7

ಕೊಡಗು ಜಿಲ್ಲೆಯಲ್ಲಿ ಷಷ್ಠಿ ಸಂಭ್ರಮ

Published:
Updated:
ಕೊಡಗು ಜಿಲ್ಲೆಯಲ್ಲಿ ಷಷ್ಠಿ ಸಂಭ್ರಮ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರ ಸುಬ್ರಮಣ್ಯ ಷಷ್ಠಿ ಸಂಭ್ರಮದಿಂದ ನಡೆಯಿತು. ಮಡಿಕೇರಿಯ ಮುತ್ತಪ್ಪ ದೇವಾಲಯದ ಉತ್ಸವ ಸಮಿತಿ ವತಿಯಿಂದ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದವು. ಈ ಬಾರಿ ಸಂಖ್ಯೆಯಲ್ಲಿ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಅಪ್ಪಂ, ಪಂಚ ಕಜ್ಜಾಯ ಸೇವೆ, ಹಣ್ಣು ಕಾಯಿ ಪೂಜೆ, ಪುಷ್ಪಾರ್ಚನೆ, ಮಂಗಳಾರತಿ ಜರುಗಿದವು. ಬಳಿಕ ಅನ್ನಸಂತರ್ಪಣೆ ನಡೆಯಿತು. ಆದರೆ, ಈ ಬಾರಿ ಪೂಜೆಯೇ ವಿಳಂಬವಾದ ಕಾರಣ ಭಕ್ತರು ಕಾದು ಕಾದು ಸುಸ್ತಾದರು. ಮಧ್ಯಾಹ್ನ 2ಕ್ಕೆ ಅನ್ನಸಂತರ್ಪಣೆ ಆರಂಭಗೊಂಡಿತು. ವಯಸ್ಕರು, ಪುಟ್ಟ ಮಕ್ಕಳು ಹಾಗೂ ಮಹಿಳೆಯರು ಬಿಸಿಲಿನಲ್ಲೇ ಕಾದರು.

ಇನ್ನೂ ಓಂಕಾರೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಸಂಜೆ ತೆಪ್ಪೋತ್ಸವ ಹಾಗೂ ಪಲ್ಲಕ್ಕಿ ಉತ್ಸವಗಳು ನಡೆದವು. ಅಲ್ಲಿಯೂ ಮಧ್ಯಾಹ್ನ ಭಕ್ತರಿಗೆ ಆಯೋಜಿಸಿದ್ದ ಅನ್ನಸಂತರ್ಪಣೆ ಮಾತ್ರ ಅವ್ಯವಸ್ಥೆಯಿಂದ ಕೂಡಿತ್ತು. ಮಧ್ಯಾಹ್ನ 2.30ರ ವೇಳೆಗೆ ತಯಾರಿಸಿದ್ದ ಖಾದ್ಯಗಳು ಮುಕ್ತಾಯವಾಗಿತ್ತು. ಭಕ್ತರು ಸರದಿಯಲ್ಲಿ ಕಾದು ಬಸವಳಿದರು.

ಮನೆ ಮನಗಳಲ್ಲೂ ಷಷ್ಠಿ ಸಂಭ್ರಮ ಮನೆ ಮಾಡಿತ್ತು. ಕುಕ್ಕೆ ಸುಬ್ರಮಣ್ಯದಲ್ಲಿ ಪಂಚ ರಥೋತ್ಸವ ನಡೆದ ಬಳಿಕ ಮನೆಯಲ್ಲಿ ಹಬ್ಬ ನಡೆಯಿತು. ಮಹಿಳೆಯರು ತುಂಡು ಮಾಡಿದ ತರಕಾರಿಗಳನ್ನು ಮನೆ ಮನೆಗೆ ತೆರಳಿ ಹಂಚಿದ್ದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry