7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಗ್ರಾಮೀಣ ಸಬಲತೆಯ ಬುನಾದಿ ‘ಕ್ಷೀರ ಕ್ರಾಂತಿ’

Published:
Updated:
ಗ್ರಾಮೀಣ ಸಬಲತೆಯ ಬುನಾದಿ ‘ಕ್ಷೀರ ಕ್ರಾಂತಿ’

ಶಿವಮೊಗ್ಗ: ಭಾರತದ ಹಾಲು ಉತ್ಪಾದನೆಯ ಇತಿಹಾಸದಲ್ಲಿ ನವೆಂಬರ್ 26 ಸ್ಮರಣೀಯ ದಿನ. ಗ್ರಾಮೀಣ ಭಾಗದ ಕೃಷಿಕರ ಬದುಕಿನ ಭಾಗವೇ ಆಗಿರುವ ಹಾಲು ಉತ್ಪಾದನೆಗೆ ನಾಂದಿ ಹಾಡಿದ್ದ ಕ್ಷೀರ ಕ್ರಾಂತಿಯ ಹರಿಕಾರ ಡಾ.ವರ್ಗಿಸ್ ಕುರಿಯನ್ ಜನ್ಮ ದಿನ.

ಸ್ವಾತಂತ್ರ್ಯಾ ಭಾರತದಲ್ಲಿ ಪಂಚ ವಾರ್ಷಿಕ ಯೋಜನೆಗಳು ಹಸಿರು ಕ್ರಾಂತಿಗೆ ನಾಂದಿ ಹಾಡಿದರೆ, ಕುರಿಯನ್‌ ನೇತೃತ್ವದ ಅಮುಲ್ ಕ್ಷೀರ ಕ್ರಾಂತಿಗೆ ಬುನಾದಿ ಹಾಕಿತ್ತು. ಹಾಲು ಉತ್ಪಾದಕರಿಗೆ ತಮ್ಮ ಸಹಭಾಗಿತ್ವದಲ್ಲೇ ವ್ಯವಸ್ಥಿತ ಮಾರುಕಟ್ಟೆ ದೊರಕಿಸಿಕೊಡುವ ಮೂಲಕ ದೇಶದ ರೈತರಿಗೆ ನಿಶ್ಚಿತ ಆದಾಯ ಗಳಿಸಲು ಸಾಧ್ಯವಾಗಿತ್ತು.

1921ರಲ್ಲಿ ಕೇರಳದ ಕೋಯಿಕೋಡ್‌ನಲ್ಲಿ ಜನಿಸಿದ್ದ ಕುರಿಯನ್ ಮದರಾಸು ವಿಶ್ವವಿದ್ಯಾಲಯದಿಂದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪದವಿ, 1945–46 ರಲ್ಲಿ ಅಮೆರಿಕದ ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಲೋಹ ವಿಜ್ಞಾನ ಮತ್ತು ನ್ಯೂಕ್ಲಿಯರ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಬಡತನದ ಬೇಗೆಯಿಂದ ಬಸವಳಿದಿದ್ದ ಗ್ರಾಮೀಣ ಭಾಗದ ಜನರ ಬದುಕಿನಲ್ಲಿಹೊಸ ಬೆಳಕು ನೀಡಿದವರು ಡಾ.ಕುರಿಯನ್. ಗ್ರಾಮೀಣ ಭಾಗದ ವಾಸ್ತವತೆಯ ಅರಿವಿನ ಕೊರತೆ, ಅನುಷ್ಠಾನ ದೋಷ, ಭ್ರಷ್ಟಾಚಾರ ಹೀಗೆ ಹಲವು ಕಾರಣಗಳು ಇರಬಹುದು. ಇಂತಹ ಸಾವಿರಾರು ವಿಫಲ ಯೋಜನೆಗಳ ನಡುವೆಯೂ ಅವರ ನೇತೃತ್ವದ ಅಮುಲ್ ಮಾದರಿ ಹೈನುಗಾರಿಕೆ, ಹೊನಲು ಕಾರ್ಯಾಚರಣೆ ಭಾರತದಲ್ಲಿ ಯಶಸ್ಸು ಕಂಡಿತು. ಆ ಮೂಲಕ ಅವರು ಕೋಟ್ಯಂತರ ಗ್ರಾಮೀಣ ಹೈನುಗಾರ ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ.

ಪ್ರತಿ ವ್ಯಕ್ತಿಗೆ ನಿಗದಿತ ಪ್ರಮಾಣದ ಹಾಲು ಸಿಗುವ ಮತ್ತು ಗ್ರಾಮೀಣ ಭಾರತದಲ್ಲಿ ಹೈನುಗಾರಿಕೆ ಅತಿ ಹೆಚ್ಚು ಉದ್ಯೋಗ ನೀಡುವ ಹಾಗೆ ಮಾಡಿದರು. ಅವರು ಹುಟ್ಟು ಹಾಕಿದ ಸಹಕಾರಿ ಸಂಸ್ಥೆಗಳು ಮಹಿಳೆಯರಿಗೆ ಅಧಿಕಾರ ನೀಡುವ ಮತ್ತು ತಳಮಟ್ಟದಲ್ಲಿ ಪ್ರಜಾತಂತ್ರ ವ್ಯವಸ್ಥೆ ಅಳವಡಿಸಿ ಸಮಾಜ ಬದಲಿಸುವ ಶಕ್ತಿಯುತ ಪ್ರತಿನಿಧಿಗಳನ್ನಾಗಿಸಿವೆ.

ತಾವು ಉತ್ಪಾದಿಸಿದ ಹಾಲು ಮಾರಾಟ ಮಾಡಲು ಹೈನುಗಾರರ ಸಣ್ಣ ಗುಂಪು ಮಾಡಿಕೊಂಡಿದ್ದ ಕೈರಾ ಜಿಲ್ಲೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸೇವೆ ಸಲ್ಲಿಸಲು ಕುರಿಯನ್ ಬಂದಿದ್ದೇ ಒಂದು ಆಕಸ್ಮಿಕ. ಅಂದು ಅಮೂಲ್‌ ಸಾಧನೆ ಕಂಡು ಬೆರಗಾದ ವಿಶ್ವ ಬ್ಯಾಂಕ್ ‘ಅಮುಲ್ ಮಾದರಿ ಬಡತನದ ವಿರುದ್ಧ ಹೋರಾಡುವ ಆಯುಧ’ ಎಂದು ಬಣ್ಣಿಸಿತ್ತು.

31ನೇ ಅಕ್ಟೋಬರ್ 1964 ರಂದು ಭಾರತದಲ್ಲಿಯೇ ಅತಿ ದೊಡ್ಡ ಹಾಲಿನ ಪುಡಿ ಘಟಕ ಮತ್ತು ಅತಿ ದೊಡ್ಡ ಪಶು ಆಹಾರ ಘಟಕದ ಉದ್ಘಾಟನೆ ಅಂದಿನ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಆನಂದ್‌ನಲ್ಲಿ ನೆರವೇರಿಸಿದ್ದರು. ಅಮುಲ್ ಡೇರಿಯ ಯಶಸ್ಸು ಮನಗಂಡ ಶಾಸ್ತ್ರಿ ಕೈರಾ ಜಿಲ್ಲೆಯ ಸಣ್ಣ ಗ್ರಾಮವಾದ ಅಜರ್ಪುರ ಎಂಬ ಹಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಿ ಆ ಗ್ರಾಮದಲ್ಲಾಗಿರುವ ಬದಲಾವಣೆ ಮನಗಂಡು ಭಾರತದ ಎಲ್ಲೆಡೆ ಆನಂದ್‌ ಪ್ರತಿರೂಪ ಸ್ಥಾಪಿಸಲು ಸಲಹೆ ನೀಡಿದ್ದರು. ಮರು ವರ್ಷವೇ ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿ ಸ್ಥಾಪಿಸಿದರು. ಇದು ವಿಶ್ವದಲ್ಲಿಯೇ ಅತಿ ದೊಡ್ಡದಾದ ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮವಾದುದು. 1962ರಲ್ಲಿ ಚೀನಾ ಯುದ್ಧದ ಸಮಯದಲ್ಲಿ ಕೇವಲ ಆರು ತಿಂಗಳಲ್ಲಿ 2,750 ಟನ್ ಹಾಲಿನ ಪುಡಿ ಸೇನೆಗೆ ಸರಬರಾಜು ಮಾಡಿದ್ದು ಈಗ ಇತಿಹಾಸ.

‘ನಮ್ಮ ರೈತರ ಹಿತಾಸಕ್ತಿ ಹಾಳುಗೆಡುವ, ಪಟ್ಟ ಭದ್ರ ಹಿತಾಸಕ್ತಿಗಳ ನೀತಿಗೆಟ್ಟ ರಾಜಕಾರಣಿಗಳು, ಅಧಿಕಾರಿಗಳು, ವ್ಯಾಪಾರಸ್ಥರು ಅಥವಾ ಸಂಸ್ಥೆಗಳು - ಪ್ರಯತ್ನಗಳ ವಿರುದ್ಧ ಜೀವಮಾನವಿಡೀ ಹೋರಾಡಿದ್ದೇನೆ. ನಮ್ಮ ರಾಷ್ಟ್ರದ ಉತ್ಪಾದಕರ ಸೇವೆ ಮಾಡುತ್ತಾ ಅವರು ಸಮಾಜದ ಕ್ರಿಯಾಶೀಲ ಸದಸ್ಯರನ್ನಾಗಿಸುತ್ತೇನೆ’ ಎಂದು ಕುರಿಯನ್‌ ಪ್ರತಿಜ್ಞೆ ಮಾಡಿದ್ದರು.

ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ಡಾ.ವರ್ಗಿಸ್ ಕುರಿಯನ್ ಅವರ ಮಾರ್ಬಲ್ ಶಿಲೆಯ ಪುತ್ಥಳಿ ಅಮೆರಿಕದ ಮಿಚಿಗನ್ ವಿಶ್ವ ವಿದ್ಯಾಲಯದ ಆವರಣದ ಅಂತರಾಷ್ಟೀಯ ಕೇಂದ್ರದಲ್ಲಿ 30- ಜೂನ್ 2016ರಂದು ಹಾಗೂ ಮತ್ತು ಕಂಚಿನ ಪುತ್ಥಳಿ 25 ಮೇ 2017ರಂದು ಕಾಲೇಜ್ ಆಫ್ ಎಂಜಿನಿಯರಿಂಗ್ ಆವರಣದಲ್ಲಿ ಸ್ಥಾಪಿಸಲಾಗಿದೆ.

ಶಿವಮೊಗ್ಗ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಿ.ವಿ. ಮಲ್ಲಿಕಾರ್ಜುನ್ ಈ ಪುತ್ಥಳಿಗಳ ದಾನಿ. ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್ ಹೊರತುಪಡಿಸಿದರೆ ಇದುವರೆಗೆ  ಅಮೆರಿಕದಲ್ಲಿ ಸ್ಥಾಪನೆಯಾದ ಭಾರತೀಯರ ಪುತ್ಥಳಿ ಎಂದರೆ ಅದು ಕುರಿಯನ್‌ ಅವರದ್ದು.

ಸೆಪ್ಟಂಬರ್‌ನಲ್ಲಿ 2012ರಲ್ಲಿ ಅವರು ನಿಧನರಾದರು. ಇಡೀ ವಿಶ್ವದಲ್ಲಿ ಭಾರತ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನ ಗಳಿಸುವಂತೆ ಮಾಡಿದ ಕ್ಷೀರ ಕ್ರಾಂತಿಯ ಹರಿಕಾರ ಕುರಿಯನ್‌ ಅವರಿಗೆ ಭಾರತ ರತ್ನ ನೀಡಬೇಕು ಎಂದು ಅಂದು ರಾಷ್ಟ್ರೀಯ ಡೇರಿ ಅಭಿವೃದ್ಧಿ ಬೋರ್ಡ್‌, ರಾಷ್ಟ್ರಿಯ ಡೇರಿ ಸಂಸ್ಥೆ, 22 ರಾಜ್ಯಗಳ ಹಾಲು ಒಕ್ಕೂಟಗಳು ಒತ್ತಾಯ ಮಾಡಿದ್ದವು. 2014ರಿಂದ ಭಾರತದ ಎಲ್ಲೆಡೆ ಪ್ರಮುಖ ಡೈರಿ ಸಂಘಟನೆಗಳು ಒಟ್ಟಿಗೆ ಸೇರಿ ನವೆಂಬರ್ 24 ರಾಷ್ಟ್ರೀಯ ಹಾಲು ದಿನವಾಗಿ ಆಚರಿಸುತ್ತಿವೆ.

ಭಾರತ 1970ರಲ್ಲಿ ಉತ್ಪಾದಿಸುತ್ತಿದ್ದ 2.20 ಕೋಟಿ ಟನ್ ಹಾಲು ಉತ್ಪಾದನೆ ಈಗ 1996ರ ವೇಳೆಗೆ 6.62 ಕೋಟಿ ಟನ್ ಗೆ ಏರಿತು. ಇದಕ್ಕೆ ಕಾರಣ ಕ್ಷೀರಕ್ರಾಂತಿ ಕಾರ್ಯಾಚರಣೆ. ಹಾಲು ಉತ್ಪಾದನೆ, ಸಾಗಾಣಿಕೆ, ಮಾರುಕಟ್ಟೆ, ನವೀಕರಣ ಆಧುನೀಕರಣದ ಫಲವಾಗಿ ಹಳ್ಳಿಗಾಡಿನ ಕೋಟ್ಯಂತರ ಜನರಿಗೆ ಸಂಭಾವನೆಯ ವೃತ್ತಿಯಾಯಿತು. 1996ರಿಂದ 2016ರ ವೇಳೆಗೆ ಹಾಲಿನ ಉತ್ಪಾದನೆ 6.62 ಕೋಟಿ ಟನ್‌ನಿಂದ 16 ಕೋಟಿ ಟನ್‌ಗೆ ಹೆಚ್ಚಳವಾಯಿತು.

ದೇಶದಲ್ಲಿ ಸದ್ಯ 15 ರಾಜ್ಯಮಟ್ಟದ ಸಹಕಾರಿ ಕ್ಷೀರ ಉತ್ಪಾದನಾ ಸಂಸ್ಥೆಗಳು, 189 ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ. ಇವುಗಳಲ್ಲಿ 1.56 ಲಕ್ಷ ಗ್ರಾಮ ಮಟ್ಟದ ಸಹಕಾರಿ ಸಂಘಗಳು ಮತ್ತು 1.52 ಕೋಟಿ ಹಾಲು ಉತ್ಪಾದಕರು ಸದಸ್ಯತ್ವ ಪಡೆದಿದ್ದಾರೆ. ಆದರಲ್ಲಿ ಶೇ 29ರಷ್ಟು ಮಹಿಳಾ ಸದಸ್ಯರಿದ್ದಾರೆ. 26,600 ಮಹಿಳಾ ಸಂಘಗಳು ಇವೆ. ಮಹಿಳಾ ಸದಸ್ಯರ ಸಂಖ್ಯೆ 43 ಲಕ್ಷ ದಾಟಿದೆ. ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಿವೆ. 22 ಸಾವಿರ ಹಳ್ಳಿಗಳಲ್ಲಿ 13 ಸಾವಿರ ಹಾಲು ಸಹಕಾರ ಸಂಘಗಳಿವೆ. ಒಟ್ಟಾರೆ 22 ಲಕ್ಷ ಹಾಲು ಉತ್ಪಾದಕರು ಸದಸ್ಯರಾಗಿದ್ದಾರೆ. ನಿತ್ಯ ಹಾಲು ಶೇಖರಣೆ 65 ಲಕ್ಷ ಕೆ.ಜಿ. ಇರುತ್ತದೆ. ಪ್ರತಿ ದಿನ ₹ 15 ಕೋಟಿ ರೈತರಿಗೆ ಪಾವತಿ ಮಾಡಲಾಗುತ್ತಿದೆ. ಈವರೆಗೆ 65ಕ್ಕೂ ಹೆಚ್ಚು ವಿವಿಧ ಮಾದರಿಯ ಉತ್ಪನ್ನಗಳನ್ನು ನಂದಿನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಒಳಗೊಂಡ ಶಿಮುಲ್‌ ವ್ಯಾಪ್ತಿಯಲ್ಲಿ 72,651 ಸದಸ್ಯರು ಇದ್ದಾರೆ. 61,403 ರೈತರು ಪ್ರತಿ ದಿನ ರೈತರಿಂದ 4 ಲಕ್ಷ ಲೀಟರ್‌ ಹಾಲು ಮಾರಾಟ ಮಾಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry