ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಶದ ಅಂಚಿನಲ್ಲಿ ಕಲ್ಯಾಣಿ

Last Updated 25 ನವೆಂಬರ್ 2017, 8:52 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕಿನ ಮಾಸ್ತಿ ಗ್ರಾಮದ ಹೃದಯ ಭಾಗದಲ್ಲಿರುವ ಚೋಳರ ಕಾಲದ ಕಲ್ಯಾಣಿಯಲ್ಲಿ (ದಾಮರ ಕುಂಟೆ) ಗಿಡ–ಗಂಟೆಗಳು ಬೆಳೆದಿದ್ದು, ತ್ಯಾಜ್ಯಗಳ ಸಂಗ್ರಹ ತಾಣವಾಗಿ ಸಮರ್ಪಕ ನಿರ್ವಹಣೆಯಿಲ್ಲದೆ ವಿನಾಶದ ಅಂಚಿನಲ್ಲಿದೆ.

ಗ್ರಾಮದ ಕೋಟೆ ಗಣಪತಿ ದೇಗುಲ ಮತ್ತು ಭೋಗ ನಂಜಂಡೇಶ್ವರ ಸ್ವಾಮಿ ದೇಗುಲಗಳ ನಡುವೆ ಚೋಳರ ಶೈಲಿಯಲ್ಲಿ ಸುಮಾರು 8 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಈ ಕಲ್ಯಾಣಿಯಲ್ಲಿ ಈ ಹಿಂದೆ ತಾವರೆ ಹೂವುಗಳು ಆವರಿಸಿಕೊಂಡು ಪ್ರತಿ ದಿನ ದೇವರ ಪೂಜೆಗೆ ಅಗತ್ಯವಿರುವಷ್ಟು ಹೂ ಸಿಗುತ್ತಿದ್ದವು. ಇದರಿಂದ ಈ ಕಲ್ಯಾಣಿಗೆ ದಾಮರ ಕುಂಟೆ ಎಂದು ಹೆಸರಾಗಿದೆ.

ಇಲ್ಲಿನ ಭೋಗ ನಂಜುಂಡೇಶ್ವರ ಸ್ವಾಮಿ ದೇಗುಲ, ಪ್ರಸನ್ನ ವೆಂಕಟರಮಣ ಸ್ವಾಮಿ ಮತ್ತು ಕೋಟೆ ಗಣೇಶ ದೇವರಿಗೆ ನಿತ್ಯ ಅಭಿಷೇಕಕ್ಕೆ ಹಾಗೂ ಗ್ರಾಮದಲ್ಲಿನ ಕುಟುಂಬಗಳು ತಮ್ಮ ನಿತ್ಯ ಬಳಕೆಗೆ ಕಲ್ಯಾಣಿಯ ನೀರನ್ನೇ ಬಳಸುತ್ತಿದ್ದರು ಎಂಬುವುದು ಗ್ರಾಮದ ಹಿರಿಯರ ಮಾತು.

ಕಲ್ಯಾಣಿಯಲ್ಲಿ ಗಿಡ–ಗಂಟೆಗಳು ಬೆಳೆದು ಹಾವುಗಳ ಕಾಟ ಹೆಚ್ಚಾಗಿದೆ. ಕಲ್ಯಾಣಿ ಪಕ್ಕದಲ್ಲಿ ವಾಸ ಮಾಡುವ ಮನೆಗಳಲ್ಲಿ ಆಗಾಗ ಹಾವುಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗ್ರಾಮದಲ್ಲಿನ ತ್ಯಾಜ್ಯಗಳನ್ನು ಕಲ್ಯಾಣಿ ಮತ್ತು ಕಲ್ಯಾಣಿಯ ದಡದಲ್ಲಿ ಸುರಿಯುತ್ತಿರುವುದರಿಂದ ತ್ಯಾಜ್ಯ ನೀರಿನಲ್ಲಿ ಸೇರ್ಪಡೆಯಾಗಿ ನೀರು ಕಲುಷಿತಗೊಂಡಿದೆ. ಈ ಕಲ್ಯಾಣಿಯ ಬಗ್ಗೆ ಕಾಳಜಿ ವಹಿಸಬೇಕಾಗಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲ್ಯಾಣಿ ಕಲುಷಿತಗೊಂಡಿದೆ ಎಂದು ಗ್ರಾಮಸ್ಥರು ದೂರಿದರು.

ಕಲ್ಯಾಣಿಗೆ ಮಳೆ ನೀರು ಹರಿಯುವ ಮುಖ್ಯ ಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸುವಂತೆ ಹಲವಾರು ಬಾರಿ ಗ್ರಾ.ಪಂ. ಸಭೆಗಳಲ್ಲಿ ಗ್ರಾ.ಪಂ. ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಒತ್ತಾಯಿಸಲಾಗಿದೆ. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾ.ಪಂ. ಸದಸ್ಯ ಎಂ.ಸಿ.ನಾರಾಯಣಸ್ವಾಮಿ ಆರೋಪಿಸಿದರು.

ಜಿ.ಪಂ. ಸಭೆಯಲ್ಲಿ ಕಲ್ಯಾಣಿ ಅಭಿವೃದ್ಧಿ ಪಡಿಸುವ ವಿಚಾರವನ್ನು ಚರ್ಚಿಸಲಾಗಿದೆ. ಹಿಂದಿನ ಜಿಲ್ಲಾಧಿಕಾರಿ ಡಾ.ತ್ರಿಲೋಕ್ ಚಂದ್ರ ಅವರು ಈ ಹಿಂದೆ ಗ್ರಾಮಕ್ಕೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಕಲ್ಯಾಣಿಯ ದುರಸ್ತಿಯ ಬಗ್ಗೆ ಅವರ ಗಮನ ಸೆಳೆಯಲಾಗಿತ್ತು. ಆದರೆ ಇಲ್ಲಿಯವರೆಗೂ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಮಾಸ್ತಿ ಕ್ಷೇತ್ರದ ಜಿ.ಪಂ. ಸದಸ್ಯ ಎಚ್.ವಿ.ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

ಕಲ್ಯಾಣಿ ಯನ್ನು ಸ್ವಚ್ಛಗೊಳಿಸಲು ಗ್ರಾಮ ಪಂಚಾಯಿತಿ ಸಭೆಯಲ್ಲಿ ಈಗಾಗಲೇ ತಿರ್ಮಾನಿಸಲಾಗಿದೆ. ಕಲ್ಯಾಣಿಯಲ್ಲಿ ನೀರು ತಂಬಿಕೊಂಡಿರುವುದರಿಂದ ವಿಳಂಬವಾಗುತ್ತಿದೆ. ನೀರು ಕಡಿಮೆಯಾದ ತಕ್ಷಣ ಕಲ್ಯಾಣಿ ಅಭಿವೃದ್ಧಿಗೊಳಿಸಲು ಕ್ರಮ ಜರುಗಿಸಲಾಗುವುದು ಎಂದು ಮಾಸ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗುಣಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಕಲ್ಯಾಣಿ ವಿನಾಶದ ಅಂಚಿನಲ್ಲಿದ್ದು, ಹಿಂದಿನ ಜಿಲ್ಲಾಧಿಕಾರಿ ಡಾ.ತ್ರಿಲೋಕ್ ಚಂದ್ರ ಗ್ರಾಮಕ್ಕೆ ಭೇಟಿ ನೀಡಿ ಕಲ್ಯಾಣಿ ಅಭಿವೃದ್ಧಿ ಪಡಿಸುವ ಆಶ್ವಾಸನೆ ನಿಡಿದ್ದರು.
ಎಚ್.ವಿ.ಶ್ರೀನಿವಾಸ್, ಜಿ.ಪಂ.ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT