ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ವಿರೋಧಿ ಅಲೆಯಿಲ್ಲ; ಸಿದ್ದರಾಮಯ್ಯ

Last Updated 26 ನವೆಂಬರ್ 2017, 6:58 IST
ಅಕ್ಷರ ಗಾತ್ರ

ಚಡಚಣ (ವಿಜಯಪುರ): ‘ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಎಲ್ಲಿಯೂ ಆಡಳಿತ ವಿರೋಧಿ ಅಲೆಯಿಲ್ಲ. ಬಿಜೆಪಿ, ಜೆಡಿಎಸ್‌ ಮುಖಂಡರು ತಿಪ್ಪರಲಾಗ ಹಾಕಿದ್ರೂ ಅಧಿಕಾರಕ್ಕೆ ಬರಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಎರಡೂ ಪಕ್ಷದ ಮುಖಂಡರು ಢೋಂಗಿಗಳು. ಬರೀ ಸುಳ್ಳು ಹೇಳ್ಕೊಂಡು ತಿರುಗಾಡ್ತಾವರೇ. ಏನು ಮಾತನಾಡುತ್ತಿದ್ದೇವೆ ಎಂಬುದೇ ಅವರಿಗೆ ಅರಿವಿಲ್ಲ. ನಮ್ಮ ಜನರು ರಾಜಕೀಯವಾಗಿ ಪ್ರಬುದ್ಧರಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಪಟ್ಟಣದಲ್ಲಿ ಶನಿವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯಮಂತ್ರಿ ತಿಳಿಸಿದರು.

‘ನನ್ನ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಇದುವರೆಗೂ ₹ 58000 ಕೋಟಿ ಮಂಜೂರು ಮಾಡಿದೆ. ಆಗಸ್ಟ್‌ ಅಂತ್ಯದವರೆಗೂ ₹ 42000 ಕೋಟಿ ಖರ್ಚು ಮಾಡಿದ್ದು, ಇದರಲ್ಲಿ ₹ 25000 ಕೋಟಿ ಮೊತ್ತವನ್ನು ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ವ್ಯಯಿಸಲಾಗಿದೆ.

ಈ ಹಿಂದಿದ್ದ ಸರ್ಕಾರ ತನ್ನ ಐದು ವರ್ಷದ ಅವಧಿಯಲ್ಲಿ ಒಟ್ಟು ₹ 18000 ಕೋಟಿ ಖರ್ಚು ಮಾಡಿದ್ದು, ಉತ್ತರ ಕರ್ನಾಟಕಕ್ಕೆ ಕೇವಲ ₹ 13000 ಕೋಟಿ ಖರ್ಚು ಮಾಡಿತ್ತು. ಸಾರ್ವಜನಿಕ ಸಭೆಯಲ್ಲಿ ಯಾರೂ ಪ್ರಶ್ನಿಸಲ್ಲ ಅಂಥ ಈ ಅಂಕಿ–ಅಂಶದ ಮಾಹಿತಿ ನೀಡುತ್ತಿಲ್ಲ. ಇದನ್ನು ವಿಧಾನ ಮಂಡಲದ ಅಧಿವೇಶನದಲ್ಲೇ ಹೇಳಿರುವೆ’ ಎಂದು ಸಿದ್ದರಾಮಯ್ಯ ಹೇಳಿದರು.

ನೈತಿಕತೆಯಿಲ್ಲ; ಪ್ರಶ್ನಿಸಿ
‘ಬಿಜೆಪಿಯ ಪರಿವರ್ತನಾ ಯಾತ್ರೆ ನಾಳೆ–ನಾಡಿದ್ದು ನಿಮ್ಮಲ್ಲಿಗೂ ಬರಬಹುದು. ರೈತ ಸಮೂಹದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಮಾತನಾಡಲು ಮುಂದಾದರೆ ಮೊದಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಿಸಿ. ನಂತರ ನಿಮ್ಮ ಮಾತು ಮುಂದುವರೆಸಿ ಎಂದು ಪ್ರಶ್ನಿಸಿ’ ಎಂದು ನೆರೆದಿದ್ದ ಜನಸ್ತೋಮಕ್ಕೆ ಮನವಿ ಮಾಡಿದರು.

‘ರಾಜ್ಯದ 4 ಕೋಟಿ ಜನರಿಗೆ ತಲಾ 7 ಕೆ.ಜಿ. ಅಕ್ಕಿಯನ್ನು ಪ್ರತಿ ತಿಂಗಳು ಉಚಿತವಾಗಿ ನೀಡಲಾಗುತ್ತಿದೆ. ರೈತರಿಗೆ 1.82 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಿಕೊಡಲಾಗಿದೆ. ಬಿಜೆಪಿ ಅಧಿಕಾರದಲ್ಲಿರುವ 16 ರಾಜ್ಯಗಳ ಪೈಕಿ ಯಾವ ರಾಜ್ಯದಲ್ಲಾದರೂ ಈ ಯೋಜನೆ ಜಾರಿ ಇದೆಯಾ ನೀವೇ ಹೇಳಿ’ ಎಂದು ಸಭಿಕರನ್ನು ಸಿಎಂ ಪ್ರಶ್ನಿಸಿದರು.

ಶಾಸಕ ಪ್ರೊ.ರಾಜು ಆಲಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಡಾ.ಮಕ್ಬೂಲ್ ಎಸ್‌.ಬಾಗವಾನ, ಮಾಜಿ ಶಾಸಕರಾದ ಎಂ.ಎಸ್.ಖೇಡ, ಬಿ.ಜಿ.ಪಾಟೀಲ ಹಲಸಂಗಿ, ಕೃಷ್ಣಾ ಕಾಡಾ ನಿರ್ದೇಶಕ ರವಿಗೌಡ ಪಾಟೀಲ, ತಾ.ಪಂ. ಅಧ್ಯಕ್ಷ ರುಕ್ಮುದ್ದೀನ್ ತದ್ದೇವಾಡಿ, ಪುರಸಭೆ ಅಧ್ಯಕ್ಷ ಬಾಬುಗೌಡ ಪಾಟೀಲ, ಕೆ.ಬಿ.ಜೆ.ಎನ್.ಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್‌ ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಮತ್ತೆ ಸಿಎಂ: ಎಂ.ಬಿ.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿ ‘ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ₹ 10000 ಕೋಟಿಯಂತೆ ಐದು ವರ್ಷಗಳಲ್ಲಿ ₹ 50000 ಕೋಟಿ ಖರ್ಚು ಮಾಡುವುದಾಗಿ ವಾಗ್ದಾನ ನೀಡಿದ್ದೆವು. ನುಡಿದಂತೆ ನಡೆದಿದ್ದೇವೆ. ಹೀಗಾಗಿ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಹೇಳಿದರು.

ಕೆಳಗೆ ಕೂತವರನ್ನು ವೇದಿಕೆಗೆ ಕರೆದರು..! ಚಡಚಣ ಪಟ್ಟಣದಲ್ಲಿ ನಡೆದ ಸರ್ಕಾರಿ ಸಮಾರಂಭದಲ್ಲಿ ವೇದಿಕೆಯ ಮೇಲಿದ್ದ ಕುರ್ಚಿಗಳು ಖಾಲಿಯಿದ್ದುದರಿಂದ, ಸಭಿಕರ ಸಾಲಿನಲ್ಲಿ ಕೂತಿದ್ದ ಹಿರಿಯರು, ಪಕ್ಷದ ಮುಖಂಡರನ್ನು ಕಾರ್ಯಕ್ರಮ ಆರಂಭಗೊಂಡ ಬಳಿಕ, ವೇದಿಕೆಗೆ ಆಹ್ವಾನಿಸಿ ಖಾಲಿ ಕುರ್ಚಿ ಭರ್ತಿ ಮಾಡಿದರು. ಮೂರು ತಾಸು ವಿಳಂಬವಾಗಿ ಸಮಾರಂಭ ಆರಂಭಗೊಂಡಿತು.

ಢೋಂಗಿ ರಾಜಕಾರಣಕ್ಕೆ ಮೋಸ ಹೋಗಬೇಡಿ
ಕಲಕೇರಿ: ‘ಢೋಂಗಿ ರಾಜಕಾರಣಕ್ಕೆ ಮರುಳಾಗಿ ಮೋಸ ಹೋಗಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕಲಕೇರಿ ಗ್ರಾಮದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,‘ವಿಧಾನಸಭೆಯಲ್ಲಿ ಬ್ಲೂಫಿಲ್ಮ್‌ ನೋಡುವುದು, ಜೈಲಿಗೆ ಹೋಗಿ ಬಂದವರಿಂದ ನಾವೇನು ನೀತಿ ಕಲಿಯಬೇಕಿಲ್ಲ. ನಾಡಿನ ಜನತೆ ಎಂದಿಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಚುನಾವಣೆ ಗೆಲ್ಲಲು ಕಾರ್ಯಕರ್ತರ ಶ್ರಮ ಮುಖ್ಯ. ಹೀಗಾಗಿ ಕಾಂಗ್ರೆಸ್ ಪಕ್ಷದ ಶಕ್ತಿ ಕಾರ್ಯಕರ್ತರೇ ಹೊರತು ನಾಯಕರಲ್ಲ. ಈ ಹಿಂದೆ ಆಡಳಿತ ನಡೆಸಿದ ದೇವೇಗೌಡ, ಕುಮಾರಸ್ವಾಮಿ. ಯಡಿಯೂರಪ್ಪ ರಾಜ್ಯದ ಅಭಿವೃದ್ಧಿ ಮಾಡದೆ ಇದೀಗ ಢೋಂಗಿ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಮೋಸ ಹೋಗಬೇಡಿ’ ಎಂದರು.

ದೇವರ ಹಿಪ್ಪರಗಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ನಿಂಗನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಜಲಜಾ ನಾಯ್ಕ್‌, ಕಾಂತಾ ನಾಯ್ಕ್‌, ರಾಜಶೇಖರ ಮೆಣಸಿನಕಾಯಿ, ಸುಭಾಷ ಛಾಯಾಗೋಳ ಉಪಸ್ಥಿತರಿದ್ದರು.

ಕೆಲಸದ ಮೂಲಕ ಉತ್ತರ; ಸಿಎಂ
ಮುದ್ದೇಬಿಹಾಳ: ‘ಉತ್ತರ ಕರ್ನಾಟಕದ ನೀರಾವರಿ ಅಭಿವೃದ್ಧಿಗೆ ನಮ್ಮ ಸರ್ಕಾರ ಏನೂ ಮಾಡಿಲ್ಲ ಎಂದು ಹೇಳುವವರಿಗೆ, ಮಾಡಿದ ಕೆಲಸಗಳೇ ಉತ್ತರ ನೀಡುತ್ತವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಸಿದ್ದಾಪುರ ಬಳಿ ಶನಿವಾರ ಬೂದಿಹಾಳ–ಪೀರಾಪುರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ‘ವಿರೋಧ ಪಕ್ಷದ ಮುಖಂಡರು ಟೀಕಿಸುವ ಮೊದಲು ಮಾಡಿರುವ ಅಭಿವೃದ್ಧಿ ಕೆಲಸದ ಬಗ್ಗೆ ತಿಳಿದುಕೊಂಡು ಮಾತನಾಡಲಿ’ ಎಂದರು.

‘2018ರ ಜನವರಿಯಲ್ಲಿ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅಂದಾಜು ₹ 400 ಕೋಟಿ ಮೊತ್ತದ ನೀರಾವರಿ ಯೋಜನೆಗೆ ನಾನೇ ಬಂದು ಚಾಲನೆ ನೀಡುತ್ತೇನೆ. ₹ 270 ಕೋಟಿ ವೆಚ್ಚದ ನಾಗರಬೆಟ್ಟ ಏತ ನೀರಾವರಿ ಯೋಜನೆ, ₹ 130 ಕೋಟಿ ವೆಚ್ಚದಲ್ಲಿ ಆಲಮಟ್ಟಿ ಎಡದಂಡೆ ನವೀಕರಣ ಕಾಮಗಾರಿಗೆ ಈಗಾಗಲೇ ಮಂಜೂರಾತಿ ನೀಡಲಾಗಿದೆ’ ಎಂದು ತಿಳಿಸಿದರು.

ಶಾಸಕ ಸಿ.ಎಸ್‌.ನಾಡಗೌಡ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಜಿಲ್ಲಾ ಪಂಚಾಯ್ತಿ ಸಿಇಓ ಸುಂದರೇಶಬಾಬು, ಎಸ್‌ಪಿ ಕುಲದೀಪಕುಮಾರ ಜೈನ್, ಕೆಬಿಜೆಎನ್‌ಎಲ್‌ ಸಿಇ ಜಗನ್ನಾಥ ರೆಡ್ಡಿ, ಎಸ್ಇ ಆರ್.ತ್ರಿಮೂರ್ತಿ, ಎಐಸಿಸಿ ಸದಸ್ಯ ಪ್ರಕಾಶ ರಾಠೋಡ ಉಪಸ್ಥಿತರಿದ್ದರು.

ಟಿ.ಡಿ.ಲಮಾಣಿ, ಗಂಗಾಧರ ಜೂಲಗುಡ್ಡ ನಿರೂಪಿಸಿದರು. ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ ವಂದಿಸಿದರು. ವೀರೇಶ ನವಲಿ, ಹೀರೂ ನಾಯ್ಕ್‌ ತಂಡ ಸಂಗೀತ ಸೇವೆ ನೀಡಿತು.

* * n

ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸದಿದ್ದರೂ, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆಗಳಿಗೆ 130 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಈಗಾಗಲೇ ಕೆಲಸ ನಡೆದಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT