ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಕ್ಕಿಗೆ ಗಂಟೆ ಕಟ್ಟುವವರಿರಲ್ಲ, ನಾನು ಕಟ್ಟಿದ್ದೇನೆ’

Last Updated 25 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕನ್ನಡ ಉಳಿಯಬೇಕಾದರೆ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕು. ಆದರೆ, ಈ ಶಾಲೆಗಳನ್ನು ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕಾದ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿಲ್ಲ ಎಂಬ ಆಕ್ಷೇಪ ಹಿಂದಿನಿಂದಲೂ ಇದೆ. ವಿಧಾನ ಪರಿಷತ್‌ ಸದಸ್ಯ ರಘು ಆಚಾರ್‌ ಅವರು ಇದೇ ವಿಚಾರದಲ್ಲಿ ಖಾಸಗಿ ಮಸೂದೆಯೊಂದನ್ನು ಮಂಡಿಸುವ ಪ್ರಯತ್ನ ನಡೆಸಿದ್ದಾರೆ. ಮೈಸೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ ಈ ಮಸೂದೆ ಕನ್ನಡ ಶಾಲೆಗಳನ್ನು ಉಳಿಸುವ ಚರ್ಚೆಗೆ ಹೊಸ ಆಯಾಮ ನೀಡಿದೆ. ಈ ಮಸೂದೆಯ ಸಾಧಕ– ಬಾಧಕಗಳ ಬಗ್ಗೆ ಆಚಾರ್‌ ಅವರು ಇಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ಈ ಮಸೂದೆ ತರುವ ಆಲೋಚನೆ ಹುಟ್ಟಿದ್ದು ಹೇಗೆ?

‘ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮೂಲಸೌಕರ್ಯ ಕಲ್ಪಿಸಿದರೆ ಅಲ್ಲೇ ಓದಲು ಸಿದ್ಧ’ ಎಂದು ನನ್ನ ಕ್ಷೇತ್ರದ ಬಾಲಕಿಯೊಬ್ಬಳು ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದಳು. ಆ ಹುಡುಗಿಯನ್ನು ಮಾತನಾಡಿಸಿದೆ. ಬಳಿಕ ಕೆಲವು ಸರ್ಕಾರಿ ಶಾಲೆಗಳಿಗೆ ಭೇಟಿ ಕೊಟ್ಟೆ. ಅವುಗಳ ಸ್ಥಿತಿ ಆಕೆ ಹೇಳಿದಷ್ಟು ಕೆಟ್ಟದಾಗಿಲ್ಲ ಎನಿಸಿತು. ಸರ್ಕಾರಿ ಶಾಲೆಗಳಲ್ಲಿರುವಷ್ಟು ಉತ್ತಮ ಶಿಕ್ಷಕರು ಖಾಸಗಿ ಶಾಲೆಗಳಲ್ಲಿಲ್ಲ ಎಂಬುದು ಮನವರಿಕೆ ಆಯಿತು.

ನಾನು ಓದಿದ್ದು ಸರ್ಕಾರಿ ಶಾಲೆಯಲ್ಲೇ. ಆದರೆ, ನನ್ನ ಮಗಳು ಓದುತ್ತಿರುವುದು ಕಾನ್ವೆಂಟ್‌ನಲ್ಲಿ. ನನ್ನ ಮನೆ ಕೆಲಸದಾಕೆ ಮಗನನ್ನು ಕಾನ್ವೆಂಟ್‌ಗೆ ಸೇರಿಸಿದ್ದಾಳೆ. ₹ 45 ಸಾವಿರ ಡೊನೇಷನ್‌ ಕೊಡಬೇಕು. ಸಾಲ ಮಾಡಿ ಮಗನನ್ನು ಕಾನ್ವೆಂಟ್‌ಗೆ ಹಾಕಿದ್ದೇನೆ ಎಂದಳು. ಈ ವಿಚಾರ ನನ್ನನ್ನು ಕೊರೆ
ಯಲಾರಂಭಿಸಿತು. ನನ್ನ ಮಗಳು ಟ್ಯಾಬ್‌, ಇಂಟರ್‌ನೆಟ್‌ ಬಳಸುತ್ತಾಳೆ. ಆ ಅವಕಾಶ ಮನೆಕೆಲಸದವಳ ಮಕ್ಕಳಿಗೆ ಇಲ್ಲವಲ್ಲ ಅನಿಸಿತು. ಈ ತಾರತಮ್ಯ ನೀಗಿಸುವ ಬಗ್ಗೆ ಯೋಚಿಸಿದಾಗ, ಮೊದಲ ಹೆಜ್ಜೆ ಇಡಬೇಕಾದವರೇ ಜನಪ್ರತಿನಿಧಿಗಳು ಎಂದೆನಿಸಿತು.

* ನಿಮ್ಮ ಪ್ರಕಾರ, ಸರ್ಕಾರಿ ಶಾಲೆಗಳಿಗೆ ಏಕೆ ಮಕ್ಕಳು ಬರುತ್ತಿಲ್ಲ?

ಪೋಷಕರು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡುತ್ತಾರೆ. ಶಾಲೆಯಲ್ಲಿ  ಸ್ವಚ್ಛ ವಾತಾವರಣ ಇರಬೇಕು ಎಂದು ಬಯಸುತ್ತಾರೆ. ಶಾಲೆ ಎಂದರೆ ಅಲ್ಲಿ ಕಲಿಕೆಗೆ ಮಾತ್ರ ಅವಕಾಶ ಇದ್ದರೆ ಸಾಲದು. ಕ್ರೀಡಾ ಚಟುವಟಿಕೆ ಇರಬೇಕು. ಕಲಾ ಶಿಕ್ಷಕರು ಇರಬೇಕು. ಅಂತಹ ವ್ಯವಸ್ಥೆ ಸರ್ಕಾರಿ ಶಾಲೆಗಳಲ್ಲಿ ಇಲ್ಲ. ಮೂಲಸೌಕರ್ಯ ಕೊಟ್ಟರೆ ಜನರು ತಾವಾಗಿಯೇ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. ಜನಪ್ರತಿನಿಧಿ, ಅಧಿಕಾರಿ ಮಕ್ಕಳೂ ಇಂತಹ ಶಾಲೆಯಲ್ಲಿ ಕಲಿಯುವ ವಾತಾವರಣ ಸೃಷ್ಟಿಯಾದರೆ ಮೂಲಸೌಕರ್ಯ ಅಭಿವೃದ್ಧಿ ತನ್ನಿಂದತಾನೆ ಆಗುತ್ತದೆ.

* ಈ ಮಸೂದೆ ಏಕೆ ಅನಿವಾರ್ಯ?

ನಾನು ಪ್ರಚಾರಕ್ಕಾಗಿ ಇದನ್ನು ಮಾಡಿಲ್ಲ. ಇದು ಜ್ವಲಂತ ಸಮಸ್ಯೆ. ಒಬ್ಬ ಲಾರಿ ಚಾಲಕನ ತಿಂಗಳ ಸಂಪಾದನೆ ₹ 10 ಸಾವಿರದಿಂದ ₹ 15 ಸಾವಿರ. ಅದರಲ್ಲಿ ಆತ ಮನೆಯನ್ನು ನಿಭಾಯಿಸಿ, ಮಕ್ಕಳನ್ನು ಕಾನ್ವೆಂಟಿಗೆ ಕಳುಹಿಸಲು ಸಾಧ್ಯವೇ ಇಲ್ಲ. ಪ್ರತಿಭೆ
ಇರುವವರಿಗೆಲ್ಲ ಸಮಾನ ಅವಕಾಶ ಸಿಗಬೇಕು.

ಜನರ ದುಡ್ಡು ಬಳಸಿಕೊಳ್ಳುವವರೇ ಈ ವಿಚಾರದಲ್ಲಿ ಮೇಲ್ಪಂಕ್ತಿ ಹಾಕಲಿ ಎಂಬುದು ನನ್ನ ನಿಲುವು. ಆ ಕಾರಣಕ್ಕಾಗಿಯೇ ಮಸೂದೆಯಲ್ಲಿ ಮೊದಲು ಶಾಸಕರ ಹೆಸರು ಸೇರಿಸಿದ್ದೇನೆ. ನನ್ನಪ್ಪ ಶಾಸಕ ಎಂದು ಹೇಳಿಕೊಂಡು ನನ್ನ ಮಗಳು ತಿರುಗುತ್ತಾಳೆ. ಆಕೆ ಸರ್ಕಾರಿ ಶಾಲೆಯಲ್ಲಿ ಏಕೆ ಓದಬಾರದು? ನನ್ನ ಮಗನನ್ನು ಮುಂದಿನ ವರ್ಷ ಸರ್ಕಾರಿ ಶಾಲೆಯಲ್ಲೇ ಒಂದನೇ ಕ್ಲಾಸಿಗೆ ಸೇರಿಸುತ್ತೇನೆ. ನನ್ನ ಕ್ಷೇತ್ರದ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತೇನೆ. ಬಡವರ ಮಕ್ಕಳು ಶ್ರೀಮಂತರ ಮಕ್ಕಳೆಲ್ಲ ಒಂದೇ ಶಾಲೆಯಲ್ಲಿ ಓದಲಿ ಎಂಬುದೇ ನನ್ನ ಆಶಯ. ಸರ್ಕಾರ ಎಲ್ಲ ಶಾಲೆಗಳನ್ನು ರಾಷ್ಟ್ರೀಕರಣ ಮಾಡಿದರೂ ನನ್ನ ಸಹಮತ ಇದೆ.

* ಅಧಿಕಾರಿಗಳು ಅವರ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸದಿದ್ದರೆ ಆಗುವ ನಷ್ಟವಾದರೂ ಏನು?

ಈಗ ಆಯಕಟ್ಟಿನ ಜಾಗದಲ್ಲಿರುವ ಅಧಿಕಾರಿಗಳು, ರಾಜಕಾರಣಿಗಳಲ್ಲಿ ಅನೇಕರು ಸರ್ಕಾರಿ ಶಾಲೆಗಳಲ್ಲಿ ಓದಿದವರು. ಇವರೆಲ್ಲ ಹಳ್ಳಿಗಾಡಿನಿಂದ ಬಂದವರು. ಕಷ್ಟ ಸುಖ ನೋಡಿದವರು. ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಇಷ್ಟರಮಟ್ಟಿಗಾದರೂ ಇದೆ. ಈಗ ಕಾನ್ವೆಂಟ್‌ನಲ್ಲಿ ಕಲಿಯುತ್ತಿರುವ ಮಕ್ಕಳು ಇನ್ನು 10 ವರ್ಷಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಡಳಿತ ವ್ಯವಸ್ಥೆಯೊಳಗೆ ಬರುತ್ತಾರೆ. ಅವರು ಕಷ್ಟಗಳನ್ನು ನೋಡಿದವರಲ್ಲ. ಅಂಥವರು ಐಎಎಸ್‌, ಕೆಎಎಸ್‌ ಅಧಿಕಾರಿಗಳಾಗಿ ಬಂದರೆ ಪರಿಸ್ಥಿತಿ ಹೇಗಿದ್ದೀತು?

* ಜನಪ್ರತಿನಿಧಿಗಳ, ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗೆ ಹೋದ ಮಾತ್ರಕ್ಕೆ ಅವುಗಳ ಸ್ಥಿತಿ ಸುಧಾರಣೆ ಆಗುತ್ತದೆಯೇ?

ಒಂದು ಉದಾಹರಣೆ ನೀಡುತ್ತೇನೆ. ಈಗ ಸರ್ಕಾರಿ ಶಾಲೆಗಳಿಗೆ ಸುರಕ್ಷತೆ ಒದಗಿಸುವುದು ಒಂದು ಸವಾಲು. ಸ್ಥಳೀಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಕ್ಕಳೇ ಸರ್ಕಾರಿ ಶಾಲೆ ಸೇರಿದರೆ ಸಹಜವಾಗಿಯೇ ಆ ಶಾಲೆ ಬಗ್ಗೆ ಆತನಲ್ಲಿ ಕಾಳಜಿ ಮೂಡುತ್ತದೆ. ಪೊಲೀಸ್‌ ಸಿಬ್ಬಂದಿಯ ಮಕ್ಕಳೂ ಅಲ್ಲೇ ಕಲಿತರೆ ಖಂಡಿತಾ ಆ ಶಾಲೆಯ ಸುರಕ್ಷತೆ ಹೆಚ್ಚುತ್ತದೆ. ಶಾಸಕರ ಮಗ ಓದುವ ಸರ್ಕಾರಿ ಶಾಲೆಯ ಚಾವಣಿಯ ಶೀಟು ಕಿತ್ತುಹೋಗಿದೆ ಎಂದಿಟ್ಟುಕೊಳ್ಳಿ. ಅವನ ಮಗ ಮಳೆ ನೀರಿನಲ್ಲಿ ತೊಯ್ದು ಮನೆಗೆ ಬಂದರೆ ಪತ್ನಿ ತರಾಟೆಗೆ ತೆಗೆದು ಕೊಳ್ಳುತ್ತಾಳೆ. ಆಗ ಶಾಸಕ ಮುತುವರ್ಜಿವಹಿಸಿ ಅದನ್ನು ದುರಸ್ತಿಪಡಿಸುತ್ತಾನೆ. ಶಿಕ್ಷಕರಲ್ಲೂ ಕರ್ತವ್ಯ ಪ್ರಜ್ಞೆ ಜಾಗೃತವಾಗುತ್ತದೆ.

* ನಿಮ್ಮ ಪಕ್ಷದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಲಾಬಿ ಪ್ರಬಲವಾಗಿದೆ. ಈ ಮಸೂದೆ ಅಂಗೀಕಾರವಾಗಲು ನಿಮ್ಮ ನಾಯಕರು ಅವಕಾಶ ಕೊಡುತ್ತಾರೆಯೇ?

ನೋಡೋಣ, ನಾನು ಜೇನುಗೂಡಿಗೆ ಕಲ್ಲು ಹೊಡೆದಿದ್ದೇನೆ. ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವನ್ನು ಯಾರೂ ಮಾಡುತ್ತಿರಲಿಲ್ಲ. ನಾನು ಮಾಡಿದ್ದೇನೆ. ‘ವಿಧಾನಸಭಾ ಸದಸ್ಯನಾಗುವ ಆಸೆಯಿಂದ ಈ ಮಸೂದೆ ಮಂಡಿಸಿದ್ದಾನೆ’ ಎಂದು ಕೆಲವರು ಆರೋಪ ಮಾಡಿದ್ದಾರೆ. ನನ್ನ ಮಕ್ಕಳು ಎಲ್ಲಿ ಓದುತ್ತಿದ್ದಾರೆ ಎಂದೂ ಒಬ್ಬರು ಮಹಾನುಭಾವರು ಪ್ರಶ್ನಿಸಿದ್ದಾರೆ. ಬೇಜಾರಾಗಿ ರಾಜೀನಾಮೆ ನೀಡಲೂ ಮುಂದಾಗಿದ್ದೆ. ಸಾಧಕ–ಬಾಧಕ ಚಿಂತನೆ ಮಾಡಿಯೇ ಈ ನಿರ್ಧಾರ ಕೈಗೊಂಡಿದ್ದೇನೆ. ಕೆಲವರು ನನ್ನ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಬಗ್ಗೆ ಒಂದು ಚರ್ಚೆ ಹುಟ್ಟುಹಾಕಲು ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಜನ ನನಗೊಂದು ಅವಕಾಶ ನೀಡಿದ್ದಾರೆ.

* ಈ ಮಸೂದೆಗೆ ಸದನದಲ್ಲಿ ಬೆಂಬಲ ಸಿಗುವ ವಿಶ್ವಾಸ ಇದೆಯೇ?

ಎಲ್ಲ ಶಾಸಕರು ಅನಿವಾರ್ಯವಾಗಿ ಇದಕ್ಕೆ ಬೆಂಬಲ ಕೊಡಲೇ ಬೇಕಾಗುತ್ತದೆ. ಇನ್ನು ನಾಲ್ಕು ತಿಂಗಳಿಗೆ ಚುನಾವಣೆ ಇದೆ. ಜೆಡಿಎಸ್‌, ಬಿಜೆಪಿಯವರು ಅಥವಾ ಕಾಂಗ್ರೆಸ್‌ ಪಕ್ಷದವರೆಲ್ಲರೂ ಜನರ ಬಳಿಗೇ ಹೋಗಬೇಕು. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಎಲ್‌ಕೆಜಿಯಿಂದ ದ್ವಿತೀಯಪಿ.ಯು.ಸಿ. ವರೆಗೆ ಸರಾಸರಿ 40 ಸಾವಿರ ವಿದ್ಯಾರ್ಥಿಗಳುಕಲಿಯುತ್ತಿರುತ್ತಾರೆ. ಅವರ ಪೋಷಕರೂ ಸೇರಿದರೆ ಈ ಸಂಖ್ಯೆ 80 ಸಾವಿರ ಆಗುತ್ತದೆ. ಖಾಸಗಿ ಶಾಲೆಗಳನ್ನು ನಡೆಸುವವರು ಐದೋ ಹತ್ತೋ ಜನ ಇರಬಹುದು. ರಾಜಕಾರಣಿಗಳು ಜನರ ವಿರೋಧ ಕಟ್ಟಿಕೊಳ್ಳಲು ಸಿದ್ಧರಿರುತ್ತಾರೆಯೇ. ಶಾಸಕರು, ಸರ್ಕಾರವನ್ನು ದೂರುತ್ತಾ ಕೂರುವ ಬದಲು ಅವರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಏಕೆ ಮಾದರಿ ಆಗಬಾರದು. ಶಾಸಕರು, ಅವರ ಮಕ್ಕಳನ್ನು ಶಾಲೆಗೆ ಬಿಟ್ಟುಬರಲು ಸರ್ಕಾರಿ ವಾಹನವನ್ನು ಬಳಸುತ್ತಿಲ್ಲವೇ. ಟೋಲ್‌ಗಳಲ್ಲಿ ರಿಯಾಯಿತಿ ಪಡೆಯಲು ಎಂಎಲ್‌ಸಿ ವಾಹನಕ್ಕೆ ಎರಡೆರಡು ಸ್ಟಿಕ್ಕರ್‌ ಪಡೆಯುವುದಿಲ್ಲವೇ. ಸರ್ಕಾರದ ಸವಲತ್ತುಗಳು ಬೇಕು, ಸರ್ಕಾರಿ ಶಾಲೆ ಏಕೆ ಬೇಡ?

* ಈ ಹಿಂದೆ ಅನೇಕ ಕಾಯ್ದೆಗಳು ಅನುಷ್ಠಾನ ಆಗಿಲ್ಲ, ಇದು ಜಾರಿಗೆ ಬರುತ್ತದೆ ಎಂದೆನಿಸುತ್ತದೆಯೇ?

ನಮ್ಮಲ್ಲಿ ರೈತನ ಮಗ ಪ್ರಧಾನಿ ಆಗಿದ್ದಾರೆ. ಬಡವರ ಮಕ್ಕಳು ಮುಖ್ಯಮಂತ್ರಿ ಆಗಿದ್ದಾರೆ, ಐಎಎಸ್‌ ಅಧಿಕಾರಿಗಳಾಗಿದ್ದಾರೆ. ಮುಖ್ಯ ಕಾರ್ಯದರ್ಶಿಯೂ ಆಗಿದ್ದಾರೆ. ಮುಂದಿನ ಪೀಳಿಗೆಯವರಿಗೆ ಈ ಅವಕಾಶ ಇಲ್ಲ. 10 ವರ್ಷಗಳಿಂದೀಚೆಗೆ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪುತ್ತಿವೆ. ಶಿಕ್ಷಣದ ತಾರತಮ್ಯ ನೀತಿಗೆ ಪರಿಹಾರ ಕಂಡುಕೊಳ್ಳದಿರುವುದು ರಾಜ್ಯಕ್ಕೆ ಮಾಡುವ ದೊಡ್ಡ ದ್ರೋಹ. ಈ ಅಸಮಾನತೆ ಹೋಗಲಾಡಿಸದಿದ್ದರೆ ಚಾಲಕನ ಮಗ ಚಾಲಕನಾಗಿ, ರೈತನ ಮಗ ರೈತನಾಗಿಯೇ ಉಳಿಯುತ್ತಾನೆ. ಹಾಗಾಗಿ ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕು.

ಸರ್ಕಾರಿ ಶಾಲೆ ವ್ಯವಸ್ಥೆ ಚೆನ್ನಾಗಿಯೇ ಇದೆ. ನಮ್ಮಂಥವರ ಮಕ್ಕಳು ಈ ಶಾಲೆಗಳಲ್ಲಿ ಕಲಿಯಲು ಆರಂಭಿಸಿದರೆ ತನ್ನಿಂದ ತಾನೆ ವ್ಯವಸ್ಥೆ ಸುಧಾರಣೆ ಆಗುತ್ತದೆ.

* ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಅಲ್ಲಿ ಇದಕ್ಕೆ ಬೆಂಬಲ ನಿರೀಕ್ಷಿ ಸುತ್ತೀರಾ?

ಈಗ ಅಂತಿಮ ಘಟ್ಟದ ಹೋರಾಟ ಶುರು ಆಗಿದೆ. ನಾನು ವಿಧಾನಮಂಡಲದಲ್ಲಿ ಮಾಡುವ ಹೋರಾಟಕ್ಕೆ ಅದರದ್ದೇ ಆದ ಮಹತ್ವ ಇದೆ. ಮಗು ಅತ್ತರೆ ಮಾತ್ರ ತಾಯಿ ಹಾಲು ಕುಡಿಸುತ್ತಾಳೆ. ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳೂ ಈ ಬಗ್ಗೆ ನಿರ್ಣಯ ಮಂಡಿಸಬೇಕು. ಈ ಮಸೂದೆಗೆ ಒಕ್ಕೊರಲಿನ ಬೆಂಬಲ ಸೂಚಿಸಬೇಕು. ಅವರಿಂದ ಹೆಚ್ಚು ಬೆಂಬಲ ಸಿಕ್ಕಿದಷ್ಟೂ ಈ ಮಸೂದೆ ಬೇಗ ಅಂಗೀಕಾರ ಆಗುತ್ತದೆ.

* ಈ ಮಸೂದೆಯು ಕಾಯ್ದೆಯಾದರೆ ಐಎಎಸ್‌ ಅಧಿಕಾರಿಗಳು ಅವರ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ ಎಂದು ಅನಿಸುತ್ತದೆಯೇ?

ಜನರಿಗೆ ಅವರ ಮಕ್ಕಳನ್ನು ಯಾವ ಶಾಲೆಗೆ ಬೇಕಾದರೂ ಸೇರಿಸುವ ಸ್ವಾತಂತ್ರ್ಯ ಇದೆ. ಆದರೆ, ಈ ಮಸೂದೆ ಕಾಯ್ದೆಯಾದ ಬಳಿಕ ಸರ್ಕಾರದ ಸವಲತ್ತು ಪಡೆಯುವ ನೌಕರರ ಮಕ್ಕಳು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳೆಲ್ಲರೂ ಅವರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಲೇ ಬೇಕಾಗುತ್ತದೆ.

* ಪರಿಷತ್‌ನಲ್ಲಿ ಈ ಮಸೂದೆ ಮಂಡನೆಗೆ ಅವಕಾಶ ಕೋರಿ ಧರಣಿ ನಡೆಸಬೇಕಾದ ಸ್ಥಿತಿ ಬಂದೊದಗಿದ ಬಗ್ಗೆ ಏನನಿಸುತ್ತದೆ?

ಈ ಬಗ್ಗೆ ನನಗೂ ಬೇಸರ ಇದೆ. ಇಂತಹ ಮಹತ್ತರ ವಿಷಯದ ಚರ್ಚೆಗೆ ಅವಕಾಶ ಕೊಡದಿದ್ದರೆ ಇಂತಹ ಸದನ ಇರುವುದಾದರೂ ಏಕೆ? ಮೇಲ್ಮನೆಯಲ್ಲಿ ಇಂಥ ಗಂಭೀರ ಚರ್ಚೆಗೆ ಅವಕಾಶ ಕಲ್ಪಿಸುವಷ್ಟು ಸೌಜನ್ಯ ಇಲ್ಲದಿದ್ದರೆ ನಾವು ಎಲ್ಲಿಗೆ ಬಂದು ನಿಂತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಮಸೂದೆ ಮಂಡನೆ ಆಗುವುದನ್ನು ತಡೆಯಲು ಕೆಲವರು ಚಾಪೆ ಕೆಳಗೆ ನುಗ್ಗುತ್ತಾರೆ ಎಂದು ಗೊತ್ತು. ನಾನು ರಂಗೋಲಿ ಕೆಳಗೆ ನುಸುಳುತ್ತೇನೆ. ನಾನು ಜಗಮೊಂಡ. ಅವರು ಏನೇ ಮಾಡಲಿ. ನಾನು ಹಿಂದಕ್ಕೆ ಸರಿಯುವುದಿಲ್ಲ. ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ. ಹಾಗಾಗಿ ಸುಮ್ಮನಿದ್ದೇನೆ. ಅವಕಾಶ ನೀಡದಿದ್ದರೆ ಸದನದಲ್ಲೇ ಹಾಸಿಗೆ ಹಾಕಿ ಮಲಗಿ ಧರಣಿ ನಡೆಸುವುದಕ್ಕೂ ಸಿದ್ಧ.

* ಒಂದು ವೇಳೆ ಈ ಮಸೂದೆಗೆ ಅಂಗೀಕಾರ ಸಿಗದಿದ್ದರೆ?

ಅಂತಹ ಪ್ರಮೇಯವೇ ಎದುರಾಗದು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿ ಬಳಿ ಈ ಮಸೂದೆ ಬಗ್ಗೆ ಮಾತನಾಡಿದ್ದೇನೆ. ಅವರೂ ಸಹಮತ ಸೂಚಿಸಿದ್ದಾರೆ. ಸದನದ ಮೊಗಸಾಲೆಯಲ್ಲಿ ಮಾತನಾಡುವಾಗ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಂತಹವರು ಸದನದ ಒಳಗೆ ಈ ಮಸೂದೆಯನ್ನು ವಿರೋಧಿಸುವ ಧೈರ್ಯ ಪ್ರದರ್ಶಿಸಲಿ ನೋಡೋಣ. ಸರ್ಕಾರ ಇದನ್ನು ತಂದಿದ್ದರೆ ಬಿಜೆಪಿ ಅಥವಾ ಜೆಡಿಎಸ್‌ ವಿರೋಧ ಮಾಡುವ ಸಾಧ್ಯತೆ ಇತ್ತು. ಇದೊಂದು ಖಾಸಗಿ ಮಸೂದೆ. ಇದರ ಆಶಯ ಚೆನ್ನಾಗಿದೆ. ಹಾಗಾಗಿ ಇದು ಬಿದ್ದು ಹೋಗದೆಂಬ ವಿಶ್ವಾಸವಿದೆ.

* ಮಸೂದೆ ಬಿದ್ದು ಹೋದರೆ ರಾಜೀನಾಮೆ ನೀಡುತ್ತೀರಾ?

ಮುಂದಿನ ಹೋರಾಟವನ್ನು ನಂತರ ನಿರ್ಧರಿಸುತ್ತೇನೆ. ಈ ವಿಚಾರವನ್ನು ತಾರ್ಕಿಕ ಅಂತ್ಯ ತಲುಪಿಸುವವರೆಗೆ ಸುಮ್ಮನಿರುವುದಿಲ್ಲ. ಇದು ನನ್ನ ಹೋರಾಟ ಅಲ್ಲ, ಜನರ ಹೋರಾಟ. ಎಲ್ಲ ರಾಜಕಾರಣಿಗಳೂ ಒಂದು ದಿನ ಮಾಜಿ ಆಗುತ್ತಾರೆ. ಈ ಮಸೂದೆ ವಿಚಾರಕ್ಕೆ ನಾನು ರಾಜೀನಾಮೆ ನೀಡಬೇಕಾಗಿ ಬಂದರೆ, ಅದಕ್ಕೂ ಸಿದ್ಧ. ಕನ್ನಡದ ಪರ ಒಂದು ಕ್ರಾಂತಿ ಆಗಲಿ ಎಂಬುದಷ್ಟೇ ನನ್ನ ಉದ್ದೇಶ. ಅಗತ್ಯಬಿದ್ದರೆ 224 ವಿಧಾನಸಭಾ ಕ್ಷೇತ್ರಗಳಿಗೂ ಹೋಗುತ್ತೇನೆ. ಇದೊಂದು ಚುನಾವಣಾ ವಿಷಯ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT