7

ವಸೂಲಿಯಾಗದ ಕರ; ನಗರಸಭೆಗೆ ಆರ್ಥಿಕ ಬರ

Published:
Updated:
ವಸೂಲಿಯಾಗದ ಕರ; ನಗರಸಭೆಗೆ ಆರ್ಥಿಕ ಬರ

ರಾಯಚೂರು: ರಾಯಚೂರು ನಗರಸಭೆ ಪ್ರತಿ ವರ್ಷ ಸಂಗ್ರಹಿಸುವ ವಿವಿಧ ಶುಲ್ಕಗಳು ಹಾಗೂ ತೆರಿಗೆಗಳ ವಸೂಲಿಯಲ್ಲಿ ಪ್ರತಿಶತ ಸಾಧನೆ ಮಾಡದೆ ಇರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಚಾಲ್ತಿ ಆರ್ಥಿಕ ಸಂಪನ್ಮೂಲಗಳಿಂದ ಸಾಕಷ್ಟು ಹಣದ ಕ್ರೋಢೀಕರಣ ಸಾಧ್ಯವಾಗದ ಕಾರಣ ಗುತ್ತಿಗೆ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ಹಾಗೂ ನಗರಸಭೆ ಸದಸ್ಯರಿಗೆ ಗೌರವಧನವನ್ನೂ ಪಾವತಿ ಮಾಡಲಾಗುತ್ತಿಲ್ಲ. ನಗರದ ವಿವಿಧೆಡೆ ಕೈಗೊಂಡ ಕಾಮಗಾರಿಗಳಿಗೆ ಪಾವತಿಸಬೇಕಿದ್ದ ಮೊತ್ತವನ್ನು ಸಹ ನಗರಸಭೆ ಬಾಕಿ ಉಳಿಸಿಕೊಂಡಿದೆ. ತ್ಯಾಜ್ಯ ವಿಲೇವಾರಿ ಸೇರಿದಂತೆ ಯಾವುದೇ ಸಮಸ್ಯೆಗಳು ಉಂಟಾದರೂ ತಕ್ಷಣ ಪರಿಹಾರ ಕಲ್ಪಿಸುವುದಕ್ಕೆ ಸಾಧ್ಯವಾಗದ ಆರ್ಥಿಕ ದುಃಸ್ಥಿತಿಯನ್ನು ನಗರಸಭೆ ಎದುರಿಸುತ್ತಿದೆ. ಬರಬೇಕಿರುವ ಬಾಕಿ ಕರ ಸಂಗ್ರಹಿಸಿದರೂ ನಗರಸಭೆಯು ಪಾವತಿಸಬೇಕಾಗಿರುವ ಮೊತ್ತವು ಸಂಪೂರ್ಣ ಮುಗಿಯುವುದಿಲ್ಲ ಎನ್ನುವುದು ಅಧಿಕಾರಿಗಳ ವಿವರಣೆ.

ಪ್ರಸಕ್ತ ವರ್ಷ ₹3.8 ಕೋಟಿ ನೀರಿನ ಕರ ಹಾಗೂ ₹8.9 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ನಗರಸಭೆ ಹೊಂದಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕರ ವಸೂಲಿ ಆಗದೆ ಇರುವುದರಿಂದ ಹಿಂದಿನ ವರ್ಷಗಳ ಬಾಕಿ ಸೇರಿ ಇಲ್ಲಿಯವರೆಗೂ ಒಟ್ಟು ₹11.24 ಕೋಟಿ ನೀರಿನ ಕರ ಹಾಗೂ ₹5.37 ಕೋಟಿ ತೆರಿಗೆ ಸಂಗ್ರಹ ಬಾಕಿ ಇದೆ.

ತೆರಿಗೆ ವಸೂಲಿ ಕಟ್ಟುನಿಟ್ಟಾಗಿಸಲು ನವೆಂಬರ್‌ ನಿಂದ ಜನಜಾಗೃತಿ ಮೂಡಿಸುವ ಕೆಲಸ ಆರಂಭವಾಗಿದೆ. ಈ ಕಾರಣದಿಂದ ಕರ ವಸೂಲಿ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಬಾಕಿ ಶುಲ್ಕ ವಸೂಲಿ ಮಾಡುವುದರ ಜತೆಗೆ ನಗರಸಭೆಯನ್ನು ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಆಡಳಿತ ಪಕ್ಷದವರು ಗಮನ ಹರಿಸಿದ್ದಾರೆ.

ಚಾಲ್ತಿ ಇರುವ ವಿವಿಧ ಶುಲ್ಕಗಳು ಮತ್ತು ಕರಗಳು 2006 ರಿಂದಲೂ ಬದಲಾಗಿಲ್ಲ. ಅಲ್ಲದೆ, ನಗರದಲ್ಲಿ ಹೊಸ ವಿಧಾನದ ಕಟ್ಟಡಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ನಗರಸಭೆಯ ಕರ ದರಗಳನ್ನು ದ್ವಿಗುಣ ಮಾಡಲು ನಿರ್ಣಯ ಕೈಗೊಂಡಿದೆ. ಕೆಲವರು ಕರ ಪರಿಷ್ಕರಣೆಯನ್ನು ವಿರೋಧಿಸಿದ್ದಾರೆ. ನಗರಸಭೆಯು ಆರ್ಥಿಕವಾಗಿ ದುರ್ಬಲವಾಗಿದ್ದರೆ ಬೇರೆ ರೀತಿಯ ಆರ್ಥಿಕ ಸಂಪನ್ಮೂಲವನ್ನು ಸೃಷ್ಟಿಸಬೇಕು. ಇದಕ್ಕಾಗಿ ಜನರ ಮೇಲೆ ಹೆಚ್ಚು ತೆರಿಗೆ ಹೊರೆ ಹಾಕಬಾರದು ಎನ್ನುವುದು ಕೆಲವರ ವಾದ. ಆದರೆ, ಕರ ಪರಿಷ್ಕರಣೆ ಅನುಷ್ಠಾನ ಮಾಡುವುದಾದರೆ ಕೆಲವೊಂದನ್ನು ಮಾರ್ಪಾಡು ಮಾಡುವಂತೆ ಸಲಹೆಗಳನ್ನು ನೀಡಿದ್ದಾರೆ.

ಕರ ಬಾಕಿ ಇಷ್ಟಿದೆ: 2017 ರ ಮಾರ್ಚ್‌ ಅಂತ್ಯಕ್ಕೆ ಒಟ್ಟು ₹8.48 ಕೋಟಿ ನೀರಿನ ಕರ ಬಾಕಿ ಉಳಿದಿತ್ತು. ಪ್ರಸಕ್ತ ಸಾಲಿನಲ್ಲಿ ಸಂಗ್ರಹಿಸಬೇಕಾಗಿದ್ದ ₹3.8 ಕೋಟಿ ಪೈಕಿ ಅಕ್ಟೋಬರ್‌ ಅಂತ್ಯದವರೆಗೂ ಒಟ್ಟು ₹1.5 ಕೋಟಿ ಮಾತ್ರ ನೀರಿನ ಕರ ಸಂಗ್ರಹವಾಗಿದೆ. ಆರ್ಥಿಕ ವರ್ಷಾಂತ್ಯವು ನಾಲ್ಕು ತಿಂಗಳು ಮಾತ್ರ ಬಾಕಿ ಇದ್ದರೂ ಶೇ 50 ರಷ್ಟು ಕೂಡಾ ಕರ ಸಂಗ್ರಹ ಸಾಧನೆ ಆಗಿಲ್ಲ. ಒಟ್ಟು ಬಾಕಿ ವಸೂಲಿ ₹11.24 ಕೋಟಿಯಷ್ಟಿದೆ.

ಆಸ್ತಿ ತೆರಿಗೆ 2017 ರ ಮಾರ್ಚ್‌ ಅಂತ್ಯಕ್ಕೆ ₹1.9 ಕೋಟಿ ಬಾಕಿ ಉಳಿದಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ₹8.88 ತೆರಿಗೆ ಸಂಗ್ರಹಿಸುವ ಗುರಿ ಇತ್ತು. ಇಲ್ಲಿಯವರೆಗೂ ಒಟ್ಟು ₹5.35 ಕೋಟಿ ವಸೂಲಿಯಾಗಿದೆ. ಒಟ್ಟು ಬಾಕಿ ಮೊತ್ತ ₹10.72 ಕೋಟಿಯಲ್ಲಿ ಶೇ 50 ರಷ್ಟು ಕೂಡಾ ಸಂಗ್ರಹ ಸಾಧನೆ ಆಗಿರುವುದಿಲ್ಲ.

* * 

ನಗರಸಭೆ ಸಿಬ್ಬಂದಿಯು ಕರ ವಸೂಲಿ ಮಾಡುತ್ತಿದ್ದಾರೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕಾರ್ಯಸಾಧನೆ ಆಗುತ್ತಿಲ್ಲ. ದಕ್ಷತೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ.

ಜಯಣ್ಣ

ನಗರಸಭೆ ಪ್ರಭಾರಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry