated 25 ನವೆಂಬರ್ 2017, 8:42 IST
ಅಕ್ಷರ ಗಾತ್ರ

ಅಂಕೋಲಾ: ಡ್ರೈ ಫ್ರೂಟ್ಸ್‌ನಲ್ಲಿ ಹುಳ ಹುಪ್ಪಡಿಗಳು ಇರುವುದಾಗಿ ದೂರು ಬಂದ ನಿಮಿತ್ತ ಶುಕ್ರವಾರ ಇಲ್ಲಿನ ಬಾಳೆಗುಳಿಯ ವರದರಾಜ ಕಿರಾಣಿ ಅಂಗಡಿಗೆ ತಹಶೀಲ್ದಾರ್‌ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳು ದಾಳಿ ನಡೆಸಿ, ಅಂಗಡಿಯಲ್ಲಿದ್ದ ಡ್ರೈ ಫ್ರೂಟ್ಸ್ ವಶಪಡಿಸಿಕೊಂಡರು.

ಈ ಅಂಗಡಿಯು ಕುಂದಾಪುರದ ಶ್ರೀಧರ ಎಂಬುವರಿಗೆ ಸೇರಿದ್ದು, ಅವರು ಇತ್ತೀಚೆಗೆ ನೀಲಂಪುರದ ಹಮೀದ್‌ ಅವರಿಂದ ಡ್ರೈ ಫ್ರೂಟ್ಸ್‌ ಖರೀದಿಸಿದ್ದರು. ಬಾಳೆಗುಳಿಯ ನಿವಾಸಿ ಗಣೇಶ ಗೌಡ ಗುರುವಾರ ಅಂಗಡಿಯಿಂದ ಡ್ರೈ ಫ್ರೂಟ್ಸ್‌ ಖರೀದಿಸಿದ್ದರು. ನಂತರ ಅವರ ಮನೆಗೆ ತೆರಳಿ ಪೊಟ್ಟಣ ತೆರೆದರೆ ಒಳಗಡೆ ಹುಳ ಹುಪ್ಪಡಿಗಳು ಇರುವುದು ಗಮನಕ್ಕೆ ಬಂದಿದೆ. ಈ ಕುರಿತು ವರ್ತಕನಿಗೂ ತಿಳಿಸಿದ್ದಾರೆ.

ತಹಶೀಲ್ದಾರರಿಗೆ ದೂರು: ಗಣೇಶ ಗೌಡ ಅವರು ಶುಕ್ರವಾರ ಈ ಕುರಿತು ತಹಶೀಲ್ದಾರ್ ವಿವೇಕ ಶೇಣ್ವಿ ಅವರಿಗೆ ದೂರು ನೀಡಿದರು. ಬಳಿಕ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಅರುಣ ಕಾಶಿ ಭಟ್ ಅವರೊಂದಿಗೆ ಸ್ಥಳಕ್ಕೆ ತೆರಳಿ ಅಂಗಡಿಯಲ್ಲಿದ್ದ ಡ್ರೈ ಫ್ರೂಟ್ಸ್ ಪರಿಶೀಲಿಸಿದರು.

ಪೊಟ್ಟಣದ ಮೇಲೆ ಅವಧಿಯ ವಿಸ್ತರಣೆಯನ್ನು ನಕಲಿ ಮಾಡಿರುವುದು ಕಂಡುಬಂತು. ವರ್ತಕ ಶ್ರೀಧರ ಅವರನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡ ನಂತರ ತಾವು ಹಮೀದ್‌ ಎಂಬುವರಿಂದ ಖರೀದಿಸಿದ್ದೇನೆ ಎಂದರು. ಅದರ ಬಿಲ್ ನೀಡುವಂತೆ ಕೇಳಿದಾಗ ನಾವು ಪಡೆದುಕೊಂಡಿಲ್ಲ ಎಂದು ಹೇಳಿದ್ದರಿಂದಾಗಿ ಕೋಪಗೊಂಡ ಅಧಿಕಾರಿಗಳು, ‘ಅಧಿಕೃತ ಬಿಲ್ ಇಲ್ಲದೇ ಏಕೆ ವ್ಯಾಪಾರ ಮಾಡುತ್ತೀರಿ. ಇದರಿಂದ ಜನರಿಗೆ ತೊಂದರೆಯಾದರೆ ಯಾರು ಹೊಣೆ’ ಎಂದು ತರಾಟೆಗೆ ತೆಗೆದುಕೊಂಡರು.

ಈ ಅಂಗಡಿಗೆ ಡ್ರೈ ಫ್ರೂಟ್ಸ್ ಪೂರೈಕೆ ಮಾಡಿದ್ದ ನೀಲಂಪುರದ ಹಮೀದ್‌ ಅವರ ಮನೆಗೆ ತೆರಳಿದಾಗ ಆರಂಭದಲ್ಲಿ ತನಗೇನು ಸಂಬಂಧವಿಲ್ಲ ಎಂಬಂತೆ  ವರ್ತಿಸಿದ. ನಂತರ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡ ನಂತರ ಕಾರವಾರ ಮತ್ತು ಅಂಕೋಲಾದಲ್ಲಿ ಯಾವ ಯಾವ ಅಂಗಡಿಗೆ ಎಷ್ಟೆಷ್ಟು ಡ್ರೈ ಫ್ರೂಟ್ಸ್ ನೀಡಲಾಗಿದೆ ಎಂದು ತಾನು ಬರೆದುಕೊಂಡಿದ್ದ ಚೀಟಿಯನ್ನು ಅಧಿಕಾರಿಗಳಿಗೆ ತೋರಿಸಿದ.

ಹಮೀದ್ ಕೂಡ ತಾನು ಇತ್ತೀಚೆಗಷ್ಟೇ ಏಜೆನ್ಸಿ ತೆಗೆದುಕೊಂಡಿದ್ದು ಇದನ್ನು ಹುಬ್ಬಳ್ಳಿಯ ಹಳೆ ಹುಬ್ಬಳ್ಳಿಯ ನೇಕಾರ ನಗರ ರಸ್ತೆಯ ಈಶ್ವರ ನಗರದ ಕಾಶ್ಮೀರಿ ಹೋಮ್ ಪ್ರಾಡಕ್ಟ್ಸ್‌ನಲ್ಲಿ ಖರೀದಿಸಿರುವುದಾಗಿ ಒಪ್ಪಿಕೊಂಡ.

‘ವಶಪಡಿಸಿಕೊಂಡ ಡ್ರೈ ಫ್ರೂಟ್ಸ್ ಪೊಟ್ಟಣವನ್ನು ಬೆಳಗಾವಿಯ ವಿಭಾಗೀಯ ಆಹಾರ ವಿಶ್ಲೇಷಕರಿಗೆ ಕಳುಹಿಸಲಾಗುವುದು. ಈ ಪ್ಯಾಕಿನ ಹೊರಭಾಗದಲ್ಲಿ ಅಸಲಿ ಮುದ್ರೆ ಇಲ್ಲದೇ ತಾವೇ ಆಹಾರ ಗುಣಮಟ್ಟದ ಅವಧಿಯನ್ನು ಮುದ್ರಿಸಿಕೊಂಡಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಇದರಲ್ಲಿ ಹುಳ ಹುಪ್ಪಡಿಗಳು ಇದ್ದು, ರಾಸಾಯನಿಕ ಬಳಸಿರುವ ಸಾಧ್ಯತೆಗಳಿವೆ. ವರದಿ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್‌ ವಿವೇಕ ಶೇಣ್ವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT