ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರ ನಡುವಿನ ಗೆರೆ ಅಳಿಸಿ: ಪುಟ್ಟಣ್ಣಯ್ಯ

Last Updated 25 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ‘ದೇಶದಲ್ಲಿನ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ರಾಜ್ಯದಿಂದ ರಾಜ್ಯಕ್ಕೆ ಎಲ್ಲಿಯವರೆಗಾದರೂ ತೆಗೆದುಕೊಂಡು ಹೋಗುವಂತಾಗ
ಬೇಕು. ಈ ಕುರಿತು ಕಾಯ್ದೆ ರೂಪಿಸಬೇಕು’ ಎಂದು ಶಾಸಕ ಪುಟ್ಟಣ್ಣಯ್ಯ ಒತ್ತಾಯಿಸಿದರು.

ಸಾಹಿತ್ಯ ಸಮ್ಮೇಳನದ ‘ಕರ್ನಾಟಕ ನೀರಾವರಿ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುಟ್ಟಣ್ಣಯ್ಯ, ನೀರು ಎಲ್ಲರ ಹಕ್ಕು. ಅದರ ಬಳಕೆಗೆ ಮುಕ್ತ ಅವಕಾಶ ಕಲ್ಪಿಸಬೇಕು. ರಾಜ್ಯ ಸರ್ಕಾರಗಳು, ನ್ಯಾಯಾಲಯ ಆ ಬಗ್ಗೆ ಪ್ರಶ್ನೆ ಮಾಡದಂತಾಗಬೇಕು. ಸಾರ್ವತ್ರಿಕ ಕಾನೂನು ತರಬೇಕು’ ಎಂದು ಹೇಳಿದರು.

ಪ್ರಕೃತಿಗೇ ಕಾನೂನು ಮಾಡಲು ನಾವು ಹೊರಟಿದ್ದೇವೆ. ಇಷ್ಟು ಪ್ರಮಾಣದ ಮಳೆ ನೀರು ಸುರಿಸು. ಇಷ್ಟು ಟಿಎಂಸಿ ಅಡಿ ನೀರು ನಮಗೆ ಬೇಕು, ಅಷ್ಟು ಟಿಎಂಸಿ ಅಡಿ ನೀರು ಅವರಿಗೆ ಬೇಕು ಎಂದು ಪ್ರಕೃತಿಯ ಮೇಲೆಯೆ ಒತ್ತಡ ಹೇರಲು ಶುರು ಮಾಡಿದ್ದೇವೆ. ಇದು ಸಲ್ಲದು. ಪ್ರಕೃತಿ ನೀಡಿರುವ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಚಿಂತಿಸಬೇಕು. ರೈತರಿಗೆ ಈ ಬಗ್ಗೆ ಜಾಗೃತಿ ಮೂಡಿದಬೇಕಾಗಿದೆ ಎಂದರು.

ಕಾವೇರಿ, ಮಹದಾಯಿಗಾಗಿ ನಾವು ಜಗಳಕಾಯೋದನ್ನು ಬಿಡಬೇಕು. ಕಾವೇರಿ ಗಲಾಟೆಯಲ್ಲಿ ಕರ್ನಾಟಕ– ತಮಿಳುನಾಡು ರಾಜ್ಯಗಳಿಗೆ ಸಾವಿರಾರು ಕೋಟಿ ಹಣ ನಷ್ಟವಾಗಿದೆ. ‘ರಕ್ತ ಕೊಟ್ಟೇವು; ನೀರು ಕೊಡೆವು’ ಎಂದು ನಮ್ಮ ರೈತ ವೀರಾವೇಶದಿಂದ ಹೋರಾಡಿದರೆ ಯಾವ ಪ್ರಯೋಜನವೂ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀರನ್ನು ಆದ್ಯತೆಯ ವಲಯ ಎಂದು ಪರಿಗಣಿಸಬೇಕು. ಅದಕ್ಕಾಗಿ ಹಣವನ್ನು ಮೀಸಲಿಡಬೇಕು ಎಂದು ಆಗ್ರಹಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಕನ್ನಂಬಾಡಿ ಅಣೆಕಟ್ಟು ಕಟ್ಟಲು ಒಂದು ವರ್ಷದ ಆದಾಯವನ್ನು ಪೂರ್ತಿಯಾಗಿ ವಿನಿಯೋಗಿಸಿದರು. ನೀರಿನ ಉಳಿವಿ
ಗಾಗಿ ನಮ್ಮ ಸರ್ಕಾರಗಳಿಗೆ ಆ ರೀತಿಯ ಬದ್ಧತೆ ಬೇಕು ಎಂದು ಪ್ರತಿಪಾದಿಸಿದರು.

ರೈತರು ಐಎಎಸ್‌ ಅಧಿಕಾರಿಗಳು!: ದೇಶದಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅವರ ಆತ್ಯಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿಲ್ಲ. ಐಎಎಸ್‌ ಅಧಿಕಾರಿ ರವಿ ಆತ್ಮಹತ್ಯೆ ಮಾಡಿಕೊಂಡಾಗ ರಾಜಕೀಯ ಪಕ್ಷಗಳು ಸಿಬಿಐ ತನಿಖೆಗೆ ಒತ್ತಾಯಿಸಿ ಹೋರಾಟದ ಮೇಲೆ ಹೋರಾಟ ನಡೆಸಿದವು. ನಮ್ಮ ರೈತರೂ ಐಎಎಸ್‌ ಅಧಿಕಾರಿಗಳೇ! ಇಂಡಿಯನ್‌ ಅಗ್ರಿಕಲ್ಚರ್‌ ಸರ್ವೀಸ್‌ (IAS) ಪಡೆದಿದ್ದಾರೆ’ ಎಂದು ನಗೆ ಚಟಾಕಿ ಹಾರಿಸಿದರು.

ಶಾಸಕ ಕೋನರೆಡ್ಡಿ, ‘ಕಾವೇರಿ– ಮಹದಾಯಿ ಕರ್ನಾಟಕದ ಎರಡು ಕಣ್ಣುಗಳು ಇದ್ದಂತೆ. ನೀರು ನಮ್ಮ ಹಕ್ಕು. ನೀರನ್ನು ನಾವು ಮೊದಲು ಪಡೆದುಕೊಂಡು ಬೇರೆ ರಾಜ್ಯಗಳಿಗೆ ಬಿಡಬೇಕು. ಕರ್ನಾಟಕದ ನೀರಿನ ಉಳಿವಿಗಾಗಿ ಈ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಮಂಡಿಸಬೇಕು ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದರು.

‘ಕೋನರೆಡ್ಡಿ ಹೆಂಡ್ತೀನ್‌ ನೋಡೇ ಇಲ್ವಂತೆ’
‘ಶಾಸಕ ಕೋನರೆಡ್ಡಿ ತಮ್ಮ ಹೆಂಡತಿ ಪ್ರೇಮ ಅವರನ್ನ ನೋಡೇ ಇಲ್ವಂತೆ. ಒಂದು ಕಡೆ ತಿರುಗಿದರೆ ಕಳಸಾ–ಬಂಡೂರಿ, ಇನ್ನೊಂದು ಕಡೆ ತಿರುಗಿದರೆ ಮಹದಾಯಿ. ಎದುರಿಗೆ ನಿಂತು ‘ನಾನ್‌ ರೀ ಪ್ರೇಮಾ. ನಿಮ್‌ ಹೆಂಡ್ತಿ’ ಎಂದು ಪತ್ನಿ ಹೇಳಿದರೂ, ’ನಂಗೊತ್ತಿಲ್ಲ. ‘ಕಳಸಾ–ಬಂಡೂರಿ, ಮಹದಾಯಿ’ ಅಂತ ಜಪ ಮಾಡುತ್ತಿರುತ್ತಾರೆ. ಆ ಮಟ್ಟಿಗೆ ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ’ ಎಂದು ಪುಟ್ಟಣ್ಣಯ್ಯ ಹಾಸ್ಯದ ಮೂಲಕ ಅವರ ಹೋರಾಟವನ್ನು ಬಣ್ಣಿಸಿದರು.

ಭೂಮಿ ಅವ್ವ, ನೀರು ಅಪ್ಪ, ಭೂಮಿ ಬಿಳಿ ಹಾಳೆ, ನೀರು ಪೆನ್ನು ಇದ್ದಂಗೆ. ಉತ್ತಮ ಸಾಹಿತ್ಯ ಹೊರಹೊಮ್ಮಲು ಇವೆರಡೂ ಅಗತ್ಯವಾಗಿ ಬೇಕು. ಅದೇರೀತಿ ಭೂಮಿ ಅವ್ವ, ನೀರು ಅಪ್ಪ – ಅವೆರಡೂ ಸೇರಿದರೆ ಮಾತ್ರ ಸಮೃದ್ಧ ಬೆಳೆ ಬರಲು ಸಾಧ್ಯ ಎಂದು ಪುಟ್ಟಣ್ಣಯ್ಯ ಹೇಳಿದರು.

**

ನೀರಿನ ಮಿತ ಬಳಕೆ, ಪುನರ್‌ ಬಳಕೆಗೆ ಗಮನ ನೀಡಬೇಕು. ಲಭ್ಯ ನೀರನ್ನು ಎಷ್ಟು ಬುದ್ದಿವಂತಿಕೆಯಿಂದ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ
–ರಾಜಾರಾಮ್‌, ನೀರಾವರಿ ತಜ್ಞ

ಎತ್ತಿನ ಹೊಳೆ ನೀರಿನ ಯೋಜನೆಗೆ ರಾಜ್ಯದ ಒಳಗಡೆಯೇ ವಿರೋಧ ಇದೆ. ನಮ್ಮ ನಮ್ಮಲ್ಲೇ ಜಗಳಗಳು ಬೇಡ. ನೀರಿಗಾಗಿ ಎಲ್ಲರೂ ಒಂದಾಗೋಣ
–ಪ್ರೊ.ನರಸಿಂಹಪ್ಪ, ಪ್ರಗತಿಪರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT