ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹5ಕ್ಕೆ ಉಪಾಹಾರ: ₹10ಕ್ಕೆ ಎರಡ್ಹೊತ್ತು ಊಟ

Last Updated 26 ನವೆಂಬರ್ 2017, 7:04 IST
ಅಕ್ಷರ ಗಾತ್ರ

ಯಾದಗಿರಿ: ಬಡ ಜನರಿಗೆ ಕೈಗೆಟುಕುವ ದರದಲ್ಲಿ ಸಮತೋಲಿತ ಪೌಷ್ಟಿಕಾಂಶ ಸಹಿತ ಆಹಾರ ನೀಡಲು ರಾಜ್ಯ ಸರ್ಕಾರ ಉದ್ದೇಶಿಸಿರುವ ಮಹಾತ್ವಾಕಾಂಕ್ಷೆಯ ‘ಇಂದಿರಾ ಕ್ಯಾಂಟೀನ್’ ಆರಂಭಿಸಲು ಅಧಿಕಾರಿಗಳು ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

‘ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಸರ್ಕಾರದ ಸೂಚನೆ ಇರುವುದರಿಂದ ಸುರಪುರ, ಶಹಾಪುರ, ಯಾದಗಿರಿಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಸುರಪುರ ಹಾಗೂ ಶಹಾಪುರದಲ್ಲಿ ಜಾಗ ಗುರುತಿಸಲಾಗಿದೆ. ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಲುಂಬಿನಿ ಉದ್ಯಾನ ಎದುರು, ನೂತನ ಬಸ್‌ ನಿಲ್ದಾಣ ಬಳಿ ಜಾಗ ಗುರುತಿಸಲಾಗಿದ್ದು, ಜಾಗ ನಿಗದಿ ಅಂತಿಮಗೊಂಡಿಲ್ಲ’ ಎಂಬುದಾಗಿ ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಹೇಳುತ್ತಾರೆ.

ನಗರ, ಪಟ್ಟಣಗಳ ಜನಸಂಖ್ಯೆಯನ್ನು ಪರಿಗಣಿಸಿ ಕ್ಯಾಂಟೀನ್‌ಗಳಲ್ಲಿ ವ್ಯಕ್ತಿಗಳಿಗೆ ಊಟ ನಿಗದಿಪಡಿಸಲಾಗಿದೆ. 1 ಲಕ್ಷ ಜನಸಂಖ್ಯೆಗೆ ಒಂದು ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗುತ್ತಿದೆ. ಅದಕ್ಕಾಗಿ ನಗರ, ಪಟ್ಟಣ ವ್ಯಾಪ್ತಿಯ ಒಂದು ಸಾಮಾನ್ಯ ಅಡುಗೆ ಕೋಣೆ ಸೇರಿದಂತೆ ಎರಡು ಕೋಣೆ ಇರುವ ಕಟ್ಟಡ ನಿರ್ಮಿಸಬೇಕು. ಆಹಾರ ಪೂರೈಕೆ ಆಯ್ಕೆ ಬಗ್ಗೆ ಟೆಂಡರ್ ಆಹ್ವಾನಿಸಿ ಕ್ಯಾಂಟೀನ್ ಪೂರೈಸುವ ಆಹಾರ ಗುಣಮಟ್ಟ ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಭೂ ವರ್ಗಾವಣೆ ಕಿರಿಕಿರಿ ಇಲ್ಲ: ಕ್ಯಾಂಟೀನ್‌ ನಿರ್ಮಾಣಕ್ಕೆ ಸ್ಥಳ ಯಾವುದೇ ಇಲಾಖೆ ವ್ಯಾಪ್ತಿಯದ್ದಾಗಿರಲಿ ಭೂ ವರ್ಗಾವಣೆ ಇಲ್ಲದೇ ಕ್ಯಾಂಟೀನ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವಂತೆ ಸರ್ಕಾರ ನಿಯಮಾವಳಿ ರೂಪಿಸಿದೆ. ಇದರಿಂದ ಇಲಾಖೆಗಳ ಮಧ್ಯೆ ಉಂಟಾಗುತ್ತಿದ್ದ ಭೂ ವರ್ಗಾವಣೆಯ ಕಿರಿಕಿರಿ ತಪ್ಪಿದೆ.

ನಿರ್ವಹಣಾ ವೆಚ್ಚ ಯಾರು ಭರಿಸುತ್ತಾರೆ?: ರಾಜ್ಯದಲ್ಲಿ ಸ್ಥಾಪನೆಗೊಳ್ಳುತ್ತಿರುವ 247 ಇಂದಿರಾ ಕ್ಯಾಂಟೀನ್‌ಗಳಿಗೆ ನೋಡೆಲ್‌ ಸಂಸ್ಥೆಯಾಗಿ (ಬಿಬಿಎಂಪಿ ಹೊರತುಪಡಿಸಿ) ಪೌರಾಡಳಿತ ನಿರ್ದೇಶನಾಲಯ ಕಾರ್ಯ ನಿರ್ವಹಿಸಲಿದೆ. ಕ್ಯಾಂಟೀನ್ ಜನರಿಗೆ ಪೂರೈಸುವ ಆಹಾರ ಮತ್ತು ನಿರ್ವಹಣೆ ವೆಚ್ಚವನ್ನು ಪ್ರತಿ ತಿಂಗಳು ಕಾರ್ಮಿಕ ಇಲಾಖೆಯಿಂದ ಶೇ 30ರಷ್ಟು, ನಗರ ಸ್ಥಳೀಯ ಸಂಸ್ಥೆಗಳಿಂದ ಶೇ 70ರಷ್ಟು ಅನುದಾನ ಭರಿಸಲು ಸರ್ಕಾರ ಸೂಚಿಸಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ನಗರಾಭಿವೃದ್ಧಿ ಇಲಾಖೆ ಶೇ 70ರಷ್ಟು ಸಹಾಯಧನ ಒದಗಿಸಲಿದೆ ಎಂಬುದಾಗಿ ಸರ್ಕಾರದ ಮಾರ್ಗಸೂಚಿ ತಿಳಿಸುತ್ತದೆ.

ಕ್ಯಾಂಟೀನ್ ಅನುಷ್ಠಾನ, ಕಾರ್ಯನಿರ್ವಹಣೆ, ಮೇಲ್ವಿಚಾರಣೆ ನಡೆಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಆಹಾರ ಪೂರೈಕೆ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ನಗರ ಸ್ಥಳೀಯ ಸಂಸ್ಥೆ ಪೌರಾಯುಕ್ತರು, ಜಿಲ್ಲಾ ಕಾರ್ಮಿಕ ಅಧಿಕಾರಿ, ಎನ್‌ಇಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಪರಿಸರ ಎಂಜಿನಿಯರ್, ನಗರಾಭಿವೃದ್ಧಿ ಯೋಜನಾಧಿಕಾರಿ ಈ ಸಮಿತಿ ಸದಸ್ಯರಾಗಿದ್ದು, ಇಂದಿರಾ ಕ್ಯಾಂಟೀನ್ ನೋಡಿಕೊಳ್ಳುವ ಹೊಣೆ ಹೊರಲಿದ್ದಾರೆ.

ನೂತನ ತಾಲ್ಲೂಕುಗಳಲ್ಲಿ ಕ್ಯಾಂಟೀನ್ ಇಲ್ಲ: ಘೋಷಣೆಯಾಗಿರುವ ನೂತನ ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸರ್ಕಾರ ಸೂಚನೆ ನೀಡಿಲ್ಲ. ಹಾಗಾಗಿ, ಜಿಲ್ಲೆಯಲ್ಲಿನ ಗುರುಮಠಕಲ್‌, ವಡಗೇರಾ, ಹುಣಸಗಿ ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸುತ್ತಿಲ್ಲ. ನೂತನ ತಾಲ್ಲೂಕುಗಳಲ್ಲೂ ಕ್ಯಾಂಟೀನ್‌ ಯೋಜನೆ ಆರಂಭಿಸಲು ಸರ್ಕಾರ ಸೂಚಿಸಿದರೆ ಮಾತ್ರ ಕ್ಯಾಂಟೀನ್ ತೆರೆಯಬಹುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

* * 

ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಕ್ಯಾಂಟೀನ್ ಕಟ್ಟಡ ನಿರ್ಮಾಣದ ಉಸ್ತುವಾರಿ ಭೂಸೇನಾ ನಿಗ<br/>ಮಕ್ಕೆ ವಹಿಸಲಾಗಿದೆ. ಜನವರಿಯಿಂದ ಕ್ಯಾಂಟೀನ್‌ ಆರಂಭಗೊಳ್ಳಲಿದೆ.
ಎಸ್‌.ಪಿ.ನಂದಗಿರಿ,
ನಿರ್ದೇಶಕ ಜಿಲ್ಲಾ ನಗರ ಯೋಜನಾ ಕೋಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT