ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಣೆ ಪದವೇ ಕೆಲವರಿಗೆ ಅಲರ್ಜಿ: ಸಬಿಹಾ

ಮಹಿಳಾಗೋಷ್ಠಿಯಲ್ಲಿ ಶೋಷಣೆ ಕಾಣದ ಮುಖಗಳಿಗಾಗಿ ಹುಡುಕಾಟ
Last Updated 25 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಕಚೇರಿ ಅವಧಿ ಮುಗಿದ ಮೇಲೂ ಒಬ್ಬ ಪುರುಷ ಕೆಲಸ ಮಾಡುತ್ತಿದ್ದಾರೆ ಆತ ನಿಷ್ಠಾವಂತ, ಮಹಿಳೆ ಕೆಲಸ ಮಾಡುತ್ತಿದ್ದರೆ ಮಹತ್ವಾಕಾಂಕ್ಷಿ. ಸಹೋದ್ಯೋಗಿ ಜೊತೆ ಪುರುಷನೊಬ್ಬ ನಗುಮುಖದಿಂದ ವ್ಯವಹರಿಸುತ್ತಿದ್ದರೆ ಸೊಗಸುಗಾರ, ಮಹಿಳೆ ನಗುಮುಖದಿಂದ ಇದ್ದರೆ ಮೋಡಿ ಮಾಡುವವಳು. ಸಿಬ್ಬಂದಿಯನ್ನು ನಿಯಂತ್ರಿಸಿದರೆ ಆತ ದಕ್ಷ ಅಧಿಕಾರಿ, ಆಕೆ ದರ್ಪಿಷ್ಟೆ. ಒಳ್ಳೆಯ ಉಡುಗೆಯಲ್ಲಿ ಬಂದರೆ ಜಂಟಲ್‌ಮ್ಯಾನ್‌, ಈಕೆ ಬಂದರೆ ಬಲೆ ಬೀಸುವ ವಿಧಾನ.‌ ಕೆಲಸದ ಅವಧಿಯಲ್ಲಿ ಕೌಟುಂಬಿಕ ಜವಾಬ್ದಾರಿಗಾಗಿ ವಿರಾಮ ಕೇಳಿದರೆ ಆತ ಆದರ್ಶ ವ್ಯಕ್ತಿ, ಈಕೆ ಉಪಯೋಗಕ್ಕೆ ಬಾರದವಳು...

‘ಇದು ಮಹಿಳೆಯನ್ನು ಈ ಜಗತ್ತು ಕಾಣುವ ಸ್ಥಿತಿ. ಎಂಥ ವಿಪರ್ಯಾಸ. ಒಂದೇ ಕೆಲಸ ಮಾಡುವ ವ್ಯಕ್ತಿಗಳ ನಡುವಿನ ವೈರುಧ್ಯ’ – ಹೀಗೆ ಹೇಳಿದ್ದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿ.ವಿ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಶನಿವಾರ ನಡೆದ ಮಹಿಳಾಗೋಷ್ಠಿಯಲ್ಲಿ ‘ಶೋಷಣೆಯ ಛದ್ಮವೇಷಗಳು‌’ ಕುರಿತು ಅವರು ವಿಚಾರ ಮಂಡಿಸಿದರು.

ಮಹಿಳೆಯ ಬಗ್ಗೆ ಹಿಂದೆ ಪೋಷಕರು, ಸಂಬಂಧಿಗಳು ತೀರ್ಮಾನ ಕೈಗೊಳ್ಳುತ್ತಿದ್ದರು. ಈಗ ಅವರ ಕೈದಾಟಿ ಕಾಣದ ಇನ್ನೊಂದು ಗುಂಪಿಗೆ ಹೋಗಿದೆ. ಸಮ್ಮತವೇ ಇಲ್ಲದ ಉಂಡಾಡಿಗುಂಡರ ಗುಂಪು, ಮಾಧ್ಯಮದ ಗುಂಪು, ಧಾರ್ಮಿಕ ಮುಖಂಡರೆಂದು, ಸಂಸ್ಕೃತಿಯ ರಕ್ಷಕರೆಂದು ಕರೆಸಿಕೊಂಡವರು ಮಹಿಳೆಯರ ಬಗ್ಗೆ ತೀರ್ಮಾನ ಪ್ರಕಟಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

‘ಶೋಷಣೆ ಎಂಬ ಪದವೇ ಕೆಲವರಿಗೆ ಅಲರ್ಜಿ. ಏಕೆಂದರೆ ಸುರಕ್ಷಿತ ವಲಯದಲ್ಲಿ ಇದ್ದೇವೆ ಎಂಬ ಭಾವನೆಯಲ್ಲಿರುತ್ತಾರೆ. ಇನ್ನು ಕೆಲವರಿಗೆ ಶೋಷಣೆ ಎಂಬುದು ಮನ–ಮನೆ ಮುರಿಯುವ ವಿಚಾರ. ಅನುಮೋದಿಸುತ್ತಿರುವ ವಿಚಾರಗಳ ಬುಡಕ್ಕೆ ಕೊಡಲಿ ಏಟು ಹಾಕುವಂಥವು ಎಂಬ ಕಾರಣಕ್ಕೆ ಅಲರ್ಜಿ ಆಗಿರುತ್ತವೆ’ ಎಂದು ವ್ಯಾಖ್ಯಾನಿಸಿದರು.

ವೈಯಕ್ತಿಕ ಶೋಷಣೆಗಳು ಸಾಮಾಜಿಕ ಮೌನಸಮ್ಮತ ಪಡೆದು ಒಪ್ಪಿತ ಯಾಜಮಾನ್ಯವಾಗಿ ಬಿಡುತ್ತವೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಪಿಡುಗಾಗಿ ರೂಪಾಂತರಗೊಳ್ಳುತ್ತವೆ. ಪಿತೃಪ್ರಧಾನ ಚಿಂತನಸ್ತರವನ್ನು ಒಪ್ಪಿಕೊಂಡವರಿಗೆ ಇವು ಶೋಷಣೆ ಅನಿಸುವುದೇ ಇಲ್ಲ ಎಂದು ಮರುಕಪಟ್ಟರು.

ತಾತ್ವಿಕ ಆಯ್ಕೆ ಸ್ತ್ರೀವಾದ: ‘ಸ್ವ ಬಿಡುಗಡೆಯ ದಾರಿಗಳು’ ಕುರಿತು ವಿಚಾರ ಮಂಡಿಸಿದ ಸಾಹಿತಿ ಎಂ.ಎಸ್‌.ಆಶಾದೇವಿ, ‘ಮುಂದಿನ ನಾಯಕತ್ವವನ್ನು ಯಾವ ತಾತ್ವಿಕತೆ ವಹಿಸುವುದು? ಆ ನಾಯಕತ್ವದ ಹೊಣೆಗಾರಿಕೆಯನ್ನು ಸ್ತ್ರೀವಾದ ಹೊರಬಲ್ಲದೇ ಎಂಬ ಪ್ರಶ್ನೆ ಎದುರಿಗಿದೆ. ನನ್ನ ಪ್ರಕಾರ ನಾಗರಿಕತೆಯ ಮುಂದಿನ ತಾತ್ವಿಕ ಆಯ್ಕೆ ಎನ್ನುವುದಿದ್ದರೆ ಅದು ಸ್ತ್ರೀವಾದವೇ ಆಗಿರುತ್ತದೆ. ಏಕೆಂದರೆ ಜೀವಂತವಾದ ಸಂವಾದವನ್ನು ನಡೆಸುತ್ತಾ ಅದರಿಂದ ಅಗತ್ಯವಾದುದನ್ನು ಪಡೆದುಕೊಳ್ಳಬಹುದು’ ಎಂದರು.‌

‘ಕಾನೂನು ಮತ್ತು ಶಿಕ್ಷಣವು ಪರಿಹಾರ ನೀಡುವುದಿದ್ದರೆ, ಬದಲಾವಣೆ ತರುವುದಿದ್ದರೆ ಮಹಿಳೆಯ ಮುಂದೆ ಭೀಕರ ಸವಾಲುಗಳು ಎದುರಾಗುತ್ತಿರಲಿಲ್ಲ. ಅವು ಕೇವಲ ಶಕ್ತಿ ಒದಗಿಸಬಲ್ಲವು ಅಷ್ಟೆ. ಸ್ವಬಿಡುಗಡೆ ಎನ್ನುವುದು ಹೆಣ್ಣು ತನ್ನನ್ನು ತಾನು ನೋಡಿಕೊಳ್ಳುವ, ಲೋಕವನ್ನು ನೋಡುವ ವಿಧಾನ ಬದಲಾಯಿಸಿಕೊಳ್ಳುವುದು. ಆಗ ಹೆಣ್ಣನ್ನು ಲೋಕ ನೋಡುವ, ನಡೆಸಿಕೊಳ್ಳುವ ಕ್ರಮವೂ ಬದಲಾಗುತ್ತದೆ’ ಎಂದು ವಿಶ್ಲೇಷಿಸಿದರು.

ತನ್ನ ದೇಹದ ಬಗೆಗೆ ಮಹಿಳೆಯು ಘನತೆಯ ಭಾವನೆ ರೂಢಿಸಿಕೊಳ್ಳದಿದ್ದರೆ ವ್ಯಕ್ತಿತ್ವ ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ತನಗಾಗಿ ಬದುಕುವುದನ್ನು ಕಲಿಯಬೇಕು. ಅದು ಸ್ವ ಬಿಡುಗಡೆ. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂದು ಪ್ರತಿಪಾದಿಸಿದರು.

ಆಳಿಸಿಕೊಳ್ಳುವವಳು ಹೆಣ್ಣು: ‘ಸಮಕಾಲೀನ ಸಾಂಸ್ಕೃತಿಕ ರಾಜಕಾರಣ’ ಕುರಿತು ಮಾತನಾಡಿದ ಮೈಸೂರು ವಿ.ವಿ ಕನ್ನಡ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕಿ ಎನ್‌.ಕೆ.ಲೋಲಾಕ್ಷಿ, ‘ಅತ್ಯಾಚಾರಿಗೆ ಶಿಕ್ಷೆ ನೀಡುವ ಬದಲು ಸಂತ್ರಸ್ತೆಯ ದೇಹ, ಬಟ್ಟೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಎಷ್ಟು ಹೆಣ್ಣುಗಳ ಮೇಲೆ ಅತ್ಯಾಚಾರ ನಡೆದಿದೆ ಎಂಬ ಲೆಕ್ಕಾಚಾರಕ್ಕೆ ಬದಲಾಗಿ ಅತ್ಯಾಚಾರ ಮಾಡಿದ ಪುರುಷರ ಅಂಕಿಅಂಶ ದಾಖಲಿಸಬೇಕಿದೆ’ ಎಂದರು.

‘ಮಹಿಳೆಯ ಮೇಲೆ ಕಾಣದ ಹಾಗೆ ಶೋಷಣೆ ನಡೆಯುತ್ತಿದೆ. ಆಕೆಯನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ. ಆಳುವವನು ಗಂಡು, ಆಳಿಸಿಕೊಳ್ಳುವವಳು ಹೆಣ್ಣು ಎಂಬ ಪರಿಸ್ಥಿತಿ ನೆಲೆಸಿದೆ’ ಎಂದು ನುಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ವಿಜಯಾ, ‘ಮಹಿಳಾ ಶೋಷಣೆಗೆ ಸಂಬಂಧಿಸಿದಂತೆ ಹೇಳಿದ್ದನ್ನೇ ಹೇಳುವುದು ಬೇಡ. ಹೊಸ ಕೂಗು ಕೇಳಿಬರಬೇಕಿದೆ. ತಿರುಗೇಟು ನೀಡುವ ವಿಧಾನ ಕಲಿಯಬೇಕಿದೆ’ ಎಂದು ಸಲಹೆ ನೀಡಿದರು.

‘ಪುರುಷರು ನೆಟ್ಟಗಿರಲು ಸಾಧ್ಯವಾಗದೇ ನಮ್ಮ ಮೇಲೆ ವಸ್ತ್ರಸಂಹಿತೆ ಹೇರುತ್ತಿದ್ದಾರೆ. ಶೋಷಣೆ ಬಗ್ಗೆ ನಾವಿನ್ನು ಪ್ರಶ್ನಿಸುವುದಿಲ್ಲ. ಬದಲಾಗಿ ನಮ್ಮದೇ ಆದ ಹೊಸ ಲೋಕ ಕಟ್ಟಿಕೊಳ್ಳುತ್ತೇವೆ’ ಎಂದು ಹೇಳಿದರು.

ಬೈಕ್‌, ಮೊಬೈಲ್‌ ಇರುತ್ತೆ: ಶೌಚಾಲಯ ಇರಲ್ಲ...

‘ಮಹಿಳೆಯರು ಹಿಂಸೆ ಹಾಗೂ ಆಕ್ರಮಣವನ್ನು ಶೌಚದ ಸಮಯದಲ್ಲಿ ಎದುರಿಸುತ್ತಿದ್ದಾರೆ. ಹೊರಗಡೆ ಶೌಚಕ್ಕೆ ಹೋಗಲು ಮಹಿಳೆಯರಿಗೆ ರಕ್ಷಣೆ ಒದಗಿಸದ ಸ್ಥಿತಿ ಶೋಷಣೆ ಅಲ್ಲದೆ ಮತ್ತಿನ್ನೇನು?’

ಇದು ಸಬಿಹಾ ಭೂಮಿಗೌಡ ಕೇಳಿದ ಪ್ರಶ್ನೆ.

‘ಅಭಿವೃದ್ಧಿಯ ಮಾನದಂಡದಲ್ಲಿ ಶೌಚಾಲಯ ವ್ಯವಸ್ಥೆ ಸೇರಿದೆಯೋ ಅಥವಾ ಅದು ಅಷ್ಟು ಮುಖ್ಯವೆಂದು ಪರಿಗಣಿತವಾಗಿಲ್ಲವೋ ಅರ್ಥವಾಗುತ್ತಿಲ್ಲ. ಮನೆಮನೆಗಳಲ್ಲಿ ಬೈಕ್‌ ಇದೆ, ಎಲ್ಲರ ಕೈಯಲ್ಲಿ ಮೊಬೈಲ್‌ ಇದೆ. ಆದರೆ, ಶೌಚಾಲಯ ನಿರ್ಮಿಸುವ ಆದ್ಯತೆ ಮನೆಯ ಯಜಮಾನನಿಗೆ ಇರುವುದೇ ಇಲ್ಲ. ಶೌಚಕ್ಕೆಂದು ಬಯಲಿಗೆ ಹೋದಾಗಲೇ ಶೇ 40ರಷ್ಟು ಅತ್ಯಾಚಾರ ನಡೆದಿದೆ ಎಂಬುದನ್ನು ಅಧ್ಯಯನಗಳೇ ಹೇಳುತ್ತವೆ’ ಎಂದರು.

* ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ನಿರ್ಣಯ ಕೈಗೊಳ್ಳಬೇಕು. ಮಹಿಳೆಯರನ್ನು ಒಳಗೊಂಡ ಸಮಿತಿ ಇರಬೇಕು

–ಡಾ. ವಿಜಯಾ 

* ಸ್ತ್ರೀವಾದ ಎನ್ನುವುದು ಯುದ್ಧ, ಮೇಲಾಟ ಅಥವಾ ಕಥೆ ಅಲ್ಲ. ಇದೊಂದು ಅಪ್ಪಟ ಮಾನವೀಯ ಲೋಕಮೀಮಾಂಸೆ, ಬದುಕಿನ ಕ್ರಮ

–ಎಂ.ಎಸ್‌.ಆಶಾದೇವಿ

* ಮಹಿಳಾ ಮೇಲಿನ ತಣ್ಣನೆ ಕ್ರೌರ್ಯವನ್ನು ಗ್ರಹಿಸುವುದಾದರೂ ಹೇಗೆ? ಹೆಣ್ಣಿನ ಕೈಗೆ ಆಯ್ಕೆ ಇರಬಾರದು ಎನ್ನುವುದು ಶೋಷಣೆ ಅಲ್ಲವೇ?

–ಪ್ರೊ.ಸಬಿಹಾ ಭೂಮಿಗೌಡ

* ಮಹಿಳೆಯನ್ನು ಪಂಜರದಲ್ಲಿ ಇಡಲಾಗಿದ್ದು, ಹೊರಬಿಟ್ಟರೆ ಖಂಡಿತ ಗರ್ಜಿಸುತ್ತಾಳೆ. ಆಕೆ<br/>ಗಿನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಮತ್ತೊಂದು ಹೋರಾಟಕ್ಕೆ ಸಜ್ಜಾಗಬೇಕಿದೆ

–ಎನ್‌.ಕೆ.ಲೋಲಾಕ್ಷಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT