ಧರ್ಮಗಳ ನಡುವೆ ಬೀದಿ ಕಾಳಗ: ದೇವೇಗೌಡ

7

ಧರ್ಮಗಳ ನಡುವೆ ಬೀದಿ ಕಾಳಗ: ದೇವೇಗೌಡ

Published:
Updated:
ಧರ್ಮಗಳ ನಡುವೆ ಬೀದಿ ಕಾಳಗ: ದೇವೇಗೌಡ

ಮೈಸೂರು: ‘ದೇಶದಲ್ಲಿ ಒಂದೆಡೆ ನೀರಿಗಾಗಿ ಹೊಡೆದಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಧರ್ಮ ಧರ್ಮಗಳ ನಡುವೆ ಬೀದಿಗಳಲ್ಲಿ ಕಿತ್ತಾಟ ನಡೆಯುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಶಾಂತಿ ನೆಲೆಸಲ್ಲ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಎಚ್ಚರಿಕೆ ನೀಡಿದರು.

ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಎಲ್ಲ ಧರ್ಮದವರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ನಡೆಯಬೇಕಿದೆ. ಧರ್ಮಧರ್ಮಗಳ ನಡುವೆ ಪ್ರೀತಿಯ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

‘ಗುಜರಾತ್‌ ಚುನಾವಣೆಗೆ ಸಂಬಂಧಿಸಿದಂತೆ ಅಲ್ಲಿನ ಬಿಷಪ್‌ ಬರೆದಿರುವ ಪತ್ರದ ಬಗ್ಗೆಯೇ ದೇಶದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಬಿಷಪ್‌ಗೆ ತಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ಇಲ್ಲವೆ’ ಎಂದು ಪ್ರಶ್ನಿಸಿದರು.

‘ರಾಮ, ಸೀತೆ ಕುರಿತು ಪ್ರಶ್ನೆ ಮಾಡುವವರು ಇದ್ದಾರೆ. ಇದು ಅವರ ಹಕ್ಕು. ಆದರೆ, ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನೇ ಮಾರ್ಪಡಿಸುವ ಪ್ರಯತ್ನ ನಡೆದಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾನು ಪ್ರಧಾನಿಯಾಗಿದ್ದಾಗ ತಿರುಪತಿಗೆ ಹೊರಟ್ಟಿದ್ದೆ. ಅದಕ್ಕೆ ಕಮ್ಯುನಿಸ್ಟ್‌ ಪಕ್ಷದವರು ವಿರೋಧ ವ್ಯಕ್ತಪಡಿಸಿದರು. ಬೇಕಿದ್ದರೆ ಪ್ರಧಾನಿ ಹುದ್ದೆ ತೊರೆಯುತ್ತೇನೆ, ನಂಬಿದ ಸಿದ್ಧಾಂತ ಬಿಡಲ್ಲ ಎಂದಿದ್ದೆ. ಅಜ್ಮೇರ್‌ ದರ್ಗಾ, ಅಮೃತಸರದ ಸ್ವರ್ಣಮಂದಿರ, ಶೃಂಗೇರಿ, ಚಾಮುಂಡೇಶ್ವರಿ ದೇಗುಲಕ್ಕೂ ಹೋಗಿದ್ದೇನೆ. ನಂಬಿಕೆ ವಿಷಯವನ್ನು ಸುಲಭವಾಗಿ ಕಾನೂನು ಚೌಕಟ್ಟಿನಲ್ಲಿ ತರಲು ಸಾಧ್ಯವಿಲ್ಲ’ ಎಂದರು.

ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂಪಾ ಅವರು ಜಾತ್ಯತೀತ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಪ್ರಾದೇಶಿಕ ಪಕ್ಷದ ಅಗತ್ಯದ ಬಗ್ಗೆಯೂ ಮಾತನಾಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ. ರಾಜಕೀಯ ಬಿಟ್ಟು ಸಮ್ಮೇಳನ ನಡೆಸುವುದು ಕಷ್ಟ ಎಂದು ಹೇಳಿದರು.

‘ಅಹಿಂಸಾತ್ಮಕ ಹೋರಾಟ ನಡೆಸಬೇಕು’

ಮೈಸೂರು:
ಕನ್ನಡ, ಕಾವೇರಿ ನದಿ ನೀರು, ಮಹದಾಯಿ ಕುಡಿಯುವ ನೀರು ವಿಚಾರದಲ್ಲಿ ಯುವಕರು ದಿಟ್ಟ ಹೋರಾಟ ಮಾಡುತ್ತಿದ್ದಾರೆ ಎಂದು ಎಚ್‌.ಡಿ.ದೇವೇಗೌಡ ಶ್ಲಾಘನೆ ವ್ಯಕ್ತ‍ಪಡಿಸಿದರು.

‘ಈ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಹೋರಾಟ ಹೀಗೆ ಮುಂದುವರಿಬೇಕು. ಅದು ಅಹಿಂಸಾತ್ಮಕವಾಗಿರಬೇಕು’ ಎಂದು ಸಲಹೆ ನೀಡಿದರು.

ಅಭಿಮಾನ ಬೆಳೆಸಿಕೊಳ್ಳಬೇಕು: ದೇವೇಗೌಡ

ಮೈಸೂರು: ‘ಎರಡು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷವನ್ನೇ ತಲೆ ಎತ್ತದಂತೆ ಮಾಡಿದ ಉದಾಹರಣೆ ಇದೆ. ಆದರೆ, ಕನ್ನಡಗರಿಗೆ ಸ್ವಾಭಿಮಾನ ಕಡಿಮೆ. ನನ್ನ ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಡಿ’ ಎಂದು ಎಚ್‌.ಡಿ.ದೇವೇಗೌಡ ಹೇಳಿದರು.

‘ತಮಿಳುನಾಡು ಜನರಿಗೆ ರಾಜ್ಯದ ಹಿತಾಸಕ್ತಿ ಬಗ್ಗೆ ಎಷ್ಟೊಂದು ಆಸಕ್ತಿ ನೋಡಿ. ನಮ್ಮ ರಾಜ್ಯದಲ್ಲೂ ಇಂಥ ಅಭಿಮಾನ ಬೇಕಿದೆ. ನಮ್ಮ ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ. ಆದರೆ, ಪ್ರಧಾನಿ ಮೌನವಾಗಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry