7

ಬರಿಗೈಯಲ್ಲೇ ತೆರಳಿದ ಮಾಜಿ ಶಾಸಕ

Published:
Updated:
ಬರಿಗೈಯಲ್ಲೇ ತೆರಳಿದ ಮಾಜಿ ಶಾಸಕ

ಐದು ತಿಂಗಳ ಹಿಂದೆ ಲಘು ಪಾರ್ಶ್ವವಾಯುವಿಗೆ ತುತ್ತಾಗುವವರೆಗೂ ಅವರು ಬೇರೊಬ್ಬರ ರಬ್ಬರ್‌ ತೋಟದಲ್ಲಿ ರಬ್ಬರ್‌ ಟ್ಯಾಪಿಂಗ್‌ ಮಾಡುತ್ತಿದ್ದರು. ಒಂದು ಕಾಲದಲ್ಲಿ ಸಚಿವರ ಚೇಂಬರ್‌ಗೆ ರಾಜಾರೋಷವಾಗಿ ಹೋಗಿ–ಬಂದು ಊರಿನ ಜನರ ಕೆಲಸಗಳನ್ನು ಮಾಡಿಸಿಕೊಡುತ್ತಿದ್ದ ವ್ಯಕ್ತಿ, ಬೇರೊಬ್ಬರ ತೋಟದಲ್ಲಿ ಕೂಲಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಕಳೆದ ಸೋಮವಾರ ಆ ವ್ಯಕ್ತಿ ಕೊನೆಯುಸಿರೆಳೆದಾಗ ‘ಶಾಸಕರಾಗಿದ್ದವರು ಹೀಗೂ ಇರುತ್ತಾರೆಯೇ’ ಎಂಬ ಒಂದು ಸಣ್ಣ ಉದ್ಗಾರ ಹಲವರ ಮನದೊಳಗೆ ಮೊಳಗಿತ್ತು.

ನಿಜ. ಬಾಕಿಲ ಹುಕ್ರಪ್ಪ (65) ಅವರು ನಿಧನರಾದಾಗ ಇಡೀ ರಾಜ್ಯಕ್ಕೆ ಗೊತ್ತಾದ ಈ ಸತ್ಯ, ಸುಳ್ಯ ತಾಲ್ಲೂಕಿನ ಮಟ್ಟಿಗೆ ಮಾತ್ರ ಪ್ರತಿದಿನದ ನೋಟವಾಗಿತ್ತು. ಶಾಸಕರಾಗುವುದಕ್ಕೆ ಮೊದಲೂ ಅವರು ಅಡಿಕೆ ಮರ ಹತ್ತಿ ಅಡಿಕೆ ಕೊಯ್ಯುತ್ತಿದ್ದರು, ಎರಡು ವರ್ಷ ವಿಧಾನಸಭೆಯ ಒಳಹೊರಗೆ ಸುದ್ದಿ ಮಾಡಿದ್ದ ವ್ಯಕ್ತಿ ಮತ್ತೆ ಊರಿಗೆ ಬಂದಾಗಲೂ ಅವರ ಅಡಿಕೆ ತೋಟದ ನಂಟು ಬಿಡಲಿಲ್ಲ.

ಶಾಸಕರಾದವರು ಗ್ರಾಮ ಪಂಚಾಯಿತಿ ಸದಸ್ಯರಾಗುವ ನಿದರ್ಶನವೂ ಬಹಳ ಅಪರೂಪ. ಆದರೆ ಹುಕ್ರಪ್ಪ ಇಲ್ಲಿಯೂ ತಾವು ಅಪರೂಪದ ವ್ಯಕ್ತಿ ಎಂಬುದನ್ನು ತೋರಿಸಿಕೊಟ್ಟರು. 10ವರ್ಷ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಅವರು ಎರಡೂವರೆ ವರ್ಷ ಅಧ್ಯಕ್ಷರೂ ಆಗಿದ್ದರು. ವಯಸ್ಸಾದಂತೆ ಅಡಿಕೆ ಮರ ಹತ್ತಲು ಸಾಧ್ಯವಾಗದಾಗ ರಬ್ಬರ್‌ ಟ್ಯಾಪಿಂಗ್‌ ಮತ್ತು ಕೂಲಿ ಕೆಲಸ ಮಾಡುವುದಕ್ಕೆ ದೇಹ ಹಿಂಜರಿಯಲಿಲ್ಲ. ಇದೆಲ್ಲದಕ್ಕೆ ಕಾರಣ ಇಷ್ಟೇ, ಹೊಟ್ಟೆಪಾಡು. ರಾಜಕಾರಣದಲ್ಲಿದ್ದೂ ದುಡ್ಡು ಮಾಡದೆ ಹೋದ ಅಪರೂಪದಲ್ಲಿ ಅಪರೂಪದ ವ್ಯಕ್ತಿ ಎಂಬ ನೆಲೆಯಲ್ಲಿ ಬಾಕಿಲ ಹುಕ್ರಪ್ಪ ವಿಶಿಷ್ಟವಾಗಿ ಗುರುತಿಸಿಕೊಂಡವರು.

ಪಕ್ಷಾಂತರ ಎಂಬುದು ಹುಕ್ರಪ್ಪ ಅವರಿಗೆ ನೀರು ಕುಡಿದಷ್ಟೇ ಸಲೀಸಾಗಿತ್ತು. ಎಡಪಕ್ಷ ಬಿಟ್ಟರೆ ಅವರು ಉಳಿದೆಲ್ಲಾ ಪಕ್ಷಗಳಿಗೂ ಪ್ರವೇಶ ಮಾಡಿದವರು. ಆದರೆ ಎಲ್ಲೂ ಅವರಿಗೆ ನೆಲೆ ನಿಲ್ಲಲು ಸಾಧ್ಯವಾಗಲೇ ಇಲ್ಲ. 1983ರಿಂದ 85ರವರೆಗೆ ಬಿಜೆಪಿ ಶಾಸಕರಾಗಿದ್ದ ಅವರನ್ನು ಬಳಿಕ ಬಿಜೆಪಿ ಹತ್ತಿರಕ್ಕೆ ಸೇರಿಸಿಕೊಳ್ಳಲಿಲ್ಲ. ಉಳಿದ ಪಕ್ಷಗಳಲ್ಲೂ ಅವರ ಕೈಚಳಕ ನಡೆಯಲು ವ್ಯವಸ್ಥೆ ಅವಕಾಶ ಕಲ್ಪಿಸಲಿಲ್ಲ. ಹೀಗಾಗಿ ಪಕ್ಷಗಳನ್ನು ಬದಲಿಸುತ್ತಾ ಹೋದರೇ ಹೊರತು ಅವರು ಬದಲಾಗಲಿಲ್ಲ, ಅವರ ಜೀವನವೂ ಬದಲಾಗಲಿಲ್ಲ. ಮಾಜಿ ಶಾಸಕ ಬಹುತೇಕ ಕೂಲಿ ಕೆಲಸ ಮಾಡುತ್ತಲೇ ಇಹಲೋಕ ತ್ಯಜಿಸಿಬಿಟ್ಟರು. ರಾಜಕಾರಣದಲ್ಲಿ ಇಂತಹ ವ್ಯಕ್ತಿಗಳನ್ನು ಕಾಣಲು ಅಸಾಧ್ಯವಾಗಿರುವುದಕ್ಕೆ ಸಾವಿನ ನಂತರ ಹುಕ್ರಪ್ಪ ಮನೆಮಾತಾಗಿಬಿಟ್ಟರು.

ರಾಜ್ಯದಲ್ಲಿ ಆಗಷ್ಟೇ ಬಿಜೆಪಿಯ ಕಮಲ ಅರಳ ತೊಡಗಿತ್ತು. ಅಂತಹ ಹೂಗಳ ಮೊದಲ ಸಾಲಿನಲ್ಲಿ ನಿಲ್ಲುವಂತಹವರು ಬಾಕಿಲ ಹುಕ್ರಪ್ಪ. ಸುಳ್ಯ ಈಗಲೂ ಬಿಜೆಪಿಯ ಭದ್ರ ಕೋಟೆ. ಇದಕ್ಕೆ ಅಡಿಗಲ್ಲು ಹಾಕಿದವರು ಬಾಕಿಲ ಹುಕ್ರಪ್ಪ. ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದ ಕಾರಣಕ್ಕೆ ಅವರಿಗೆ 1983ರಲ್ಲಿ ಬಿಜೆಪಿಯಿಂದ ಟಿಕೆಟ್‌ ನೀಡಲಾಗಿತ್ತು.

ಹುಕ್ರಪ್ಪ ಅವರು 21,675 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶೀನ ಎನ್. ಅವರನ್ನು 15,463 ಮತಗಳ ಅಂತರದಿಂದ ಸೋಲಿಸಿದ್ದರು. ಮೀಸಲು ಕ್ಷೇತ್ರದಲ್ಲಿ ಅವರ ಸಾಧನೆ ಅಂದಿನ ಮಟ್ಟಿಗೆ ವಿಶಿಷ್ಟವೇ ಆಗಿತ್ತು. ಅಂದಿನ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ರಾಚಯ್ಯ ಅವರಿಗೆ ಬಹಳ ನಿಕಟರಾಗಿದ್ದ ಹುಕ್ರಪ್ಪ ಅವರು ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್‌ ನೋಡಿ ಬರುವ ಅವಕಾಶ ಪಡೆದುಕೊಂಡರು. ಬಹುಶಃ ಆ ಕಾಲದಲ್ಲಿ ಸುಳ್ಯ ತಾಲ್ಲೂಕಿನ ಕುಗ್ರಾಮವೊಂದರಿಂದ ಅಮೆರಿಕಕ್ಕೆ ಹೋಗಿ ಬಂದ ಕೆಲವೇ ಕೆಲವು ಮಂದಿಯಲ್ಲಿ ಇವರೂ ಒಬ್ಬರು ಇದ್ದಿರಬಹುದು. ಹಾಗಂತ ಅವರ ಬಳಿಗೆ ಎಂದೂ ಅಹಂ ಸುಳಿಯಲೇ ಇಲ್ಲ.

ಪಿಯುಸಿವರೆಗೆ ಓದಿದ್ದ ಹುಕ್ರಪ್ಪ ಅವರು ಹುಟ್ಟಿದ್ದು ಗುತ್ತಿಗಾರು ಸಮೀಪದ ಬಾಕಿಲದಲ್ಲೇ. ಅಪ್ಪ, ಅಮ್ಮನದು ಕೂಲಿ ಕೆಲಸ. ತೀರಾ ಬಡತನದಲ್ಲೂ ಅವರನ್ನು ಎತ್ತಿ ನಿಲ್ಲಿಸಿದ್ದು ಮಾತ್ರ ಸ್ವಾಭಿಮಾನ. ಹೀಗಾಗಿ ತರುಣ ಹುಕ್ರಪ್ಪ ಮೈಮುರಿದು ದುಡಿಯುವುದನ್ನೇ ಜೀವನದ ಅವಿಭಾಜ್ಯ ಅಂಗವಾಗಿಸಿಬಿಟ್ಟರು. ವಿವಾಹವಾದ ಬಳಿಕವೂ ಅವರದು ಕೂಲಿಯೇ ಕಾಯಕವಾಗಿತ್ತು.

ರಾಜಕಾರಣದ ಸಂಪರ್ಕದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಆದರೆ ಅವರ ಖಾಸಗಿ ಬದುಕು ಬದಲಾಗಲಿಲ್ಲ. ಒಬ್ಬ ಪುತ್ರ, ಇಬ್ಬರು ಪುತ್ರಿಯರ ಚಿಕ್ಕ ಸಂಸಾರ ಅವರದು. ಮೆಟ್ಟಿನಡ್ಕ ಕಾಲೋನಿಯಲ್ಲಿ ಮುರಿದು ಬೀಳುವಂತಹ ಸ್ಥಿತಿಯಲ್ಲಿ ಅವರ ಮನೆ ಇದೆ. ಮಾಜಿ ಶಾಸಕನ ನೆಲೆಯಲ್ಲಿ ಬರುವ ಪಿಂಚಣಿ ಮಾತ್ರ ಅವರ ಜೀವನಾಧಾರವಾಗಿತ್ತು. ಈ ಪಿಂಚಣಿ ಪಡೆಯುವುದಕ್ಕೂ ಅವರು ಬಹಳ ಹೋರಾಟ ಮಾಡಿದ್ದರು.

ರಾಜಕಾರಣಕ್ಕೆ ಬಂದ ಹುಕ್ರಪ್ಪ ಅವರ ಕೆಲವು ದೌರ್ಬಲ್ಯಗಳೇ ಅವರನ್ನು ಬಿಜೆಪಿಯಿಂದ ದೂರ ಇರಿಸುವಂತೆ ಮಾಡಿಬಿಟ್ಟಿದ್ದವು. ಅವರು ಎಂದೂ ಭ್ರಷ್ಟರಾಗಿರಲಿಲ್ಲ. ಆದರೆ ಅವರ ಕೆಲವೊಂದು ನಡವಳಿಕೆಗಳಿಂದ ಬಿಜೆಪಿಗೆ ಇರಿಸುಮುರುಸು ಉಂಟಾಗಬಹುದು ಎಂಬ ಕಾರಣಕ್ಕೆ 1985ರಲ್ಲಿ ಪಕ್ಷ ಅವರಿಗೆ ಟಿಕೆಟ್‌ ನೀಡಲಿಲ್ಲ. ಹುಕ್ರಪ್ಪ ಅವರು ಜನತಾ ಪಕ್ಷದಿಂದ ಕಣಕ್ಕೆ ಇಳಿದರು. ಆಗ 24,749 ಮತಗಳನ್ನು ಗಳಿಸಿದ್ದ ಹುಕ್ರಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿ ಕೆ.ಕುಶಲ ಅವರೆದುರು ಕೇವಲ 800 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಅಗ್ರಹಾರ ದುಗ್ಗಪ್ಪ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಹುಕ್ರಪ್ಪ ಅವರನ್ನು ಹೇಗಾದರೂ ಮಾಡಿ ಸೋಲಿಸಲು ಅಂದು ಕೆಲವು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರೇ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾಯಿಸಿದ್ದರು ಎಂಬ ಮಾತು ಆಗ ಕೇಳಿಬಂದಿತ್ತು.

1989ರ ಚುನವಣೆಯಲ್ಲಿ ಮತ್ತೆ ಜನತಾ ದಳದಿಂದ ಸ್ಪರ್ಧಿಸಿದ್ದ ಹುಕ್ರಪ್ಪ ಅವರು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಈಗಿನ ಬಿಜೆಪಿ ಶಾಸಕ ಅಂಗಾರ ಅವರು ಕೂಡಾ ಸ್ಪರ್ಧೆಯಲ್ಲಿದ್ದು, ಅಂಗಾರ ಎರಡನೇ ಸ್ಥಾನಕ್ಕೆ ಬಂದಿದ್ದರು. ಆಗಲೂ ಕಾಂಗ್ರೆಸ್‌ನ ಕುಶಲ ಅವರು ಗೆದ್ದಿದ್ದರು.

ಆನಂತರ ಬಾಕಿಲ ಹುಕ್ರಪ್ಪ ಅವರು ಪಕ್ಷಾಂತರಿಯಾಗುತ್ತಲೇ ಹೋದರು. 1994ರ ಚುನಾವಣೆಯಲ್ಲಿ ಆಗಿನ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಕರ್ನಾಟಕ ಪ್ರದೇಶ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಸ್ಪರ್ಧಿಸಿ ಸೋತರು. ಒಂದು ವರ್ಷದ ನಂತರ ಮತ್ತೆ ಬಿಜೆಪಿಗೆ ಬಂದರು. ಕೆಲವು ವರ್ಷಗಳ ನಂತರ ಕಾಂಗ್ರೆಸ್‌ಗೆ ಹೋದರು. ಬಳಿಕ ಜೆಡಿಎಸ್‌ಗೆ ತೆರಳಿದರು. ಇತ್ತೀಚೆಗೆ ಆಮ್ ಆದ್ಮಿ ಪಕ್ಷವನ್ನೂ ಸೇರಿದ್ದರು. ಕೊನೆಯುಸಿರೆಳೆಯುವ ಸಮಯದಲ್ಲಿ ಅವರು ಇದ್ದುದು ಕಾಂಗ್ರೆಸ್ ಪಕ್ಷದಲ್ಲಿ.

ಶಾಸಕರಾಗಿದ್ದವರು ಹೇಗೆ ಇರುತ್ತಾರೆ ಎಂಬುದನ್ನು ಇಂದು ಯಾರಿಗೂ ತೋರಿಸಿಕೊಡಬೇಕಿಲ್ಲ. ವಿಧಾನಸೌಧ ಮೆಟ್ಟಿಲು ಏರಿದರೆ ಸಾಕು ಒಂದು ಮನೆ, ಕಾರು, ಇತರ ಸೌಕರ್ಯಗಳು ತಾವಾಗಿಯೇ ಬಂದುಬಿಡುತ್ತವೆ. ಆದರೆ ಹುಕ್ರಪ್ಪ ಅವರಿಗೆ ಮಾತ್ರ ಇದನ್ನು ದಕ್ಕಿಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ. ಕಾರು ಬಿಡಿ, ಒಂದು ಸ್ಕೂಟರ್ ಸಹ ಅವರ ಬಳಿ ಇರಲಿಲ್ಲ.

ಹೆಂಡತಿಯ ಕಡೆಯಿಂದ ಒಂದಿಷ್ಟು ಜಮೀನು ಲಭಿಸಿದ್ದರೂ ಅದರಲ್ಲಿ ಕೃಷಿ ಕಾರ್ಯವನ್ನು ಸುಗಮವಾಗಿ ಮಾಡುವುದು ಅವರಿಗೆ ಸಾಧ್ಯವಾಗಲಿಲ್ಲ. ಇರುವ ಪುತ್ರನಿಗೂ ಅಂತಹದ್ದರಲ್ಲಿ ಆಸಕ್ತಿ ಇದ್ದಂತಿಲ್ಲ. ಬರುತ್ತಿದ್ದ ಪಿಂಚಣಿಯಲ್ಲೂ ಕೆಲವೊಂದು ಕಡೆ ಸೋರಿಕೆಯಾಗಿಬಿಡುತ್ತಿತ್ತು. ಅವರ ಸ್ಥಿತಿ ಎಂತಹದ್ದಾಗಿತ್ತು ಎಂದರೆ 10 ವರ್ಷದ ಹಿಂದೆ ಅನಾರೋಗ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಗೆ ಅವರು ದಾಖಲಾಗಿದ್ದಾಗ ಆಸ್ಪತ್ರೆಯ ವೆಚ್ಚ ಭರಿಸುವುದು ಅವರಿಗೆ ಅಸಾಧ್ಯವಾಗಿತ್ತು. ಹಣ ಪಾವತಿಸದ ಕಾರಣ ಎರಡು ದಿನ ಆಸ್ಪತ್ರೆಯಲ್ಲೇ ಉಳಿಯಬೇಕಾಗಿಬಂದಿತ್ತು. ಆಗ ಗುತ್ತಿಗಾರು ಭಾಗದ ಕೆಲವು ಪ್ರಮುಖರು ಹಣ ಸಂಗ್ರಹಿಸಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿದ್ದರು.

ಸುಳ್ಯ ಕ್ಷೇತ್ರಕ್ಕೆ ತನ್ನಿಂದಾದ ಕೆಲಸ ಮಾಡಿರುವ ಹುಕ್ರಪ್ಪ ಅವರು ಅಧಿಕಾರ ಇಲ್ಲದಿದ್ದಾಗಲೂ ಹಲವರಿಗೆ ಹಲವು ರೀತಿಯಿಂದ ಸಹಾಯ ಮಾಡಿದ್ದಿದೆ. ಹಾಗಿದ್ದರೆ ಅಧಿಕಾರವನ್ನು ಅವರು ಸ್ವಂತಕ್ಕೆ ಬಳಸಿಕೊಂಡಿದ್ದು ಇಲ್ಲವೇ? ಇದೆ, ಯಾವುದಕ್ಕೆ ಎಂದರೆ ಅವರ ಗುಡಿಸಲಿಗೆ ಗ್ಯಾಸ್‌ ಸಂಪರ್ಕ ಪಡೆಯುವುದಕ್ಕೆ ಮತ್ತು ಕೋವಿ ಪರವಾನಗಿ ಮಾಡಿಸಿಕೊಳ್ಳುವುದಕ್ಕೆ! ಉಳಿದಂತೆ ಅವರು ತಮ್ಮ ಸ್ವಂತಕ್ಕೆಂದು ಮಾಡಿದ್ದು ಏನೂ ಇಲ್ಲ ಎಂಬುದನ್ನು ಬೆಟ್ಟುಮಾಡಿ ತೋರಿಸುತ್ತಾರೆ ಅವರಿಗೆ ನಿಕಟರಾಗಿರುವವರು.

ಹೀಗಾಗಿಯೇ ಬಾಕಿಲ ಹುಕ್ರಪ್ಪ ಇತಿಹಾಸದ ಪುಟದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry