ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿ ಆಯ್ಕೆ ಕಗ್ಗಂಟು

Last Updated 25 ನವೆಂಬರ್ 2017, 9:06 IST
ಅಕ್ಷರ ಗಾತ್ರ

ರಾಮನಗರ: ಗೊಂಬೆಗಳ ನಾಡು ಚನ್ನಪಟ್ಟಣದ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿದ್ದು, ಚುನಾವಣೆ ಸಮೀಪಿಸಿದಂತೆ ಜಿದ್ದಾಜಿದ್ದಿ ಹೆಚ್ಚಾಗುತ್ತಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದಿರುವ ಸಿ.ಪಿ. ಯೋಗೇಶ್ವರ್‌ ಸದ್ಯ ಮಂಡ್ಯ ಜಿಲ್ಲೆಯ ರಾಜಕೀಯದತ್ತ ಚಿತ್ತ ನೆಟ್ಟಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್ ಪಾಳಯದಲ್ಲಿ ಅಭ್ಯರ್ಥಿಗಳ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಇದ್ದು, ತ್ರಿಕೋನ ಸ್ಪರ್ಧೆಯ ಸಾಧ್ಯತೆ ಹೆಚ್ಚುತ್ತಿದೆ.

ಅನಿತಾ ಕುಮಾರಸ್ವಾಮಿಯೇ ಈ ಬಾರಿಯ ಅಭ್ಯರ್ಥಿ ಆಗಬೇಕು ಎಂದು ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಆದರೆ ವರಿಷ್ಠರಾದ ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಹಸಿರು ನಿಶಾನೆ ತೋರಿಸಿಲ್ಲ. ಕಳೆದ ಬಾರಿಯ ಸೋಲಿನ ಅನುಕಂಪ ಈ ಬಾರಿ ಖಂಡಿತ ಕೈಹಿಡಿಯಲಿದೆ ಎನ್ನುವ ವಿಶ್ವಾಸದಿಂದಲೇ ಅನಿತಾ ಚನ್ನಪಟ್ಟಣ ರಾಜಕೀಯದಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಏನೇ ಗೊಂದಲಗಳು ಇದ್ದರೂ ಅಂತಿಮವಾಗಿ ತಮ್ಮ ಸ್ಪರ್ಧೆಗೆ ಕುಟುಂಬದವರು ಒಪ್ಪಿಗೆ ಸೂಚಿಸಲಿದ್ದಾರೆ ಎನ್ನುವ ಆಶಯ ಅವರದ್ದು.

ಒಂದು ವೇಳೆ ಅನಿತಾ ಬದಲಿಗೆ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇ ಆದಲ್ಲಿ ಜೆಡಿಎಸ್‌ಗೆ ಬಂಡಾಯದ ಬಿಸಿ ತಟ್ಟುವ ಸಾಧ್ಯತೆಯೇ ಹೆಚ್ಚು, ಅನಿತಾ ಹೊರತುಪಡಿಸಿ ಜೆಡಿಎಸ್ ಪಾಳಯದಲ್ಲಿ ಮತ್ತೊಬ್ಬ ಅಭ್ಯರ್ಥಿಯ ಆಯ್ಕೆಗೆ ಸಹಮತ ಏರ್ಪಡುತ್ತಿಲ್ಲ. ಪಕ್ಷದ ಮುಖಂಡ ಜಯಮುತ್ತು ಸಹಿತ ಹಲವರ ಹೆಸರು ಚಾಲ್ತಿಯಲ್ಲಿ ಇದೆಯಾದರೂ ಅದಕ್ಕೆ ಸರ್ವಾನುಮತದ ಒಪ್ಪಿಗೆ ಸಿಗುವುದು ಅನುಮಾನ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಅನಿತಾ ಅವರೇ ಕಣಕ್ಕೆ ಇಳಿಯಲಿದ್ದಾರೆ ಎಂಬುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಸುರೇಶ್‌ ಔಟ್‌?: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಹೆಚ್ಚು ಆಸಕ್ತಿ ತೋರುತ್ತಿರುವ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಈಚೆಗೆ ಚನ್ನಪಟ್ಟಣ ರಾಜಕೀಯದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾರೆ. ಗ್ರಾಮ ಮಟ್ಟದಲ್ಲಿ ನಿರಂತರವಾಗಿ ಸಭೆಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಅವರೇ ಅಭ್ಯರ್ಥಿ ಆಗಲಿದ್ದಾರೆ ಎನ್ನುವ ಮಾತುಗಳೂ ಹೆಚ್ಚಾಗಿ ಕೇಳಿಬರುತ್ತಿವೆ.

ಆದರೆ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಪರ ಅಲೆ ಇಲ್ಲ. ಹೀಗಾಗಿ ಅವರನ್ನು ಅಲ್ಲಿ ಕಣಕ್ಕೆ ಇಳಿಸಲು ಪಕ್ಷದ ಮುಖಂಡರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಸಚಿವ ಡಿ.ಕೆ. ಶಿವಕುಮಾರ್ ಸಂಬಂಧಿ ಶರತ್‌ಚಂದ್ರ ಅವರ ಹೆಸರೂ ಕೇಳಿಬರುತ್ತಿದೆ. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌. ಗಂಗಾಧರ್‌, ರಘುನಂದನ್‌ ರಾಮಣ್ಣ, ಚಂದ್ರಸಾಗರ್‌, ಟಿ.ಕೆ. ಯೋಗೇಶ್‌ ಸಹಿತ ಹಲವು ಹೆಸರುಗಳು ಕಾಂಗ್ರೆಸ್‌ ಪಟ್ಟಿಯಲ್ಲಿ ಇವೆ.

ಹೊಂದಾಣಿಕೆ ಆಗುತ್ತಾ?: ಕಾಂಗ್ರೆಸ್‌ ವಿರುದ್ಧ ಸಮರ ಸಾರಿರುವ ಶಾಸಕ ಸಿ.ಪಿ. ಯೋಗೇಶ್ವರ್‌ ಅವರನ್ನು ಸ್ವಕ್ಷೇತ್ರದಲ್ಲಿಯೇ ಹಣಿಯಲು ಸಚಿವ ಡಿ.ಕೆ. ಶಿವಕುಮಾರ್ ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದ ಕಾರ್ಯಕರ್ತರಲ್ಲಿ ಕೇಳಿಬರುತ್ತಿವೆ.

ಒಂದು ವೇಳೆ ಅನಿತಾ ಸ್ಪರ್ಧೆ ಖಚಿತವಾದಲ್ಲಿ ಕಾಂಗ್ರೆಸ್‌ ದುರ್ಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಜೆಡಿಎಸ್‌ ಗೆಲುವಿಗೆ ಸಹಕರಿಸಬಹುದು ಎನ್ನುವ ಗುಮಾನಿ ಇದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಿ ಕಾಂಗ್ರೆಸ್‌–ಜೆಡಿಎಸ್‌ ಕೆಲವು ಕ್ಷೇತ್ರಗಳಲ್ಲಿ ಒಳ ಒಪ್ಪಂದ ಮಾಡಿಕೊಳ್ಳುತ್ತಿವೆ ಎಂದು ಈಗಾಗಲೇ ಗುಸುಗುಸು ಮಾತು ಕೇಳಿಬರುತ್ತಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಶನಿವಾರ ಇಡೀ ದಿನ ಚನ್ನಪಟ್ಟಣದಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12ಕ್ಕೆ ಕನಕ ಜಯಂತಿ ಜಾಗೂ ಕನಕ ಸೊಸೈಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಲಿದ್ದಾರೆ, ಮಧ್ಯಾಹ್ನ 3ಕ್ಕೆ ಪ್ರಗತಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ. ಅಧಿಕಾರಿಗಳೊಂದಿಗಿನ ಈ ಸಭೆಯು ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT