7

ಕೊನೆ ಭಾಗಕ್ಕೆ ನೀರು ಸಿಗದಿದ್ದರೆ ಹೋರಾಟ

Published:
Updated:

ಸುರಪುರ: ನಾರಾಯಣಪುರ ಎಡದಂಡೆ ಕಾಲುವೆಗೆ ನಿರಂತರ ನೀರು ಹರಿಸುವಂತೆ ಆಗ್ರಹಿಸಿ ಜೆಡಿಎಸ್‌ ಮುಖಂಡರು ಶುಕ್ರವಾರ ಹಸನಾಪುರದ ಕೆಬಿಜೆಎನ್‌ಎಲ್‌ ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ನೇತೃತ್ವವಹಿಸಿದ್ದ ಮುಖಂಡ ಮಲ್ಲಯ್ಯ ಕಮತಗಿ ಮಾತನಾಡಿ, ‘ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದರೂ ವಾರಬಂದಿ ಪದ್ಧತಿ ಅನುಸರಿಸುತ್ತಿರುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಅದರಲ್ಲೂ ಕಾಲುವೆ ಕೊನೆ ಭಾಗದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದು ದೂರಿದರು.

‘ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನ.24ರಂದು ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ನಮ್ಮ ಪಕ್ಷ ಎರಡು ದಿನದ ಹಿಂದೆ ಉಪವಾಸ ಸತ್ಯಾಗ್ರಹದ ನೋಟಿಸು ನೀಡಿದಾಗ ನ.28ರವರೆಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ತಿಳಿಸಿದರು.

ಜೆಡಿಎಸ್ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್‌ ಹುಸೇನ್‌ ಮಾತನಾಡಿ, ‘ಸಲಹಾ ಸಮಿತಿ ಸಭೆ ನಡೆಸುವಾಗ ಈ ಭಾಗದ ರೈತರಿಗೂ ಭಾಗವಹಿಸಲು ಅವಕಾಶ ನೀಡಬೇಕು. ನಿರಂತರ ನೀರು ಹರಿಸುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಯುತ್ತದೆ’ ಎಂದು ಎಚ್ಚರಿಸಿದರು.

‘ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರಮಾಣ ವಚನ ಸಮಾರಂಭದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಕುಮಾರಸ್ವಾಮಿ ಸಹಿ ಹಾಕಲಿದ್ದಾರೆ’ ಎಂದು ತಾಲ್ಲೂಕು ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ ಹೇಳಿದರು.

ಮುಖಂಡರಾದ ದೇವಿಂದ್ರಪ್ಪ ಬಳಿಚಕ್ರ, ವೆಂಕೋಬ ದೊರೆ, ರಾಜಾ ರಾಮಪ್ಪನಾಯಕ ಜೇಜಿ, ಶಿವಪ್ಪ ಸದಬ, ಹಣಮಂತ ಮಡಿವಾಳ ಮಾತನಾಡಿದರು. ತಿಪ್ಪಣ್ಣ ಪಾಟೀಲ, ಬಸವರಾಜ ವಾಗಣಗೇರಾ, ಬಸವರಾಜ ಚೂರಿ, ಶಾಂತಿಲಾಲ ರಾಠೋಡ, ಅಲ್ತಾಫ್‌ ಸಗರಿ, ಗೋಪಾಲ ಬಾಗಲಕೋಟೆ, ಉಮೇಶ ಕುಂಬಾರ, ವೆಂಕಟೇಶ ಬಿಚಗತ್ತಕೇರಿ, ಅಂಬಯ್ಯ ದೊರಿ, ಮಾನಯ್ಯ ಬೊಮ್ಮನಳ್ಳಿ, ತಿಮ್ಮಣ್ಣ ಜಂಗಳಿ ಮತ್ತು ಕಾಲುವೆ ಕೊನೆ ಭಾಗದ ರೈತರು ಭಾಗವಹಿಸಿದ್ದರು.

ಡಿ.4ರವರೆಗೆ ನೀರು ಹರಿಸುವ ಭರವಸೆ

ಅಧೀಕ್ಷಕ ಎಂಜಿನಿಯರ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಎಇಇ ಅಮಿತ್‌ ಕೇಶವಾಟಕರ್‌, ‘ಡಿ.4ರ ವರೆಗೆ ನಿರಂತರ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂಬ ಲಿಖಿತ ಪತ್ರ ನೀಡಿದ ಮೇಲೆ ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಳ್ಳಲಾಯಿತು.

* *

ನಾರಾಯಣಪುರ ಎಡದಂಡೆಯ ಎಲ್ಲಾ ವಿತರಣಾ ಮತ್ತು ಉಪ ಕಾಲುವೆಗಳನ್ನು ನವೀಕರಿಸಿದರೆ ಕೊನೆ ಭಾಗದ ರೈತರಿಗೆ ನೀರು ತಲುಪುತ್ತದೆ.

ಮಲ್ಲಯ್ಯ ಕಮತಗಿ

ಜೆಡಿಎಸ್‌ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry