7

ಸುಳ್ಳು ಹೇಳಿದ್ದರೂ ರಕ್ಷಿಸಿತು ಪ್ರಾಮಾಣಿಕತೆ

Published:
Updated:
ಸುಳ್ಳು ಹೇಳಿದ್ದರೂ ರಕ್ಷಿಸಿತು ಪ್ರಾಮಾಣಿಕತೆ

ಅಪರಾಧ ಶಾಸ್ತ್ರಜ್ಞ ವೋಲ್ಟರ್ ಹೇಳುವುದು ‘ಅಪರಾಧವನ್ನು ಹತ್ತಿಕ್ಕುವ ಸರಳ ಸೂತ್ರವೆಂದರೆ ಕಾನೂನನ್ನು ಪಾಲಿಸುವುದು, ಅನುಸರಿಸದೇ ಇರುವವರನ್ನು ಶಿಕ್ಷಿಸುವುದು’. ಕೊಲೆಗಾರ ಕಾನೂನು ಅನುಸರಿಸದೇ ಇರುವವನು ಎನ್ನಲು ವಿಶೇಷ ಒತ್ತು ಬೇಕಿಲ್ಲ. ಆದರೆ ಕೊಲೆಯಾಗುವ ಸಮಯದಲ್ಲಿ ಅವನ ಜೊತೆ ಇದ್ದವನನ್ನೂ; ಕೊಲೆ ಮಾಡದಂತೆ ತಡೆಯೊಡ್ಡದವನನ್ನೂ; ಕೊಲೆ ನಡೆದದ್ದನ್ನು ನೋಡಿಯೂ ಪೊಲೀಸರಿಗೆ ತಿಳಿಸದೇ ಇರುವವನನ್ನೂ; ಕೊಲೆಗಾರನಿಗೆ ನೆರವಾಗುವಂತೆ ಸಾಕ್ಷಿ ನಾಶಮಾಡುವವನನ್ನೂ; ಕೊಲೆಗಾರ ಪೊಲೀಸರಿಗೆ ಸಿಗದಂತೆ ತಲೆಮರೆಸಿಕೊಳ್ಳಲು ಆಶ್ರಯ ಕೊಡುವವನನ್ನೂ; ಕೊಲೆಗಾರನ ಜೊತೆ ಭಾರತ ದಂಡ ಸಂಹಿತೆಯ ಕಲಂ 201ರಡಿ ಆರೋಪಿಯನ್ನಾಗಿಸಿ ಏಳು ವರ್ಷ ಕಠಿಣ ಸಜೆ ವಿಧಿಸಬಹುದು. ಒಂದು ಕೊಲೆ ಪ್ರಕರಣದಲ್ಲಿ ಇವೆಲ್ಲಾ ಕಗ್ಗಂಟುಗಳಿದ್ದವು.

ಗವಿಗಪ್ಪ ಮತ್ತು ಗುಣೋತ್ತಮ ಹಸಿರುದಿಣ್ಣೆ ಗ್ರಾಮದ ಕುಟುಂಬವೊಂದರಲ್ಲಿ ಅಣ್ಣ–ತಮ್ಮಂದಿರು. ಆ ಕುಟುಂಬದ ಇತರರು ಅವರ ತಾಯಿ ತಂದೆ, ಪತ್ನಿಯಂದಿರು ಮತ್ತು ಮಕ್ಕಳು. ಅನೇಕ ಕುಟುಂಬಗಳಲ್ಲಿ ವಯಸ್ಸಾಗುತ್ತಿದ್ದಂತೆ ಮನೆಯ ಯಜಮಾನ ಗಂಡುಮಕ್ಕಳಿಗೆ ಎಲ್ಲವನ್ನೂ ವಹಿಸಿಕೊಟ್ಟು ನಂತರ ಅವರ ದಾಕ್ಷಿಣ್ಯದಲ್ಲಿ ಕಾಲ ತಳ್ಳುವುದಿದೆ. ತಾಯಿ-ತಂದೆ, ತಮ್ಮ ಗುಣೋತ್ತಮ, ಹೆಂಡತಿ ಮತ್ತು ನಾದಿನಿ ಗವಿಗಪ್ಪನಿಗೆ ಅಂಜಿ ಬಾಳುವ ಪರಿಸ್ಥಿತಿ ಇತ್ತು. ಅವನಲ್ಲಿದ್ದ ಬ್ರಿಟಿಷರ ಅಹಮಿಕೆ, ನಾಚಿಕೆಯಿಲ್ಲದ ಲಫಂಗತನ ಅವನನ್ನು ಅನ್ಯಾಯಕಾರನನ್ನಾಗಿ ಮಾಡಿತ್ತು. ಗುಣೋತ್ತಮ, ತಾಯಿ–ತಂದೆಯರಂತೆ ಸಾಕು ಪ್ರಾಣಿಯಂತಿದ್ದ. ವಯಸ್ಸು ನಲವತ್ತಾದರೂ ತಣ್ಣನೆಯ ಅನಾಮಿಕ ಬದುಕು ನಡೆಸುತ್ತಿದ್ದ. ಯಾವಾಗಲೂ ತನ್ನ ಬಡ ಕೋಣೆಯ ಮೂಲೆಯಲ್ಲಿ ಕುಳಿತು ಆಗಾಗ್ಗೆ ಅಣ್ಣನಿಂದಾಗುತ್ತಿದ್ದ ಹಿಂಸೆಯನ್ನು ಸಹಿಸುತ್ತಿದ್ದ. ತಂದೆಯಂತೆಯೇ ‘ಎಲ್ಲವೂ ಅದೃಷ್ಟಕ್ಕೆ ಅಧೀನ, ಪೇಚಾಡಿ ಫಲವಿಲ್ಲ’ ಎಂಬ ವಿಧಿವಾದದಲ್ಲಿ ಮುಳುಗಿ ಹೋಗಿದ್ದ. ಮನೆಯೊಳಗಿನ ಇಂತಹ ವಾತಾವರಣ ಗವಿಗಪ್ಪನನ್ನು ಅಗ್ನಿಭಕ್ಷಕನಾಗುವಂತೆ ಬೆಂಬಲಿಸಿತ್ತು.

ಗವಿಗಪ್ಪನ ಹೆಂಡತಿ ಕುಪ್ಪಮ್ಮನ ತಾಯಿ, ತಂದೆಅನುಕೂಲಸ್ಥರಿದ್ದರು. ಗವಿಗಪ್ಪನ ಧೂರ್ತ ದೃಷ್ಟಿ ಯಾವಾಗಲೂ ಅತ್ತೆ–ಮಾವನ ಶ್ರೀಮಂತಿಕೆಯ ಮೇಲಿತ್ತು. ಕುಪ್ಪಮ್ಮನನ್ನು ಮದುವೆಯಾದ ಮೊದಲ ಕೆಲವು ವರ್ಷಗಳಲ್ಲಿ ಅವಳನ್ನು ರಮಿಸುತ್ತಾ, ಪುಸಲಾಯಿಸುತ್ತಾ, ಮನವೊಲಿಸಿ ತವರು ಮನೆಯಿಂದ ಸಾಕಷ್ಟು ಹಣವನ್ನು ತಂದುಕೊಡುವಂತೆ ಮಾಡಿಕೊಂಡ. ಇವನ ವರ್ತನೆ ಒಂದು ಗೀಳಾಗಿ ಹೆಂಡತಿಯನ್ನು, ತವರಿನಿಂದ ಸ್ಥಿರಾಸ್ತಿ ಪಡೆದುಕೊಳ್ಳುವಂತೆ ಪೀಡಿಸತೊಡಗಿದ. ಗವಿಗಪ್ಪನನ್ನು ಮದುವೆಯಾಗಿ ಅವನ ಮನೆ ಸೇರಿದಾಗಿನಿಂದ ಬದುಕಿನ ಬಗೆಗೆ, ಬದುಕುವ ಬಗೆಗೆ ಯಾವ ಸಂಭ್ರಮವೂ ಇಲ್ಲದಂಥವರ ಮಧ್ಯೆ ಅವಳಿಗೆ ತಲೆ ಚಿಟ್ಟು ಹಿಡಿಯಿತು. ಗಂಡ ಎಂದೂ ನಿರುಮ್ಮಳವಾಗಿ ಇರಲು ಬಿಡದೆ ಅಂತರ್ಮುಖಿಯಾದಳು. ಮನೆಯ ಪರಿಸರ ಅವಳನ್ನು ಕಳವಳ ಹುಟ್ಟಿಸುವ ಅನಿಶ್ಚಯದಲ್ಲಿರಿಸಿತು ಮತ್ತು ಪೀಡನೆಯಿಂದ ಚಿಂತಿತಳಾದಳು. ಅವಳ ಮಾನಸಿಕ ಯಾತನೆ ಮನೆಯ ಇತರರಿಗೆ ಎದ್ದು ಕಾಣಿಸುತ್ತಿದ್ದಾದರೂ ಅವರು ಅಸಹಾಯಕರಾಗಿದ್ದರು. ಯಾರಿಗೂ ಗವಿಗಪ್ಪನ ವಿರುದ್ಧ ಧ್ವನಿ ಎತ್ತಲಾಗುತ್ತಿರಲಿಲ್ಲ. ಇಷ್ಟರ ವೇಳೆಗಾಗಲೇ ಅವನ ಮೇಲೆ ನಾಲ್ಕಾರು ಕ್ರಿಮಿನಲ್ ಪ್ರಕರಣಗಳು ವಿಚಾರಣೆಯ ಹಂತದಲ್ಲಿದ್ದು ಪೊಲೀಸ್ ಠಾಣೆಗೆ ಮತ್ತು ಕೋರ್ಟಿಗೆ ಅಲೆಯುವುದನ್ನು ಮೈಗೂಡಿಸಿಕೊಂಡಿದ್ದ. ಸದಾ ಉದ್ರೇಕದಿಂದ

ವರ್ತಿಸುತ್ತಿದ್ದ ಇವನ ವಿಷಯದಲ್ಲಿ ಪ್ರವೇಶಿಸಲು ಗ್ರಾಮಸ್ಥರು ಅಂಜುತ್ತಿದ್ದರು.

ಆ ಕರಾಳ ದಿನದಂದು ಮಧ್ಯಾಹ್ನ ಕುಪ್ಪಮ್ಮ, ಗುಣೋತ್ತಮ ಮತ್ತು ಅವನ ಹೆಂಡತಿ ಸರಳಾ ಊರಾಚೆಯ ಬಾಳೆತೋಟದಲ್ಲಿ ನೀರು ಹಾಯಿಸುವ ಕೆಲಸದಲ್ಲಿ ನಿರತರಾಗಿದ್ದರು. ತಡೆಗೋಡೆ ಇರದ ಬಾವಿಯಿಂದ ಗುಣೋತ್ತಮ ಏತದ ಸಹಾಯದಿಂದ ನೀರೆತ್ತಿ ಕೊಡುತ್ತಿದ್ದ. ಇದ್ದಕ್ಕಿದ್ದಂತೆ ಗವಿಗಪ್ಪ ಅಲ್ಲಿ ಬಂದವನೇ ಕುಪ್ಪಮ್ಮನನ್ನು, ‘ಭಾಳ ದಿನದಿಂದ ಹೇಳ್ತಿದ್ದೀನಿ, ಕೊಬ್ಬೋಗಿದ್ಯಾ. ನಿನ್ ಕೊಬ್ಬು ಕರಗ್ಸೋದ್ ಹೆಂಗಂತ ನಂಗೆ ಗೊತ್ತದೆ. ನಿನ್ನ ಅಪ್ಪನ ಮುಂದೆ ನನ್ನ ಕೀಳಾಗಿ ಮಾಡಿದ್ದೀಯಾ’ ಎಂದೆಲ್ಲಾ ಬೈಯ್ಯುತ್ತಾ ತನ್ನ ಕೋಪವನ್ನು ವಿಕೃತ ರೀತಿಯಲ್ಲಿ ಪ್ರಕಟಿಸಿದ.

ಅಲ್ಲಿಯವರೆಗೆ ಅನುಭವಿಸಿದ್ದ ತಲ್ಲಣ, ಅವಮಾನ, ನೋವು ಕುಪ್ಪಮ್ಮನಲ್ಲಿ ಮಡುಗಟ್ಟಿದ್ದು, ತನ್ನ ಗಂಡನ ಅವಹೇಳನಕಾರಿ ಮಾತುಗಳನ್ನು ಇನ್ನು ಸಹಿಸಲು ಸಾಧ್ಯವಿಲ್ಲವೆಂಬಂತೆ, ‘ನಿಮ್ಮ ನಡವಳಿಕೆ ಬಗ್ಗೆ ನಾ ಏನೂ ಹೇಳ್ಕೊ ಬರಬೇಕಾಗಿಲ್ಲ, ಇಡೀ ಊರಿಗೆ ಗೊತ್ತದೆ ನಿಮ್ಮ ಬುದ್ಧಿ ಏನು ಅಂತ’ ಎಂದು ಧಿಕ್ಕಾರದಿಂದ ವಿರೋಧಿಸುತ್ತಿದ್ದಂತೆಯೇ ಗವಿಗಪ್ಪ ಅವಳ ಹೊಟ್ಟೆಯ ತಳಭಾಗಕ್ಕೆ ಬಲವಾಗಿ ಒದ್ದ. ತಡೆಗೋಡೆ ಇರದ ಬಾವಿಯ ಅಂಚಿನಲ್ಲಿ ನಿಂತಿದ್ದ ಕುಪ್ಪಮ್ಮ ಗಂಡನ ಒದೆತದಿಂದ ಆಯತಪ್ಪಿ ಬಾವಿಯೊಳಗೆ ಬಿದ್ದಳು. ಗರ್ಜಿಸುತ್ತಲೇ ಬಂದಿದ್ದ ಗವಿಗಪ್ಪ, ವೇಗದಲ್ಲೇ ಹಿಂತಿರುಗಿದ. ಗುಣೋತ್ತಮ ನೀರಿಗೆ ಧುಮುಕಿ ಅತ್ತಿಗೆಯನ್ನು ರಕ್ಷಿಸಲು ಪ್ರಯತ್ನ ಪಟ್ಟನಾದರೂ ಕುಪ್ಪಮ್ಮ ಉಳಿಯಲಿಲ್ಲ.

ಕುಪ್ಪಮ್ಮಳ ಸಾವಿನ ವಿಚಾರ ಊರಿಗೆ ಮುಟ್ಟಿ ಇಡೀ ಗ್ರಾಮ ಕೆಲವೇ ನಿಮಿಷಗಳಲ್ಲಿ ಬಾವಿಯ ಬಳಿ ಸೇರಿತು. ಗವಿಯಪ್ಪನಿಗೆ ಹೆದರಿದ್ದ ಗುಣೋತ್ತಮ ಮತ್ತು ಅವನ ಹೆಂಡತಿ ದಿಕ್ಕುತೋಚದೆ, ಕುಪ್ಪಮ್ಮ ಆಕಸ್ಮಿಕವಾಗಿ ಕಾಲು ಜಾರಿ ಬಾವಿನೀರಿಗೆ ಬಿದ್ದು ಸತ್ತಳೆಂದು ಬಂದ ಜನರಿಗೆ ಹೇಳಿದರು. ಯಾರೂ ಗವಿಗಪ್ಪ ಅಲ್ಲಿ ಬಂದು ಹೋದದ್ದನ್ನು ತಿಳಿಸುವ ಧೈರ್ಯವನ್ನು ಮಾಡಲಿಲ್ಲ.

ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಏರ್ಪಾಟು ಮಾಡಿದರು. ಮರಣೋತ್ತರ ಪರೀಕ್ಷೆಯ ಫಲಿತಾಂಶ ಬರುವವರೆಗೆ ಯಾರ ವಿರುದ್ಧವೂ ಯಾವುದೇ ಕ್ರಮ ಜರುಗಿಸಲಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದಾಗ ಕುಪ್ಪಮ್ಮನ ಸಾವು ನೀರಿನಲ್ಲಿ ಮುಳುಗಿ ಉಂಟಾಗಿಲ್ಲವೆಂದೂ, ಅದು ಹೊಕ್ಕುಳದ ತಳಭಾಗದಲ್ಲಿ ಪೆಟ್ಟಾಗಿ, ಉಸಿರುಗಟ್ಟಿ, ನೀರಿಗೆ ಬೀಳುವ ಮುನ್ನವೇ ಸಂಭವಿಸಿರುವ ಸಾವು ಎಂದಾಗಿತ್ತು. ಆಕೆ ನೀರಿನಲ್ಲಿ ಬಿದ್ದು ಮುಳುಗಿ ಸತ್ತಿದ್ದರೆ ಶವದ ಹೊಟ್ಟೆಯ ತುಂಬ ನೀರು ಇರಬೇಕಾಗಿತ್ತು. ಒಂದು ತೊಟ್ಟಿನಷ್ಟು ನೀರೂ ಕಾಣಲಿಲ್ಲವೆಂಬ ಕಾರಣವನ್ನು ವೈದ್ಯರು ಅದರಲ್ಲಿ ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆಯ ಆಧಾರದ ಮೇಲೆ ಸ್ವಯಂಪ್ರೇರಿತರಾಗಿ ಪೊಲೀಸರು ಕೊಲೆಯ ಅಪರಾಧಕ್ಕಾಗಿ ಮತ್ತು ಕೊಲೆಯಾಗಿದೆಯೆಂದು ತಿಳಿದೂ, ನಂಬಲು ಕಾರಣವಿದ್ದೂ ಅಪರಾಧದಿಂದ ರಕ್ಷಿಸಿಕೊಳ್ಳುವ ಉದ್ದೇಶದಿಂದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮರಣಹೊಂದಿರುವುದಾಗಿ ಸುಳ್ಳು ಮಾಹಿತಿಯನ್ನು ಕೊಟ್ಟ ಅಪರಾಧಕ್ಕಾಗಿ ಭಾರತ ದಂಡ ಸಂಹಿತೆಯ ಕಲಂ 302 ಮತ್ತು 201ರಂತೆ ಗುಣೋತ್ತಮ ಮತ್ತು ಅವನ ಹೆಂಡತಿ ಸರಳಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರನ್ನು ದಸ್ತಗಿರಿ ಮಾಡಿದರು.

ತನಿಖಾಧಿಕಾರಿಯು ಗುಣೋತ್ತಮ ಮತ್ತು ಅವನ ಹೆಂಡತಿಯನ್ನು ವಿಚಾರಣೆ ಮಾಡಿದಾಗ ಗವಿಗಪ್ಪ ಅಲ್ಲಿ ಬಂದು ಜಗಳವಾಡಿ, ಹೆಂಡತಿಗೆ ಒದ್ದು ಹೋದದ್ದನ್ನು ತಿಳಿಸಿದರು. ಅದೇ ಸಮಯಕ್ಕೆ ಗುಣೋತ್ತಮನ ತಾಯಿ, ತಂದೆಯರ ಮತ್ತು ಗ್ರಾಮದ ಅನೇಕರ ಹೇಳಿಕೆಗಳನ್ನೂ ಮಾಡಿಕೊಳ್ಳಲು ತನಿಖಾಧಿಕಾರಿ ಮುಂದಾದರು. ಇದಾದ ನಂತರ ತನಿಖಾಧಿಕಾರಿಯು ಪ್ರಕರಣಕ್ಕೆ ಸಂಬಂಧಪಟ್ಟಂತೆ ಗವಿಗಪ್ಪನನ್ನು ಕೊಲೆಗೆ ಕಾರಣನಾದ ಆರೋಪಿಯನ್ನಾಗಿ ಮಾಡಿಕೊಂಡು ಗುಣೋತ್ತಮ ಮತ್ತು ಅವನ ಹೆಂಡತಿಯನ್ನು ಗವಿಗಪ್ಪನನ್ನು ರಕ್ಷಿಸಲು ಸುಳ್ಳು ಸುದ್ದಿ ಕೊಟ್ಟ ಅಪರಾಧಕ್ಕೆ ಕಾರಣರೆಂದು ಒಂದು ವಿಶೇಷ ವರದಿಯನ್ನು ಕ್ರಿಮಿನಲ್ ನ್ಯಾಯಾಲಯಕ್ಕೆ ರವಾನಿಸಿದರು.

ಗವಿಗಪ್ಪನ ಗುಂಪಿನವರು ವಕೀಲ ಶ್ರೀಕಂಠರನ್ನೂ, ಗುಣೋತ್ತಮ ಮತ್ತು ಸರಳಾ ಪರವಾಗಿ ಗುಣೋತ್ತಮನ ತಾಯಿ,ತಂದೆ ಮತ್ತು ಅತ್ತೆಮಾವರು ನಾನು ವಕಾಲತ್ತು ವಹಿಸಿಕೊಳ್ಳುವಂತೆ ನೋಡಿಕೊಂಡರು.

ಗವಿಗಪ್ಪನ ಪರವಾಗಿ ವಕೀಲ ಶ್ರೀಕಂಠ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳು ಸೆಷನ್ಸ್ ನ್ಯಾಯಾಲಯ ಮತ್ತು ಹೈಕೋರ್ಟಿನಲ್ಲಿ ತಿರಸ್ಕೃತಗೊಂಡವು. ನ್ಯಾಯಾಂಗ ಬಂಧನದಲ್ಲಿದ್ದ ಗುಣೋತ್ತಮ ಮತ್ತು ಸರಳಾ ಅವರ ಪರ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ಪುರಸ್ಕೃತಗೊಂಡು ಹೊರಬಂದ ಅವರನ್ನು ಇಡೀ ಹಸಿರುದಿಣ್ಣೆ ಗ್ರಾಮ ಬರಮಾಡಿಕೊಂಡು ತನ್ನೊಡಲೊಳಗೆ ಇರಿಸಿಕೊಂಡಿತು.

ತನಿಖಾಧಿಕಾರಿಯು ಈ ಮೂವರ ವಿರುದ್ಧ ಅಂತಿಮ ದೋಷಾರೋಪಣಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ವಿಚಾರಣೆಗೆ ಮುನ್ನ ಗವಿಗಪ್ಪನ ವಿರುದ್ಧ ಭಾರತ ದಂಡ ಸಂಹಿತೆಯ ಕಲಂ 302 (ಕೊಲೆ) ಹಾಗೂ ಗುಣೋತ್ತಮ ಮತ್ತು ಸರಳಾರ ವಿರುದ್ಧ ಗವಿಗಪ್ಪ ಕೊಲೆಗೆ ಕಾರಣನೆಂದು ಗೊತ್ತಿದ್ದೂ ಅದು ಆಕಸ್ಮಿಕ ಸಾವು ಎಂದು ಸಮಾನ ಉದ್ದೇಶದಿಂದ ಪೊಲೀಸರಲ್ಲಿ ಹೇಳಿ ದಿಕ್ಕು ತಪ್ಪಿಸಿದ ಕಾರಣ ಭಾರತ ದಂಡ ಸಂಹಿತೆಯ ಕಲಂ 201 ಸಹವಾಚಕ (ರೆಡ್‌ವಿತ್‌) ಕಲಂ 34 ರಂತೆ ಅಪರಾಧ ಎಸಗಿರುವುದಾಗಿ ವಿಚಾರಣೆಗೆ ಗುರಿಪಡಿಸಿದರು.

ವಿಚಾರಣೆಯ ಹಂತದಲ್ಲಿ ಹಸಿರುದಿಣ್ಣೆ ಗ್ರಾಮದ ಹತ್ತಾರು ಜನ ಪ್ರಾಸಿಕ್ಯೂಷನ್‌ ಸಾಕ್ಷಿದಾರರಾಗಿ ನ್ಯಾಯಾಲಯದಲ್ಲಿ ಹಾಜರಾಗಿ ಗವಿಗಪ್ಪನ ದೋಷಪೂರಿತ ವ್ಯಕ್ತಿತ್ವ ಕುರಿತು ಸಾಕ್ಷಿ ನುಡಿದರು. ವಿಚಾರಣೆಯ ಸಂದರ್ಭದಲ್ಲಿ ಬಂದು ಹೋಗುತ್ತಿದ್ದ ಎಲ್ಲರಿಗೂ ಸೋಜಿಗವೆನಿಸಿದ್ದು ಗವಿಗಪ್ಪನ ತಾಯಿ,ತಂದೆ ಮತ್ತು ಅತ್ತೆ–ಮಾವಂದಿರು ಅವನ ಪೂರ್ವೇತಿಹಾಸ, ಮನೋಧರ್ಮ ಹಾಗೂ ತನ್ನ ಹೆಂಡತಿಯನ್ನು ಹೇಸುಹೇಸಾಗಿ ನಡೆಸಿಕೊಳ್ಳುತ್ತಿದ್ದ ಬಗ್ಗೆ ವಿವರವಾಗಿ ನುಡಿದದ್ದು. ಶವದ ಪರೀಕ್ಷೆ ಮಾಡಿದ ವೈದ್ಯರು, ಕುಪ್ಪಮ್ಮ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮರಣ ಹೊಂದದೆ, ನೀರಿನಲ್ಲಿ ಬೀಳುವ ಮುನ್ನವೇ ಮರಣ ಹೊಂದಿದ್ದ ಕುರಿತಾಗಿ ಕಾರಣಗಳನ್ನು ಕೊಡುತ್ತಾ ಸಾಕ್ಷ್ಯ ನುಡಿದರು. ವಕೀಲ ಶ್ರೀಕಂಠರು ಪಾಟಿಸವಾಲಿನಲ್ಲಿ ಸಾಕ್ಷಿದಾರರ ಹೇಳಿಕೆಗಳನ್ನು ಅಲ್ಲಗಳೆಯಲು ಮಾಡಿದ ಪ್ರಯತ್ನಗಳು ವಿಫಲವಾದವು. ಗುಣೋತ್ತಮ ಮತ್ತು ಸರಳಾ ಪರವಾಗಿ ನಾನು ಮಾಡಿದ ಪಾಟಿಸವಾಲಿನಲ್ಲಿ ಸಾಕ್ಷಿದಾರರು ಗುಣೋತ್ತಮ ಮತ್ತು ಸರಳಾರಿಗೆ ಗವಿಗಪ್ಪನಿಂದ ಪ್ರಾಣಭಯವಿತ್ತು; ಕುಪ್ಪಮ್ಮನ ಹೊಟ್ಟೆಯ ತಳಭಾಗದಲ್ಲಿ ಒದ್ದು ಅವಳು ಬಾವಿಗೆ ಬಿದ್ದ ವಿಚಾರವನ್ನು ಪೊಲೀಸರಿಗೆ ಅದು ನಡೆದಂತೆಯೇ ತಿಳಿಸಿದರೆ ತಮ್ಮನ್ನು ಗವಿಗಪ್ಪ ಉಳಿಯಬಿಡುವುದಿಲ್ಲವೆಂದು ತಿಳಿದು ಪೊಲೀಸರಿಗೆ ತಿಳಿಸಲಿಲ್ಲವೆಂದೂ; ಇದರ ಹೊರತು ಗವಿಗಪ್ಪನನ್ನು ಉಳಿಸುವ ಉದ್ದೇಶವಿರಲಿಲ್ಲ ಎಂಬ ವಿಚಾರಗಳು ಮುನ್ನೆಲೆಗೆ ಬಂದು ಅವರ ವರ್ತನೆಯಲ್ಲಿ ಅಮಾಯಕತೆ ಎದ್ದು ಕಾಣುವಂತಾಯಿತು.

ನ್ಯಾಯಾಲಯ ಆರೋಪಿ ಗುಣೋತ್ತಮ ಮತ್ತು ಸರಳಾರನ್ನು ನೇರವಾಗಿ ಪ್ರಶ್ನಿಸಿ ಉತ್ತರಗಳನ್ನು ಪಡೆದುಕೊಂಡಿತು. ಗವಿಗಪ್ಪನು ಕುಪ್ಪಮ್ಮಳಿಗೆ ಒದ್ದು ಸಾಯಿಸಿದ ವಿಚಾರವನ್ನು ಬಯಲುಗೊಳಿಸಿದರೆ ತಮ್ಮ ಪ್ರಾಣಗಳಿಗೆ ಕುತ್ತು ಬಂದೇಬರುವುದೆಂದು ತಿಳಿದು ನಿಜ ಸಂಗತಿಯನ್ನು ಪೊಲೀಸರಿಗೆ ತಿಳಿಸಲಾಗಲಿಲ್ಲ ಮುಂತಾದ ವಿಷಯಗಳನ್ನು ನ್ಯಾಯಾಲಯಕ್ಕೆ ಲಿಖಿತರೂಪದಲ್ಲಿ ಕೊಟ್ಟರು.

‌ಗವಿಗಪ್ಪ, ಘಟನೆ ಸಂಭವಿಸಿದ ಕೂಡಲೇ ತನ್ನ ಪತ್ನಿಯನ್ನು ನೀರಿನಿಂದ ಹೊರತೆಗೆಯುವ ಪ್ರಯತ್ನವನ್ನೂ ಮಾಡದೆ ಅಲ್ಲಿಂದ ಕಾಲುಕಿತ್ತು ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ನಿರಾಕರಣೆಗೊಳ್ಳುವವರೆಗೆ ತಲೆಮರೆಸಿಕೊಂಡದ್ದು ಒಂದು ಅಪರಾಧ ಸ್ಥಿತಿಯಂತೆ ಹೊರಹೊಮ್ಮಿತು.

ವಾದ-ಪ್ರತಿವಾದದ ಸಂದರ್ಭದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ ಗವಿಗಪ್ಪನನ್ನು ತಪ್ಪಿತಸ್ಥನೆಂದು ಪರಿಗಣಿಸಲು ಒತ್ತು ಕೊಟ್ಟರು. ಗುಣೋತ್ತಮ ಮತ್ತು ಸರಳಾರ ಪಾತ್ರ ಕುರಿತಂತೆ ಅವರ ವಾದದಲ್ಲಿ ಅಂತಹ ಒತ್ತಾಯವಿರಲಿಲ್ಲ. ವಕೀಲ ಶ್ರೀಕಂಠ ಅವರು ಗವಿಗಪ್ಪನ ಪರ ಬಹಳ ಭಾವಾವೇಶದಿಂದ ವಾದಮಂಡನೆ ಮಾಡಿದರಾದರೂ ನ್ಯಾಯಾಲಯಕ್ಕೆ ಮನವರಿಕೆಯಾದಂತೆ ಕಾಣಲಿಲ್ಲ. ಗುಣೋತ್ತಮ ಮತ್ತು ಸರಳಾ ಪರ ನನ್ನ ವಾದದಲ್ಲಿ ಪಾಟಿಸವಾಲಿನಲ್ಲಿ ಪಡೆದುಕೊಂಡ ಉತ್ತರಗಳಲ್ಲಿ ಅಡಗಿರುವುದನ್ನು ತೋರಿಸಿಕೊಟ್ಟೆ.

ತೀರ್ಪಿನ ದಿನ ನ್ಯಾಯಾಲಯವು ತನ್ನ ತೀರ್ಪನ್ನು ಓದಿ ಹೇಳುತ್ತಾ, ‘ಗವಿಗಪ್ಪನು ಉದ್ದೇಶಪೂರ್ವಕವಾಗಿಯೇ ಕುಪ್ಪಮ್ಮನಿಗೆ ಒದ್ದನೆಂತಲೂ; ಹಾಗೆ ಒದೆಯುವಾಗ ಆಯ್ಕೆ ಮಾಡಿಕೊಂಡ ಶರೀರದ ಭಾಗದಲ್ಲಿ ಒದ್ದರೆ ಪ್ರಾಣಾಪಾಯವಾಗುತ್ತದೆಂಬ ತಿಳಿವಳಿಕೆಯಿದ್ದರೂ ಅಲ್ಲಿಯೇ ಒದ್ದು ಸಾವುಂಟು ಮಾಡಿರುವುದರಿಂದ ಆತನು ಕೊಲೆ ಮಾಡಿರುವುದಾಗಿಯೂ; ತನ್ನ ಹೆಂಡತಿ ಬಾವಿಯೊಳಗೆ ಬಿದ್ದರೂ ಅದು ಒಂದು ಸಂಗತಿಯೇ ಅಲ್ಲ ಎಂಬಂತೆ ಅಲ್ಲಿಂದ ಹೊರಟಿದ್ದು; ಅವನು ತನ್ನ ಬಂಧು ಬಳಗಕ್ಕಾಗಲೀ, ಅಥವಾ ಪೊಲೀಸರಿಗಾಗಲೀ ತಿಳಿಸದೆಯೇ ತಲೆಮರೆಸಿಕೊಂಡದ್ದು ಕೂಡ ಸಾಬೀತಾಗಿರುವುದೆಂದು ಭಾವಿಸಿ ಭಾರತೀಯ ದಂಡ ಸಂಹಿತೆಯ ಕಲಂ 302 ರಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತು.

ಗುಣೋತ್ತಮ ಮತ್ತು ಸರಳಾರನ್ನು ಕುರಿತು ಅವರ ವಿರುದ್ಧ ಹೊರಿಸಲಾಗಿದ್ದ ದೋಷಾರೋಪದಿಂದ ಬಿಡುಗಡೆ ಮಾಡುತ್ತಾ, ‘ಒಂದು ಕೃತ್ಯವನ್ನು ಅಪರಾಧಿಕ ಮನಸ್ಸಿಟ್ಟುಕೊಂಡು ಮಾಡದ ಕೃತ್ಯ ಅಪರಾಧವಾಗದು. ಕೆಲವು ಕೃತ್ಯಗಳನ್ನು ಮಾಡಿದವನನ್ನು ಅಪರಾಧಿ ಎಂದು ಶಿಕ್ಷಿಸಬೇಕಾದರೆ ಅವನು ಆ ಕೃತ್ಯವನ್ನು ಅಪರಾಧಿಕ ಮನಸ್ಸಿನಿಂದ ಉದ್ದೇಶಪೂರ್ವಕವಾಗಿಯೇ ಮಾಡಿರಬೇಕು; ಇಲ್ಲವೆಂದರೆ ಅದನ್ನು ಅಪರಾಧವೆನ್ನಲಾಗದು. ಏಕೆಂದರೆ ಸಮಾಜದಲ್ಲಿ ಅಪರಾಧ ಕೃತ್ಯಗಳನ್ನು ಉದ್ದೇಶಪೂರ್ವಕವಾಗಿವೇ ಮಾಡಲಾಗುತ್ತದೆ ಎಂದು ಹೇಳಲಾಗದು. ಯಾವುದೇ ಉದ್ದೇಶವಿಲ್ಲದೆ ಅಥವಾನಿಷ್ಕಾಳಜಿತನದಿಂದಾಗಲೀ ಅಥವಾ ಪ್ರಾಣಭೀತಿಯಿಂದ ಕೆಲವು ಕೃತ್ಯಗಳು ನಡೆಯುತ್ತವೆ. ಅವೆಲ್ಲಾ ಕೃತ್ಯಗಳಿಗೆ ಶಿಕ್ಷೆ ವಿಧಿಸುವುದು ಕೆಲವು ಸಲ ಸೂಕ್ತವೆನಿಸಲಾರದು’ ಎಂಬ ಭಾಗವನ್ನುಮಾತ್ರ ನ್ಯಾಯಾಧೀಶರು ತೀರ್ಪಿನಿಂದ ಓದಿ ಹೇಳಿದರು.

(ಹೆಸರುಗಳನ್ನು ಬದಲಾಯಿಸಲಾಗಿದೆ)

ಲೇಖಕ ಹೈಕೋರ್ಟ್‌ ವಕೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry