7

ಶಿಕ್ಷಕನ ಜೀವನವೇ ಜನಪದ ಜೋಕಾಲಿ!

Published:
Updated:
ಶಿಕ್ಷಕನ ಜೀವನವೇ ಜನಪದ ಜೋಕಾಲಿ!

ಕುಕನೂರು: ಜನಪದವನ್ನೇ ಜೀವನವನ್ನಾಗಿಸಿಕೊಂಡವರು ಸಮೀಪದ ಬಿನ್ನಾಳ ಗ್ರಾಮದ ಶಿಕ್ಷಕ ಜೀವನ್‌ಸಾಬ್ ವಾಲೀಕಾರ್. ಅವರು ತಮ್ಮ ಕಲೆಯಿಂದಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಬಡತನದ ಕಾರಣಕ್ಕೆ ಬಾಲ್ಯದಲ್ಲಿ ಪಾಲಕರ ದುಡಿಮೆಗೆ ಕೈ ಜೋಡಿಸಿ ಶಾಲೆಯಿಂದ ಹೊರಗುಳಿಯುತ್ತಿದ್ದ ಜೀವನ್ ಸಾಬ್‌ರನ್ನು ಶಾಲೆಯತ್ತ ಆಕರ್ಷಿಸಿದ್ದು ಜನಪದ ಹಾಡು. ದೈಹಿಕ ಶಿಕ್ಷಕ ನಾರಾಯಣಪ್ಪ ಬಿಸನಳ್ಳಿ ಪ್ರಭಾವದಿಂದ ಕಲೆ ಕರಗತವಾಯಿತು ಎನ್ನುವ ಜೀವನ್ ಸಾಬ್‌ ಬೋಧನೆಯ ಜತೆಗೆ ವಿದ್ಯಾರ್ಥಿಗಳಿಗೆ, ಜನಪದ ಸಾಹಿತ್ಯ ಪರಿಚಯಿಸುತ್ತಿದ್ದಾರೆ.

ಮೊಬೈಲ್, ಟಿವಿ ಭರಾಟೆಯಿಂದ ಮೂಲೆಗುಂಪಾಗುತ್ತಿರುವ ಜನಪದ ಹಾಡುಗಳನ್ನು ಯುವ ಸಮುದಾಯಕ್ಕೆ ಪರಿಚಯಿಸಲು ವೃತ್ತಿ ಹಾಗೂ ಜನಪದ ಹಾಡುಗಾರಿಕೆಯಲ್ಲಿ ಸಾಧನೆ ಮಾಡುವ ಇರಾದೆ ಹೊಂದಿದ್ದಾರೆ. ಜನಪದ ಜಾಗೃತಿ ತಂಡ ರಚಿಸಿ, ದೇಶ ಹಾಗೂ ವಿದೇಶಗಳನ್ನು ಸುತ್ತಿ ಕಲೆ ಪ್ರದರ್ಶಿಸುತ್ತಿದ್ದಾರೆ.

ಹೊಸ ಬಂಡಿಹರ್ಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಹಂಪಿ, ಆನೆಗುಂದಿ, ಕನಗಿರಿ, ಇಟಗಿ ಉತ್ಸವಗಳಲ್ಲಿ ಹಾಡುಗಳಿಂದ ಜನಮನ ರಂಜಿಸಿದ್ದಾರೆ. ಸಾಂಸ್ಕೃತಿಕ ಸೌರಭ, ಸುಗ್ಗಿ ಹುಗ್ಗಿ, ಜಾನಪದ ಸಮ್ಮೇಳನ, ಜನಪದ ಜಾತ್ರೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿ ರಾಜ್ಯದಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ.

ಸಾಮಾಜಿಕ ಜಾಗೃತಿಗೂ ಸೈ: ಜನಪದ ಹಾಡುಗಾರಿಕೆ ಜತೆಗೆ ನಟನೆ, ಕಾರ್ಯಕ್ರಮಗಳ ನಿರೂಪಣೆ, ಹಾಸ್ಯ ಭಾಷಣ ಮೂಲಕ ಜನಮನ ರಂಜಿಸುವ ಜೀವನ್‌ಸಾಬ್‌, ಜಾಗೃತಿ ಕಲಾ ತಂಡದಿಂದ ಶಿಕ್ಷಣ ಇಲಾಖೆ, ಆರೋಗ್ಯ, ವಾರ್ತಾ ಮತ್ತು ಪ್ರಚಾರ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ.

ದೇಶ ಹಾಗೂ ವಿದೇಶಗಳಲ್ಲಿ ಕಲೆಯ ಘಮ: ರಾಜ್ಯ ಸೇರಿ ಹರಿಯಾಣದ ಸಿರ್ಸಾ, ಆಂಧ್ರಪ್ರದೇಶದ ಕುಪ್ಪಂ, ಗೋವಾದ ಬಿಚ್ಚೋಲಿಮ್, ತಮಿಳುನಾಡಿನ ನೈವೇಲಿ ಸೇರಿ ವಿದೇಶದಲ್ಲಿಯೂ ಜೀವನ್ ಸಾಬ್ ಜನಪದ ಘಮ ಹರಡಿಸಿದ್ದಾರೆ. ಒಮನ್‌ನ ಸಲಾಲ, ಕತಾರ್‌ ದೇಶದ ದೋಹಾದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ

ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ.

ಪ್ರಶಸ್ತಿಗಳು: ಇವರ ಪ್ರತಿಭೆಗೆ 2014ರಲ್ಲಿ ಕಲಬುರ್ಗಿ ಸಾಂಸ್ಕೃತಿಕ ಸಂಸ್ಥೆ ‘ಜನಪದ ಕಲಾರತ್ನ’, ಕೊಪ್ಪಳ ಗವಿಸಿದ್ದೇಶ್ವರ ಸಂಸ್ಥೆ ಜಿಲ್ಲಾ ಯುವ ಪ್ರಶಸ್ತಿ, ಜನಪ್ರಿಯ ಶಿಕ್ಷಕ ಕಲಾ ಪ್ರಶಸ್ತಿ, ಹೈದರಾನಾದ್‌ ಕರ್ನಾಟಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸೇರಿ 50ಕ್ಕೂ ಹೆಚ್ಚು ಪ್ರಶಸ್ತಿಗಳು ಅರಸಿ ಬಂದಿವೆ.

* * 

ಮೊಬೈಲ್‌, ಟಿವಿ ಭರಾಟೆಯ ನಡುವೆ ಮೂಲೆಗುಂಪಾಗಿರುವ ಜನಪದ ಹಾಡುಗಳನ್ನು ಯುವಜನತೆ ಮುಂದೆ ಪ್ರಸ್ತುತಪಡಿಸಿ ಅದರ ಕಂಪನ್ನು ಪಸರಿಸಬೇಕು ಎಂಬ ಆಸೆಯಿದೆ.

ಜೀವನ್‌ಸಾಬ್ ವಾಲೀಕಾರ್‌ ಬಿನ್ನಾಳ,

ಜನಪದ ಹಾಡುಗಾರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry