ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಹೊಲದಲ್ಲಿ ಹಕ್ಕಿಗಳ ಕಲರವ

Last Updated 26 ನವೆಂಬರ್ 2017, 6:49 IST
ಅಕ್ಷರ ಗಾತ್ರ

ಸಿರಿಧಾನ್ಯಗಳೆಂದರೆ ಈಗ ಎಲ್ಲರಿಗೂ ಅಚ್ಚುಮೆಚ್ಚು. ಸಿರಿಧಾನ್ಯಗಳಲ್ಲಿ ಅತೀ ಹೆಚ್ಚಿನ ಪ್ರಮಾಣದ ಪ್ರೊಟೀನ್, ನಾರಿನಾಂಶ, ವಿಟಮಿನ್, ಅಗತ್ಯ ಅಮೈನೊ ಅಸಿಡ್, ಫೋಲಿಕ್ ಅಸಿಡ್ ಹಾಗೂ ವಿಟಮಿನ್ ‘ಇ’ ಅಂಶಗಳು ಕೂಡಿದ್ದು, ದೇಹಕ್ಕೆ ಹೆಚ್ಚು ಪೌಷ್ಟಿಕಾಂಶ ನೀಡುತ್ತವೆ ಎಂಬ ಕಾರಣದಿಂದ ಬಹುತೇಕರು ಸಿರಿಧಾನ್ಯದ ಆರಾಧಕರಾಗುತ್ತಿದ್ದಾರೆ.

ಸಿರಿಧಾನ್ಯದೆಡೆಗೆ ಮನುಷ್ಯರಷ್ಟೇ ಅಲ್ಲ, ಹಕ್ಕಿಗಳೂ ಆಕರ್ಷಿತವಾಗುತ್ತವೆ. ಮುನಿಯಾ ಹಕ್ಕಿಗಳು ಗುಂಪು ಗುಂಪಾಗಿ ಬಂದರೆ, ಗೀಜುಗ ಹಕ್ಕಿ ಗಳು ಸ್ವಾದಿಷ್ಟ ಆಹಾರ ಲಭ್ಯತೆ ಕಂಡು ಕೊಂಡಿವೆ. ಹತ್ತಿರದಲ್ಲೇ ಗೂಡು ನೇಯ್ದು ಕೊಳ್ಳುತ್ತಿವೆ. ಗಿಳಿಗಳಂತೂ ಕೊಕ್ಕಿನಲ್ಲಿ ತಿನ್ನುವುದಲ್ಲದೇ ಕಾಲಿ ಗಂಟಿದ ಕಾಳು ಹೆಕ್ಕಿ ತಿನ್ನಲು ಶುರುವಿಟ್ಟಿವೆ. ಒಂದರ ಜೊತೆಗೆ ಮತ್ತೊಂದು ಗುಂಪು ಸಿರಿಧಾನ್ಯ ಹೊಲಗಳತ್ತ ಧಾವಿಸುತ್ತಿವೆ. ಖುಷಿಯಿಂದ ಹಾರಾಡುತ್ತಿವೆ.

ತಾಲ್ಲೂಕಿನ ಬೋದಗೂರು ವೆಂಕಟಸ್ವಾಮಿರೆಡ್ಡಿ ಅವರು ತಮ್ಮ ಹೊಲದಲ್ಲಿ ಸಿರಿಧಾನ್ಯಗಳಾದ ಅರ್ಕ, ಸಾಮೆ, ನವಣೆ, ಊದಲು, ಬರುಗು, ಸಜ್ಜೆ, ಕೂರಲೆ, ಜೋಳ ಬೆಳೆದಿದ್ದಾರೆ. ಪ್ರತಿ ವರ್ಷ ಸಿರಿಧಾನ್ಯಗಳನ್ನು ಬೆಳೆಯುವ ಅವರಿಗೆ ಈ ಬಾರಿ ಭರ್ಜರಿ ಫಸಲು ಬಂದಿದೆ. ಹಾಗಾಗಿ ಮುಂಜಾನೆ ಮತ್ತು ಸಂಜೆ ವೇಳೆ ಅವರ ಹೊಲದ ಬಳಿ ಹಕ್ಕಿಗಳ ಕಲರವ, ಗಾಯನ, ಹಾರಾಟ ಕಾಣ ಸಿಗುತ್ತದೆ.

ಗಾಳಿಗೆ ಓಲಾಡುವ ತೆನೆಗಳ ಮೇಲೆ ಕುಳಿತ ಹಕ್ಕಿಗಳ ಉಯ್ಯಾಲೆಯಾಟ, ತಮ್ಮ ತಮ್ಮಲ್ಲೇ ಕಚ್ಚಾಟ, ಕಾಳು ಕೀಳುವ ಆತುರ, ಕೀಚ್‌... ಕೀಚ್‌... ಗಾಯನ, ಮನುಷ್ಯರನ್ನು ಕಂಡೊಡನೆ ಒಂದಕ್ಕೊಂದು ಎಚ್ಚರಿಸಿಕೊಳ್ಳುವ ಸಹಕಾರ ಮನೋಭಾವ, ಒಗ್ಗಟ್ಟು ಎಲ್ಲವೂ ನೋಡಲು ಬಲು ಸೊಗಸಾಗಿರುತ್ತದೆ.

‘ಆರೋಗ್ಯಪೂರ್ಣ ಜೀವನಕ್ಕಾಗಿ ಉತ್ತಮ ಆಹಾರ ಅಗತ್ಯ. ಹಾಗಾಗಿ ಸಿರಿಧಾನ್ಯಗಳನ್ನು ಬೆಳೆಯುತ್ತೇನೆ. ಇದರಲ್ಲಿ ಆರ್ಥಿಕ ಲಾಭದ ಉದ್ದೇಶವಿಲ್ಲ. ಹಕ್ಕಿಗಳೂ ನಮ್ಮಂತೆಯೇ ಜೀವಿಸಬೇಕು. ಹಾಗಾಗಿ ಹಕ್ಕಿಗಳು ತಿಂದು ಉಳಿದ ಸಿರಿಧಾನ್ಯಗಳನ್ನು ಮನೆ ಬಳಕೆಗೆ ತೆಗೆದುಕೊಳ್ಳುತ್ತೇನೆ. ಊದಲು ಮತ್ತು ಸಜ್ಜೆಯ ಹೊಲದಲ್ಲಿ ಪುಟ್ಟಪುಟ್ಟ ಹಕ್ಕಿಗಳು ಹೆಚ್ಚಾಗಿ ಕಂಡುಬರುತ್ತವೆ. ಪರಿಸರದಲ್ಲಿ ಹಕ್ಕಿ, ಕೀಟ, ಪ್ರಾಣಿ ಎಲ್ಲವೂ ಇದ್ದರಷ್ಟೇ ನಮ್ಮ ಅಸ್ತಿತ್ವಕ್ಕೆ ಅರ್ಥವಿದೆ’ ಎನ್ನುತ್ತಾರೆ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿರೆಡ್ಡಿ.

* * 

ಪ್ರಕೃತಿ ಮಡಿಲಲ್ಲಿ ಬದುಕುವಾಗ ಸ್ವಾರ್ಥ ಇರಬಾರದು. ನಮ್ಮಂತೆ ಪಕ್ಷಿಗಳಿಗೂ ಜೀವವಿದೆ. ಅವುಗಳ ಜೊತೆಗಿದ್ದರೆ ಆಯಾಸವೇ ಇರಲ್ಲ
ಬೋದಗೂರು ವೆಂಕಟಸ್ವಾಮಿರೆಡ್ಡಿ ಸಾವಯವ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT