ಸಭಿಕರ ಜೊತೆ ಭಗವಾನ್ ಚಕಮಕಿ

6

ಸಭಿಕರ ಜೊತೆ ಭಗವಾನ್ ಚಕಮಕಿ

Published:
Updated:
ಸಭಿಕರ ಜೊತೆ ಭಗವಾನ್ ಚಕಮಕಿ

ಮೈಸೂರು: ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ಸಾಹಿತಿಗಳಾದ ಪ್ರೊ.ಕೆ.ಎಸ್.ಭಗವಾನ್ ಹಾಗೂ ಸಿದ್ಧಸ್ವಾಮಿ ಅವರ ಭಾಷಣಕ್ಕೆ ಶನಿವಾರ ಸಭಿಕರು ಅಡ್ಡಿಪಡಿಸಿದರು.

’ಅಲಕ್ಷಿತ ಜನಸಮುದಾಯಗಳು’ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದ ಸಿದ್ಧಸ್ವಾಮಿ ಸಭಿಕರ ಅಡಚಣೆಯಿಂದಾಗಿ ಮಾತನ್ನು ಮೊಟಕುಗೊಳಿಸಿದರು. ನಂತರ ಮಾತು ಆರಂಭಿಸಿದ ಭಗವಾನ್ ಅವರಿಗೂ ಸಭಿಕರು ತಡೆಯೊಡ್ಡಿದರು. ಆದರೆ, ಭಗವಾನ್ ಮಾತು ನಿಲ್ಲಿಸದೆ ಮುಂದುವರಿದಾಗ ಗದ್ದಲ ಹೆಚ್ಚಾಯಿತು. ಸ್ಥಳಕ್ಕೆ ಬಂದ ಪೊಲೀಸರು ಬಿಗಿಭದ್ರತೆಯಲ್ಲಿ ಭಗವಾನ್ ಅವರನ್ನು ಸಭಾಂಗಣದಿಂದ ಹೊರಗೆ ಕರೆದುಕೊಂಡು ಹೋದರು.

ಗದ್ದಲ ಏಕೆ?

‘ಉಡುಪಿಯಲ್ಲಿ ನಡೆದ ಧಾರ್ಮಿಕ ಸಂಸತ್ತಿನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಚರ್ಚೆ ನಡೆಯುತ್ತಿದೆ. ಎಲ್ಲರನ್ನು ಕತ್ತರಿಸಿದವನು ರಾಮ. ಆತನಿಗೊಂದು ಮಂದಿರ ಕಟ್ಟಬೇಕು ಎನ್ನುವುದು ಸರಿಯಲ್ಲ’ ಎಂದು ಗೋಷ್ಠಿಯಲ್ಲಿ ಮಾತನಾಡಿದ ಭಗವಾನ್ ಟೀಕಿಸಿದರು.

ಸಮ್ಮೇಳನದ ಸುದ್ದಿಗಳಿಗೆ ಪ್ರಾಧಾನ್ಯ ಸಿಗಬಾರದು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಧಾರ್ಮಿಕ ಸಂಸತ್ತನ್ನು ಕರೆಯಲಾಗಿದೆ. ಪತ್ರಿಕೆಗಳು ಸಮ್ಮೇಳನದ ಸುದ್ದಿಗಳಿಗಿಂತ ಧಾರ್ಮಿಕ ಸಂಸತ್ತಿನ ಸುದ್ದಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಸರಿಯಲ್ಲ ಎಂದು ಹೇಳಿದರು.

‘ರಾಮಮಂದಿರ ಕಟ್ಟೋದು ಎಂದರೆ ಚಾತುರ್ವಣ್ಯವನ್ನು ಮುಂದುವರಿಸುವುದು ಎಂದರ್ಥ. ಹಿಂದುತ್ವ ಎಂದರೆ ಗುಲಾಮಗಿರಿ. ರಾಮರಾಜ್ಯ ಎಂದು ಹೇಳುತ್ತೀರಿ. ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮನದು ಎಂತಹ ರಾಮರಾಜ್ಯ. ಶೂದ್ರರು ಹಾಗೂ ಮಹಿಳೆಯ ವಿರುದ್ಧ ಇರುವ ರಾಮನನ್ನು ನಂಬುವ ನೀವು ಮೂರ್ಖರು’ ಎಂದು ಸಭಿಕರತ್ತ ಚಾಟಿ ಬೀಸಿದರು.

ಬಾಲ್ಕನಿಯಲ್ಲಿ ಕುಳಿತಿದ್ದ ಕೆಲವು ಪ್ರೇಕ್ಷಕರು ತಕರಾರು ತೆಗೆದರು. ‘ನಾವು ಬಂದಿರುವುದು ಅಲಕ್ಷಿತ ಸಮುದಾಯಗಳು’ ಕುರಿತ ಗೋಷ್ಠಿಯನ್ನು ಕೇಳಲು. ನಿಮ್ಮ ರಾಮನ ಕಥೆಯನ್ನು ಕೇಳಲು ಬಂದಿಲ್ಲ. ವಿಷಯಾಂತರ ಮಾಡಬೇಡಿ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಭಗವಾನ್, ‘ನಿಮಗೆ ಇಷ್ಟವಿಲ್ಲದಿದ್ದರೆ ಎದ್ದು  ಹೋಗಿ’ ಎಂದು ಹೇಳಿದರು. ವೇದಿಕೆ ಮೇಲಿದ್ದ ಚಿಂತಕಿ ಮೀನಾಕ್ಷಿ ಬಾಳಿ ಸಹ ಬೆಂಬಲ ವ್ಯಕ್ತಪಡಿಸಿ, ‘ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಭಗವಾನ್ ಅವರ ಹಕ್ಕು. ಕೇಳಲು ಇಷ್ಟವಿಲ್ಲದಿದ್ದರೆ ಎದ್ದುಹೋಗಿ’ ಎಂದು ಹೇಳಿದರು.

ಸಭಾಂಗಣದಲ್ಲಿ ಗದ್ದಲ ಹೆಚ್ಚಾಯಿತು. ಭಗವಾನ್ ಪರ ಹಾಗೂ ವಿರುದ್ಧವಾಗಿ ಪ್ರೇಕ್ಷಕರು ಎದ್ದು ನಿಂತು ಮಾತನಾಡಲಾರಂಭಿಸಿದರು. ಪೊಲೀಸರು ಹಾಗೂ ಆಯೋಜಕರು ಮಧ್ಯಪ್ರವೇಶ ಮಾಡಿ, ‘ಗೋಷ್ಠಿಯ ಅಧ್ಯಕ್ಷರಾಗಿ ಭಗವಾನ್ ತಮ್ಮ ಅಭಿಪ್ರಾಯ ಹೇಳುವ ಹಕ್ಕು ಹೊಂದಿದ್ದಾರೆ. ಸ್ವಲ್ಪ ತಾಳ್ಮೆಯಿಂದ ಇರಿ’ ಎಂದು ಹೇಳಿದ ಬಳಿಕ ಗದ್ದಲ ಕೊಂಚ ತಣ್ಣಗಾಯಿತು.

ನೀವೆಲ್ಲ ಗುಲಾಮರು: ‘ಮನುಸ್ಮೃತಿಯಲ್ಲಿ ಅಬ್ರಾಹ್ಮಣರೆಲ್ಲ ಬ್ರಾಹ್ಮಣರ ಗುಲಾಮರು ಎಂದಿದೆ. ಬ್ರಾಹ್ಮಣರನ್ನು ಹೊರತುಪಡಿಸಿ ನೀವೆಲ್ಲ ಗುಲಾಮರೇ ಆಗಿದ್ದೀರಿ. ಗುಲಾಮಿ ವ್ಯವಸ್ಥೆಯಲ್ಲಿ ನೀವೆಲ್ಲ ಆನಂದಪಡುತ್ತಿದ್ದೀರಿ. ಶೂದ್ರರು ವೇಶ್ಯೆಯರಿಗೆ ಹುಟ್ಟಿದವರು ಎಂಬ ಮಾತಿದೆ’ ಎಂದು ಭಗವಾನ್ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆಲವು ಪ್ರೇಕ್ಷಕರು ‘ಶೇಮ್ ಶೇಮ್’ ಎಂದು ಕೂಗಿದರು. ‘ಇದನ್ನು ಉಡುಪಿಯಲ್ಲಿ ಹೋಗಿ ಹೇಳಿ’ ಎಂದು ಭಗವಾನ್ ಮಾರುತ್ತರ ನೀಡಿದರು.

‘ದೇಶದ ಇತಿಹಾಸ ತಿರುಚಲಾಗಿದೆ. ಸುಳ್ಳು ಇತಿಹಾಸವನ್ನು ಶಾಲೆಯ ಪಠ್ಯವಾಗಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ನೀವು ಯೋಚಿಸುವುದೇ ಇಲ್ಲ. ಪ್ರತಿಭಟನೆಗಳಿಗೆ ನಾವು ಮಾತ್ರ ಹೋಗುತ್ತೇವೆ. ನೀವೆಲ್ಲ ಮನೆಯಲ್ಲಿ ಆರಾಮವಾಗಿ ಕುಳಿತಿರುತ್ತೀರಿ’ ಎಂದು ಅವರು ಸಭಿಕರನ್ನು ತರಾಟೆಗೆ ತೆಗೆದುಕೊಂಡರು.

ಸಿದ್ಧಸ್ವಾಮಿ ಮಾತಿಗೆ ತಡೆ

ಸಾಹಿತಿ ಸಿದ್ಧಸ್ವಾಮಿ ಮಾತನಾಡಿ, ‘ಮಹಿಷಾಸುರ ಬೌದ್ಧ ದೊರೆ. ಈತನನ್ನು ಕೊಲೆ ಮಾಡಲಾಯಿತು. ಇದರ ಬಗ್ಗೆ ಅಧ್ಯಯನ ನಡೆಯಬೇಕು’ ಎಂದು ಒತ್ತಾಯಿಸಿದರು.

‘ಚಾಮುಂಡೇಶ್ವರಿ ಕಥೆ ಮೈಸೂರಿನದಲ್ಲ. ಅದು ನಡೆದದ್ದು ವಿಂಧ್ಯ ಪರ್ವತದ ತಪ್ಪಲಿನಲ್ಲಿ’ ಎಂದು ಹೇಳುವಷ್ಟರಲ್ಲಿ ಸಭಿಕರು ಗದ್ದಲ ಎಬ್ಬಿಸಿ, ‘ಗೋಷ್ಠಿಯ ವಿಷಯ ಕುರಿತು ಮಾತನಾಡಬೇಕು’ ಎಂದು ಆಗ್ರಹಿಸಿದರು.

‘ಅಲಕ್ಷಿತ ಜನಸಮುದಾಯಗಳ ನಾಯಕ ಮಹಿಷಾಸುರ. ಹಾಗಾಗಿ, ಇದೂ ಗೋಷ್ಠಿಯ ವಿಷಯವೇ ಆಗಿದೆ’ ಎಂದು ಸಮಾಜಾಯಿಷಿ ನೀಡಲು ಸಿದ್ದಸ್ವಾಮಿ ಯತ್ನಿಸಿದರು. ಪ್ರೇಕ್ಷಕರ ಗದ್ದಲ ಜೋರಾದಾಗ ತಮ್ಮ ಭಾಷಣವನ್ನು ಅವರು ಮೊಟಕುಗೊಳಿಸಿದರು.

ಗೌರಿ ಸಾವು ನನಗೂ ಬರಲಿ: ಭಗವಾನ್

‘ಪ‍ತ್ರಕರ್ತೆ ಗೌರಿ ಲಂಕೇಶ್‌ಗೆ ಬಂದ ಸಾವು ಒಳ್ಳೆಯ ಸಾವು. ನನಗೆ ಅಂತಹ ಸಾವು ಬಂದರೆ ಸ್ವಾಗತಿಸುತ್ತೇನೆ’ ಎಂದು ಭಗವಾನ್ ಹೇಳಿದರು. ‘ನನನ್ನು ಕೊಂದು ಹಾಕುತ್ತಾರಂತೆ. ಕಾಯಿಲೆ ಬಂದು ಸಾಯುವುದಕ್ಕಿಂತ ಈ ಸಾವೇ ಒಳ್ಳೆಯದು. ನನ್ನ ಪತ್ನಿಗೂ ಹೇಳಿದ್ದೇನೆ. ಅವಳೂ ಒಪ್ಪಿದ್ದಾಳೆ’ ಎಂದು ಹೇಳಿದರು.

ಸಾಮಾನ್ಯ ವರ್ಗ ಎಂಬುದೇ ಮೋಸ!

ಶೇ 50ರಷ್ಟು ಮಾತ್ರ ಮೀಸಲಾತಿ. ಉಳಿದ ಶೇ 50ರಷ್ಟು ಸಾಮಾನ್ಯ ವರ್ಗ ಎಂದು ಇರುವುದು ಸರಿಯಲ್ಲ. ಸಾಮಾನ್ಯ ವರ್ಗ ಎಂಬುದೇ ಮೋಸ. ಎಲ್ಲ ಜನಾಂಗದವರಿಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಸಾಮಾನ್ಯ ಎಂಬ ಪರಿಕಲ್ಪನೆಯೇ ಇರಬಾರದು ಎಂದು ಭಗವಾನ್ ವಿಶ್ಲೇಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry