7

ನೇರ ನಗದು ವರ್ಗಾವಣೆ: ಅಕ್ರಮಗಳಿಗೆ ಕಡಿವಾಣ

Published:
Updated:

ಕೊಪ್ಪಳ: 'ಸರ್ಕಾರದ ವಿವಿಧ ಸಹಾಯಧನವನ್ನು ನೇರ ನಗದು ವರ್ಗಾವಣೆ ವ್ಯವಸ್ಥೆಯಲ್ಲಿ ಆಯಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿರುವುದರಿಂದ ಅಕ್ರಮಗಳಿಗೆ ಕಡಿವಾಣ ಹಾಕಿದಂತಾಗಿದೆ' ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ಧಾರವಾಡ-ವಿಜಯಪುರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಬೆಂಗಳೂರು ಸಂಗೀತ ಮತ್ತು ನಾಟಕ ವಿಭಾಗ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಪಾಲನಾ ಇಲಾಖೆ, ಕೃಷಿ ವಿಸ್ತರಣಾ ಮತ್ತು ಶಿಕ್ಷಣ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಹಲಗೇರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

'ರಾಜ್ಯದ ಸುಮಾರು 13 ಲಕ್ಷ ಮಂದಿ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಕಂತಿನ ಹಣ ತುಂಬಿದ್ದಾರೆ. ಇದೀಗ ರೈತರು ವಿಮಾ ಲಾಭವನ್ನು ಪಡೆಯುತ್ತಿರುವುದು ರೈತರ ಬಾಳಿಗೆ ಸಂಜೀವಿನಿಯಾಗಿದೆ. ಜಿಲ್ಲೆಯಲ್ಲಿ ಸುಮಾರು ₹ 57 ಕೋಟಿ ವಿಮಾ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಗೊಬ್ಬರ, ಯಂತ್ರೋಪಕರಣಗಳ ಖರೀದಿಗೆ ಕೇಂದ್ರ ಸರ್ಕರದ ವತಿಯಿಂದ ಸಹಾಯಧನವನ್ನು ನೀಡಲಾಗುತ್ತಿದ್ದು, ಹೆಚ್ಚು ರೈತರು ಇದರ ಲಾಭ ಪಡೆದುಕೊಳ್ಳಬೇಕು. ರೈತ ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಜಿಲ್ಲೆಯಲ್ಲಿ 8 ಸಾವಿರ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸೌಲಭ್ಯ ನೀಡಲಾಗಿದೆ' ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ವೀರೇಶ ಹುನಗುಂದ ಮಾತನಾಡಿ, ‘ಪ್ರಸಕ್ತ ಸಾಲಿನಲ್ಲಿ 27,322 ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿವರ ನೀಡಲಾಗಿದ್ದು, ಇದರಿಂದ ರೈತರಿಗೆ ತಮ್ಮ ಭೂಮಿಯ ಫಲವತ್ತತೆ ಬಗ್ಗೆ ನಿಖರ ಮಾಹಿತಿ ಸಿಗಲಿದೆ. ಇದರ ಆಧಾರದ ಮೇಲೆ ಸೂಕ್ತ ಬೆಳೆಯನ್ನು ಹಾಕುವುದರಿಂದ ಖರ್ಚು ಕಡಿಮೆಯಾಗಿ ಇಳುವರಿ ಹೆಚ್ಚಾಗಿ ರೈತನ ಆದಾಯ ಹೆಚ್ಚಾಗಲಿದೆ' ಎಂದರು.

ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಟಿ.ವೇಣುಗೋಪಾಲ ಅವರು 'ಪಶುಭಾಗ್ಯ ಯೋಜನೆ' ಕುರಿತು ಮಾತನಾಡಿದರು. ತೋಟಗಾರಿಕೆ ಇಲಾಖೆಯ ವಾಮನಮೂರ್ತಿ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರದೀಪ ಬಿರಾದಾರ ಅವರು ತಮ್ಮ ಇಲಾಖಾ ಯೋಜನೆ ಕುರಿತು ಮಾತನಾಡಿದರು.

ಹಲಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ಪ ಬಸಪ್ಪ ಓಜಿನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಿ ಅಶೋಕ ಅಬ್ಬಿಗೇರಿ ಇದ್ದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಉಪ ನಿರ್ದೇಶಕ ಕೆ.ಪಿ. ರಾಜೀವನ್ ಪ್ರಾಸ್ತಾವಿಕ ಮಾತನಾಡಿದರು. ಮುರಳೀಧರ್ ಖಾರಬಾರಿ ಕಾರ್ಯಕ್ರಮ ನಿರೂಪಿಸಿದರು. ಸಿ.ಕೆ. ಸುರೇಶ ಸ್ವಾಗತಿಸಿದರು. ಪಿಡಿಒ ಅಶೋಕ ರಾಂಪುರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry