7

ಕೆಲಸದ ಜತೆಗೆ ಆರೋಗ್ಯ ಕಾಳಜಿ ವಹಿಸಿ

Published:
Updated:
ಕೆಲಸದ ಜತೆಗೆ ಆರೋಗ್ಯ ಕಾಳಜಿ ವಹಿಸಿ

ಕನಕಪುರ: ಶ್ರಮ ಜೀವಿಗಳಾದ ರೈತರು ಕೆಲಸ ಕಾರ್ಯದ ಜತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಹೇಳಿದರು.

ತಾಲ್ಲೂಕಿನ ಸುಂಡಘಟ್ಟ ಗ್ರಾಮದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಶನಿವಾರ ಆಯೋಜನೆ ಮಾಡಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಗ್ರಾಮೀಣ ಭಾಗದ ಜನತೆ ಜಮೀನಿನ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗೆ ತಲೆ ಕಡೆಸಿಕೊಳ್ಳುವುದಿಲ್ಲ, ಕಣ್ಣಿನ ದೋಷವಿದ್ದರೂ ಸುಮ್ಮನಾಗಿ ಬಿಡುತ್ತಾರೆ. ಈ ರೀತಿ ಮಾಡುವುದರಿಂದ ಮುಂದೆ ಕಣ್ಣಿಗೆ ಹಾನಿ ಆಗಬಹುದು. ಆರೋಗ್ಯ ಸಮಸ್ಯೆ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಮುಖಂಡ ಶ್ರೀನಿವಾಸ್‌ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳು ನೆಪಮಾತ್ರಕ್ಕೆ ಮಾತ್ರ ಇವೆ, ಗ್ರಾಮೀಣದ ಜನತೆ ಆರೋಗ್ಯದ ಸಮಸ್ಯೆಯಿಂದ ವೈದ್ಯರ ಬಳಿ ಬಂದರೆ ಅವರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ವೈದ್ಯರು ನೀಡುವುದಿಲ್ಲ, ಆ ಕಾರಣದಿಂದ ಬಡ ರೋಗಿಗಳು ವಿಧಿಯಿಲ್ಲದೆ ಖಾಸಗಿ ಆಸ್ಪತ್ರೆಗೆ ಹೋಗಿ ಹಣ ಕೊಟ್ಟು ಚಿಕಿತ್ಸೆ ಪಡೆಯುತ್ತಾರೆ ಎಂದು ದೂರಿದರು.

ಕಾಡಂಚಿನ ಗ್ರಾಮಗಳಲ್ಲಿರುವ ಜನತೆಗೆ ಅನುಕೂಲವಾಗುವಂತೆ ಆರೋಗ್ಯ ಇಲಾಖೆಯು ಸಂಚಾರಿ ವೈದ್ಯರ ತಂಡವನ್ನು ಕಳುಹಿಸಿ ಜನತೆಗೆ ಸುಲಭವಾಗಿ ಆರೋಗ್ಯ ಸೇವೆ ದೊರಕುವಂತೆ ಮಾಡಬೇಕು ಎಂದರು.

ಆರೋಗ್ಯ ಉಪ ಕೇಂದ್ರಗಳಲ್ಲಿಯೂ ವೈದ್ಯಕೀಯ ಸೇವೆ ದೊರೆಯುವಂತೆ ಮಾಡಬೇಕು. ಮೂರು ತಿಂಗಳಿಗೊಮ್ಮೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ನಡೆಸಬೇಕೆಂದು ಒತ್ತಾಯಿಸಿದರು.

ತಾಲ್ಲೂಕು ಅಧ್ಯಕ್ಷ ಶಶಿಕುಮಾರ್‌ ಮಾತನಾಡಿ, ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ನಡೆಸಿದ್ದು 130ಕ್ಕೂ ಹೆಚ್ಚಿನ ಜನರು ಬಂದಿದ್ದರು. 30 ಜನರಿಗೆ ಕಣ್ಣಿನ ಸಮಸ್ಯೆಯಿದ್ದುದರಿಂದ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗುವುದು. 25 ಮಂದಿಗೆ ಕನ್ನಡಕ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವರಾಮು, ತಾಲ್ಲೂಕು ಕಾರ್ಯದರ್ಶಿ ಕೃಷ್ಣ, ಹೋಬಳಿ ಅಧ್ಯಕ್ಷ ಚಂದ್ರು, ಮುಖಂಡರಾದ ಬಸವರಾಜು, ಮುನಿಬಸವಯ್ಯ, ಪುಟ್ಟಸ್ವಾಮಣ್ಣ, ವಿನಯ್‌, ಗಿರೀಶ್‌, ವೆಂಕಟೇಶ್‌, ಚಂದ್ರಣ್ಣ, ಸುಂಡಘಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು. ಕೆಂಪೇಗೌಡ ಆಸ್ಪತ್ರೆಯ ಶಶಿಧರ್‌, ನವೀನ್‌, ಅಶ್ವಿನಿ, ಹೇಮಂತ್‌, ರಂಜಿತ್‌, ಸರಿತ ತಪಾಸಣಾ ಶಿಬಿರ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry