ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಮಡಿಲಲ್ಲಿ ಬದನೆಯ ಸುಗ್ಗಿ

Last Updated 26 ನವೆಂಬರ್ 2017, 7:12 IST
ಅಕ್ಷರ ಗಾತ್ರ

ಬದನೆಯ ಮೂಲ ಎಂದು ಗುರುತಿಸಲ್ಪಟ್ಟಿರುವ ಗುಳ್ಳ ಬದನೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಇನ್ನೂ ಜೀವಂತವಾಗಿದೆ. ಇಲ್ಲಿನ ಮಾವಿನ ಮಡಿಲಲ್ಲಿ ನೈಸರ್ಗಿಕವಾಗಿ ಬೆಳೆಯಲಾಗಿರುವ ಬದನೆ ಗುಳ್ಳ ಎಂದೇ ಹೆಸರುವಾಸಿಯಾಗಿರುವುದು ವಿಶೇಷ.

ಸ್ಥಳೀಯವಾಗಿ ಗುಳ್ಳ, ಗುಳ್ಳ ಕಾಯಿ, ಗುಳ್ಳ ಬದನೆ, ರಾಮಗುಳ್ಳ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಈ ವಿಶಿಷ್ಟ ತರಕಾರಿ ಗಿಡ ನೈಸರ್ಗಿಕವಾಗಿ ಬೆಳೆಯುತ್ತದೆ. ಕಾಡು, ಬಯಲು, ರಸ್ತೆ ಬದಿಯಲ್ಲಿ ನೆಲೆ ಕಂಡುಕೊಂಡಿದೆ.

ಈ ಬಾರಿ ಉತ್ತಮ ಮಳೆಯಾದ ಪರಿಣಾಮವಾಗಿ, ಗುಳ್ಳ ಬದನೆ ಗಿಡಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಸಮೃದ್ಧ ಫಸಲು ಬಂದಿದೆ. ಇದರಿಂದ ಗುಳ್ಳ ಪ್ರಿಯರು ಸಂತೋಷಗೊಂಡಿದ್ದಾರೆ.

‘ಗುಳ್ಳ’ ನೆಲಮಟ್ಟದಲ್ಲಿ ಹರಡಿ ಕೊಳ್ಳುವ ಪುಟ್ಟ ಪೊದೆಯ ಆಕಾರದ ಸಸ್ಯ. ಕಾಂಡ, ಕೊಂಬೆ, ಎಲೆ, ತೊಟ್ಟು, ಕಾಯಿ ಕಿರೀಟ ಎಲ್ಲವೂ ಮುಳ್ಳು ಮಯ. ಯಾವುದೇ ಪ್ರಾಣಿ ಈ ಗಿಡ ವನ್ನು ತಿನ್ನಲು ಸಾಧ್ಯವಾಗದಂತಹ ನೈಸರ್ಗಿಕ ರಕ್ಷಣೆ ಪಡೆದುಕೊಂಡಿದೆ. ಗಿಡದ ಪರಿಚಯವಿರುವ ಯಾವುದೇ ಪ್ರಾಣಿ ಅದರ ತಂಟೆಗೆ ಹೋಗುವುದಿಲ್ಲ.

ಗುಳ್ಳ ಬದನೆ ಬಿಡಿಸುವುದು ಸುಲಭದ ಕೆಲಸವಲ್ಲ. ಒಂದು ಕೈಯ್ಯಲ್ಲಿ ಕೋಲಿನಿಂದ ಗಿಡದ ಕೊಂಬೆಯನ್ನು ಮೇಲಕ್ಕೆತ್ತಿ, ಇನ್ನೊಂದು ಕೈಯಲ್ಲಿ ಮುಳ್ಳು ಚುಚ್ಚದಂತೆ ಎಚ್ಚರಿಕೆಯಿಂದ ಕಾಯಿ ಕಿತ್ತುಕೊಕೊಳ್ಳಬೇಕು. ಹಸಿರು ಕಿರೀಟ (ತೊಟ್ಟು) ತೆಗೆದ ನಂತರ ತೊಳೆದು, ಕಾಯಿ ಹೋಳು ಮಾಡಿ ಬೀಜ ತೆಗೆಯಬೇಕು. ಬೀಜ ತೆಗೆದು ಉಳಿದ ಭಾಗವನ್ನು ಸಾಂಬಾರು ತಯಾರಿಸಲು ಬಳಸಬೇಕು. ಬೀಜ ತಿನ್ನಲು ಯೋಗ್ಯವಲ್ಲ ಎನ್ನುವುದು ಗ್ರಾಮೀಣ ಹಿರಿಯ ಅನುಭವದ ಮಾತು.

ಗುಳ್ಳ, ತರಕಾರಿ ಮಾತ್ರವಲ್ಲದೆ, ಔಷಧ ಸಸ್ಯವೂ ಹೌದು. ಆಯುರ್ವೇದ ವೈದ್ಯರು ಈ ಗಿಡದ ಎಲೆ, ಹೂವು, ಕೊಂಬೆ ಬೇರು ಹಾಗೂ ಕಾಯಿಯನ್ನು ಔಷಧ ತಯಾರಿಕೆಗಾಗಿ ಬಳಸುತ್ತಾರೆ. ಬಿಳಿ ಗುಳ್ಳದ ಬೀಜ ತೆಗೆದು ಒಣಗಿಸಿ ಹುಳುಕಿನ ಹಲ್ಲು ನಿವಾರಣೆಗೆ ಬಳಸುತ್ತಾರೆ.

ಅತ್ಯಂತ ಕಡಿಮೆ ತೇವಾಂಶದಲ್ಲೂ ಬೆಳೆಯಬಲ್ಲ ಹಾಗೂ ಮಳೆ ಕಡಿಮೆ ಯಾದರೂ ಹೆಚ್ಚು ಕಾಲ ಬದುಕಬಲ್ಲ ಗುಳ್ಳ ಹಿಂದೆ ಎಲ್ಲೆಲ್ಲೂ ಕಂಡುಬರುತ್ತಿತ್ತು. ಆದರೆ ಮಳೆ ತೀರಾ ಕಡಿಮೆಯಾದಂತೆ ಕಾಣಿಸುವುದು ಅಪರೂಪವಾಯಿತು. ಅದು ಅಳಿವಿನ ಹಾದಿ ಹಿಡಿಯಿತು ಎಂಬ ಪ್ರಶ್ನೆ ಸಹ ಹಿರಿಯರನ್ನು ಕಾಡತೊಡಗಿತ್ತು. ಆದರೆ ಈ ಬಾರಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಗುಳ್ಳಕ್ಕೆ ಹೊಸ ಜೀವ ಬಂದಿದೆ. ಅಂತೂ ಸುಧಾರಿತ ಬದನೆಯ ಅಮ್ಮ, ಗುಳ್ಳ ಬದನೆ ಇನ್ನೂ ಜೀವಂತವಾಗಿರುವುದು ಸಂತಸದ ಸಂಗತಿಯಾಗಿದೆ.

ದೂರ ಉಳಿದ ಗುಳ್ಳ ಬದನೆ
ಗುಳ್ಳ ಬದನೆ ಗಿಡ ಒಂದೇ ರೀತಿ ಇದ್ದರೂ, ಹಲವು ಬಣ್ಣದ ಕಾಯಿಗಳು ಕಂಡುಬರುತ್ತವೆ. ಹಸಿರು ಪಟ್ಟೆಯುಳ್ಳ ಹಾಗೂ ಅಚ್ಚ ಬಿಳಿ ಬಣ್ಣದ ಕಾಯಿ ತಾಲ್ಲೂಕಿನಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈಗ ಗುಳ್ಳ ಬಳಕೆಯಿಂದ ದೂರ ಉಳಿದಿದೆಯಾದರೂ, ಅದರ ರುಚಿ ಗೊತ್ತಿರುವ ಗ್ರಾಮೀಣ ಪ್ರದೇಶದ ಹಿರಿಯರು ಮಾತ್ರ ವಿಶೇಷವಾಗಿ  ಸವಿಯುವುದುಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT